ಸಂಪಾದಕೀಯ

ಸಾಲ ಮಾಡಿ ತುಪ್ಪ ತಿನ್ನುವವರು

‘ಋಣಂ ಕೃತ್ವಾ ಘೃತಂ ಪಿಬ್ಯೇತ’ ಎಂದು ತುಂಬಾ ಹಿಂದಿನಿಂದ ಬಂದ ಮಾತಿದೆ. ಕನ್ನಡದಲ್ಲಿ ಸಲೀಸಾಗಿ ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎಂದು ಹೇಳುವುದು ಕೇಳಿದ್ದೇವೆ. ಇದನ್ನು ಚಾಚೂ ತಪ್ಪದಂತೆ ಪಾಲಿಸುತ್ತಿರುವವರು ಬಡವರಲ್ಲ, ಅತೀ ಶ್ರೀಮಂತರು. ಅದಕ್ಕೆ ನಮ್ಮ ಸರ್ಕಾರಗಳು ಮತ್ತು ಬ್ಯಾಂಕುಗಳು ಅನುಮಾನ ಇಲ್ಲದೇ ಬೆಂಬಲವಾಗಿ ನಿಂತಿವೆ. ಇದೆಲ್ಲದರ ಪರಿಣಾಮವಾಗಿ ಅತೀ ಶ್ರೀಮಂತರಿಗೆ ನೀಡಲಾದ ವಸೂಲಾಗದ ಸಾಲ ಹಲವು ಲಕ್ಷ ಕೋಟಿಗಳನ್ನು ಮೀರಿದೆ. ಇದರ ಪರಿಣಾಮವಾಗಿ ನಮ್ಮ ಬ್ಯಾಂಕುಗಳು ಕುಸಿಯುವ ಸ್ಥಿತಿಗೆ ಮುಟ್ಟಿವೆ. ಅವುಗಳ ಸೊಂಟ ಮುರಿಯದಂತೆ ಕಾಪಾಡಲು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ನಾಲ್ಕು ಲಕ್ಷ ಕೋಟಿ ರೂ. ನೆರವು ನೀಡಿದೆ.
ಈಗಿರುವ ಕೇಂದ್ರ ಸರ್ಕಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ; ನಮ್ಮ ಹಿಂದಿನ ಸರ್ಕಾರಗಳು ಇದ್ದಾಗ ಈ ಸಾಲ ನೀಡಲಾಗಿದೆ. ನಾವೀಗ ಅವೆಲ್ಲವುಗಳ ವಸೂಲಿಗೆ ನಿಂತಿದ್ದೇವೆ. ದೊಡ್ಡ ಮೊತ್ತದ ಸಾಲ ಪಡೆದು ಹಿಂದಿರುಗಿಸದೇ, ಬಡ್ಡಿ ಕೂಡ ಕಟ್ಟದೇ ಇರುವ ಕಂಪನಿಗಳ ಪಟ್ಟಿ ತಯಾರಿಸಿದ್ದೇವೆ. ಆಯಾ ಕಂಪನಿಗಳ ಆಸ್ತಿ ಮುಂತಾದವುಗಳ ಪಟ್ಟಿ ಕೂಡ ತಯಾರಾಗುತ್ತಾ ಇದೆ. ಆಸ್ತಿ ಲೆಕ್ಕಾಚಾರ ಮುಗಿದ ಮೇಲೆ, ಅದನ್ನು ಹರಾಜು ಮಾಡಿ ಸಾಲ ವಸೂಲು ಮಾಡುವ ಕುರಿತು ಯೋಚಿಸುತ್ತಿದ್ದೇವೆ ಎಂದು ಕೇಂದ್ರದ ಹಣಕಾಸು ಸಚಿವರು ತಮ್ಮ ಬ್ಲಾಗ್‍ನಲ್ಲಿ ಹೇಳಿಕೊಂಡಿದ್ದಾರೆ.
ಇವರು ಹೇಳುವುದು ಒಂದು, ಮಾಡುವುದು ಇನ್ನೊಂದು. ಈ ಸರ್ಕಾರ ಆಧಿಕಾರಕ್ಕೆ ಬಂದ ಮೇಲೆ ಹಲವಾರು ಕಂಪನಿಗಳ ಸಾಲ ಮನ್ನಾ ಮಾಡಲಾಗಿದೆ. ಹಿಂದೆಲ್ಲ ಈ ಸಾಲದ ಮೊತ್ತವನ್ನು ಬ್ಯಾಂಕುಗಳು ‘ನಾನ್ ಪರ್ಫಾಮಿಂಗ್ ಅಸೆಟ್ಸ್’ ಎಂದು ತೋರಿಸುತ್ತಾ ಬಂದಿದ್ದವು. ಅದರರ್ಥ, ಈ ಕಂಪನಿಗಳು ಈಗ ಸಾಲ ಮರು ಪಾವತಿ ಮಾಡುವ ಸ್ಥಿತಿಯಲ್ಲಿ ಇಲ್ಲ, ಆದರೆ ಮುಂದೊಂದು ದಿನ ಇಂತಹ ಕಂಪನಿಗಳ ಮೇಲೆ ಕ್ರಮ ಜರುಗಿಸಿ, ಆಸ್ತಿ ಹರಾಜು ಮೂಲಕ ಸಾಲ ವಸೂಲು ಮಾಡಲಾಗುತ್ತದೆ ಎನ್ನುವ ಸಂದೇಶ ನೀಡಲಾಗುತ್ತ ಇತ್ತು. ಆದರೆ ಈಗಿನ ಸರ್ಕಾರ ಜನರ ಹಣ ಬ್ಯಾಂಕುಗಳಿಗೆ ನೀಡಿ, ಶ್ರೀಮಂತರ ಹಿತ ಕಾಯುವ ಕೆಲಸಕ್ಕೆ ನಿಂತಿದೆ.
ಇದು ಇಷ್ಟಕ್ಕೇ ನಿಲ್ಲುವುದಿಲ್ಲ ಎಂದು ಮುಂದೆ ಬರಲಿರುವ ಆರ್ಥಿಕ ನಿಲುವಳಿಯ ಅಂಶಗಳು ಸೂಚಿಸುತ್ತವೆ. ಅದರನ್ವಯ ಬ್ಯಾಂಕುಗಳಲ್ಲಿ ಸಾರ್ವಜನಿಕರು ಇರಿಸಿರುವ ನಿಗದಿತ ಠೇವಣಿ ಮತ್ತು ಉಳಿತಾಯ ಖಾತೆಯ ಹಣವನ್ನು ಬ್ಯಾಂಕುಗಳು ಬಳಸಿಕೊಳ್ಳಬಹುದು. ಉದಾಹರಣೆಗೆ ಉಳಿತಾಯ ಖಾತೆಯಲ್ಲಿ ಮಕ್ಕಳ ಮದುವೆಗೋ, ಮನೆ ಖರೀದಿಗೆ ಎಂದೋ ಲಕ್ಷಾಂತರ ಹಣ ಉಳಿಸಿಕೊಂಡ ಖಾತೆಯಲ್ಲಿನ ಹಣವನ್ನು ಬ್ಯಾಂಕು ಯಾವುದೇ ಸೂಚನೆ ನೀಡದೇ ನಿಶ್ಚಿತ ಠೇವಣಿ ಖಾತೆಗೆ ಹಾಕಿ, ಶೇಕಡಾ ಐದರಷ್ಟು ಬಡ್ಡಿ ಹಣ ನೀಡಬಹುದು. ಅದನ್ನು ಗ್ರಾಹಕ ಪ್ರಶ್ನಿಸುವಂತಿಲ್ಲ. ಯಾರದ್ದನ್ನೋ ಇನ್ಯಾರಿಗೋ ದಾನ ಮಾಡುವ ಈ ಉದಾರ ನೀತಿಯನ್ನು ಜಾರಿಗೆ ತರಲು ಎಲ್ಲ ರೀತಿಯ ಸಿದ್ಧತೆಗಳು ನಡೆದಿದ್ದು, ಇದು ನೋಟು ಅಮಾನ್ಯೀಕರಣಕ್ಕಿಂತ ಹೆಚ್ಚು ಸಾಮಾನ್ಯ ಜನರ ಜೀವನವನ್ನು ದುರಂತಕ್ಕೆ ತಳ್ಳಲಿದೆ ಎಂದು ಅರ್ಥಿಕ ತಜ್ಞರ ಅಭಿಪ್ರಾಯ.
ಸಾಮಾನ್ಯವಾಗಿ ಮಧ್ಯಮ ವರ್ಗದ ಜನ ತಮ್ಮ ಆಪತ್ತಿಗೆ ಅನುವಾಗಲೆಂದು ಉಳಿತಾಯ ಖಾತೆಯಲ್ಲಿ ಹಣ ಶೇಖರಿಸುತ್ತಾ ಬಂದಿರುತ್ತಾರೆ. ಅದರ ಮೇಲೆ ಕಣ್ಣು ಹಾಕಿ, ಸಾಲ ಮಾಡಿ ಕೈ ಎತ್ತಿದ ಅತೀ ಶ್ರೀಮಂತರನ್ನು ಪಾರು ಮಾಡಲು ಈ ಸರ್ಕಾರ ಯತ್ನಿಸುತ್ತಿದೆ. ಸ್ವಂತ ಬುದ್ಧಿ ಇಲ್ಲ, ಹೇಳಿದವರ ಮಾತೂ ಕೇಳೋದಿಲ್ಲ ಎನ್ನುವದಕ್ಕಿಂತ ಹೆಚ್ಚಾಗಿ, ಯಾರದೋ ಉದ್ಧಾರಕ್ಕೆ ಇನ್ಯಾರೋ ಅಮಾಯಕರನ್ನು ಬಲಿ ಪಶು ಮಾಡುತ್ತಿರುವ ಈ ಜನರಿಗೆ ಬುದ್ಧಿ ಕಲಿಸಲು ಈಗ ಸಮಯ ಪಕ್ವ ಆಗಿದೆ ಎನಿಸುತ್ತಿದೆ. ಕೇಂದ್ರದ ಇಂಥ ಆರ್ಥಿಕ ಧೋರಣೆಗಳನ್ನು ಪ್ರಶ್ನಿಸುವ ಹಾಗು ಇಂಥ ತಲೆ ಬುಡ ಇಲ್ಲದ, ಜನರಿಗೆ ಹಾನಿ ಮಾಡುವ ಕ್ರಮಗಳನ್ನು ವಿರೋಧಿಸುವ ಪ್ರಬಲ ಆಂದೋಲನವನ್ನೇ ನಾವೀಗ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಜನಸಾಮಾನ್ಯರ ಹಣದಿಂದ ಸಾಲ ಮಾಡಿ ತುಪ್ಪ ತಿಂದವರೆಲ್ಲ ಆರಾಮಾಗಿ ವಿದೇಶದಲ್ಲಿ ನೆಲಸುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: