ಸಂಪಾದಕೀಯ

ಆ ಘಟನೆಗೆ 25 ವರ್ಷ

ಭಾರತದ ಇತಿಹಾಸವನ್ನು ಹಲವು ಘಟ್ಟಗಳಲ್ಲಿ ವಿಂಗಡಿಸಿ ನೋಡುವ ಪರಿಪಾಠ ಇದೆ. ಪ್ರಾಚೀನ ಕಾಲದ ಶಿಲಾಯುಗ, ನವ ಶಿಲಾಯುಗ ಎನ್ನುವಂತೆ ನಂತರದ ದಿನಗಳನ್ನು ವೇದ ಕಾಲ, ಮಧ್ಯ ಕಾಲೀನ ಮತ್ತು ಆಧುನಿಕ ಘಟ್ಟಗಳೆಂದು ಗುರುತಿಸುವುದು ಸಾಮಾನ್ಯ. ಆಧುನಿಕ ಇತಿಹಾಸದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಾಲವೆಂಬ ವಿಂಗಡಣೆಯೂ ಇದೆ. ನಮಗೆ ಸ್ವಾತಂತ್ರ್ಯ ಬಂದ ನಂತರದ ಕಾಲವನ್ನು ಬಹುಷಃ ಅಯೋಧ್ಯೆ ಕಟ್ಟಡ ಧ್ವಂಸ ಪೂರ್ವ ಮತ್ತು ಧ್ವಂಸೋತ್ತರ ಕಾಲ ಎಂದೂ ಪರಿಗಣಿಸಬಹುದೇನೋ!
ಅಯೋಧ್ಯೆಯ ಕಟ್ಟಡ ಉರುಳಿ ಡಿಸೆಂಬರ 6ಕ್ಕೆ 25 ವರ್ಷ. ಈ ಘಟನೆಯನ್ನು ಅವರವರು ನೋಡುವ ದೃಷ್ಟಿಯಲ್ಲಿ ಹೆಸರಿಸುವುದು ಸಾಮಾನ್ಯ. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ನಮ್ಮಲ್ಲಿ ಬಂದಿದ್ದು 1977ರಲ್ಲಿ. ಅಂದು ಹಲವು ಕಾಂಗ್ರೆಸ್ಸೇತರ ಪಕ್ಷಗಳು ಒಂದುಗೂಡಿ ಗೆದ್ದು ಗದ್ದುಗೆ ಹಿಡಿದವು, ನಂತರ ಮತ್ತೆ ಕಿತ್ತಾಡಿ ಮತ್ತದೇ ಗುಂಪುಗಳಾಗಿ ಒಡೆದು ಹೋದವು. ಆನಂತರ ಬಂದ ಇಂದಿರಾ ಯುಗ ಮತ್ತು ಇಂದಿರಾ ಹತ್ಯೆ ನಂತರ ರಾಜೀವ ಗಾಂಧಿ ನೇತೃತ್ವದಲ್ಲಿ ರೂಪುಗೊಂಡ ಕಾಂಗ್ರೆಸ್ ಸರ್ಕಾರ ಬಿಟ್ಟರೆ ಮತ್ತೆ ಬಂದವುಗಳೆಲ್ಲವೂ ಒಕ್ಕೂಟದ ಸರ್ಕಾರಗಳು. ಇಂಥ ಒಕ್ಕೂಟ ಸರ್ಕಾರದ ನೇತೃತ್ವ ವಹಿಸಿದ್ದ ಪಿ.ವಿ.ನರಸಿಂಹರಾವ ಅವಧಿಯಲ್ಲಿಯೇ ಅಯೋಧ್ಯೆಯ ಕಟ್ಟಡ ಕೆಡವಲಾಯಿತು. ಅಲ್ಲಿಂದ ಕಾಂಗ್ರೆಸ್ ನಿಧಾನವಾಗಿ ರಾಜಕೀಯ ರಂಗದಿಂದ ಹಿನ್ನೆಲೆಗೆ ಸರಿಯುವಂತಾಯಿತು. 2014ರಲ್ಲಿ ಮತ್ತೆ ದೆಹಲಿಯಲ್ಲಿ ಏಕ ಪಕ್ಷದ ಕಾಂಗ್ರೆಸ್ಸೇತರ ಸರ್ಕಾರ ರಚನೆ ಆಯಿತು. ಅದು ತನ್ನನ್ನು ಎನ್‍ಡಿಎ ಎಂದು ಕರೆದುಕೊಂಡಿದ್ದರೂ ಬಿಜೆಪಿ ಒಂದೇ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆದಿದೆ.
ನಮ್ಮಲ್ಲಿ ರಾಜಕೀಯ ಪಕ್ಷಗಳು ವೈಚಾರಿಕ ನೆಲೆಗಟ್ಟಿನಲ್ಲಿ ತಮ್ಮ ತಮ್ಮ ಸ್ಥಾನ ನಿಶ್ಚಯಿಸಿಕೊಳ್ಳುವ ಸಂಪ್ರದಾಯ ಸ್ವಾತಂತ್ರ್ಯಾ ನಂತರ ಕಂಡು ಬರುವ ಪ್ರಮುಖ ಅಂಶ. ಆ ದೃಷ್ಟಿಯಿಂದ ಕಾಂಗ್ರೆಸ್ ಅನುಸರಿಸಿದ್ದು ಎಡ ಪಂಥೀಯ ವಿಚಾರಗಳಿಗೆ ಹತ್ತಿರವಾದ ನಿಲುವನ್ನು. ಅದರಲ್ಲಿ ಜಾತ್ಯತೀತತೆ, ಸಮಾನತೆ ಮುಖ್ಯ ವಿಚಾರಗಳು. ಹಾಗೇ ಹೊಸದಾಗಿ ಅಸ್ತಿತ್ವಕ್ಕೆ ಬಂದ ರಾಷ್ಟ್ರದ ಅಗತ್ಯಗಳಿಗೆ ಸ್ಪಂದಿಸಲು ದೊಡ್ಡ ದೊಡ್ಡ ಯೋಜನೆಗಳು ಅಗತ್ಯ ಎಂಬ ವಿಚಾರ ಆಗಿನದಾಗಿತ್ತು. ಆದ ಕಾರಣ, ಬೃಹತ್ ಪ್ರಮಾಣದ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು, ಜಲಾಶಯಗಳು ಮುಂತಾದವು ಆದ್ಯತೆ ಪಡೆದವು. ಇಷ್ಟಾಗಿಯೂ ಅರವತ್ತರ ದಶಕದಲ್ಲಿ ಅಪ್ಪಳಿಸಿದ ಆಹಾರ ಧಾನ್ಯಗಳ ಕೊರತೆಯಿಂದಾಗಿ ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿಯತ್ತ ಹೊರಳುವುದು ಮತ್ತು ಯಶಸ್ವಿಗೊಳಿಸುವುದು ಅನಿವಾರ್ಯ ಆಯಿತು.
ತೊಂಭತ್ತರ ದಶಕದಲ್ಲಿ ಮನಮೋಹನ ಸಿಂಗ್ ಅವರು ಅರ್ಥ ಸಚಿವರಾಗಿ ರೂಪಿಸಿದ ಉದಾರೀಕರಣ ನೀತಿಯಿಂದಾಗಿ ಖಾಸಗೀಕರಣ ಮೇಲುಗೈ ಪಡೆಯಿತು. ಇದರ ಲಾಭ ಪಡೆದ ಕೆಲವೇ ಕೆಲವು ಕುಟುಂಬಗಳು ಮತ್ತು ಸಂಸ್ಥೆಗಳು ತಮ್ಮ ಹಣ ಬಲದಿಂದಲೇ ರಾಜಕೀಯದ ಮೇಲೆ ಪ್ರಭಾವ ಬೀರುವ ಶಕ್ತಿ ಪಡೆದವು. ಜೊತೆಗೆ, ಸಮಾಜವಾದದಿಂದ ಭಿನ್ನವಾದ ಧರ್ಮ ಆಧಾರಿತ ವಿಚಾರಗಳಿಂದ ಜನಸಾಮಾನ್ಯರನ್ನು ಸೆಳೆದುಕೊಂಡ ಬಲಪಂಥೀಯ ಪಕ್ಷಗಳು ಮೊದಲು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದವು. ಈಗ ಕೇಂದ್ರದಲ್ಲಿಯೂ ಅಂಥ ವಿಚಾರದ ಗುಂಪಿಗೆ ಅಧಿಕಾರ ದಕ್ಕಿದೆ.
ತಾರ್ಕಿಕ ಮತ್ತು ಮನುಷ್ಯ ಘನತೆಯ ವಿಚಾರ ಬದಿಗೆ ಸರಿಸಿ, ಭಾವನಾತ್ಮಕ ನೆಲೆಯಲ್ಲಿ ಇಲ್ಲಿನ ಜನರನ್ನು ಮರುಳುಗೊಳಿಸುವುದು ಸುಲಭ ಎನ್ನುವುದು ಈ ಯಶಸ್ಸಿನಿಂದ ಸಾಬೀತಾಗಿದೆ. ಇದಕ್ಕೆಲ್ಲ ನಾಂದಿ ಹಾಡಿದ್ದು ಅಯೋಧ್ಯಾ ರಥಯಾತ್ರೆ ಮತ್ತು ಆನಂತರ ನಡೆದ ಘಟನೆಗಳು ಎನ್ನುವುದನ್ನು ನಾವು ಮರೆಯುವಂತಿಲ್ಲ. ಕೇವಲ ಅಯೋಧ್ಯೆಯ ಕಟ್ಟಡ ಶುಚಿಗೊಳಿಸುವ ಕೆಲಸಕ್ಕೆ ಹೋಗುತ್ತಿರುವುದಾಗಿ ಬಿಂಬಿಸಿ, ಅಲ್ಲಿನ ವಿವಾದಾತ್ಮಕ ಪ್ರದೇಶದಲ್ಲಿ ಇದ್ದ 16ನೇ ಶತಮಾನದ ಕಟ್ಟಡ ಕೆಡವಲಾಯಿತು. ಕಟ್ಟಡಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದ ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ತಮ್ಮ ಮಾತಿಗೆ ತಪ್ಪಿದರು. ಆದ್ವಾಣಿ, ಉಮಾ ಭಾರತಿ ಮುಂತಾದವರು ಜನರ ಉನ್ಮಾದ ಬಳಸಿಕೊಂಡರು. ಈ ಪ್ರಕರಣದಲ್ಲಿ ಆದ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಷಿ ಮುಂತಾದವರು ತಪ್ಪಿತಸ್ಥರು ಎಂದು ಕೋರ್ಟ ಹೇಳಿದೆ. ಮುಂದಿನ ವಿಚಾರಣೆ ಈಗ ಆರಂಭ ಆಗಿದೆ.
ಈ ಹಿನ್ನೆಲೆಯಲ್ಲಿ ಇಂದು ದೇಶದಲ್ಲಿ, ಅದರಲ್ಲೂ ನಮ್ಮ ರಾಜ್ಯದಲ್ಲಿಯೇ ನಡೆಯುತ್ತಿರುವ ಬೆಳವಣಿಗೆಗಳು ಗಮನಾರ್ಹ. ಒಬ್ಬ ಸಂಸದರು ತೀವ್ರ ಪ್ರತಿಭಟನೆಗೆ, ತಮ್ಮ ಪಕ್ಷದ ಅಧ್ಯಕ್ಷರ ಸೂಚನೆಯಂತೆ ಕರೆ ನೀಡುತ್ತಾರೆ. ಆ ಸಂಸದರನ್ನು ಬಂಧಿಸಿದ ಪ್ರಕರಣದ ಬಗ್ಗೆ ಪ್ರತಿಕ್ರಯಿಸಿದ ಕೇಂದ್ರದ ಸಚಿವರೊಬ್ಬರು ನಮ್ಮಲ್ಲಿ ಹೀಗೆ ಆಗಿದ್ದರೆ ಇಡೀ ಜಿಲ್ಲೆ ಬೆಂಕಿ ಹೊತ್ತಿ ಉರಿಯುತ್ತಿತ್ತು, ನಿಮ್ಮಲ್ಲಿ ಅಂಥ ಶಕ್ತಿವಂತರೇ ಇಲ್ಲವೇ ಎಂದು ಹಿಂಸೆಗೆ ಪ್ರಚೋದಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಇನ್ನೆಷ್ಟು ಅಯೋಧ್ಯೆಗಳನ್ನು, ಇನ್ನೆಷ್ಟು ಅಮಾಯಕರ ಬಲಿಯನ್ನು ಕಾಣಬೇಕಾಗಬಹುದೋ ಎನ್ನುವ ಗಂಭೀರ ಚಿಂತೆ ಈಗ ಕೆಲವರನ್ನಾದರೂ ಕಾಡಿದ್ದರೆ ಅದು ಸಹಜ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: