ಶಾಂತ ಮನಸ್ಸು ಹೊಂದುವುದರಿಂದ ಸ್ವಸ್ಥ ಜೀವನ ನಡೆಸಲು ಸಾಧ್ಯ

0
141

ಬೆಳಗಾವಿ, 6- ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಶಾಂತವಾದ ಮನಸನ್ನು ಹೊಂದುವುದರಿಂದ ಸ್ವಸ್ಥ ಜೀವನ ನಡೆಸಲು ಸಾಧ್ಯ, ಜೀವನವೊಂದು ಯಾತ್ರೆ ಇದ್ದಂತೆ ಈ ಯಾತ್ರೆಯನ್ನು ಸುಖ ಮತ್ತು ಸಂತೋಷದಿಂದ ಕ್ರಮಿಸಬೇಕಾದರೆ ಮನಸ್ಸು ಮತ್ತು ಬುದ್ಧಿಯೊಂದಿಗೆ ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಳ್ಳುವುದೇ ಆಗಿದೆ ಎಂದು ನವದೆಹಲಿ ಅರವಿಂದ ಆಶ್ರಮದ ಶ್ರೀ ರಮೇಶ ಬಿಜಲಾನಿ ಹೇಳಿದರು.

ಅವರು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ದಿ:ಶಿವಬಸವ ಸ್ವಾಮೀಜಿಯವರ 129 ನೇ ಜಯಂತಿ ಮಹೋತ್ಸವ ಮತ್ತು ಡಾ:ತೋಂಟದ ಸಿದ್ಧರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ ಅವರ ಗುರುವಂದನ ಕಾರ್ಯಕ್ರಮದ ಅಂಗವಾಗಿ ಎರಡನೇ ದಿನವಾದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ – ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಆತ್ಮಸ್ವಾಸ್ಥ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.

ರೋಗಗಳು ಬಂದಾಗ ಎಲ್ಲದಕ್ಕೂ ಔಷಧ ತೆಗೆದುಕೊಳ್ಳುವ ಅಗತ್ಯವಿಲ್ಲ. ಅವನ್ನು ಉಪಚರಿಸುವ ಹಲವು ವಿಧಾನಗಳು ಮತ್ತು ಶಕ್ತಿ ನಮ್ಮ ದೇಹದಲ್ಲೇ ಇರುತ್ತದೆ. ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುವುದೇ ರೋಗಗಳಿಗೆ ಆಹ್ವಾನ. ಅಧ್ಯಾತ್ಮದಿಂದಲೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದ್ದು ಸರಿಯಾದ ಸಮಯಕ್ಕೆ ಮಲಗಿ ಅಗತ್ಯವಿರುವಷ್ಟು ನಿದ್ದೆ ಮಾಡುವದು ಬಹು ಮುಖ್ಯ ಎಂದರು.
ಆದರೆ ಇಂದಿನ ಯುವಜನತೆ ತಡವಾಗಿ ಮಲಗಿ ಬೇಗ ಏಳುವದು, ಅಗತ್ಯವಿರುವಷ್ಟು ನಿದ್ದೆ ಮಾಡದಿರುವದು ರೋಗಗಳಿಗೆ ಆಹ್ವಾನ ನೀಡಿದಂತೆ. ಅದರೊಂದಿಗೆ ದೇಹಕ್ಕೆ ಬೇಡವಾದದ್ದನ್ನು ನೀಡುವದು, ಸದಾಕಾಲ ಅತಿಯಾದ ಆಸೆಯೊಂದಿಗೆ ಮನಸನ್ನು ಅಶಾಂತಗೊಳಿಸುವದು ಇವೆಲ್ಲವನ್ನು ತೊರೆದಾಗ ಮಾತ್ರ ಜೀವನಯಾತ್ರೆ ಸುಗಮವಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದರು.

ಆತ್ಮದ ಧ್ವನಿಯನ್ನು ಹೆಚ್ಚೆಚ್ಚು ಕೇಳುವಂತಾದಾಗ ಮನಸ್ಸು ಮತ್ತು ಬುದ್ಧಿಗಳು ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯ. ಅದಕ್ಕೆ ಬೇಕು ಎನ್ನುವುದರೊಂದಿಗೆ ಇನ್ನೊಬ್ಬರಿಗೆ ಕೊಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಸಂತಸ ಹೆಚ್ಚುತ್ತದೆ. ಮಾನಸಿಕ ಧೈರ್ಯ ಮತ್ತು ವಿಶ್ವಾಸಗಳು ನಮ್ಮ ಜೀವನವನ್ನು ಸಂತಸಮಯಗೊಳಿಸುತ್ತವೆ. ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಇರುವ ಹೆಚ್ಚಿನ ಸಂತಸವನ್ನು ಮನಗೊಂಡಾಗ ಆಗುವ ಆನಂದದಿಂದ ಸಿಗುವ ಉತ್ಪನ್ನವೇ ಸ್ವಸ್ಥ ಆನಂದಮಯ ಜೀವನವಾಗಿದೆ. ಋಷಿ ಮುನಿಗಳು ಎಲ್ಲವನ್ನೂ ಸಾಧಿಸಿದವರೂ ಹಾಗು ಸ್ವಸ್ಥ ಆನಂದಮಯ ಜೀವನವನ್ನು ಹೊಂದಿದ್ದರೆಂಬುದನ್ನು ನೆನೆಪಿಸಿಕೊಳ್ಳಬೇಕು. ನಮ್ಮ ದಿನನಿತ್ಯದ ಜೀವನದಲ್ಲಿ ಅಧ್ಯಾತ್ಮ ಉನ್ನತಿಯನ್ನು ಕಾಣುವಂತಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಅವರು, ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಸದಾಶಯದಂತೆ ಅವರ ಸಮಕಾಲೀನರಾದ ಲಿಂಗೈಕ್ಯ ಡಾ. ಶಿವಬಸವ ಶ್ರೀಗಳು ತಮ್ಮ ಪ್ರಸಾದ ನಿಲಯದಲ್ಲಿ ಎಲ್ಲ ಜಾತಿ, ಮತಗಳ ಬಡ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ, ವಿದ್ಯಾದಾನ ಮಾಡಿದ್ದಾರೆ. ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ತುಳಿತಕ್ಕೊಳಗಾದವರಿಗೆ ಶಿಕ್ಷಣ ನೀಡಲು ಶ್ರಮಿಸಿದ ಸಾವಿತ್ರಿಬಾಯಿ ಫುಲೆ ದಂಪತಿಗಳು ಮತ್ತು ಶಾಹು ಮಹಾರಾಜರನ್ನು ನೆನಪಿಸಿಕೊಂಡ ಅವರು, ಇಂಗ್ಲೆಂಡ್ ರಾಣಿಯಿಂದ ಸತ್ಕರಿಸಲ್ಪಟ್ಟ ಫುಲೆ ದಂಪತಿಗಳು ಕೇಳಿದ್ದು ತಮ್ಮ ಜನತೆಗೆ ಶಿಕ್ಷಣ ಎಂಬುದನ್ನು ಅವರು ನೆನಪಿಸಿಕೊಂಡರು.

ಚಿನ್ನದ ಪದಕ ವಿಜೇತರಾದ ಬೆಳಗಾವಿಯ ಎಸ್.ಜಿ.ಬಾಳೆಕುಂದ್ರಿ ನಿಂಜಿನಿಯರಿಂಗ್ ಕಾಲೇಜಿನ ಸ್ನೇಹಾ ಖೋತ, ಮಿಶಾನಾ ಡಿಸೋಜಾ, ಕೌಸ್ತುಭ ಶಿಂಧೆ, ಪೂಜಾ ಹಿರೇಕೋಡಿ, ಅನುಶ್ರೀ ಜವಳಿ ಅವರುಗಳನ್ನು ಪ್ರಾದೇಶಿಕ ಆಯುಕ್ತರು ಚಿನ್ನದ ಪದಕ ತೊಡಿಸಿ ಗೌರವಿಸಿದರು. ಸನ್ಮಾನಿತರ ಪರವಾಗಿ ಬೆಂಗಳೂರಿನ ಕೆ.ವಿ.ನಾಗರಾಜಮೂರ್ತಿ ಅವರು ಮಾತನಾಡಿ, ಇಂದು ನಾಡಿನಲ್ಲಿ ಕನ್ನಡ ಉಳಿದಿದ್ದರೆ ಅದಕ್ಕೆ ಮಠಮಾನ್ಯಗಳು ಕಾರಣ. ಕನ್ನಡದ ಧರ್ಮ ಎಂದರೇ ಲಿಂಗಾಯತ ಧರ್ಮ ಎಂದು ಬಣ್ಣಿಸಿದರು.

ಪೂಜ್ಯಶ್ರೀ ದೇವಪ್ಪಜ್ಜನವರು, ಹುಬ್ಬಳ್ಳಿ ಅವರು ಮಾತನಾಡಿ ಕಳೆದ ಹಲವು ದಶಕಗಳಿಂದ ತಾವು ಕನ್ನಡವನ್ನಲ್ಲದೇ ಒಂದೇ ಒಂದು ಬೇರೆ ಪದವನ್ನು ಬಳಸಿಲ್ಲವೆಂದು ನುಡಿದು ಹಲವು ಸ್ವಾರಸ್ಯಕರ ಪ್ರಸಂಗಗಳನ್ನು ವಿವರಿಸಿದರು.

ಆರ್.ಪಿ.ಅಪರಾಜ ಅವರ “ಲಿಂಗಾಯತ ಧರ್ಮ”ಗ್ರಂಥ ಚಿಂಚಣಿಯ ಅಲ್ಲಮಪ್ರಭು ಶ್ರೀಗಳು ಲೋಕಾರ್ಪಣೆಗೊಳಿಸಿದರು. ವಿ.ಕೃ ಗೋಕಾಕರ “ಕೊನೆಯ ದಿನ”ಗ್ರಂಥವನ್ನು ಚಿಕ್ಕೋಡಿಯ ಸಂಪಾದನಾ ಶ್ರೀಗಳು ಲೋಕಾರ್ಪಣೆಗೊಳಿಸಿದರು. ಬಸವಣ್ಣನವರ ”ಷಟಸ್ಥಲ ವಚನಗಳು” ಗ್ರಂಥವನ್ನು ರಮೇಶ ಬಿಜಲಾನಿ ಲೋಕಾರ್ಪಣೆಗೊಳಿಸಿದರು. ಸಮಾರಂಭದ ಸಾನಿಧ್ಯವನ್ನು ಬೆಳಗಾವಿ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ವಹಿಸಿದ್ದರು.

ಪೂಜ್ಯ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು, ಶ್ರೀ ದೊರೆಸ್ವಾಮಿಮಠ, ಭೈರನಹಟ್ಟಿ ಇವರ ಸಮ್ಮುಖದಲ್ಲಿ ಮಂಟೂರು ಸಿದ್ಧಾರೂಢ ಆಶ್ರಮದ ಶ್ರೀ ಸದಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಿದ್ಧಸಂಸ್ಥಾನಮಠ, ಚಿಂಚಣಿಯ ಪೂಜ್ಯಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಮತ್ತು ಚರಮೂರ್ತಿ ಸಂಪಾದನಾ ಮಠ, ಚಿಕ್ಕೋಡಿಯ ಪೂಜ್ಯಶ್ರೀ ಸಂಪಾದನಾ ಮಹಾಸ್ವಾಮಿಗಳಿಗೆ ಗೌರವ ಸನ್ಮಾನ ನಡೆಯಿತು. ಡಾ:ತೋಂಟದ ಸಿದ್ಧರಾಮ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಸನ್ಮಾನ ನಡೆಯಿತು.

ಬಿ. ಆಯ್. ಕೋಣೆ, ಈರನಟ್ಟಿ, ಬಿ. ಎಸ್. ಪೂಜಾರ, ಬೆಳಗಾವಿ, ಆರ್. ಬಿ. ಪಾಟೀಲ, ಬೆಳಗಾವಿ, ಎಸ್. ಎಸ್. ಅನಿಗೋಳ, ಇಚಲಕರಂಜಿ, ಇವರುಗಳನ್ನು ‘ಪ್ರಸಾದಶ್ರೀ ‘ ಗೌರವ ನೀಡಿ ಸಮ್ಮಾನಿಸಲಾಯಿತು.
ಪೂಜ್ಯಶ್ರೀ ದೇವಪ್ಪಜ್ಜನವರು, ಹುಬ್ಬಳ್ಳಿ, ಕೆ.ವ್ಹಿ. ನಾಗರಾಜಮೂರ್ತಿ, ಬೆಂಗಳೂರು, ಪ್ರಕಾಶ ದೇಶಪಾಂಡೆ, ಹುಕ್ಕೇರಿ, ಶ್ರೀಮತಿ ಮಂಜುಳಾ ಹುಲ್ಲ, ಬೆಳಗಾವಿ ಇವರುಗಳನ್ನು ‘ಕನ್ನಡ ನುಡಿಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಏಷ್ಯನ್ ಕ್ರೀಡಾ ಕೂಟದ ಪ್ರಶಸ್ತಿ ವಿಜೇತೆ(ಕುರಾಷ) ಕು.ಮಲಪ್ರಭಾ ಜಾಧವ ಅವರನ್ನು ಮತ್ತು ಘೋಡಗೇರಿಯ ಸರಿಗಮಪ ಸ್ಪರ್ಧಿ ಕು.ಲಕ್ಷ್ಮೀ ತಳವಾರ ಅವರನ್ನು ಸಮ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಹಸನ್ ನಯೀಮ ಸುರಕೋಡ, ಶಿವಾನಂದ ಕೌಜಲಗಿ, ಸಿ.ಕೆ.ಜೋರಾಪೂರ ಅವರನ್ನು ಸತ್ಕರಿಸಲಾಯಿತು. ತೋಂಟದ ಸಿದ್ಧರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ, ಇವರು ಆಶೀರ್ವಚನ ನೀಡಿದರು.

ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘ, ಬೆಳಗಾವಿಯ ಅಧ್ಯಕ್ಷ ಪ್ರೊ. ಎಂ. ಆರ್. ಉಳ್ಳೇಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಆತ್ಮಸ್ವಾಸ್ಥ್ಯಶ್ರೀ ಪ್ರಶಸ್ತಿ ಸ್ಥಾಪಿಸಿರುವ ಡಾ. ಎಚ್.ಬಿ.ರಾಜಶೇಖರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪೂಜ್ಯ ಮಹಾಂತದೇವರು ಮತ್ತು ಸಿ.ಜೆ. ಹಿರೇಮಠ ಅವರು ನಿರ್ವಹಿಸಿದರು.

ಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಗರಸೇವಕಿ ಸರಳಾ ಹೇರೇಕರ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡಾ.ಎಚ್.ಬಿ.ರಾಜಶೇಖರ ಅವರು ಸ್ವಾಗತಿಸಿದರು. ಬಸವ ಬಡಾವಣೆಯ ಅಕ್ಕನ ಬಳಗದ ಸದಸ್ಯರಿಂದ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಭುದೇವ ಪ್ರತಿಷ್ಠಾನದ ಮಾತೃಮಂಡಳಿ ಸದಸ್ಯರು ”ಹಚ್ಚೇವು ಕನ್ನಡದ ದೀಪ” ಹಾಡಿದರು.

LEAVE A REPLY

Please enter your comment!
Please enter your name here