ಸಂಪಾದಕೀಯ

ತನಿಖೆ ಹಾದಿ

ಯಾವುದೇ ತನಿಖೆಯಾಗಲಿ ಆಯಾ ಸರ್ಕಾರದ ಮರ್ಜಿಯಲ್ಲಿಯೇ ನಡೆಯುತ್ತದೆ ಎಂಬ ಅನುಮಾನ ಇದೆ. ಅದಕ್ಕೆ ಸಾಕಷ್ಟು ಉದಾಹರಣೆ ನೋಡುತ್ತಾ ಬಂದಿದ್ದೇವೆ. ಕೆಲವು ತನಿಖೆಗಳು ನಡೆದಂತೆ ಕಂಡು ಬಂದು, ನಂತರ ತಪ್ಪಿತಸ್ಥರು ಎಂದು ಭಾವಿಸಿದವರು ಕೂಡ ಪಾರಾಗಿ ಬಿಡುತ್ತಾರೆ. ಕಳ್ಳರನ್ನು ಹಿಡಿಯಲು ನೇಮಿಸಿದ ಪೋಲೀಸರೇ ಕಳ್ಳನು ಕಳ್ಳತನ ಮಾಡಿಲ್ಲ ಎಂದೇ ಸರ್ಟಿಫಿಕೇಟ ನೀಡಿ ಬಿಡುತ್ತಾರೆ, ಹಾಗಾದರೆ ಕಳ್ಳ ಯಾರು ಎಂದು ಪ್ರಶ್ನಿಸಿದರೆ ಉತ್ತರ ಇರುವುದೇ ಇಲ್ಲ. ಅಂಥ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ.

ಬಹುಪಾಲು ವರಮಾನ ತೆರಿಗೆ ದಾಳಿಗಳ ವಿಷಯದಲ್ಲಂತೂ ಇದೊಂದು ಕಟು ಸತ್ಯ ಎಂಬಂತೆ ಕಾಣುತ್ತದೆ. ಸರ್ಕಾರದ ವಿವಿಧ ಹುದ್ದೆಗಳಲ್ಲಿ ಇದ್ದ ಅಥವಾ ಇರುವ ವ್ಯಕ್ತಿ ಮನೆ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಸಂಪತ್ತು ವಶ ಮಾಡಿಕೊಳ್ಳಲಾಗುತ್ತದೆ. ಆಮೇಲೆ ಅವರಿಗೆ ಶಿಕ್ಷೆಯಾದ ಸುದ್ದಿ ಬರುವುದೇ ಇಲ್ಲ. ಅದಕ್ಕಿಂತ ಹೆಚ್ಚಿನ ಆಶ್ಚರ್ಯದ ಸಂಗತಿ ಎಂದರೆ, ಅಕ್ರಮ ಸಂಪತ್ತು ಎಂದು ಯಾವುದನ್ನು ವಶ ಮಾಡಿಕೊಂಡಿದ್ದರೋ ಅದೆಲ್ಲ ಸಕ್ರಮ ಗಳಿಕೆ ಎಂದು ಸಾಬೀತಾಗಿ ಆರೋಪಿಯು ಹಣ, ಒಡವೆ ಎಲ್ಲವನ್ನೂ ವಾಪಸು ಪಡೆಯುತ್ತಾನೆ. ಇದು ಒಂದು ರೀತಿಯ ಕಮಾಲ್ ಎನಿಸಬಹುದು. ಆದರೆ ಭಾರತದ ನ್ಯಾಯಾಂಗ ವಿತರಣೆ ವ್ಯವಸ್ಥೆಯ ಅದ್ಭುತ ಸಂಗತಿ ಇದು ಎಂದು ಸಾಮಾನ್ಯ ಜನರಿಗೂ ಕೂಡ ತಿಳಿದಿದೆ. ಇಲ್ಲಿ ಎರಡು ಕಮಾಲ್‍ಗಳು ನಡೆಯುತ್ತವೆ. ಮೊದಲನೆಯದಾಗಿ, ದಾಳಿ ನಡೆಸಿದವರು ಸರಿಯಾದ ಮಾಹಿತಿ ಸಂಗ್ರಹಿಸಿರುವುದಿಲ್ಲ. ಎರಡನೆಯದಾಗಿ, ಆರೋಪಿ ಪರ ವಕೀಲರು ಭಾರೀ ಮೊತ್ತದ ಶುಲ್ಕ ಪಡೆದು ಕಾನೂನಿನ ಯಾವುದೋ ಒಂದು ಲೋಪ ಎತ್ತಿ ಹಿಡಿದು ಆರೋಪಿಯನ್ನು ಬಚಾವು ಮಾಡುತ್ತಾರೆ. ಹಾಗಾಗಿಯೇ ನಮ್ಮಲ್ಲಿ ಹತ್ತು ರೂಪಾಯಿ ಪಿಕ್ ಪಾಕೆಟ್ ಮಾಡಿದವನು ಜೈಲು ಸೇರುತ್ತಾನೆ, ಆದರೆ ನೂರಾರು ಕೋಟಿ ಲೂಟಿ ಹೊಡೆದವನು ಆರಾಮಾಗಿ ಇರುತ್ತಾನೆ.

ಈ ರೀತಿಯ ತನಿಖೆಯೊಂದರ ಕುರಿತು ಸುಪ್ರೀಮ ಕೋರ್ಟ ವ್ಯಕ್ತಪಡಿಸಿರುವ ಆತಂಕ ಈಗ ದೊಡ್ಡ ಸುದ್ದಿ ಆಗಿದೆ. ಇದು ಖ್ಯಾತ ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಹತ್ಯೆಯ ತನಿಖೆ ಕುರಿತು ಸುಪ್ರೀಮ ಕೋರ್ಟ ವ್ಯಕ್ತಪಡಿಸಿರುವ ಕಳವಳ, ನಮ್ಮ ಇಡೀ ವ್ಯವಸ್ಥೆಯ ಸೋಮಾರಿತನ ಮತ್ತು ಜಡತ್ವಕ್ಕೆ ಉದಾಹರಣೆಯಂತೆ ಕಾಣುತ್ತದೆ.

ಇತ್ತೀಚೆಗೆ ಗೌರಿ ಲಂಕೇಶ ಹತ್ಯೆ ತನಿಖೆಗೆ ಹಣದ ಕೊರತೆ ಅಡ್ಡಿ ಆಗಿದೆ, ಆದ್ದರಿಂದ ತನಿಖೆ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂಬಂಥ ಅಭಿಪ್ರಾಯಗಳು ವ್ಯಕ್ತ ಆಗಿದ್ದವು. ಬಹಳ ಭರವಸೆ ಹುಟ್ಟಿಸುವ ರೀತಿಯಲ್ಲಿ ಆರಂಭ ಆಗಿದ್ದ ಗೌರಿ ಲಂಕೇಶ ಹತ್ಯೆ ಪ್ರಕರಣದ ತನಿಖೆ ಇನ್ನೇನು ಮುಗಿಯುವ ಹಂತ ಮುಟ್ಟಿರುವಾಗ ಇಂಥದ್ದೊಂದು ಮಾಹಿತಿ ಬಹಿರಂಗ ಆದದ್ದು ಕಳವಳಕ್ಕೆ ಕಾರಣ. ಆದರೆ ಗೌರಿ ಹತ್ಯೆಗೆ ಮುಂಚೆಯೇ ಅದೇ ಮಾದರಿಯಲ್ಲಿ ನಡೆದಿದ್ದ ಕಲಬುರ್ಗಿ ಹತ್ಯೆ ಪ್ರಕರಣ ಕುರಿತಂತೆ ಈ ವರೆಗೆ ಒಬ್ಬನನ್ನೂ ಬಂಧಿಸಿಲ್ಲ ಮತ್ತು ಆ ಬಗ್ಗೆ ಯಾವುದೇ ಸುಳಿವು ಕೂಡ ದೊರೆತಿಲ್ಲ ಎನ್ನುವುದು ನಿಜಕ್ಕೂ ಆತಂಕದ ವಿಷಯ. ಕಲಬುರ್ಗಿ ಹತ್ಯೆ ನಂತರ ನಾನಾ ಸಂಘಟನೆಗಳು ಮತ್ತು ಖ್ಯಾತ ವ್ಯಕ್ತಿಗಳು ಹಂತಕರನ್ನು ಶೀಘ್ರ ಕಂಡು ಹಿಡಿಯುವಂತೆ ಒತ್ತಾಯಿಸುತ್ತಲೇ ಬಂದಿದ್ದರೂ ಈ ಸಂಬಂಧ ಹೆಚ್ಚಿನ ಗಮನ ಹರಿಸಿಲ್ಲ ಎಂಬುದು ಮೇಲು ನೋಟಕ್ಕೇ ಸಾಬೀತಾಗುವಂತಿದೆ.

ಈ ರೀತಿಯ ವರ್ತನೆಯಿಂದ ಬೇಸತ್ತ ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು ಅನಿವಾರ್ಯವಾಗಿ ಸುಪ್ರೀಮ ಕೋರ್ಟ ಮೆಟ್ಟಿಲೇರಬೇಕಾಯಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜ್ಯ ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಈ ಕುರಿತಂತೆ ಸೂಕ್ತ ಉತ್ತರವನ್ನು ಬಯಸಿದೆ. ಈಗಾಗಲೇ ಸಲ್ಲಿಸಿರುವ ವರದಿ ಕೂಡ ಸಮಾಧಾನಕರ ಇರದಿದ್ದರೆ, ಮುಂಬಯಿ ಹೈಕೋರ್ಟ ಉಸ್ತುವಾರಿಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಆದೇಶಿಸಲಾಗುವುದು ಎಂದು ಕೂಡ ನ್ಯಾಯಾಲಯ ಹೇಳಿದೆ.

ಹಾಗೆ ನೋಡಿದರೆ, ಕೊಲೆ, ಹತ್ಯೆ ಪ್ರಕರಣಗಳ ತನಿಖೆ ವಿಚಾರದಲ್ಲಿ ಕರ್ನಾಟಕ ಪೋಲೀಸರು ಸಾಕಷ್ಟು ಯಶಸ್ಸು ಗಳಿಸಿರುವುದು ಮೇಲು ನೋಟಕ್ಕೇ ತಿಳಿಯುತ್ತದೆ. ಆದರೆ. ಖ್ಯಾತನಾಮರ ಹತ್ಯೆಯ ವಿಷಯ ಬಂದಾಗ, ಅಲ್ಲಿ ಅಂತರ ರಾಜ್ಯ ತಂಡಗಳ ಕೈವಾಡ ಇದ್ದು, ಹಲವು ರಾಜ್ಯಗಳಲ್ಲಿ ಸುತ್ತಾಡಿ ತನಿಖೆ ನಡೆಸಬೇಕಾಗುತ್ತದೆ. ಇದು ಸಮಯ ಮತ್ತು ಭಾರಿ ಮೊತ್ತದ ಹಣ ಬೇಕಾಗುವ ಕೆಲಸ. ಒಂದರ್ಥದಲ್ಲಿ ಇಂಥ ಹಣ ಮತ್ತು ಸಮಯವನ್ನು ಸಾಕಷ್ಟು ವಿನಿಯೋಗಿಸಿರುವ ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಒಂದೇ ಒಂದು ಸುಳಿವನ್ನೂ ಪಡೆಯಲು ಸಾಧ್ಯ ಆಗದೇ ಇರುವುದು ಹಲವು ರೀತಿಯ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಬೇಕೆಂದೇ ತನಿಖೆಯನ್ನು ನೆನೆಗುದಿಗೆ ಹಾಕಿ ಇಡಲಾಗಿದೆ ಎಂಬ ಅನುಮಾನ, ಹತ್ಯೆಗೀಡಾದವರ ಕುಟುಂಬದವರಲ್ಲಿ ಮೂಡಿದ್ದರೆ ಅದು ತೀರಾ ಸಹಜ. ಕಲಬುರ್ಗಿ ಅವರ ಪತ್ನಿ ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಅದು ಪ್ರಯೋಜನ ಕಾಣದೇ ಕೊನೆಗೆ ಅವರು ಕೋರ್ಟ ಮೆಟ್ಟಿಲೇರಿದ್ದಾರೆ. ಈಗ ಸುಪ್ರೀಮ ಕೋರ್ಟ ವ್ಯಕ್ತಪಡಿಸಿರುವ ಕಳವಳ ಮತ್ತು ರಾಜ್ಯ ಸರ್ಕಾರಕ್ಕೆ ನೀಡಿರುವ ಖಡಕ್ ಎಚ್ಚರಿಕೆ ಸಾಮಾನ್ಯ ಎಂದು ಪರಿಗಣಿಸುವಂತಿಲ್ಲ.

ಈಗ ಸಂಬಂಧಿಸಿದ ತನಿಖಾ ತಂಡ ತಾನು ಎದುರಿಸುತ್ತಿರುವ ಸಮಸ್ಯೆ ಏನು ಮತ್ತು ಯಾವ ಕಾರಣಕ್ಕೆ ತನಿಖೆ ಜಡ ಆಗುತ್ತಿದೆ ಎಂದು ಹೇಳಲೇಬೇಕಾದ ಸ್ಥಿತಿ ಮೂಡಿದೆ. ಇದು ಯಾವುದೇ ಸರ್ಕಾರಕ್ಕೂ ಮುಜುಗರ ತರುವಂಥ ಸಂಗತಿ. ಈಗಲಾದರೂ ಮೃತ ವ್ಯಕ್ತಿಗೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸುವತ್ತ ಸರಿ ಹಾದಿ ಹಿಡಿಯಲಿ ಎಂದು ನಾವು ಬಯಸುತ್ತಿದ್ದೇವೆ. ಇದರೊಂದಿಗೆ, ಇಂಥ ಹಿಂಸಾಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿ ಅಥವಾ ಸಂಘಟನೆಗಳು ಸುಲಭದಲ್ಲಿ ಪಾರಾಗಿ ಬಿಡಬಹುದು ಎಂದು ಭಾವಿಸುವಂತಿಲ್ಲ ಎಂಬ ಸಂದೇಶ ತಲುಪಿಸಬೇಕಿದೆ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: