ಮೂರು ಮಾತು..

0
392

ಒಂದು: ಮೋದಿ ಚಹಾ ಮಾರುತ್ತಿದ್ದರು. ಅವರು ಪ್ರಧಾನಿ ಆಗುವುದು ಅಸಂಭವ. ಹೆಚ್ಚೆಂದರೆ ಅವರು ಸಂಸತ್ ಭವನದಲ್ಲಿ ಚಹಾ ಮಾರಬಹುದು.
ಎರಡು: ಷಹಜಹಾನ್ ನಂತರ ಔರಂಗಜೇಬ ಅಧಿಕಾರಕ್ಕೆ ಬಂದ. ಆಗೇನಾದರೂ ಚುನಾವಣೆ ನಡೆಸಲಾಯಿತೇ?
ಮೂರು: ಪ್ರಧಾನಿ ಮೋದಿ ನೀಚ ಸ್ವಭಾವದ ಮನುಷ್ಯ
ಮೇಲಿನ ಮೂರೂ ಮಾತು ಆಡಿದವರು ಕಾಂಗ್ರೆಸ್ ನಾಯಕ ಮಣಿಶಂಕರ ಐಯರ್. ಮೋದಿ ಬಗೆಗಿನ ಈಚಿನ ಹೇಳಿಕೆ ಗಮನಿಸಿ ಕಾಂಗ್ರೆಸ್ ಪಕ್ಷ ಅವರನ್ನು ಅಮಾನತು ಮಾಡಿದೆ. ಜೊತೆಗೆ ಕಾರಣ ಕೇಳಿ ನೋಟೀಸ ನೀಡಿದೆ. ಪಕ್ಷದಲ್ಲಿ ಬಹುದೊಡ್ಡ ಸ್ಥಾನದಲ್ಲಿ ಇದ್ದವರು ಮಣಿ ಶಂಕರ ಐಯರ್. ಅವರ ಸ್ವಕ್ಷೇತ್ರ ಮೈಲಾಂಡಿ ತುರೈ. ಅಲ್ಲಿಂದ ಸತತವಾಗಿ ಗೆಲ್ಲುತ್ತಲೇ ಬಂದಿರುವ ಅವರದ್ದು ತಮಿಳುನಾಡಿನಲ್ಲಿ ಬಹುದೊಡ್ಡ ಹೆಸರು ಮಾಡಿದ ಕುಟುಂಬ. ಅವರ ಸಹೋದರರು ಕೂಡ ಅಷ್ಟೇ ನಾನಾ ರಂಗಗಳಲ್ಲಿ ಹೆಸರು ಮಾಡಿದವರು. ಭತ್ತದ ಬೆಳೆಗೆ ಪ್ರಸಿದ್ಧವಾದ ತಂಜಾವೂರು ಜಿಲ್ಲೆಯಲ್ಲಿ ಬರುವ ಮೈಲಾಂಡಿ ತುರೈನಲ್ಲಿ ಅವರ ಕುಟುಂಬದ ಅಪಾರ ಆಸ್ತಿ ಇದೆ. ಪಾರಂಪರಿಕವಾಗಿ ಬಂದ ಆ ಸ್ವತ್ತು ಕುಟುಂಬದ ಟ್ರಸ್ಟ್‍ಗೆ ಸೇರಿದ್ದು.
ಇವರ ಸಹೋದರರಾದ ಸ್ವಾಮಿನಾಥನ ಐಯರ್ ಹೆಸರಾಂತ ಆರ್ಥಿಕ ತಜ್ಞರು, ಇನ್ನೊಬ್ಬರು ಅಂಕಲೇಶ್ವರ ಐಯರ್ ಕೃಷಿ ವಿಚಾರಗಳಲ್ಲಿ ಪರಿಣಿತಿ ಪಡೆದವರು. ಸ್ವತಃ ಮಣಿಶಂಕರ ಐಯರ್ ಪಂಚಾಯತ ರಾಜ್ ವ್ಯವಸ್ಥೆ ಕುರಿತು ಆಳವಾದ ಪರಿಜ್ಞಾನ ಉಳ್ಳವರು. ಕೇಂದ್ರದಲ್ಲಿ ರಾಜೀವ ಗಾಂಧಿ ಸರ್ಕಾರ ಇದ್ದಾಗ ಪಂಚಾಯತ ರಾಜ್ ವ್ಯವಸ್ಥೆ ದೇಶವ್ಯಾಪಿಯಾಗಿ ಜಾರಿಗೆ ತರುವಲ್ಲಿ ಅವರ ಪಾತ್ರವೂ ಇದೆ. ಮೂವರೂ ಅಣ್ಣ ತಮ್ಮಂದಿರು ನಾನಾ ಪತ್ರಿಕೆಗಳಲ್ಲಿ ಅಂಕಣ ಬರಹಗಾರರು. ಕಾಂಗ್ರೆಸ್ ಪಕ್ಷದ ವಿಚಾರದಲ್ಲಿ ಹೆಚ್ಚು ತಿಳಿವಳಿಕೆ ಇರುವ ಮಣಿ ಅವರದ್ದು ಮಾತಿನ ವಿಚಾರದಲ್ಲಿ ಸ್ವಲ್ಪ ದುಡುಕು. ಇಂಥ ದುಡುಕಿನ ಪರಿಣಾಮ ಅವರೀಗ ಅನುಭವಿಸುತ್ತಾ ಇದ್ದಾರೆ.
ಕಳೆದ ಲೋಕಸಭೆ ಚುನಾವಣೆ ವೇಳೆ ಮೋದಿ ಚಹಾ ಮಾರುತ್ತಿದ್ದ ವಿಷಯ ಪ್ರಸ್ತಾಪಿಸಿ ದೊಡ್ಡ ತಪ್ಪು ಮಾಡಿದರು. ಬಿಜೆಪಿ ಇದನ್ನು ಬಹುದೊಡ್ಡ ದಾಳವಾಗಿ ಬಳಸಿಕೊಂಡಿತು. ‘ಚಾಯ್ ಪೆ ಚರ್ಚಾ’ ಎಂಬ ಹೊಸ ತಂತ್ರದ ಮೂಲಕ ಮೋದಿ ಅವರಿಗೆ ಹೆಚ್ಚಿನ ಪ್ರಚಾರ ದೊರಕಿಸಿಕೊಟ್ಟಿತು. ಮೋದಿ ಪ್ರಧಾನಿಯೂ ಆದರು. ಕಾಂಗ್ರೆಸ್ ಹಿಂದೆಂದೂ ಕಾಣದ ಕುಸಿತ ಕಂಡು, ಕನಿಷ್ಠ ವಿರೋಧ ಪಕ್ಷ ಆಗುವ ಅರ್ಹತೆ ಕೂಡ ಕಳೆದುಕೊಂಡಿತು. ಹೀಗೆ ಪಕ್ಷ ಕುಸಿತ ಕಂಡಾಗ ಅದನ್ನು ಮೇಲೆತ್ತುವುದು ಬಹಳ ಜವಾಬ್ದಾರಿಯ ಕೆಲಸ. ಅದಕ್ಕೆ ಸಮಯ, ಸಂದರ್ಭ ನೋಡಿ ಜನರನ್ನು ಒಗ್ಗೂಡಿಸಬೇಕಾಗುತ್ತದೆ. ಅಂಥ ಶಕ್ತಿ ಇಂದಿರಾ ಗಾಂಧಿ ಅವರಲ್ಲಿ ಇತ್ತು. 1977ರಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡು ಪಾತಾಳಕ್ಕೆ ಕುಸಿದಾಗ ಇಂದಿರಾ ಅವರಿಂದ ಸಾಕಷ್ಟು ಜನ ದೂರ ಸರಿದಿದ್ದರು. ಖುದ್ದು ಅವರೇ ಅಲಹಾಬಾದ ಕ್ಷೇತ್ರದಿಂದ ರಾಜ ನಾರಾಯಣ ವಿರುದ್ಧ ಸೋತಿದ್ದರು.
ಅಂಥವರು ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆ ಆಗಿ ಸಂಸತ್ತು ಪ್ರವೇಶಿಸಿದಾಗ ದುಡುಕಿನಿಂದ ಜನತಾ ಪಕ್ಷ ಅವರನ್ನು ಜೈಲಿಗೆ ತಳ್ಳಿತು. ಸೇಡಿಗಾಗಿ ಇಂದಿರಾ ಕಾಯುತ್ತ ಕುಳಿತರು. ಬೆಲ್ಚಿಯಲ್ಲಿ ದಲಿತರ ಸಜೀವ ದಹನದ ಸುದ್ದಿ ತಿಳಿಯುತ್ತಿದ್ದಂತೆ ಥಟ್ಟನೆ ಎದ್ದು ಕುಳಿತ ಅವರು, ಸ್ವತಃ ಅಲ್ಲಿಗೆ ಹೋದರು. ಕೊನೆಯ ಹಂತದ ಪ್ರಯಾಣಕ್ಕೆ ವಾಹನ ಕೂಡ ದೊರೆಯದೇ ಅವರು ಆನೆಯ ಮೇಲೆ ಕುಳಿತು ಪ್ರಯಾಣ ಮಾಡಿ ಬೆಲ್ಚಿ ತಲುಪಿದರು. ಬೆಲ್ಚಿಯ ಬೆಂಕಿ ಜನತಾದಳವನ್ನೇ ಸುಟ್ಟು ಬೂದಿ ಮಾಡಬಲ್ಲದು ಎಂದು ಅವರಿಗೆ ತಿಳಿದಿತ್ತು. ಅದು ಹಾಗೇ ಆಯಿತು.
ಎದುರಾಳಿ ಮಾಡುವ ಬಹುದೊಡ್ಡ ತಪ್ಪನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವುದು ರಾಜಕೀಯ ಜಾಣತನ. ಆದರೆ ಎದುರಾಳಿಗೆ ತನ್ನ ಯಾವೊಂದು ದೌರ್ಬಲ್ಯವೂ ಸಿಗದಂತೆ ವರ್ತಿಸುವುದು ರಾಜಕೀಯ ಚಾಣಾಕ್ಷತೆ. ಈ ಸಂಗತಿ ಅರಿತುಕೊಳ್ಳಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆಯೆನೋ ಎನ್ನುವ ಅನುಮಾನ ಕಾಡುತ್ತಿರುವಾಗಲೇ ಮಣಿಶಂಕರ ಐಯರ್ ಬಾಯಿ ಹರಿಬಿಟ್ಟು ಎದುರಾಳಿಗಳಿಗೆ ತಮ್ಮ ಮೇಲೇ ದಾಳಿ ನಡೆಸಲು ಆಯುಧ ಒದಗಿಸಿಕೊಟ್ಟರು.
ಕಾಂಗ್ರೆಸ್‍ನಲ್ಲಿ ಮಣಿಶಂಕರ ಐಯರ್ ಸಣ್ಣ ಮಟ್ಟದ ನಾಯಕರೇನೂ ಅಲ್ಲ. ಎದುರು ಪಕ್ಷದ, ಪ್ರಧಾನಿ ಹುದ್ದೆಯ ವ್ಯಕ್ತಿಯನ್ನು ಟೀಕಿಸುವಾಗ ಮೈಯೆಲ್ಲ ಕಣ್ಣಾಗಿ ಇರಬೇಕಿತ್ತು. ಆದರೆ ಮಾತು ಜಾರಿದೆ. ಅವರು ಅದಕ್ಕೆ ತಕ್ಕ ಬೆಲೆ ತೆರುವಂತಾಗಿದೆ. ಅದಕ್ಕಿಂತ ದÉೂಡ್ಡ ಬೆಲೆಯನ್ನು ಅವರ ಪಕ್ಷ ತೆರಬೇಕಾಗಿ ಬರಬಹುದು ಎಂಬುದೇ ಈಗ ಪಕ್ಷದೊಳಗೆ ಎಲ್ಲರನ್ನು ಕಾಡುತ್ತಿರುವ ಸಂಗತಿ.
ಮಾತು ಎಷ್ಟು ಮುಖ್ಯ ಅಲ್ಲವೇ?

LEAVE A REPLY

Please enter your comment!
Please enter your name here