ಬೆಳಗಾವಿ

ಮಠದಲ್ಲಿ ರಮಜಾನ ಪ್ರಸಾದ ಮತ್ತು ನಮಾಜ ಮಾಡಲು ವ್ಯವಸ್ಥೆ ಮಾಡಿಸಿದ ಸಿದ್ಧಲಿಂಗ ಶ್ರೀಗಳು

ಬೆಳಗಾವಿ, 7- ಲಿಂಗಾಯತ ಮಠದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ರಮಜಾನ ತಿಂಗಳಲ್ಲಿ ಬೆಳಗಿನ ಅಡುಗೆ ಮಾಡಿಸಿ ಅವರಿಗೆ ನಮಾಜ ಮಾಡಲು ವ್ಯವಸ್ಥೆ ಮಾಡಿದ ಗದುಗಿನ ತೋಂಟದ ಸಿದ್ಧಲಿಂಗ ಶ್ರೀಗಳು ಬಸವಣ್ಣವರ ತತ್ವಗಳ ಕಟ್ಟಾ ಪ್ರತಿಪಾದಕರಾಗಿದ್ದರೆಂದು ಪ್ರೊ. ಎಸ್.ಎಸ್.ಹರ್ಲಾಪೂರ ನುಡಿದರು.

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ದಿ: ಶಿವಬಸವ ಸ್ವಾಮೀಜಿಯವರ 129 ನೇ ಜಯಂತಿ ಮಹೋತ್ಸವ ಮತ್ತು ಡಾ:ತೋಂಟದ ಸಿದ್ಧರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ ಅವರ ಗುರುವಂದನ ಕಾರ್ಯಕ್ರಮದ ಅಂಗವಾಗಿ ಮೂರನೇ ದಿನವಾದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ “ಸೇವಾರತ್ನ” ಮತ್ತು “ಮಕ್ಕಳ ಸಾಹಿತ್ಯ ಪ್ರಶಸ್ತಿ” ಪ್ರದಾನ ಕಾರ್ಯಕ್ರಮದಲ್ಲಿ “ಸೇವಾರತ್ನ” ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಲಿಂಗಾಯತ ಪ್ರಸಾದ ನಿಲಯಗಳು ಕೇವಲ ಲಿಂಗಾಯತರಿಗಾಗಿ ಇರಲಿಲ್ಲ, ಎಲ್ಲ ಜಾತಿ, ಮತಗಳ ಬಡ ವಿದ್ಯಾರ್ಥಿಗಳಿಗಾಗಿ ಇದ್ದವು. ಡಾ: ಶಿವಬಸವ ಶ್ರೀಗಳು ಆರಂಭಿಸಿದ್ದ ಪ್ರಸಾದ ನಿಲಯವು ಎಲ್ಲರಿಗಾಗಿ ಇತ್ತು. ಇದೇ ಬಸವತತ್ವ ಎಂದ ಅವರು, ಶತಮಾನಗಳ ಕಾಲ ಯಾವ ಸ್ಥಾನದಲ್ಲಿ ರಾಮ ಮತ್ತು ಕೃಷ್ಣರು ಇದ್ದರೋ ಆ ಸ್ಥಾನಕ್ಕೆ ಮಾದಾರ ಚನ್ನಯ್ಯರನ್ನು ತಂದು ಕೂಡ್ರಿಸಿದ ಹಿರಿಮೆ ಜಗದಲ್ಲಿ ಯಾರಿಗಾದರೂ ಸಲ್ಲುವಂತಿದ್ದರೇ ಅದು ಬಸವಣ್ಣನವರಿಗೆ ಮಾತ್ರ. ದುಡ್ಡನ್ನು ಕೂಡಿಸಿಟ್ಟರೆ ಅದೇ ಸ್ಥಾವರ, ದುಡ್ಡನ್ನು ಸಮಾಜಕ್ಕೆ ಖರ್ಚು ಮಾಡಿದರೆ ಅದೇ ಜಂಗಮ ಎಂದು ದುಡ್ಡಿಗೂ ಜಂಗಮತ್ವವಿದೆ ಎಂದು ಸಾರಿದ ಬಸವಣ್ಣನವರ ಬದುಕೇ ಜಗತ್ತಿಗೆ ಮಾದರಿ ಎಂದವರು ಬಣ್ಣಿಸಿದರು.

ಇಂದಿಗೂ ಬಡತನ, ನಿರುದ್ಯೋಗ ಹೋಗಿಲ್ಲ. ಇದಕ್ಕೆಲ್ಲ ಡೊನೇಶನ್, ಕಮೀಷನ್ ಮತ್ತು ಕರಪ್ಶನ್‍ಗಳು ಕಾರಣ. ಇದಕ್ಕೆ ಪರಿಹಾರವನ್ನು ಇಲ್ಲೇ ಕಾಣಬೇಕು. ಎಲ್ಲರನ್ನೂ ಮನುಷ್ಯರನ್ನಾಗಿ ಕಾಣುವ ತತ್ವಗಳನ್ನು ನೀಡಿದ ಶರಣರಿಂದ ಮಾತ್ರ ಇದು ಸಾಧ್ಯ. ಉತ್ತಮ ಸಮಾಜವನ್ನು ಹೇಗೆ ಕಟ್ಟಬೇಕು ಎಂಬುದನ್ನು ಶರಣರ ವಚನಗಳಿಂದ ಕಾಣಬೇಕು, ಅದರಂತೆ ಬಾಳಿ ಬದುಕಿದ ಲಿಂಗೈಕ್ಯ ಶಿವಬಸವ ಶ್ರೀಗಳು ಮಾದರಿ ಸ್ವಾಮಿಗಳು ಎಂದರು.

“ಸೇವಾರತ್ನ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಂಕರ ದೇವನೂರ ಅವರು, ಮಾತಿಲ್ಲದೇ ಮೌನದಲ್ಲಿಯೇ ಎಲ್ಲವನ್ನೂ ಮಾಡಿ ತೋರಿಸಿದ ಡಾ:ಶಿವಬಸವ ಶ್ರೀಗಳ ಸಾಧನೆ ಬಹು ದೊಡ್ಡದು. ಸಾವನ್ನು ಸಹ ರಾಜಕೀಯಕ್ಕೆ ಬಳಸಿಕೊಳ್ಳುವ ಇಂದಿನ ಸಮಾಜದಲ್ಲಿ ಶರಣರ ವಚನಗಳು ಹಿಂದೆಂದಿಗಿಂತಲೂ ಇಂದು ಪ್ರಸ್ತುತವಾಗಿವೆ ಎಂದರು.

ಮಕ್ಕಳ ಸಾಹಿತ್ಯಕ್ಕಾಗಿ ಸ್ಥಾಪಿತವಾಗಿರುವ ಡೆಪ್ಯುಟಿ ಚನ್ನಬಸಪ್ಪ ಪ್ರಶಸ್ತಿಯನ್ನು ಸ್ವೀಕರಿಸಿ ಡಾ. ಜಯಶ್ರೀ ಎಸ್. ಮುದಿಗೌಡರ ಅವರು ಮಾತನಾಡಿ, ಮಕ್ಕಳನ್ನು ಸ್ವಚ್ಛಂದವಾಗಿ ಬೆಳೆಯಲು ಬಿಡದೇ ಅವರಲ್ಲಿ ನೈತಿಕ ಮೌಲ್ಯಗಳನ್ನು ತುಂಬಬೇಕು. ಪಾಶ್ಚಿಮಾತ್ಯ ಕರಿ ನೆರಳಿನಿಂದ ದೂರವಿಟ್ಟು ತಾಯಿ ನುಡಿಯನ್ನು ಕಲಿಸಬೇಕು. ನೆಲ, ಜಲ, ಸಂಸ್ಕøತಿ, ಸ್ವಾಭಿಮಾನದ ಬದುಕನ್ನು ಕಲಿಸಿ ಉತ್ತಮ ಸಂಸ್ಕಾರವನ್ನು ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಕರೆ ನೀಡಿದರು.

ಮಕ್ಕಳ ಸಾಹಿತ್ಯಕ್ಕಾಗಿ ಸ್ಥಾಪಿತವಾಗಿರುವ ಹರ್ಡೇಕರ ಮಂಜಪ್ಪ ಪ್ರಶಸ್ತಿಯನ್ನು ಸ್ವೀಕರಿಸಿ ತಯಬ್‍ಅಲಿ ಅ. ಹೊಂಬಳ ಅವರು ಮಾತನಾಡಿ, ಡಾ:ತೋಂಟದ ಸಿದ್ದಲಿಂಗ ಶ್ರೀಗಳ ಆಶೀರ್ವಾದದಿಂದ ತಾವು ಬೆಳೆದ ಸಂದರ್ಭವನ್ನು ಮತ್ತು ಶ್ರೀಗಳೊಂದಿಗಿನ ತಮ್ಮ ಅನುಭವವನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ “ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ”ದ ವೆಬ್‍ಸೈಟ್‍ನ್ನು ಡಾ:ತೋಂಟದ ಸಿದ್ಧರಾಮ ಸ್ವಾಮೀಜಿ ಅವರು ಉದ್ಘಾಟಿಸಿದರು.

ಪ್ರತಿ ವರ್ಷ ಶ್ರೀಮಠದಿಂದ ನೀಡಲಾಗುವ ಸೇವಾರತ್ನ ಪ್ರಶಸ್ತಿಯನ್ನು ಶ್ರೀ ಶಂಕರ ದೇವನೂರು, ಮೈಸೂರು, ಡಾ. ಎಚ್. ಬಿ. ರಾಜಶೇಖರ, ಬೆಳಗಾವಿ, ಡಾ. ವ್ಹಿ. ಡಿ. ಪಾಟೀಲ, ಬೆಳಗಾವಿ, ಡಾ. ಬಿ. ಎಫ್. ದಂಡಿನ, ಗದಗ, ಡಾ. ಬಿ. ವ್ಹಿ. ಗುಂಜೆಟ್ಟಿ, ಧಾರವಾಡ, ವ್ಹಿ. ಸಿ. ಐರಸಂಗ, ಧಾರವಾಡ, ಜಯದೇವಪ್ಪ ಜೈನಕೇರಿ, ಶಿವಮೊಗ್ಗ, ಡಾ. ಉಜ್ವಲಾ ಹಿರೇಮಠ, ಧಾರವಾಡ, ಪ್ರೊ. ಎಸ್. ಎಸ್. ಹರ್ಲಾಪುರ, ಧಾರವಾಡ, ಎಂ.ಎಂ. ಸಂಗಣ್ಣವರ, ಹುಣಸೀಕಟ್ಟಿ ಅವರುಗಳಿಗೆ ನೀಡಿ ಗೌರವಿಸಲಾಯಿತು.

ಮಕ್ಕಳ ಸಾಹಿತ್ಯಕ್ಕಾಗಿ ಸ್ಥಾಪಿತವಾಗಿರುವ ಪ್ರಶಸ್ತಿಗಳಾದ ಹರ್ಡೇಕರ ಮಂಜಪ್ಪ ಪ್ರಶಸ್ತಿಯನ್ನು ಶ್ರೀ ತಯಬ್‍ಅಲಿ ಅ. ಹೊಂಬಳ, ಗದಗ ಅವರಿಗೆ ಮತ್ತು ಡೆಪ್ಯೂಟಿ ಚನ್ನಬಸಪ್ಪ ಪ್ರಶಸ್ತಿಯನ್ನು ಡಾ. ಜಯಶ್ರೀ ಎಸ್. ಮುದಿಗೌಡರ, ಧಾರವಾಡ ಅವರಿಗೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಉಪನಿರ್ದೇಶಕರು, ತರಬೇತಿ ಮತ್ತು ಉದ್ಯೋಗ ಇಲಾಖೆ, ಡಾ. ಬಸವಪ್ರಭು ಹಿರೇಮಠ, ಮತ್ತು ಶ್ರೀಮತಿ ವಿಮಲವ್ವ ಜಗಜಂಪಿ ಬೆಳಗಾವಿ, ಅವರುಗಳನ್ನು ಸನ್ಮಾನಿಸಲಾಯಿತು.

“ಸೇವಾರತ್ನ” ಮತ್ತು “ಮಕ್ಕಳ ಸಾಹಿತ್ಯ ಪ್ರಶಸ್ತಿ” ಪ್ರದಾನ ಕಾರ್ಯಕ್ರಮವು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಶ್ರೀ ಜಗದ್ಗುರು ಎಡೆಯೂರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ನಾಗನೂರು ಶ್ರೀ ರುದ್ರಾಕ್ಷಿಮಠ, ಬೆಳಗಾವಿ ಇವರ ಸಾನಿಧ್ಯದಲ್ಲಿ ನಡೆಯಿತು. ಈ ಕಾರ್ಯಕ್ರಮದ ನೇತೃತ್ವವನ್ನು ಅಥಣಿ ಮೋಟಗಿಮಠದ ಶ್ರೀ ಚನ್ನಬಸವ ಸ್ವಾಮೀಜಿ ವಹಿಸಿದ್ದರು, ಹುಲ್ಲೋಳಿಹಟ್ಟಿ-ಘೋಡಗೇರಿ ಶ್ರೀ ಶಿವಾನಂದ ಮಠದ ಶ್ರೀ ಕೈವಲ್ಯಾನಂದ ಸ್ವಾಮಿಜಿ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು. ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಸಾನಿಧ್ಯದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಲಿವ್ಸ ಆಫ್ ಸೇಂಟ್ಸ (ಡಾ. ಉಜ್ವಲಾ ಹಿರೇಮಠ) ಐತಿಹಾಸಿಕ ಮುಚಳಂಬಿ (ಲೇಃ ಡಾ. ವಿಜಯಕುಮಾರ ದೇವಪ್ಪ), ಲಿಂಗನೆಡೆಗೆ ಅಂಗನ ಯಾತ್ರೆ (ವಿ.ಜಿ.ಶೀಲವಂತ) ಗ್ರಂಥಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಪ.ಪೂ.ಕಾಲೇಜಿನ ಪ್ರಾಚಾರ್ಯ ಎ.ಕೆ.ಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪೂಜ್ಯ ಮಹಾಂತದೇವರು ಮತ್ತು ಸಿ.ಜೆ ಮಠಪತಿ ಅವರು ನಿರ್ವಹಿಸಿದರು. ಸುರೇಶ ಹಿಡದುಗ್ಗಿ ಮತ್ತು ಶಿವಶಂಕರ ಹಿರೇಮಠ ಉಪಸ್ಥಿತರಿದ್ದರು. ಪ್ರಭುದೇವ ಪ್ರತಿಷ್ಠಾನದ ಮಾತೃಮಂಡಳಿ ಸದಸ್ಯರಿಂದ ಪ್ರಾರ್ಥನೆ ಮತ್ತು ಬಸವರಾಜ ಕಟ್ಟಿಮನಿ ಅವರು ಡಾ:ಶಿವಬಸವ ಶ್ರೀಗಳ ಕುರಿತು ರಚಿಸಿದ ಹಾಡಿನೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮವನ್ನು ಪೂಜ್ಯ ಮಹಾಂತದೇವರು ಮತ್ತು ಸಿ.ಜೆ.ಮಠಪತಿ ನಿರ್ವಹಿಸಿದರು.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: