ಸಂಪಾದಕೀಯ

ಧಾರವಾಡದ ಸಾಹಿತ್ಯ ಪ್ರಿಯತೆ

ಧಾರವಾಡ ಉತ್ತರ ಕರ್ನಾಟಕದ ಸಾಂಸ್ಕ್ರುತಿಕ ಕೇಂದ್ರ ಹಾಗು ಸಾಹಿತ್ಯದ ಕೇಂದ್ರ ಬಿಂದುವೂ ಹೌದು. ಇಲ್ಲಿ ಶಾಲ್ಮಲೀ ನದಿ ಗುಪ್ತಗಾಮಿನಿ. ಆದರೆ ಇಲ್ಲಿ ಸಾಹಿತ್ಯ ಬಹಿರಂಗವಾಗಿಯೇ ವ್ಯಕ್ತವಾಗುವ ಉತ್ಸಾಹ. ಇದಕ್ಕಾಗಿ ಒಂದು ಜೋಕ್ ಪ್ರಚಲಿತವಿದೆ. ಇಲ್ಲಿನ ಬಾವಿ ಕಟ್ಟೆ ಬಳಿ ನಿಂತು, ಸುಮ್ಮನೆ ಒಂದು ಕಲ್ಲು ಒಗೆದರೆ ಅದು ಖಂಡಿತ ಯಾವುದಾದರೂ ಕವಿಗೆ ತಗಲುತ್ತದೆ. ಈ ನಗರದಲ್ಲಿ ಹುಟ್ಟಿನಿಂದಲೇ ಕವಿ ಆಗುವಂತೆ ಮಾಡುವ ಮಣ್ಣಿನ ಗುಣ ಇದೆ. ಧಾರವಾಡದ ಎಮ್ಮೆ ಹಾಲು ಗಟ್ಟಿ, ಹಾಗೇ ಇಲ್ಲಿನ ಸಾಹಿತ್ಯದ ಪ್ರೀತಿ ಕೂಡ. ಇಲ್ಲೊಂದು ಸಾರಸ್ವತಪುರ ಇದೆ. ಬೇಂದ್ರೆ ಕಟ್ಟಿದ ಸಾಧನಕೇರಿ ಇದೆ. ಅವರು ‘ಮೂಡಲ ಮನೆಯಾ ಮುತ್ತಿನ ನೀರಿನ’ ಕವನಕ್ಕೆ ಸ್ಪೂರ್ತಿಯಾದ ಅತ್ತಿಕೊಳ್ಳ ಇದೆ.

ಮಲೆನಾಡಿನ ಸೆರಗು ಎನಿಸಿದರೂ ಧಾರವಾಡ ಮತ್ತು ಬೆಳಗಾವಿ ನಗರಗಳು ಅಪ್ಪಟ ಮಲೆನಾಡಿನ ಸಾಂಸ್ಕ್ರುತಿಕ, ಸಾಹಿತ್ಯಕ ಗುಣಗಳನ್ನು ಮೈಗೂಡಿಸಿಕೊಂಡಿವೆ. ಜ್ಞಾನಪೀಠ ಪ್ರಶಸ್ತಿ ಪಡೆದ ಬೇಂದ್ರೆ, ಕಾರ್ನಾಡ, ಗೋಕಾಕ, ಕಂಬಾರ ಈ ಎರಡು ಜಿಲ್ಲೆಗಳಿಗೆ ಸೇರಿದವರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಗಳಿಸಿದವರಲ್ಲಿ ನಾಲ್ಕು ಜನ ಇಲ್ಲಿನವರು ಎಂಬುದು ಈ ಭಾಗದ ಸಾಹಿತ್ಯದ ಗಟ್ಟಿತನವನ್ನು ಹೇಳುತ್ತದೆ. ಇವರಲ್ಲದೇ ಕಟ್ಟೀಮನಿ, ಪುರಾಣಿಕ, ಚಂಪಾ, ಗಿರಡ್ಡಿ ಮುಂತಾದ ಹೆಸರುಗಳು ಥಟ್ಟನೆ ನಮ್ಮ ಕಣ್ಣ ಮುಂದೆ ಬರುತ್ತವೆ. ಸಾಹಿತ್ಯದ ಗಟ್ಟಿ ನೆಲೆ ಕಲ್ಪಿಸಿದ ಜಿ.ಬಿ.ಜೋಷಿ ಇಲ್ಲಿನ ಸುಭಾಷ ರಸ್ತೆಯವರು. ಅವರ ಮನೋಹರ ಗ್ರಂಥಮಾಲೆಯ ಅಟ್ಟದ ಮೇಲೆ ನಡೆದ ಕಿತ್ತಾಟ, ಹಾಕ್ಯಾಟಗಳಿಂದಲೇ ಕನ್ನಡ ಸಾಹಿತ್ಯ ಉತ್ಕ್ರಷ್ಟತೆ ಪಡೆಯುವುದು ಸಾಧ್ಯ ಆಯಿತು. ಕೀರ್ತಿನಾಥ ಕುರ್ತಕೋಟಿ, ಬೆಳಗಾವಿ ಕಾಲೇಜದಲ್ಲಿ ಕೆಲವು ದಿನ ದುಡಿದ ಎ.ಕೆ. ರಾಮಾನುಜನ್, ಉತ್ತರ ಕನ್ನಡದವರಾದರೂ ಬೆಳಗಾವಿಯನ್ನು ತವರೆಂಬಂತೆ ಪ್ರೀತಿಸಿದ ಶಾಂತಿನಾಥ ದೇಸಾಯಿ ನವ್ಯದ ಬಹುದೊಡ್ಡ ಹರಿಕಾರರು ಎಂಬುದು ಮರೆಯುವಂತಿಲ್ಲ.

ಸಾಹಿತ್ಯದ ಹಾಗೆ ಸಂಗೀತ ಅಭಿರುಚಿಯನ್ನೂ ಕಟ್ಟಿ ಬೆಳೆಸಿದ ಊರು ಧಾರವಾಡ. ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು, ನೆರೆಯ ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್, ಗದಗ ಮೂಲದ ಭೀಮಸೇನ ಜೋಷಿ ಅವರು ಉತ್ತರಾದಿ ಸಂಗೀತಕ್ಕೆ ಕೊಟ್ಟ ಕೊಡುಗೆ ಎಲ್ಲರಿಗೂ ಗೊತ್ತಿರುವಂಥದ್ದು. ಹೀಗೆ ಸಾಹಿತ್ಯ ಮತ್ತು ಸಂಗೀತ ಎರಡೂ ಕ್ಷೇತ್ರಗಳ ಹುರಿಗೊಂಡ ಮಧುರ ಹದವನ್ನು ಸಾಧಿಸಿದ ಧಾರವಾಡದಲ್ಲಿ ಬರುವ ಶುಕ್ರವಾರದಿಂದ ಮೂರು ದಿನ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಇದಕ್ಕೆ ಈಗಾಗಲೇ ಊರು ಮತ್ತು ಅದಕ್ಕಿಂತ ಹೆಚ್ಚಾಗಿ ಜನ ಸಜ್ಜಾಗಿದ್ದಾರೆ. ಇಡೀ ಊರು ನವ ವಧುವಿನ ಹಾಗೆ ಸಿಂಗಾರಗೊಂಡಿದೆ. ಎಲ್ಲೆಲ್ಲೂ ತಳಿರು ತೋರಣ, ಗೋಡೆಗಳ ಮೇಲೆಲ್ಲ ಕನ್ನಡದ ಹಿರಿಮೆ ಸಾರುವ ಮೊಳಗು ಬಣ್ಣ ಪಡೆದುಕೊಂಡಿದೆ.

ಇಡೀ ಸಮ್ಮೇಳನವನ್ನು ಕೇವಲ ಸಾಹಿತ್ಯ ಪರಿಷತ್ತು ನಿರ್ವಹಿಸುತ್ತಿಲ್ಲ. ಇಡೀ ಊರು ಮತ್ತು ಇಲ್ಲಿನ ಜನ ತುಂಬು ಉತ್ಸಾಹದಿಂದ ಸಾಹಿತ್ಯ ಜಾತ್ರೆಗೆ ಅಣಿ ಆಗುತ್ತಿರುವುದು ಮೇಲು ನೋಟಕ್ಕೇ ಕಾಣುತ್ತಿರುವ ಸಂಗತಿ. ಬಹುಕಾಲ ಮುಂಬಯಿ ಕರ್ನಾಟಕದ ಭಾಗವಾಗಿದ್ದ ಧಾರವಾಡ, ಬೆಳಗಾವಿಗಳಲ್ಲಿ ಕನ್ನಡದ ಅಂತಃಸತ್ವವನ್ನು ಪೋಷಿಸಿಕೊಂಡು ಬಂದವರು ಇಲ್ಲಿನ ಕವಿಗಳು ಮತ್ತು ಸಂಗೀತಗಾರರು. ಬೇಂದ್ರೆ ಮನೆ ಮಾತು ಮರಾಠಿ. ಅಂಥವರೇ ಶಂಕರ ಮೊಕಾಶಿ ಪುಣೇಕರ. ಇಂಥ ಇನ್ನೆಷ್ಟೋ ಮನೆಗಳಲ್ಲಿ ಮರಾಠಿ ಮುಖ್ಯ ಸ್ರೋತವಾದರೂ ಕನ್ನಡದ ಅಂತಃಸತ್ವ ಅಳಿಯದಂತೆ ನೋಡಿಕೊಂಡ ಹಲವರು ಇದ್ದಾರೆ. ಆಲೂರು ವೆಂಕಟರಾಯರು, ‘ಉದಯವಾಗಲಿ’ ಎಂದು ಹಾರೈಸಿದ ಹುಯಿಲುಗೋಳ ನಾರಾಯಣ ರಾಯರು, ಕರ್ನಾಟಕದ ಏಕೀಕರಣಕ್ಕೆ ಕಟಿಬದ್ಧರಾಗಿ ಹೋರಾಡಿದ ಆಲೂರರು ಮತ್ತು ಗಂಗಾಧರ ದೇಶಪಾಂಡೆ ಅವರುಗಳನ್ನು ಇಲ್ಲಿ ನೆನೆಯಬೇಕು.

ಇದನ್ನು ವಿದ್ಯಾ ಕೇಂದ್ರವಾಗಿ ರೂಪಿಸಿದ ರ್ಯಾಂಗ್ಲರ್ ಡಿ.ಸಿ. ಪಾವಟೆ ಅವರಂಥವರನ್ನೂ ಕೂಡ ಇಲ್ಲಿ ನೆನೆಯಬೇಕಿದೆ. ಇಲ್ಲಿನದೇ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಓದಿದ ಉತ್ತರ ಕನ್ನಡದ ಜಾಣ ಹುಡುಗ ಜಯಂತ ಕಾಯ್ಕಿಣಿ ಕನ್ನಡದ ಜನಪ್ರಿಯ ಲೇಖಕ. ಸಂಶೋಧನೆ ವಿಷಯದಲ್ಲಿ ದುಡಿದ ಶಂ.ಬಾ. ಜೋಷಿ ಮತ್ತು ಎಂ.ಎಂ. ಕಲಬುರ್ಗಿ ಅವರನ್ನು ಇಲ್ಲಿ ನೆನೆಯದಿದ್ದರೆ ಹೇಗೆ? ಸಾಹಿತ್ಯದ ನಾಗಾಲೋಟ ಹುಚ್ಚು ನೆಗೆತ ಆಗಬಾರದು ಎಂದು ವಿಮರ್ಶೆಯ ಲಗಾಮು ಹಿಡಿದಿದ್ದ ಗಿರಡ್ಡಿ, ಅಮೂರರ ಸಾಧನೆ ಏನೂ ಚಿಕ್ಕದಲ್ಲ. ಇವರೆಲ್ಲ ಧಾರವಾಡದ ಮಡಿಲಲ್ಲಿಯೇ ನೆಲೆ ಕಂಡವರು ಮತ್ತು ಸಾಹಿತ್ಯದ ಒಳಿತಿಗಾಗಿ ಮನಃಪೂರ್ವಕ ಶ್ರಮಿಸಿದವರು.

ಅಂಥದೊಂದು ನಗರದಲ್ಲಿ ಈಗ ಸಾಹಿತ್ಯದ ಜಾತ್ರೆ ನಡೆಯುವಾಗ ಸಹಜವಾಗಿಯೇ ಹೆಮ್ಮೆ ಮತ್ತು ಕುತೂಹಲ ಎರಡೂ ಇರುತ್ತವೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಚಂದ್ರಶೇಖರ ಕಂಬಾರ ತಳೆಯುವ ನಿಲುವುಗಳು ಬಗ್ಗೆ ಕನ್ನಡದ ಜನತೆಗೆ ಕುತೂಹಲದ ನಿರೀಕ್ಷೆ ಇದೆ. ಇಂಥ ಸಂದರ್ಭದಲ್ಲಿ ಹಲವಾರು ಅಡೆತಡೆಗಳ ನಡುವೆಯೇ ಇಲ್ಲಿನ ಸಮ್ಮೇಳನಕ್ಕೆ ಅಭೂತಪೂರ್ವ ಕಳೆ ಬಂದಿದ್ದರೆ ಅದು ನಗರದ ಜನರ ಉತ್ಸಾಹದಿಂದ ಎಂಬುದು ನಿರ್ವಿವಾದ. ಮೊದಲು ಸಾಹಿತ್ಯ ಸಮ್ಮೇಳನ ನಡೆಯುವ ಜಾಗದ ಬಗ್ಗೆಯೇ ಗೊಂದಲ ಕಾಣಿಸಿತು, ಕೊನೆಗೆ ಕೃಷಿ ವಿಶ್ವವಿದ್ಯಾಲಯ ಆವರಣ ಈಗ ಸಮ್ಮೇಳನಕ್ಕೆ ಸಜ್ಜಾಗಿದೆ. ಹಲವು ಬಾರಿ ಸಮ್ಮೇಳನ ದಿನಾಂಕ ಮುಂದೂಡಿದ್ದೂ ಇದೆ. ಈಗ ಹಣ ಹೊಂದಿಸುವ ಕುರಿತು ಮತ್ತೆ ಹಲವು ಆತಂಕಗಳು ಎದುರಾಗಿವೆ. ಸುಮಾರು ಎರಡು ಕೋಟಿ ರೂ.ಗಳಷ್ಟು ಕೊರತೆ ನಿರೀಕ್ಷಿಸಿದ್ದು, ಅದನ್ನು ಸರ್ಕಾರ ಒದಗಿಸುವ ನಿರೀಕ್ಷೆ ಇದೆ. ಜಿಲ್ಲಾ ಉಸ್ತುವಾರಿ ಸಚಿವ ದೇಶಪಾಂಡೆ ಅವರಿಗೆ ಇಂಥ ಜಾತ್ರೆಗಳನ್ನು ನಡೆಸುವ ಜವಾಬ್ದಾರಿ ಹಿಂದೆಯೂ ಹಲವು ಬಾರಿ ಬಂದಿದೆ. ಆಗೆಲ್ಲ ಅವರು ಯಶಸ್ವಿ ಆಗಿಯೇ ಕೆಲಸ ನಡೆಸಿದ್ದಾರೆ. ಈ ಬಾರಿಯೂ ಅವರು ಆ ಸಾಧನೆ ಮಾಡುತ್ತಾರೆ ಎಂಬ ನಂಬಿಕೆ ಇದೆ.

ಧಾರವಾಡ ಈ ಚಳಿಯ ದಿನಗಳಲ್ಲಿ ಹೊಸ ವರ್ಷದ ಆರಂಭದಲ್ಲಿಯೇ ಸಾಹಿತ್ಯ ಜಾತ್ರೆಗೆ ಸಜ್ಜಾಗಿರುವುದು ಇಡೀ ವರ್ಷ ಇಂಥ ಕೆಲಸಗಳಿಂದಲೇ ತುಂಬಿರುತ್ತದೆ ಎನ್ನುವುದಕ್ಕೆ ಪೂರ್ವಭಾವಿ ಸೂಚನೆಯಂತೆ ಕಂಡಿದ್ದರೆ ಆಶ್ಚರ್ಯ ಇಲ್ಲ. ಧಾರವಾಡ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಹಬ್ಬ (ಲಿಟರರಿ ಫೆಸ್ಟಿವಲ್)ಗಳಿಗೆ ಹೆಸರಾಗಿತ್ತು. ಅದು ಸೀಮಿತ ಪಾಲುದಾರಿಕೆಯ ಸಮಾರಂಭ. ಈ ಬಾರಿ ಎಲ್ಲರ ಪಾಲುದಾರಿಕೆಯ ಸಾಹಿತ್ಯ ಜಾತ್ರೆ ನಡೆಯುತ್ತ ಇರುವುದು ಇಲ್ಲಿನ ಜನರ ಪಾಲಿಗಂತೂ ಅಪೂರ್ವ ಅವಕಾಶ ಒದಗಿಸಿದೆ. ಮೂರು ದಿನಗಳ ಜಾತ್ರೆಯ ಹರ್ಷದಲ್ಲಿ ಅವರೆಲ್ಲ ಮಿಂದೇಳುವ ಅವಕಾಶ ಕಲ್ಪಿಸಿದೆ.

-ಎ.ಬಿ.ಧಾರವಾಡಕರ

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: