ಸಂಪಾದಕೀಯ

ವರದಿ ಪ್ರಕಟಿಸುವ ಕಷ್ಟ

ಮಾಧ್ಯಮಗಳ ಗುಲಾಮಗಿರಿ ಮತ್ತು ಸತ್ಯದ ಪರ ನಿಲ್ಲುವ ತಾಕತ್ತು ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದ ವಿಷಯ. ಇದರಿಂದ ಕಷ್ಟಕ್ಕೆ ಸಿಲುಕಿರುವವರು ನಿಷ್ಠಾವಂತ ವರದಿಗಾರರು. ಸತ್ಯ ಗೊತ್ತಿದ್ದೂ ಅದನ್ನು ಬಹಿರಂಗ ಮಾಡಲಾಗದ ಸ್ಥಿತಿಯಲ್ಲಿ ಅವರು ಇದ್ದಾರೆ. ಕೆಲವರಂತೂ ಸತ್ಯ ಹೇಳಿದ ಕಾರಣಕ್ಕೆ ಕೊಲೆಗೀಡಾದ ವಿಷಯ ಆಗಾಗ ವರದಿ ಆಗುತ್ತಲೇ ಇರುತ್ತದೆ. ಇಂಥ ಸಂದರ್ಭದಲ್ಲಿ ಕೆಲವು ಸೂಕ್ಷ್ಮ ವಿಚಾರ ಒಳಗೊಂಡ ವರದಿಗಳನ್ನು ಪಟ್ಟು ಹಿಡಿದು ಪ್ರಕಟಿಸಿದ ವರದಿಗಾರರನ್ನು ಅಭಿನಂದಿಸಲೇಬೇಕು. ಅಂಥವರಲ್ಲಿ ಮೊದಲಿಗರು ರಾಣಾ ಅಯುಬ.
ತೆಹಲ್ಕಾ ಪತ್ರಿಕೆಯ ವರದಿಗಾರ್ತಿ ಆಗಿದ್ದ ಅವರನ್ನು ಗೋಧ್ರಾ ನಂತರದ ಗುಜರಾತ್ ಕುರಿತು ವರದಿ ಸಿದ್ಧಗೊಳಿಸಲು ಕಳುಹಿಸಲಾಗಿತ್ತು. ವರ್ಷಗಟ್ಟಲೇ ಗುಜರಾತ್‍ನಲ್ಲಿ ಸುತ್ತಾಡಿ, ನಾನಾ ವಿಷಯಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಭೇಟಿ ಮಾಡಿ, ಆ ರಾಜ್ಯದಲ್ಲಿ ಗೋಧ್ರಾ ನಂತರದ ಹಿಂಸಾಚಾರದಲ್ಲಿ ಎಷ್ಟೊಂದು ವ್ಯವಸ್ಥಿತವಾಗಿ ಅಲ್ಲಿನ ಅಧಿಕಾರಿ ವರ್ಗ ಮತ್ತು ಆಡಳಿತಾರೂಢ ಜನ ನಿರ್ವಹಿಸಿದರು ಎನ್ನುವ ವಿಚಾರವನ್ನು ಅವರು ಎಳೆ ಎಳೆಯಾಗಿ ದಾಖಲಿಸಿದರು. ಆದರೆ ಅವರ ವರದಿ ಪ್ರಕಟಿಸುವ ಹೊಣೆ ಹೊತ್ತಿದ್ದ ತೆಹೆಲ್ಕಾ ಅಷ್ಟು ಹೊತ್ತಿಗಾಗಲೇ ಕಣ್ಣು ಮುಚ್ಚಿತ್ತು. ವರ್ಷಗಟ್ಟಲೇ ಜೀವ ತೇಯ್ದು ಸಿದ್ಧಪಡಿಸಿದ ದಾಖಲೆಯನ್ನು ಕಸದ ಬುಟ್ಟಿಗೆ ಎಸೆದು ಸುಮ್ಮನಾಗಬೇಕಾದ ಸ್ಥಿತಿ ಬಂತು. ಹಾಗಾಗಬಾರದು ಎಂದು ಅವರು ತಮ್ಮ ವರದಿ ಪ್ರಕಟಿಸಲು ಕೆಲವು ಪ್ರಕಾಶನ ಸಂಸ್ಥೆಗಳ ಕದ ತಟ್ಟಿದರು. ಆದರೆ ಅದು ಪ್ರಯೋಜನಕ್ಕೆ ಬರಲಿಲ್ಲ. ಕೊನೆಗೆ ಅವರೇ ಸ್ವಂತ ಖರ್ಚಿನಲ್ಲಿ ‘ಗುಜರಾತ್ ಪೇಪರ್ಸ್’ ಎಂಬ ಪುಸ್ತಕ ಹೊರತಂದರು. ಅದು ಅಂದಿನ ದುರಂತಮಯ ಸ್ಥಿತಿ ಮತ್ತು ಇಡಿ ಆಡಳಿತ ವ್ಯವಸ್ಥೆಯೇ ಹೇಗೆ ಸಂಚು ನಡೆಸಿ ತನ್ನದೇ ಪ್ರಜೆಗಳ ಮಾರಣಹೋಮ ನಡೆಸಿತು ಎನ್ನುವ ದಾಖಲೆ ಈ ಪುಸ್ತಕ.
ಇನ್ನೊಂದು ವರದಿ ಇದೇ ಗುಜರಾತ್‍ಗೆ ಸಂಬಂಧಿಸಿದ್ದು. 2005ರ ನವೆಂಬರ್‍ನಲ್ಲಿ ಸೊಹ್ರಾಬುದ್ದೀನ ಶೇಖ ಎಂಬಾತನ ಎನ್‍ಕೌಂಟರ್‍ಗೆ ಸಂಬಂಧಿಸಿದ್ದು. ಆತನನ್ನು ಶಂಕಿತ ಉಗ್ರ ಎಂದು ಗುಜರಾತ ಪೋಲೀಸರು ಗುಂಡಿಟ್ಟು ಕೊಂದು ಹಾಕಿದ್ದರು. ಆತನ ಜೊತೆ ಇದ್ದ ಸೊಹ್ರಾಬುದ್ದೀನ ಪತ್ನಿ ಕೌಸರ್‍ಬಿ ಮತ್ತು ಸಹಚರ ತುಳಸೀರಾಂ ಪ್ರಜಾಪತಿ ಅವರನ್ನೂ ಪೋಲೀಸರು ಗುಂಡಿಟ್ಟು ಕೊಂದಿದ್ದರು. ಈ ಪ್ರಕರಣ ಕುರಿತು ವಿಚಾರಣೆ ಆರಂಭವಾಗಿ ಸುಪ್ರೀಮ ಕೋರ್ಟು ಇಡೀ ಪ್ರಕರಣವನ್ನು ಮುಂಬಯಿ ಸಿಬಿಐ ಕೋರ್ಟಿಗೆ ವರ್ಗಾಯಿಸಿತ್ತು. ಇದರಲ್ಲಿ ಪ್ರಮುಖ ಆರೋಪಿ ಅಮಿತ ಶಾ. ಅಮಿತ ಶಾ ಎಂದೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇಲ್ಲ. ಕೊನೆಗೆ ಅಂದಿನ ನ್ಯಾಯಾಧೀಶ ಉತ್ಪತ್ ಅವರು ಖಡಕ್ ಆದೇಶ ನೀಡಿ 2014ರ ಜೂನ್ 26 ರಂದು ತಪ್ಪದೇ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದರು. ಆದರೆÀ ನ್ಯಾಯಾಧೀಶರನ್ನು ಒಂದು ದಿನ ಮುಂಚೆ ಅಂದರೆ, ಜೂನ್ 25ರಂದು ಪುಣೆಗೆ ವರ್ಗ ಮಾಡಲಾಯಿತು!. ಅವರ ವೈಯಕ್ತಿಕ ಕೋರಿಕೆ ಮೇರೆಗೆ ಈ ವರ್ಗಾವಣೆ ಎಂದೂ ವಿವರಣೆ ನೀಡಲಾಯಿತು. ಅವರ ಸ್ಥಾನಕ್ಕೆ ಬ್ರಿಜ್ ಶರಣ ಲೋಯಾ ನೇಮಕಗೊಂಡರು.
ಲೋಯಾ ಅವರು ಮದುವೆಯೊಂದಕ್ಕೆ ನಾಗಪುರಕ್ಕೆ ತೆರಳಿದ್ದಾಗ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದರು. ಅವರಿಗೆ ನಾನಾ ರೀತಿಯ ಒತ್ತಡ ಹೇರಲಾಗಿತ್ತು, ನೂರು ಕೋಟಿ ರೂಪಾಯಿಗಳ ಆಮಿಷ ಕೂಡ ಒಡ್ಡಲಾಗಿತ್ತು ಎಂಬ ಅವರ ಕುಟುಂಬದವರು ಲೋಯಾ ಅಸಹಜ ಸಾವಿನ ಕುರಿತಂತೆ ತನಿಖೆ ನಡೆಸುವಂತೆ ಮಾಡಿದ ಮನವಿಗಳೆಲ್ಲ ಕಸದ ಬುಟ್ಟಿ ಸೇರಿದವು. ಲೋಯಾ ಸ್ಥಾನಕ್ಕೆ ಬಂದ ನ್ಯಾಯಮೂರ್ತಿ ಎಂ.ಬಿ.ಗೋಸಾವಿ ಎಂಬವರು ಡಿಸೆಂಬರ್ 15ರಿಂದ ಹದಿನೈದು ದಿನ ವಿಚಾರಣೆ ನಡೆಸಿ ಅಮಿತ ಶಾ ನಿರ್ದೋಷಿ ಎಂದು ತೀರ್ಪಿತ್ತರು.
ಲೋಯಾ ಕುಟುಂಬದವರು ತಮ್ಮ ಪ್ರಯತ್ನ ಮುಂದುವರಿಸಿ ನಾನಾ ಅಹವಾಲುಗಳನ್ನು ಸಲ್ಲಿಸಿದರೂ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಸತತ ಎರಡು ವರ್ಷ ವಿಫಲ ಪ್ರಯತ್ನ ನಡೆಸಿದ ನಂತರ ವಿಧಿ ಇಲ್ಲದೇ ತಮ್ಮ ಸಂಕಟವನ್ನು ಪತ್ರಕರ್ತರೊಬ್ಬರ ಮುಂದೆ ತೋಡಿಕೊಂಡರು. ನಿರಂಜನ ಟಾಕ್ಲೆ ಎಂಬ ಆ ಪತ್ರಕರ್ತರು ಒಂದು ವರ್ಷ ಸತತವಾಗಿ ಶ್ರಮಿಸಿ, ಲೋಯಾ ಅವರ ಸಾವಿನ ಸುತ್ತ ಇದ್ದ ಕಗ್ಗಂಟಿನ ವಿವರ ಏನೆಂದು ಅರಿತು ವರದಿ ಸಿದ್ಧಪಡಿಸಿದರು. ಅದನ್ನು ‘ದಿ ಕಾರವಾನ್’ ಪತ್ರಿಕೆ ಇತ್ತೀಚೆಗೆ ಪ್ರಕಟಿಸಿತು. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ‘ವಾರ್ತಾ ಭಾರತಿ’ ಪತ್ರಿಕೆ ಈ ಕುರಿತು ಸಂಪಾದಕೀಯ ಪ್ರಕಟಿಸಿತು. ಇದನ್ನು ಗುರುತಿಸಿದ ಎನ್‍ಡಿಟಿವಿ ಹಿಂದಿ ವಾಹಿನಿಯು ವಿಷಯ ಪ್ರಸ್ತಾಪಿಸಿದ್ದು ಅಲ್ಲದೇ ಕೂಡಲೇ ನಿಜಾಂಶ ಏನೆಂದು ತಿಳಿಯಲು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿತು.
ಇತ್ತೀಚೆಗೆ ನೌಕಾ ಪಡೆಯ ನಿವೃತ್ತ ಮುಖ್ಯಸ್ಥ ರಾಮದಾಸ ಅವರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು, ನ್ಯಾಯಾಧೀಶರ ಸಾವಿನ ಸಮಗ್ರ ತನಿಖೆಗೆ ಕೋರಿಕೆ ಸಲ್ಲಿಸಿದ್ದಾರೆ. ವರದಿಗಾರರು ಪ್ರಾಣ ಪಣಕ್ಕಿಟ್ಟು ಸತ್ಯ ಹೊರ ತೆಗೆಯುತ್ತಾರೆ. ಆದನ್ನು ಪ್ರಕಟಿಸಲೂ ಹರಸಾಹಸ ನಡೆಸಬೇಕು. ಇಂಥ ಸಂದರ್ಭದಲ್ಲಿ ಅಧಿಕಾರ ತಮ್ಮ ಮುಷ್ಠಿಯಲ್ಲಿ ಹಿಡಿದುಕೊಂಡು ಕುಳಿತಿರುವ ಜನ ನಿಜಕ್ಕೂ ಆವತ್ತು ಏನು ಮಾಡಿದರು ಎಂದು ಬಹಿರಂಗ ಆಗುತ್ತದೆಯೇ? ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆಯೇ?

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: