ಪ್ರಶಸ್ತಿ ಮತ್ತು ಸ್ಮಾರಕಗಳು

0
63

ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು. ಸಾಮಾನ್ಯವಾಗಿ ನವೆಂಬರ 1ರಂದು ನೀಡಲಾಗುವ ಈ ಪ್ರಶಸ್ತಿ ಈ ಬಾರಿ ಹಲವು ಕಾರಣಗಳಿಗಾಗಿ ತಡವಾಯಿತು. ಪ್ರಶಸ್ತಿ ವಿಜೇತರ ಪಟ್ಟಿ ಹಿಂದಿನ ಸಂಜೆ ಬಿಡುಗಡೆ ಮಾಡಿದ್ದರಿಂದಲೋ ಏನೋ ಹಿಂದೆಲ್ಲ ನಡೆದ ಹಾಗೆ ವಿವಾದಗಳು ಕಾಣಲಿಲ್ಲ. ಈ ಬಾರಿ ಸುಗಮ ಸಂಗೀತ ಕ್ಷೇತ್ರಕ್ಕೆ ಪ್ರಶಸ್ತಿ ಬಂದಿಲ್ಲ ಎಂಬ ಒಂದು ತಕರಾರು ಮಾತ್ರ ಕೇಳಿ ಬಂತು. ಈ ಬಾರಿ ಪ್ರಶಸ್ತಿ ಪಡೆದವರಲ್ಲಿ ಅತ್ಯಂತ ಹಿರಿಯರು ಹಿರಿಯಡ್ಕ ಗೋಪಾಲ ರಾವ. ಅವರೀಗ ನೂರನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪ್ರಶಸ್ತಿ ಅರ್ಹರಿಗೆ ದೊರೆಯದೇ ಇರುವುದು ಒಂದು ಲೋಪ. ತೀರಾ ಇಳಿಗಾಲದಲ್ಲಿ ಪ್ರಶಸ್ತಿ ನೀಡುವುದು ಕೂಡ ಲೋಪ ಎಂದು ಪರಿಗಣಿಸಬೇಕಾಗುತ್ತದೆ. ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದ ರಾಯರಿಗೆ ಸಾಂಪ್ರದಾಯಿಕ ಕಲೆ ಬಗ್ಗೆ ಒಲವು. ಈಗೀಗ ಈ ಕಲೆ ಕೂಡ ವಾಣಿಜ್ಯೀಕರಣ ಆಗುತ್ತಿರುವ ಬಗ್ಗೆ ಅವರಿಗೆ ಬೇಸರ ಇದೆ. ಬಹುಷಃ ಅವರ ಜೀವನದಲ್ಲಿ ತುಂಬಾ ಹಿಂದೆಯೇ ಪ್ರಶಸ್ತಿ ದೊರಕಿದ್ದರೆ ಸಾಂಪ್ರದಾಯಿಕ ಯಕ್ಷಗಾನ ಕಲೆ ಉಳಿಸುವ ನಿಟ್ಟಿನಲ್ಲಿ ಅವರು ಸಕ್ರಿಯರಾಗಿ ತೊಡಗಿಕೊಳ್ಳಬಹುದಿತ್ತು.

ಯಕ್ಷಗಾನ ಅಷ್ಟೇ ಏಕೆ ಎಲ್ಲ ಕಲೆಗಳೂ ವಾಣಿಜ್ಯೀಕರಣ ಆಗುತ್ತಿರುವ ಇಂದಿನ ದಿನಗಳಲ್ಲಿ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ತುರ್ತಿನಿಂದ ಆಗಬೇಕಿದೆ. ಈ ಹಿಂದೆ ಯಕ್ಷಗಾನ ಏಕತಾನದ ನಿರೂಪಣಾ ಶೈಲಿಗಿಂತ ಭಿನ್ನವಾಗಿ ಬ್ಯಾಲೆ ರೀತಿಯಲ್ಲಿ ಕಟ್ಟಿ ಕೊಡುವ ಪ್ರಯತ್ನವನ್ನು ಶಿವರಾಮ ಕಾರಂತರು ಮಾಡಿದ್ದರು. ಆದನ್ನು ಮುಂದುವರಿಸುವ ಯತ್ನ ನಡೆಯಲಿಲ್ಲ. ಅದಕ್ಕೂ ಈ ವಾಣಿಜ್ಯೀಕರಣವೇ ಕಾರಣ. ಒಂದು ಕಾಲಕ್ಕೆ ಯಕ್ಷಗಾನ ಏರ್ಪಡಿಸುವುದು ಧಾರ್ಮಿಕ ಕ್ರಿಯೆಯ ಭಾಗ ಆಗಿತ್ತು. ಆದರೀಗ ಅದನ್ನು ಟೆಂಟ್ ಮಾದರಿಗೆ ಪರಿವರ್ತಿಸಿ, ಊರಿಂದೂರಿಗೆ ವ್ಯಾನು, ಬಸ್, ಲಾರಿಗಳಲ್ಲಿ ಸಾಮಗ್ರಿ ಮತ್ತು ಕಲಾವಿದರನ್ನು ಸಾಗಿಸಿ ಪ್ರದರ್ಶನ ನೀಡುವುದು ರೂಢಿ ಆಗಿದೆ. ಹೀಗಾದಾಗ ಖರ್ಚು ವೆಚ್ಚ ನಿಭಾಯಿಸಲು ಪ್ರೇಕ್ಷಕರನ್ನು ಆಕರ್ಷಿಸಲೇಬೇಕು. ಅದಕ್ಕಾಗಿ ಆಗಿರುವ ಮಾರ್ಪಾಡುಗಳು ಉತ್ತಮ ಅಭಿರುಚಿಗೆ ತಕ್ಕುದಾಗಿಲ್ಲ. ಇದು ಕಳವಳಕ್ಕೆ ಕಾರಣ. ಈಗ ಕುಸಿಯುತ್ತಿರುವ ಮಟ್ಟ ತಡೆಯುವುದು ಮತ್ತು ಹಿಂದಿನ ಮೌಲ್ಯಗಳನ್ನು ಆ ಕಲೆಗೆ ಕೊಡುವುದು ಮುಖ್ಯ. ಕೇವಲ ಒಂದು ಪ್ರಶಸ್ತಿಯಿಂದ ಏನೂ ಆಗುವುದಿಲ್ಲ ನಿಜ. ಆದರೆ ಆಯಾ ರಂಗದಲ್ಲಿ ತೊಡಗಿದವರಿಗೆ ಸೂಕ್ತ ಕಾಲಕ್ಕೆ ಗೌರವ ಸಂದರೆ, ಅವರು ಹೆಚ್ಚು ಸಕ್ರಿಯವಾಗಿ ತಮ್ಮ ರಂಗದ ಮೌಲ್ಯಕ್ಕಾಗಿ ದುಡಿಯುವುದು ಸಾಧ್ಯ ಆಗುತ್ತಿತ್ತು. ಯಕ್ಷ ರಂಗ ಈಗೊಂದು ಉದಾಹರಣೆ ಆಗಿ ಇಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರ ನಟ ಅಂಬರೀಷ ನಿಧನದ ನಂತರ ಕೈಗೊಂಡ ಸ್ಮಾರಕ ನಿರ್ಮಾಣ ಮತ್ತು ಜಾಗದ ವಿಚಾರದ ಹಿನ್ನೆಲೆಯಲ್ಲಿ ನಾನಾ ತರ್ಕಗಳು ಹುಟ್ಟಿಕೊಂಡಿವೆ. ಸರ್ಕಾರ ನಿರ್ಮಿಸುವ ಇಂಥ ಸ್ಮಾರಕಗಳಿಂದ ಆಯಾ ವ್ಯಕ್ತಿಗಳ ಘನತೆ, ಗೌರವಗಳು ಹೆಚ್ಚುತ್ತವೆಯೇ? ಎಂಬುದೂ ಪ್ರಶ್ನೆ. ಈ ಮುಂಚೆ ನಿಧನರಾದ ನಟ ವಿಷ್ಣುವರ್ಧನ ಅವರ ಸ್ಮಾರಕದ ವಿಚಾರ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳದೇ ಇರುವುದು ಕೂಡ ಈ ಸಂದರ್ಭದಲ್ಲಿ ಮುಖ್ಯವಾಗಿ ಪ್ರಸ್ತಾಪ ಆಗುತ್ತಿದೆ.

ಸರ್ಕಾರ ನಡೆಸುವ ಜನರಿಗೆ ಸ್ಮಾರಕ ನಿರ್ಮಾಣ ತೀರಾ ಸುಲಭದ ಪ್ರಕ್ರಿಯೆ. ಅದಕ್ಕೆ ಬೇಕಾದ ಒಂದಿಷ್ಟು ಜಾಗ ಮತ್ತು ಹಣ ಒದಗಿಸಿದರೆ ಆಯಿತು. ಆಯಾ ವ್ಯಕ್ತಿಗಳು ತೋರಿಸಿದ ದಾರಿಯಲ್ಲಿ ನಡೆಯುವುದು, ಅವರು ಎತ್ತಿ ಹಿಡಿದ ಮೌಲ್ಯಗಳು ಗಟ್ಟಿ ಆಗುವಂತೆ ನೋಡಿಕೊಳ್ಳುವುದು ತೀರಾ ಕ್ಲಿಷ್ಟ. ಆದರೆ ದಿವಂಗತರಾದ ವ್ಯಕ್ತಿಯನ್ನು ಮೆಚ್ಚುವ ವರ್ಗ ಮತ್ತು ಸಮುದಾಯಗಳನ್ನು ತಕ್ಷಣಕ್ಕೆ ತೃಪ್ತಿಪಡಿಸಲು ಸ್ಮಾರಕ ಒಳ್ಳೆಯ ನೆಪ ಆಗುತ್ತದೆ. ಈ ಹಿಂದೆ ನಿರ್ಮಾಣ ಆಗಿರುವ ಸ್ಮಾರಕಗಳು, ಅವು ಈಗಿರುವ ಸ್ಥಿತಿ ಗಮನಿಸಿದರೆ, ಸರ್ಕಾರಗಳು ಹೇಗೆ ಅಂದಂದಿನ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಇಂಥ ಸ್ಮಾರಕಗಳನ್ನು ಬಳಸಿಕೊಳ್ಳುತ್ತಾ ಬಂದಿವೆ ಎಂಬುದು ಅರಿವಾಗುತ್ತದೆ. ಒಂದು ಸ್ಮಾರಕ ನಿರ್ಮಾಣ ಅಷ್ಟೇ ಅಲ್ಲ, ಅದನ್ನು ಸಮರ್ಥವಾಗಿ ನಿರ್ವಹಣೆ ಮಾಡಬೇಕು ಎಂಬ ಪ್ರಜ್ಞೆ ಕೂಡ ಇಲ್ಲದ ಕಾರಣ ಎಷ್ಟೋ ಸ್ಮಾರಕಗಳು ಎಷ್ಟೇ ವಿಜೃಂಭಣೆಯಿಂದ ಆರಂಭವಾದರೂ ಆನಂತರ ಸರಿಯಾದ ನಿರ್ವಹಣೆ ಇಲ್ಲದೇ ಅನಾಥವಾಗುತ್ತವೆ.

ಹೀಗಿದ್ದೂ ಸರ್ಕಾರಗಳಿಗೆ ಸ್ಮಾರಕಗಳಿಗಿಂತ ಹೆಚ್ಚು ಪರಿಣಾಮಕಾರಿ ಮತ್ತು ಪ್ರಭಾವಶಾಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸಾಧ್ಯವೇ ಇಲ್ಲ. ಏಕೆಂದರೆ, ಅಲ್ಲಿ ಕುಳಿತವರಿಗೆ ನಾನಾ ಚಿಂತೆಗಳು ಆದರೆÀ ಚಿಂತನೆಗಳು ಮಾತ್ರ ಶೂನ್ಯ. ಕೇವಲ ರಾಜಕೀಯ ಲಾಭದ ಲೆಕ್ಕಾಚಾರದ ಆಧಾರದ ಮೇಲೆಯೇ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲ ಈ ಜನರಿಂದ ಹೆಚ್ಚಿನದನ್ನು ಅಪೇಕ್ಷಿಸುವುದು ಕೂಡ ಸಲ್ಲದು ನಿಜ, ಆದರೆ ಇದೆಲ್ಲ ಹೀಗೇ ಮುಂದುವರಿದುಕೊಂಡು ಹೋದರೆ ವ್ಯರ್ಥ ಆಗುವುದು ಜನರ ದುಡ್ಡು.

ಬೆಳಗಾವಿಯಲ್ಲಿ ನಿರ್ಮಾಣ ಆಗಿರುವ ಸುವರ್ಣ ವಿಧಾನಸೌಧವನ್ನೇ ನೋಡಿ. ಕರ್ನಾಟಕ ಎಂದು ಹೆಸರಾಗಿ ಐವತ್ತು ವರ್ಷ ತುಂಬಿದ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ಇನ್ನೊಂದು ರಾಜಧಾನಿ ಮಾಡುವ ಕನಸೇನೋ ಇತ್ತು. ಇಂಥ ಎರಡನೇ ರಾಜಧಾನಿಗಳು ಮಹಾರಾಷ್ಟ್ರದಲ್ಲಿ ಮತ್ತು ಜಮ್ಮು ಕಾಶ್ಮೀರದಲ್ಲಿ ಇವೆ. ನಾಗಪುರ ಮತ್ತು ಜಮ್ಮು ಇಂಥ ಎರಡನೇ ರಾಜಧಾನಿಗಳು. ಅಂಥದ್ದೇ ಕರ್ನಾಟಕದಲ್ಲಿಯೇ ಆಗುತ್ತದೆ ಎನ್ನುವಾಗ ಸಹಜವಾಗಿ ಸಂತೋಷ, ನಿರೀಕ್ಷೆಗಳು ಇದ್ದವು. ಆದರೆ ವರ್ಷಕ್ಕೊಮ್ಮೆ ಕಾಟಾಚಾರದ ಒಂದು ಅಧಿವೇಶನ ನಡೆಸುವುದನ್ನು ಬಿಟ್ಟರೆ ಬೇರೇನೂ ಚಟುವಟಿಕೆ ಇಲ್ಲಿಲ್ಲ. ಇಲಾಖೆಗಳನ್ನು ಇಲ್ಲಿಗೆ ವರ್ಗಾಯಿಸಬಹುದಿತ್ತು. ಅದೂ ಆಗಲಿಲ್ಲ. ಹೀಗೆ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಕಟ್ಟಡ ಒಂದು ಕೇವಲ ಸುವರ್ಣ ಮಹೋತ್ಸವದ ನಿರುಪಯುಕ್ತ ಸ್ಮಾರಕ ಆಗಿ ನಿಂತಿದೆ. ಸ್ಮಾರಕ ಶಾಶ್ವತವಾಗಿ ನೆನಪು ಮತ್ತು ಪ್ರೇರಣೆ ಜೀವಂತಗೊಳಿಸುವಂತೆ ಇರಬೇಕು. ಇಲ್ಲವಾದಲ್ಲಿ ಎಲ್ಲ ಅರ್ಥಹೀನ.

LEAVE A REPLY

Please enter your comment!
Please enter your name here