ಸಂಪಾದಕೀಯ

ಸಂಶೋಧನಾ ಸಂಸ್ಥೆಯಲ್ಲಿ ಲೋಪ

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ವಿಜ್ಞಾನಿಯೊಬ್ಬರು ಸಾವಿಗೀಡಾಗಿದ್ದಾರೆ. ಈ ರೀತಿ ಘಟನೆ ಇಲ್ಲಿ ನಡೆದದ್ದು ಇದೇ ಮೊದಲೇನೂ ಅಲ್ಲ. ಕೆಲವು ವರ್ಷಗಳ ಹಿಂದೆ ನಡೆದ ಆಕಸ್ಮಿಕದಲ್ಲಿ ಸಹ ಸಾವು ಸಂಭವಿಸಿತ್ತು. ಅದಕ್ಕೂ ಮುನ್ನ ಭಯೋತ್ಪಾದಕರ ದಾಳಿ ನಡೆದು ಖ್ಯಾತ ಗಣಿತಜ್ಞ ಒಬ್ಬರು ಗುಂಡಿಗೆ ಬಲಿ ಆಗಿದ್ದರು. ಇದಕ್ಕಿಂತ ಹೆಚ್ಚಾಗಿ ಈ ಸಂಸ್ಥೆಯಲ್ಲಿ ಕೆಲವು ಕಾಲ ಆತ್ಮಹತ್ಯಾ ಸರಣಿ ಕೂಡ ಸಂಭವಿಸಿತ್ತು. ಅಲ್ಲಿನ ವಾತಾವರಣದಲ್ಲಿಯೇ ಇದ್ದ ಲೋಪ ಇದಕ್ಕೆ ಕಾರಣ ಎಂದು ಹೇಳಲಾಗಿತ್ತು. ಕೇವಲ ಇಲ್ಲಿ ಮಾತ್ರ ಅಲ್ಲ, ಉಳಿದ ಖ್ಯಾತ ಐಐಟಿಗಳಲ್ಲಿಯೂ ಇಂಥ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದವು.

ಕೆಲಸದ ಒತ್ತಡ, ಮೇಲಿನವರ ಕುತಂತ್ರ ಮತ್ತು ಸ್ವಾರ್ಥಗಳಿಂದಲೂ ಇಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉಸಿರು ಕಟ್ಟುವ ವಾತಾವರಣ ನಿರ್ಮಾಣ ಆಗುತ್ತದೆ. ಅದರಿಂದ ಬೇಸತ್ತ ಮಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ ಎಂಬ ವಾದ ಕೇಳಿ ಬಂದಿತ್ತು. ತೀವ್ರವಾದ ನಿರೀಕ್ಷೆ, ನಿಗದಿತ ಕಾಲಮಿತಿಯೊಳಗೆ ಫಲಿತಾಂಶ ಪಡೆಯಬೇಕೆಂಬ ಒತ್ತಡಕ್ಕೆ ತರುಣ ವಿಜ್ಞಾನಿಗಳು ಬಲಿ ಆಗುತ್ತಾರೆ ಎಂದೂ ಹೇಳಲಾಗುತ್ತಾ ಇತ್ತು.

ನಮ್ಮಲ್ಲಿ ಸಂಶೋಧನೆ ಮತ್ತು ಅತ್ಯುನ್ನತ ಅಧ್ಯಯನಕ್ಕೆ ಮೀಸಲಾದ ಸಂಸ್ಥೆಗಳಲ್ಲಿ ಎಲ್ಲವೂ ಸರಿ ಇಲ್ಲ ಎಂದು ಐಐಟಿ, ಜೆಎನ್‍ಯುನಂಥ ಸಂಸ್ಥೆಗಳ ಕೆಲವು ಹಗರಣಗಳು ಬಯಲು ಮಾಡಿವೆ. ಹೈದರಾಬಾದ್‍ನ ಕೇಂದ್ರೀಯ ವಿಶ್ವವಿದ್ಯಾಲಯದ ರೋಹಿತ ವೇಮುಲಾ ಆತ್ಮಹತ್ಯೆ ಪ್ರಕರಣ, ಜೆಎನ್‍ಯು ಅವರಣದಲ್ಲಿ ದೇಶದ್ರೋಹ ಬಿತ್ತುತ್ತಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಿ ಬಿಡುಗಡೆ ಮಾಡಲಾದ ಕನ್ಹಯ್ಯಾ ಕುಮಾರ ಪ್ರಸಂಗಗಳು ಒಂದೆಡೆ. ಇಂಥ ಸಂಸ್ಥೆಗಳಿಗೆ ನೇಮಕ ಮಾಡುವಲ್ಲಿ ಕೇಂದ್ರ ಸರ್ಕಾರಗಳು ತಳೆಯುವ ನಿಲುವು ಕೂಡ ಸಾಕಷ್ಟು ಚರ್ಚೆಗೆ ಗ್ರಾಸ ಆಗಿದೆ.

ಮೈಸೂರಿನ ಸಂಗೀತ ಮತ್ತು ದೃಶ್ಯ ಕಲೆಗಳ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯಕ್ಕೆ ಅನ್ಯ ವಿಷಯದ ಪರಿಣಿತರೊಬ್ಬರನ್ನು ಕುಲಪತಿ ಆಗಿ ನೇಮಕ ಮಾಡುವ ಯತ್ನ ನಡೆದಿದೆ ಎಂದು ಇತ್ತೀಚೆಗೆ ಭಾರೀ ಪ್ರತಿರೋಧ ಕೇಳಿ ಬಂದಿತ್ತು. ಕೇಂದ್ರದ ಆಧೀನದಲ್ಲಿ ಬರುವ ಸಾಕಷ್ಟು ಉನ್ನತ ಸಂಶೋಧನಾ ಸಂಸ್ಥೆಗಳು ಮತ್ತು ವಿದ್ಯಾ ಸಂಸ್ಥೆಗಳಲ್ಲಿನ ಅತ್ಯುಚ್ಛ ಸ್ಥಾನಕ್ಕೆ ನೇಮಕ ಮಾಡುವಾಗ ಸ್ಥಳೀಯ ಸಂಸದರ ಶಿಫಾರಸು ಮುಖ್ಯ. ಎಷ್ಟೋ ಸಂದರ್ಭಗಳಲ್ಲಿ ಅನರ್ಹರು ಸ್ಥಳೀಯ ಸಂಸದರು ಅಥವಾ ಮಂತ್ರಿಗಳ ಜೊತೆ ಅಪವಿತ್ರ ಮೈತ್ರಿ ಗಳಿಸಿ, ಮುಖ್ಯ ಸ್ಥಾನಕ್ಕೆ ಏರುತ್ತಾರೆ. ಈ ವಿಷಯ ಇಲ್ಲಿ ಪ್ರಸ್ತಾಪ ಆಗಲು ಬಹುಮುಖ್ಯ ಕಾರಣ; ಇಂಥ ನೇಮಕಾತಿಗಳಿಂದಲೇ ಪವಿತ್ರ ಸಂಸ್ಥೆಗಳು ಕಳಪೆ ಆಗುತ್ತಾ ಹೋಗುತ್ತವೆ.

ನಮ್ಮ ರಾಜ್ಯದ ಬಹುಪಾಲು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು ನೇಮಕಗೊಂಡ ತಕ್ಷಣ ಕೈ ಹಾಕುವುದು ಕಾಮಗಾರಿಗಳಿಗೆ. ಅದರಲ್ಲಿ ಅಪಾರ ಹಣ ಇರುವುದರಿಂದ ತಾವು ನಿಜವಾಗಿ ನಿರ್ವಹಿಸಬೇಕಾದ ಶಿಕ್ಷಣ ಕುರಿತಾದ ಆಲೋಚನೆಗಳಿಗೆ ಪುರುಸೊತ್ತು ಇಲ್ಲದಂತೆ ಅವರು ಕಾಮಗಾರಿಗಳಲ್ಲಿ ಮಗ್ನರಾಗಿರುತ್ತಾರೆ. ಇದರಿಂದಾಗಿಯೇ ವಿಶ್ವವಿದ್ಯಾನಿಲಯಗಳ ಶಿಕ್ಷಣ ಗುಣಮಟ್ಟ ಕುಸಿಯುತ್ತಿದೆ ಎಂದು ಆರೋಪ ಇದೆ. ಹೀಗಿರುವಾಗ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದಿರುವ ಸ್ಫೋಟದ ಘಟನೆಯನ್ನು ಬಿಡಿಯಾಗಿ ನೋಡುವುದು ಆಥವಾ ಆಕಸ್ಮಿಕ ಎಂದು ಪರಿಗಣಿಸುವುದು ತಪ್ಪಾಗುತ್ತದೆ. ಇಂಥ ಸಂಸ್ಥೆಗಳು ಮೇಲು ನೋಟಕ್ಕೆ ಸ್ವಾಯತ್ತ, ಆದರೆ ನೇಮಕಾತಿಗಳಲ್ಲಿ ಸರ್ಕಾರಗಳ ಹಸ್ತಕ್ಷೇಪ ಇರುವವರೆಗೂ ಇವು ನಿಜವಾದ ಅರ್ಥದಲ್ಲಿ ಸ್ವಾಯತ್ತತೆ ಸಾಧಿಸುವುದು ಸಾಧ್ಯವೇ ಇಲ್ಲ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಮುಂಚೆ ಇದು ಟಾಟಾ ವಿಜ್ಞಾನ ಸಂಸ್ಥೆ ಎಂದು ಹೆಸರು ಪಡೆದಿತ್ತು) ಬಹಳ ಕಾಲ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿರುವುದು ನಿಜ. ಇಲ್ಲಿನ ವಿಜ್ಞಾನಿಗಳು ನಮ್ಮ ಬಾಹ್ಯಾಕಾಶ ಕ್ಷೇತ್ರ, ಅರಣ್ಯ ಸಂರಕ್ಷಣೆ, ಹೆದ್ದಾರಿಗಳ ನಿರ್ಮಾಣ ಮುಂತಾದ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಸಂಸ್ಥೆಯ ಮುಖ್ಯಸ್ಥರಾಗಿ ಕೆಲಸ ಮಾಡಿದ ಸಿ.ಎನ್.ಆರ್.ರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ಸಂದಿದೆ. ಇಲ್ಲಿ ಮುಖ್ಯಸ್ಥರಾಗಿದ್ದ ಡಾ. ಯು.ಆರ್.ರಾವ್ ಅವರು ರಾಕೆಟ್ ಉಡಾವಣೆಗೆ ಅಗತ್ಯವಾಗಿದ್ದ ಕ್ರಯೋಜಿನಿಕ್ ತಂತ್ರಜ್ಞಾನ ಅಭಿವೃದ್ಧಿ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಸಿದ್ದರು. ಬೆಂಗಳೂರಿನದ್ದೇ ಆದ ಡಿಆರ್‍ಡಿಓ ಮತ್ತು ಎನ್‍ಎಎಲ್‍ನಂಥ ಸಂಸ್ಥೆಗಳ ಕೊಡುಗೆ ನಿಜಕ್ಕೂ ಗಮನಾರ್ಹ. ಆದರೆ ಉಳಿದ ಸಂಸ್ಥೆಗಳಂತಲ್ಲದೇ ಫೆಲೋಶಿಪ್ ನೀಡಿ ವಿದ್ಯಾರ್ಥಿ ಮತ್ತು ವಿಜ್ಞಾನಿಗಳ ಸಂಶೋಧನಾ ಕೆಲಸಗಳಿಗೆ ಅವಕಾಶ ಕಲ್ಪಿಸುವ ಭಾರತೀಯ ವಿಜ್ಞಾನ ಸಂಸ್ಥೆ ಬಹುದೊಡ್ಡ ಶಿಕ್ಷಣ ಕ್ಷೇತ್ರದ ಜವಾಬ್ದಾರಿ ನಿರ್ವಹಿಸುತ್ತಾ ಇದೆ. ಮೇಲು ನೋಟಕ್ಕೆ ಇಲ್ಲಿನ ಪ್ರಶಾಂತ ವಾತಾವರಣ, ವಿವಿಧ ಉದ್ದೇಶಗಳಿಗೆ ಕಟ್ಟಲಾಗಿರುವ ನಾನಾ ಶೈಲಿಯ ಕಟ್ಟಡಗಳು ಎಲ್ಲ ಹಿಡಿಸುತ್ತವೆ ಎಂಬುದೇನೋ ನಿಜ. ಆದರೆ ಇತ್ತೀಚಿನ ದಿನಗಳಲ್ಲಿ ಸಂಸ್ಥೆಯು ಒಳಗೇ ಟೊಳ್ಳಾಗುತ್ತಾ ಇದೆಯೇನೋ ಎಂಬ ಅನುಮಾನ ಕಾಡಲು ಶುರುವಾಗಿದೆ. ಇಲ್ಲಿ ಬಹಳ ಕಾಲ ದುಡಿದೂ ಏನನ್ನೂ ಸಾಧಿಸಲಾಗದ ಕೆಲವರು ವಿದೇಶಗಳಿಗೆ ಹೋಗಿ ಕೆಲವೇ ಸಮಯದಲ್ಲಿ ದೊಡ್ಡ ಸಾಧನೆಗಳನ್ನು ಮಾಡುತ್ತಾ ಇರುವುದನ್ನು ಗಮನಿಸಿದರೆ ಮೇಲಿನ ಮಾತನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನಿಸುತ್ತದೆ.

ಸಂಶೋಧಕರಿಗೆ ಸರಿಯಾದ ಮಾರ್ಗದರ್ಶನ ನೀಡುವುದಕ್ಕಿಂತ ಅವರಿಗೆ ಕಿರುಕುಳ ಕೊಡುವುದು ಮತ್ತು ಅವರ ಪ್ರತಿಭೆ ಮಾಸುವಂತೆ ಮಾಡುವುದೇ ಇಲ್ಲಿನ ಜವಾಬ್ದಾರಿ ಸ್ಥಾನದಲ್ಲಿ ಇರುವವರ ಕೆಲಸ ಎಂಬಂತಾಗಿ ಹೋಗಿದೆ. ಹಲವಾರು ವರ್ಷ ಶ್ರಮದ ದುಡಿಮೆಯ ನಂತರವೂ ಸಂಶೋಧನೆಯಲ್ಲಿ ಏನೊಂದೂ ಸಾಧನೆ ಮಾಡಲು ಸಾಧ್ಯ ಆಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡವರ ದೊಡ್ಡ ಪಟ್ಟಿಯೇ ಇಲ್ಲಿ ದೊರೆಯುತ್ತದೆ. ಹಾಗೇ ಇಲ್ಲಿಂದ ಹೊರಬಿದ್ದು ವಿದೇಶಗಳಲ್ಲಿ ಅತಿ ಶೀಘ್ರದಲ್ಲಿಯೇ ಬಹುದೊಡ್ಡ ಸಾಧನೆ ಮಾಡಿದವರೂ ಸಿಗುತ್ತಾರೆ. ಈ ಹಿನ್ನೆಲೆಯಲ್ಲಿ ಈಚೆಗೆ ಸಂಭವಿಸಿದ ಸ್ಫೋಟ ಕೇವಲ ಆಕಸ್ಮಿಕ ಎನ್ನುವಂತಿಲ್ಲ. ಅಲ್ಲಿನ ಜಡತೆ ಮತ್ತು ನಿಷ್ಕ್ರೀಯತೆಗೆ ಇದೊಂದು ಉದಾಹರಣೆ ಅಷ್ಟೇ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: