ಗುಜರಾತ ಪ್ರಚಾರದ ಕೊನೆಯ ಹಂತ

0
376

ಕ್ರಿಕೆಟ್ ಪಂದ್ಯದ ಜ್ವರ ಏರುವುದು ಕೊನೆಯ ಓವರ್‍ಗಳಲ್ಲಿ. ಈಗ ಗುಜರಾತ್ ವಿಧಾನಸಭೆ ಚುನಾವಣೆಯ ಪ್ರಚಾರ ಕೊನೆಯ ಓವರ್ ಹಂತದಲ್ಲಿ ಇದೆ. ನಮ್ಮ ಪ್ರಧಾನಿ ಅವರು ತಾವು ದೇಶದ ಪ್ರಧಾನಿ ಎನ್ನುವುದನ್ನು ಮರೆತು ಅಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಮೊದಲಿನ ವಿಶ್ವಾಸ ಮತ್ತು ದೃಢತೆಗಳು ಮರೆ ಆಗಿವೆ. ಅವರೆಷ್ಟು ಕಂಗೆಟ್ಟಿದ್ದಾರೆ ಎಂದರೆ, ಇಲ್ಲಿ ಬಿಜೆಪಿ ಗೆದ್ದರೆ ಇಡೀ ಕೇಂದ್ರ ಸರ್ಕಾರವೇ ನಿಮ್ಮ ಸೇವೆಗೆ ಒದಗಿ ಬರಲಿದೆ ಎಂಬಂಥ ಮಾತುಗಳನ್ನು ಆಡುತ್ತಿದ್ದಾರೆ!.
ಅಲ್ಲಿ ಈಗಾಗಲೇ ಇಡೀ ಕೇಂದ್ರ ಸರ್ಕಾರದ ಮಂತ್ರಿಗಳೆಲ್ಲ ಬಿಡಾರ ಹೂಡಿದ್ದಾರೆ. ವಿಚಿತ್ರ ಎಂದರೆ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ಅವರು ಗುಜರಾತ್‍ಗೆ ಭೇಟಿ ನೀಡಿರಲಿಲ್ಲ. ಅವರು ಭೇಟಿ ನೀಡಿದರೆ, ಅಲ್ಲಿನ ವ್ಯಾಪಾರಿ ವೃಂದ ತಕ್ಕ ಪಾಠ ಕಲಿಸಲಿದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಇದೆಲ್ಲದರ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಲ್ಲಿ ಪ್ರಚಾರದಲ್ಲಿ ತೊಡಗುತ್ತಿದ್ದಾರೆ. ಅವರ ರಾಜ್ಯದಲ್ಲಿಯೇ ಕಿತ್ತು ತಿನ್ನುವಷ್ಟು ಸಮಸ್ಯೆಗಳು ಇವೆ. ನಿತ್ಯ ಎಂಬಂತೆ ಹೊಸ ಹೊಸ ಸಮಸ್ಯೆಗಳು ಅಲ್ಲಿ ಉದ್ಭವ ಆಗುತ್ತಿವೆ. ಅವುಗಳ ಬಗ್ಗೆ ಗಮನ ಹರಿಸದೇ ಗುಜರಾತ್‍ನಲ್ಲಿ ಏನು ಮಾಡುತ್ತಿದ್ದಾರೆಯೋ ತಿಳಿಯದು.
ಎಲ್ಲ ಚುನಾವಣೆಗಳಲ್ಲಿ ನಡೆಯುವಂತೆ ಗುಜರಾತ್‍ನಲ್ಲಿಯೂ ಹಣ, ಹೆಂಡದ ಹೊಳೆ ಹರಿಯುತ್ತಲಿದೆ. ಅದು ಕಂಡೂ ಕಾಣದ ಹಾಗೆ ರಾಜಕೀಯ ನಾಯಕರು ವರ್ತಿಸುತ್ತಾ ಇದ್ದಾರೆ. ವಿಶೇಷ ನೋಡಿ, ಮದ್ಯಪಾನ ನಿಷೇಧ ಇರುವ ಗುಜರಾತ್‍ನಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಆದಾಗಿನಿಂದ ಇಪ್ಪತ್ತೈದು ಕೋಟಿಗೂ ಹೆಚ್ಚು ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಗಾಂಧೀಜಿ ನಾಡಿನ ದೌರ್ಭಾಗ್ಯ ಎಂದರೆ ಇದೇ ಅಲ್ಲವೇ. ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ, ಯಾವ ರಾಜಕೀಯ ಪಕ್ಷಗಳೂ ಇಲ್ಲಿ ಗಾಂಧೀಜಿ ಪ್ರಸ್ತಾಪವನ್ನೇ ಮಾಡುತ್ತಿಲ್ಲ. ಬಿಜೆಪಿಯತೂ ಸರ್ದಾರ ಪಟೇಲ ಹಾಗು ಮೊರಾರ್ಜಿ ದೇಸಾಯಿ ಅವರನ್ನು ಗುತ್ತಿಗೆ ಪಡೆದುಕೊಂಡಂತೆ ಮಾತಾಡುತ್ತಿದೆ. ಜೊತೆಗೆ ಕಾಂಗ್ರೆಸ್‍ನ ನೆಹರೂ, ಇಂದಿರಾ ದೇಶಕ್ಕಾಗಿ ಏನೂ ಮಾಡಿಲ್ಲ ಎಂದು ಅವರನ್ನು ಸುಮ್ಮ ಸುಮ್ಮನೇ ಎಳೆದು ತರುತ್ತಿದೆ.
ಪಟೇಲರ ಪ್ರಾಬಲ್ಯ ಇರುವ ಸೌರಾಷ್ಟ್ರದಲ್ಲಿ ಮೋದೀಜಿ ಅವರ ಭಾಷಣಗಳಿಗೆ ಜನ ಸೇರುತ್ತಿಲ್ಲ. ಚಿಕುನ್‍ಗುನ್ಯಾ ಬಂದು ಜನ ಮಲಗಿದ್ದಾರೆ, ಹೀಗಾಗಿ ಸಭಿಕರ ಸಂಖ್ಯೆ ಕಡಿಮೆ ಆಗಿದೆ ಎಂದು ಸಂಘಟಕರು ವಿವರಣೆ ನೀಡುತ್ತಿದ್ದಾರೆ. ನೋಟು ರದ್ಧತಿ ಮತ್ತು ಜಿಎಸ್‍ಟಿಯಿಂದ ಭಾರಿ ನಷ್ಟಕ್ಕೆ ತುತ್ತಾದವರು ಸೂರತ್‍ನ ವ್ಯಾಪಾರಿಗಳು. ಎರಡೂ ಕ್ರಮಗಳ ವಿರುದ್ಧ ಅವರು ಸಿಡಿದು ನಿಂತಿದ್ದರು. ಅವರನ್ನು ನಿಯಂತ್ರಿಸಲು ಪೋಲೀಸರು ಲಾಠಿ ಪ್ರಯೋಗಿಸಬೇಕಾಗಿತ್ತು. ಆ ನಗರಕ್ಕೆ ಭೇಟಿ ನೀಡದ ಪ್ರಧಾನಿಯವರು ಸೂರತ್ ನಗರದಿಂದ ನಾಲ್ಕು ಮೈಲು ದೂರದ ಮೈದಾನದಲ್ಲಿ ಮಹಾ ರ್ಯಾಲಿ ಉದ್ದೇಶಿಸಿ ಭಾಷಣ ಮಾಡಿದರು. ಆದರೆ ಕೇಳಲು ಜನರೇ ಇರಲಿಲ್ಲ.
ಕೆಲ ದಿನಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಅಲ್ಲಿಯ ವರೆಗೆ ಏನೇನು ಫಜೀತಿಗಳು ನಡೆಯುತ್ತವೆಯೋ ಗೊತ್ತಿಲ್ಲ. ಮಾಧ್ಯಮಗಳು ಸ್ವಲ್ಪ ದನಿ ಬದಲಿಸಿ, ಮೋದಿ ಸೋಲುತ್ತಿದ್ದಾರೆ ನಿಜ ಆದರೆ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ರಾಗ ತೆಗೆಯತೊಡಗಿವೆ. ಇದೇ ಸಂದರ್ಭದಲ್ಲಿ ಬಿಬಿಸಿ ಮಹತ್ವದ ಸಂಗತಿಯೊಂದನ್ನು ಸ್ಫೋಟಿಸಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಮತ ಯಂತ್ರಗಳ ದುರುಪಯೋಗ ಕಾರಣ ಎಂದು ವಿಸ್ತøತ ವರದಿಯೊಂದನ್ನು ಅದು ಪ್ರಸಾರ ಮಾಡಿದೆ. ಇದೆಲ್ಲ ಗಮನಿಸಿದರೆ, ಗುಜರಾತ್‍ನಲ್ಲಿ ಗೆಲ್ಲಲು ಮತ್ತದೇ ತಂತ್ರವನ್ನು ಬಿಜೆಪಿ ಬಳಸಿದರೆ ಆಶ್ಚರ್ಯ ಏನಿಲ್ಲ ಎನ್ನುವುದು ಕೆಲ ವಿರೋಧ ಪಕ್ಷಗಳ ಅನಿಸಿಕೆ.
ಹಾಗೇನಾದರೂ ಅಲ್ಲಿ ಬಿಜೆಪಿ ಗೆದ್ದರೆ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಕುತೂಹಲದ ಸಂಗತಿ. ಏಕೆಂದರೆ ಕೇಂದ್ರದ ಕ್ರಮಗಳಿಂದಾಗಿ ಅಲ್ಲಿನ ವ್ಯಾಪಾರಿಗಳು ಸಹನೆ ಕಳೆದುಕೊಂಡಿದ್ದಾರೆ. ಕಳೆದ ಸಂಸತ್ ಚುನಾವಣೆಯಲ್ಲಿ ಭರವಸೆ ಇಟ್ಟು ಮತ ನೀಡಿ ಬಿಜೆಪಿ ಗೆಲ್ಲಿಸಿದ್ದ ಯುವ ಜನರು ನಿರುದ್ಯೋಗದಿಂದ ಕಂಗೆಟ್ಟು ಪಾಠ ಕಲಿಸಲು ಸಿದ್ಧವಾಗಿ ನಿಂತಿದ್ದಾರೆ. ಸಾಮಾನ್ಯ ಮತದಾರರನ್ನು ಹಣದಿಂದ ಸೆಳೆಯುವ ತಂತ್ರ ಈ ಬಾರಿ ಗುಜರಾತ್‍ನಲ್ಲಿ ಯಶಸ್ವಿ ಆಗುವಂತೆ ಕಾಣುತ್ತಿಲ್ಲ. ಆದರೂ ಹಣ ತೂರಲು ಮುಂದಾಗಿರುವ ರಾಜಕೀಯ ಪಕ್ಷಗಳಿಂದ ಅಲ್ಲಿನ ಮತದಾರ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದು ನಿಗೂಢ. ಗಾಂಧಿ ನಾಡಿನಲ್ಲಿ ಈಗಾಗಲೇ ಹರಿದಿರುವ ಮದ್ಯದ ಹೊಳೆÉ ಮೀರಿ ಇನ್ನೂ ಹೆಚ್ಚಿನ ಮದ್ಯದ ಹೊಳೆ ಬರುವ ದಿನಗಳಲ್ಲಿ ಹರಿಯಲಿದೆ ಎನ್ನುವ ಸುದ್ದಿಗಳು ನಿಜಕ್ಕೂ ದುರ್ದೈವಕರ.

LEAVE A REPLY

Please enter your comment!
Please enter your name here