ಸಂಪಾದಕೀಯ

ಗ್ರಹಣಗಳ ನಡುವೆ

ಗ್ರಹಣ ಸಮಯದಲ್ಲಿ ಕೇಡು ಸಂಭವಿಸುತ್ತದೆ ಎಂದು ನಂಬಿಕೆ ಇದೆ. ಅನಿರೀಕ್ಷಿತ ಘಟನೆಗಳು ನಡೆದು ಜನ ಗೊಂದಲಕ್ಕೆ ಈಡಾಗುತ್ತಾರೆ ಎಂದು ಹೇಳುವುದುಂಟು. ಕೆಲವು ಸಂದರ್ಭಗಳಲ್ಲಿ ಪ್ರಾಕೃತಿಕ ದುರಂತಗಳೂ ಸಂಭವಿಸುತ್ತವೆ ಎಂದು ಕೆಲವರು ನಂಬುತ್ತಾರೆ. ಇದೆಲ್ಲ ಗ್ರಹಣದ ಹಿಂದು ಮುಂದಿನ ದಿನಗಳಲ್ಲಿ ಆಗುವ ಘಟನೆಗಳು ಎಂದೂ ಅಪ್ಪಣೆ ಕೊಡಿಸಲಾಗುತ್ತದೆ. ಈ ಬಾರಿ ಒಂದೇ ತಿಂಗಳ ಅವಧಿಯಲ್ಲಿ ಒಂದಲ್ಲ, ಎರಡು ಗ್ರಹಣಗಳು ಸಂಭವಿಸಿವೆ. ಹದಿನೈದು ದಿನಗಳ ಹಿಂದೆ ಸಂಭವಿಸಿದ ಸೂರ್ಯಗ್ರಹಣದ ಬೆನ್ನಲ್ಲೇ ಮಂಗಳವಾರ ಮತ್ತೊಂದು ಚಂದ್ರಗ್ರಹಣ. ಅದರಲ್ಲೂ ಈ ಬಾರಿ 119 ವರ್ಷಗಳಿಗೊಮ್ಮೆ ಸಂಭವಿಸುವ ಕೇತುಗ್ರಸ್ಥ ಚಂದ್ರಗ್ರಹಣ. ಈ ಎಲ್ಲ ಕಾರಣಗಳಿಂದ ಈ ಬಾರಿಯ ಎರಡೂ ಗ್ರಹಣಗಳಿಗೆ ಭಾರಿ ಮಹತ್ವ ಬಂದಿದೆ ಎಂದು ಕೆಲವರು ಭಾವಿಸುತ್ತಾರೆ.

ಗ್ರಹಣವು ಆಕಾಶಕಾಯಗಳ ಎಂದಿನ ಸಂಚಾರ ಗತಿಯಲ್ಲಿ ಸಂಭವಿಸುವ ಒಂದು ಘಟನೆ ಅಷ್ಟೇ ಎಂದು ವಿಜ್ಞಾನಿಗಳು ಹೇಳಿದರೂ ಜನರ ನಂಬಿಕೆ ಬೇರೆಯೇ ಇದೆ. ಭಾರತದಂಥ ದೇಶದಲ್ಲಿ ಪಂಚಾಂಗದ ಮೇಲೆ ಇರುವ ನಂಬಿಕೆ ವಿಜ್ಞಾನದ ವಾಸ್ತವಗಳ ಮೇಲೆ ಇರುವುದಿಲ್ಲ. ಸ್ವತಃ ವಿಜ್ಞಾನಿಗಳೇ ಕೆಲವು ಧಾರ್ಮಿಕ ನಂಬಿಕೆಗಳನ್ನು ಪೋಷಿಸಿಕೊಂಡು ಬಂದಿರುತ್ತಾರೆ. ಅಂಥವರಲ್ಲಿ ಇಸ್ರೋದ ಅಧ್ಯಕ್ಷರೂ ಒಬ್ಬರು. ಸೋಮವಾರ ‘ಚಂದ್ರಯಾನ 2’ ಉಡಾವಣೆ ಹಿನ್ನೆಲೆಯಲ್ಲಿ ಅವರು ಮತ್ತು ರಾಷ್ಟ್ರಪತಿಗಳು ತಿರುಪತಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಆದರೂ ಉಡಾವಣೆ ಕೊನೆ ಹಂತದಲ್ಲಿ ಸ್ಥಗಿತ ಮಾಡಲಾಯಿತು.

ವಿಜ್ಞಾನಿಗಳೇ ಹೀಗೆ ಎಂದ ಮೇಲೆ ನಮ್ಮ ರಾಜಕಾರಣಿಗಳನ್ನು ಕೇಳಬೇಕೇ? ಪಂಚಾಂಗ ಮತ್ತು ಜ್ಯೋತಿಷಿಗಳನ್ನು ಬಗಲಲ್ಲಿಯೇ ಇಟ್ಟುಕೊಂಡು, ಪ್ರತಿ ಹೆಜ್ಜೆಗೂ ಲೆಕ್ಕ ಹಾಕುತ್ತಾರೆ. ಅವರ ಪ್ರಕಾರ ಕರ್ನಾಟಕದ ರಾಜಕೀಯದಲ್ಲಿ ಉಂಟಾಗಿರುವ ಸಂಚಲನಕ್ಕೆ ಗ್ರಹಣಗಳು ಕಾರಣ ಎಂದು ಅತೃಪ್ತ ಶಾಸಕರು ಮತ್ತು ರಾಜ್ಯದ ಸಚಿವರೊಬ್ಬರು ದೇವಸ್ಥಾನಗಳ ಸುತ್ತು ಹೊಡೆಯುತ್ತಿದ್ದಾರೆ. ಮೊನ್ನೆ ದಿನ ಆಷಾಢ ಶುಕ್ರವಾರದಂದು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಕೊಲ್ಲೂರಿಗೆ ತೆರಳಿ ಮೂಕಾಂಬಿಕೆಗೂ ವಿಶೇಷ ಪೂಜೆ ಸಲ್ಲಿಸಿದರು ಎಂದು ವರದಿಯಾಗಿದೆ. ಅತ್ತ ಮುಂಬಯಿಯಲ್ಲಿ ಇರುವ ಅತೃಪ್ತ ಶಾಸಕರು ಮೊದಲು ಸ್ಥಳೀಯ ಸಿದ್ಧಿ ವಿನಾಯಕ ದೇಗುಲಕ್ಕೆ ಹೋಗಿ ಪೂಜೆ ಸಲ್ಲಿಸಿದ್ದು, ಆನಂತರ ಶಿರಡಿಗೆ ತೆರಳಿ, ಹೇಗಾದರೂ ಒಂದು ಪವಾಡ ನಡೆಸುವಂತೆ ಬಾಬಾ ಅವರನ್ನು ಬೇಡಿಕೊಂಡರು ಎನ್ನಲಾಗಿದೆ. ಇತ್ತ ಓಡಾಡುತ್ತಿದ್ದ ಇನ್ನೊಬ್ಬ ಬೆಂಗಳೂರಿನ ಶಾಸಕ ವಿಶೇಷ ವಿಮಾನದಲ್ಲಿ ಪುಣೆಗೆ ಹೊರಡಲು ಸಜ್ಜಾಗುತ್ತಿದ್ದಾಗ ಐಎಂಎ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಅವರನ್ನು ಬಂಧಿಸಿದೆ.

ಗ್ರಹಣದ ದಿನದಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ವಿರೋಧ ಪಕ್ಷದ ನಾಯಕರ ಕ್ಷೇತ್ರದಲ್ಲಿ ನಾನಾ ರೀತಿಯ ಹೋಮ ಹವನಗಳು ಜರುಗುತ್ತಿವೆ. ಎಲ್ಲಕ್ಕಿಂತ ವಿಚಿತ್ರ ಎಂದರೆ, ಅವರು ಮೊದಲಿನ ಹಾಗೆ ಸಿಟ್ಟಿನಿಂದ ಮಾತಾಡದೇ, ನಗು ನಗುತ್ತಾ ಮಾತಾಡುತ್ತಾ ಇರುವುದು ಮತ್ತು ತಾವೇ ಗೆಲ್ಲುತ್ತಿದ್ದೇವೆ ಎಂದು ‘ಎರಡು ಬೆರಳು’ ಎತ್ತಿ ಅಲುಗಿಸುವ ಕ್ರಿಯೆಯನ್ನು ಕೈ ಬಿಟ್ಟಿದ್ದಾರೆ. ಇದೊಂದು ಪವಾಡ ಸದೃಶ ಬದಲಾವಣೆ ಎಂದರೂ ಅಚ್ಚರಿ ಇಲ್ಲ.

ಇದೆಲ್ಲದರ ನಡುವೆ ಸಿಕ್ಕಿ ಒದ್ದಾಡುತ್ತಾ ಇರುವವರು ರಾಜ್ಯ ವಿಧಾನಸಭೆಯ ಸಭಾಪತಿ. ಅವರು ತಮ್ಮ ಕೆಲಸ ತಾವು ಮಾಡುತ್ತಾ ಇದ್ದರೂ ಅದು ತಮಗೆ ಅನುಕೂಲಕರ ಅಲ್ಲ ಎಂದು ಕೆಲವರು ತಕರಾರು ತೆಗೆದಿದ್ದಾರೆ. ಇದೇ ವಿಚಾರಕ್ಕೆ ಸುಪ್ರೀಮ ಕೋರ್ಟಿಗೆ ಸಲ್ಲಿಸಿದ್ದ ಅತೃಪ್ತರ ಅರ್ಜಿ ವಿಚಾರಣೆ ಸಂಬಂಧ ಕೋರ್ಟು ವ್ಯಕ್ತಪಡಿಸಿರುವ ಅಭಿಪ್ರಾಯವು ಸಭಾಪತಿಗಳಿಗೆ ಇರಿಸು ಮುರುಸು ಉಂಟು ಮಾಡಿರುವುದಂತೂ ಖಚಿತ. ‘ಅವರು ನಮ್ಮ ಕರ್ತವ್ಯದ ಕಡೆ ಬೆರಳು ಮಾಡಿ ತೋರುತ್ತಾರೆ, ಆದರೆ ಅವರ ಕರ್ತವ್ಯ ಅವರು ನಿರ್ವಹಿಸಬೇಕಿದೆ’ ಎಂದು ಚುರುಕು ಮುಟ್ಟಿಸುವ ಕೆಲಸ ಆಗಿದೆ. ಹೀಗಾಗಿ ಬುಧವಾರದಂದೇ, ಅಂದರೆ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಒಂದು ದಿನ ಮುಂಚೆಯೇ ಅರ್ಜಿಗಳನ್ನು ಇತ್ಯರ್ಥ ಮಾಡುವುದಾಗಿ ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ. ಹೀಗಾಗಿ ಸರ್ಕಾರ ಅಥವಾ ವಿರೋಧ ಪಕ್ಷಕ್ಕೆ ಗುರುವಾರ ಬಂದೊದಗಲಿದ್ದ ಗಂಡಾಂತರ ಬುಧವಾರದಂದೇ ನಿರ್ಧಾರವಾಗಿ ಬಿಡುತ್ತದೆ. ಇದನ್ನು ಕೂಡ ಗ್ರಹಣದ ಪರಿಣಾಮ ಎಂದು ಯಾರಾದರೂ ಮುಂದೊಂದು ದಿನ ಹೇಳಬಹುದು.

ಈ ನಡುವೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ‘ಒಂದು ದೇಶ ಒಂದು ಚುನಾವಣೆ’ ಎಂದು ಈಗಾಗಲೇ ಘೋಷಿಸಿ ಆಗಿದೆ. ಆದರೆ ಅದರ ಚಟುವಟಿಕೆಗಳನ್ನು ಗಮನಿಸಿದರೆ, ‘ಒಂದು ದೇಶ ಒಂದೇ ಪಕ್ಷ’ ಎಂಬ ಧ್ಯೇಯ ಸಾಧನೆಯ ಕಾರ್ಯಕ್ರಮ ಹಮ್ಮಿಕೊಂಡಂತೆ ಕಾಣುತ್ತದೆ ಎಂದು ಕೆಲವರು ಗೇಲಿ ಮಾಡಿದ್ದಾರೆ. ಆದರೆ ಇದೇ ಸಮಯಕ್ಕೆ ಕೆಲವು ಅಗ್ರ ಪಂಕ್ತಿಯ ಉದ್ಯಮಿಗಳು ಆಗಲೇ ಅಪಸ್ವರ ಆರಂಭಿಸಿರುವುದು ಮತ್ತು ಶೇರು ಪೇಟೆಯಲ್ಲಿ ಕಾಣುತ್ತಿರುವ ಕುಸಿತದಿಂದಾಗಿ ಬಿಜೆಪಿಗೇ ಉಳಿಗಾಲ ಇಲ್ಲವೇನೋ ಎಂಬ ಚಿಂತೆ ಕೂಡ ಹಲವರನ್ನು ಕಾಡುತ್ತಿದೆ. ಇದೆಲ್ಲ ಕೂಡ ತಾತ್ಕಾಲಿಕ ಮತ್ತು ಗ್ರಹಣದ ಪರಿಣಾಮ ಎಂದು ಆ ಪಕ್ಷದ ಭಕ್ತ ಜನ ಆನಂತರ ವಿವರಣೆ ಕೊಡಬಹುದು.

ಇದೆಲ್ಲದರ ನಡುವೆ ನ್ಯೂಝಿಲೆಂಡ್ ಸೋತು ಇಂಗ್ಲೆಂಡ್ ವಿಶ್ವಕಪ್ ಗೆದ್ದದ್ದು ಅಂಪಾಯರ್ ಗಳ ಕೈವಾಡದಿಂದ ಅಲ್ಲ, ಗ್ರಹಣದ ಪರಿಣಾಮದಿಂದ ಎಂದೂ ವ್ಯಾಖ್ಯಾನಿಸಬಹುದಾಗಿದೆ. ಇದೇ ಸಮಯಕ್ಕೆ ವಿಂಬಲ್ಡನ್‍ನಲ್ಲಿ ಸೆರೀನಾ ಮತ್ತು ವೀನಸ್ ವಿಲಯಮ್ಸ್ ಸಹೋದರಿಯರು ಸೋಲುಂಡು, ಹೊಸಬರು ವಿಂಬಲ್ಡನ್ ಪ್ರಶಸ್ತಿ ಎತ್ತಿ ಹಿಡಿದಿರುವುದು ಕೂಡ ಗ್ರಹಣದ ಪರಿಣಾಮವೇ ಎಂದು ವಿಶ್ಲೇಷಣೆ ನಡೆಯಬೇಕಿದೆ. ಒಟ್ಟಿನಲ್ಲಿ ಗ್ರಹಣ ಮುಗಿದರೂ ಗ್ರಹಣದ ಪರಿಣಾಮ ಕುರಿತೇ ಇನ್ನೂ ಬಹುಕಾಲ ಚರ್ಚೆ, ವಾದ, ವಿವಾದಗಳು ನಡೆಯುವದಂತೂ ಖಂಡಿತ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: