ರಸ್ತೆ, ದೀಪಗಳಿಲ್ಲದ “ಸ್ಮಾರ್ಟ ಸಿಟಿ” ನೋಡ ಬನ್ನಿ

0
172

ಬೆಳಗಾವಿ, 17- ತೀರಾ ದುಸ್ಥಿತಿಯಲ್ಲಿರುವ ರಾಮತೀರ್ಥ ನಗರದ ಬಸವೇಶ್ವರ ಬಡಾವಣೆಯ ರಸ್ತೆಗಳ ನಿರ್ಮಾಣ ಹಾಗು ಗಬ್ಬೆದ್ದು ನಾರುತ್ತಿರುವ ಗಟಾರು ವ್ಯವಸ್ಥೆ ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದ ರಾಮತೀರ್ಥ ನಗರ ಬಡಾವಣೆಯು ನಾಲ್ಕು ಸಾವಿರ ನಿವೇಶನ ಹೊಂದಿರುವ ಬೆಳಗಾವಿಯ ಅತ್ಯಂತ ದೊಡ್ಡ ಬಡಾವಣೆಗಳಲ್ಲೊಂದು. ನಿವೇಶನ ರಚಿಸುವಾಗ ನಿರ್ಮಿಸಲಾದ ತಾತ್ಪೂರ್ತಿಕ ರಸ್ತೆಗಳ ನಿರ್ಮಾಣವನ್ನು ಕಳೆದ 10-12 ವರ್ಷಗಳಿಂದ ಮಾಡಿಯೇ ಇಲ್ಲ. ಅಲ್ಲಲ್ಲಿ ದೊಡ್ಡ ದೊಡ್ಡ ತೆಗ್ಗುಗಳು ಬಿದ್ದಿವೆ. ಹಾಗಾಗಿ ವಾಹನ ಸವಾರರು ಸರ್ಕಸ್ ಮಾಡುವಂತಾಗಿದೆ. ಈ ಬಗ್ಗೆ ಹಲವಾರು ಬಾರಿ ಬೇಡಿಕೊಂಡರೂ ಇತ್ತ ಗಮನ ಹರಿಸುವವರೇ ಇಲ್ಲ ಎಂದು ನಾಗರಿಗರ ಅಂಬೋಣ.

ಅದರಂತೆ ಕಳಪೆ ಕಾಮಗಾರಿಗಳಿಂದಾಗಿ ಇಲ್ಲಿನ ಗಟಾರುಗಳು ಒಡೆದಿದ್ದು, ರಸ್ತೆಗಳಲ್ಲೆಲ್ಲಾ ಗಲೀಜು ಹರಡುವುದು ಸಾಮಾನ್ಯ ಎನ್ನುವಂತಾಗಿದೆ. ಇದರಿಂದಾಗಿ ಸೊಳ್ಳೆಗಳು ಹೆಚ್ಚಾಗಿ ರೋಗ ರುಜಿನಗಳ ಭೀತಿಯಲ್ಲಿಯೇ ನಾಗರಿಕರು ಜೀವಿಸುವಂತಾಗಿದೆ.

3 ವರ್ಷಗಳಿಂದ ಉರಿಯದ ಮುಖ್ಯ ಬೀದಿಯ ದೀಪಗಳು :

ರಾಮತೀರ್ಥ ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಬೆಳಗಾವಿಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಅಟೋ ನಗರದು ಇನ್ನೊಂದು ರೀತಿಯ ಸಮಸ್ಯೆ. ಇಲ್ಲಿನ ಪ್ರಮುಖ ರಸ್ತೆಯ ಬೀದಿ ದೀಪಗಳು ಅಳವಡಿಸಿದ ಒಂದೆರಡು ತಿಂಗಳಿನಿಂದಲೇ ಬಂದ್ ಆಗಿವೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಿಂದ ಹಿಡಿದು ಆರ್‍ಟಿಓ ಮೈದಾನದ ವರೆಗಿನ ಮುಖ್ಯ ರಸ್ತೆಯ ಬೀದಿ ದೀಪಗಳು ಉರಿಯುತ್ತಿಲ್ಲ. ಇಷ್ಟು ವರ್ಷಗಳಾದರೂ ಎಷ್ಟೇ ಬೇಡಿಕೊಂಡರೂ ಸಂಬಂಧಿತರಾರೂ ಇತ್ತ ಗಮನ ಹರಿಸುತ್ತಿಲ್ಲ. ಕತ್ತಲೆಯಲ್ಲೇ ದಿನಗಳನ್ನು ದೂಡುತ್ತಿರುವ ಇಲ್ಲಿನ ಜನರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸದ ಅಧಿಕಾರಿಗಳ ಇಂಥಾ ನಿರ್ಲಕ್ಷ್ಯಕ್ಕೆ ಏನೆನ್ನಬೇಕೋ ತಿಳಿಯದಾಗಿದೆ ಎಂದು ಇಲ್ಲಿ ಉದ್ಯೋಗ ನಡೆಸುವ ನಾಗರಿಕರು ಗೋಗರಿದುಕೊಂಡರು.

ಈ ಡಬಲ್ ರಸ್ತೆಯ ಎರಡೂ ಬದಿ ಸಣ್ಣ, ಅತೀ ಸಣ್ಣ ಉದ್ದಿಮೆದಾರರು ಗ್ಯಾರೇಜು, ಹೊಟೇಲು, ಟ್ರಾನ್ಸಪೋರ್ಟ ಇತರೆ ಸಣ್ಣಪುಟ್ಟ ಉದ್ದಿಮೆ ನಡೆಸುತ್ತಾರೆ. ಈ ರಸ್ತೆಯಲ್ಲಿ ಒಂದು ಆಯುರ್ವೇದ ಕಾಲೇಜು ಸಹ ಇದೆ. ಹಾಗಾಗಿ ನಿತ್ಯ ಸಾವಿರಾರು ಜನರು ಇದೇ ರಸ್ತೆಯ ಮೂಲಕ ಸಂಚರಿಸುತ್ತಾರೆ. ರಾತ್ರಿಯಾದರೆ ಸಾಕು ಇಲ್ಲಿನ ನಿವಾಸಿಗಳು ಕತ್ತಲೆಯಲ್ಲಿ ಅಡ್ಡಾಡುವಂತಾಗಿದೆ. ಬೆಳಕು ಇಲ್ಲದ ಕಾರಣ ಅಲ್ಲಲ್ಲಿ ಕಳ್ಳತನ ಪ್ರಕರಣ, ಅಪಘಾತಗಳು ಸಂಭವಿಸಿಸುತ್ತಲೇ ಇವೆ. ಸುತ್ತಮುತ್ತಲ ಬಡಾವಣೆಗಳ ನಾಗರಿಕರು, ಮಹಿಳೆಯರು ಈ ಪ್ರದೇಶದಲ್ಲಿ ಬೆಳಗಿನ ಜಾವ ಹಾಗು ಸಂಜೆ ಅಸುರಕ್ಷತೆಯಲ್ಲಿಯೇ ವಾಯುವಿಹಾರ ನಡೆಸುವಂತಾಗಿದೆ ಎಂದು ದೂರಿದ್ದಾರೆ.

ಕೆಐಎಡಿಬಿ ಹಾಗೂ ಸ್ಥಳೀಯ ಪ್ರತಿನಿಧಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಭರವಸೆ ಮಾತ್ರ ಸಿಕ್ಕಿದೆ. ಬೀದಿ ದೀಪಗಳು ಮಾತ್ರ ಆರಂಭವಾಗಿಲ್ಲ ಎನ್ನುತ್ತಾರೆ ಇಲ್ಲಿ ಉದ್ಯೋಗ ನಡೆಸುವವರು.

ಕೆಐಎಡಿಬಿ ಅಭಿವೃದ್ದಿ ಅಧಿಕಾರಿ ಮಾತು:

ಸಮಸ್ಯೆ ನನಗೆ ಗೊತ್ತಿದೆ. ಈ ಸಂಬಂಧ ಸಭೆ ಕರೆದು ಚರ್ಚಿಸಲಾಗಿದೆ. ಬೀದಿ ದೀಪ ನಿರ್ವಹಣೆ ಮಾಡುವ ವಿದ್ಯುತ್ ವಿಭಾಗ ಸಹಾಯಕ ಅಭಿಯಂತರರಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಿಂಗಲ್ ವಿಂಡೋ ಯೋಜನೆ ಅಡಿ ಹಳೆ ಬೀದಿ ದೀಪ ತೆಗೆದು ಹೊಸ ದೀಪ ಆಳವಡಿಸಲಾಗುವುದು ಎಂದು ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಆರ್. ಎಂ. ಚಿಕ್ಕಮಠ ತಿಳಿಸಿದ್ದಾರೆ.

ಸ್ಮಾರ್ಟ ಸಿಟಿ ಹಾಗು ಇತರ ಹಲವು ರೂಪದಲ್ಲಿ ಬರುವ ಕೋಟ್ಯಾಂತರ ರೂಪಾಯಿಗಳು ಬರೀ ಕಾಗದದ ಮೇಲೆಯೇ ಖರ್ಚಾಗುತ್ತಿವೆಯೇ ವಿನ: ನಿಜರೂಪದಲ್ಲಿಲ್ಲ ಎಂಬುದಕ್ಕೆ ರಾಮತೀರ್ಥ ನಗರ ಮತ್ತು ಅಟೋ ನಗರ ಪ್ರದೇಶಗಳ ಸಮಸ್ಯೆಗಳು ಜ್ವಲಂತ ಉದಾಹರಣೆಯಾಗಿವೆ.

ಇಲ್ಲಿ ಇಂಥ ಸಮಸ್ಯೆಗಳಿವೆ. ಕೆಲವಾದರೂ ಮೂಲಭೂತ ಸೌಕರ್ಯ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ರಾಮತೀರ್ಥ ನಗರ ಮತ್ತು ಅಟೋ ನಗರದ ನಿವಾಸಿಗಳು ವರ್ಷಾನುಗಟ್ಟಲೇ ವಿನಂತಿಸಬೇಕಾಗಿ ಬಂದಿರುವುದೇ ಇಲ್ಲಿನ ಜನರ ದುರ್ದೈವ.

LEAVE A REPLY

Please enter your comment!
Please enter your name here