ಮರಗಳು ಮಾತಾಡುವುದಿಲ್ಲ!

0
91

ಮಾತಾಡುವ ಏಕೈಕ ಜೀವಿ ಮನುಷ್ಯ ಎಂದು ತಪ್ಪಾಗಿ ಭಾವಿಸಲಾಗಿದೆ. ವಿಶ್ವದ ಎಲ್ಲ ಜೀವಿಗಳಿಗೂ ತಮ್ಮದೇ ಆದ ಭಾಷೆ ಇದೆ. ಅವೆಲ್ಲ ಪರಸ್ಪರ ಹೇಗೆ ಸಂವಹಿಸಬೇಕು ಎಂದು ಅರಿತಿವೆ. ಆದರೆ ಮನುಷ್ಯನಿಗೆ ಎಷ್ಟು ಅಹಂಕಾರ ಎಂದರೆ, ತಾನು ಮಾತ್ರ ಜಗತ್ತಿನ ಎಲ್ಲ ಮನುಷ್ಯರ ಜೊತೆ ಸಂವಹಿಸಬಲ್ಲೆ ಎಂಬ ಸೊಕ್ಕು. ಇದನ್ನು ಅಜ್ಞಾನ ಎನ್ನುವುದೇ ಸರಿ.

ಬುಡಕಟ್ಟು ಜನಾಂಗಗಳಲ್ಲಿ ಒಂದು ನಂಬಿಕೆ ಇದೆ. ಮರ ಆಗಲಿ, ಪಶು ಪ್ರಾಣಿ ಆಗಲಿ ಮನುಷ್ಯನ ಕ್ರಿಯೆ ಮತ್ತು ಮಾತು ಎರಡನ್ನೂ ಅರ್ಥ ಮಾಡಿಕೊಳ್ಳಬಲ್ಲವು ಎಂಬ ತಿಳಿವಳಿಕೆ ಅವರಲ್ಲಿ ಇದೆ. ಎಷ್ಟೋ ಸಂದರ್ಭಗಳಲ್ಲಿ ಹಣ್ಣು ಬಿಡದ ಮರದ ಬಳಿ ಊರಿನ ಜನರೆಲ್ಲ ಹೋಗಿ ಬೆದರಿಕೆ ಹಾಕುತ್ತಾರೆ. ಹೀಗೇ ಬರಡಾಗಿದ್ದರೆ ಕೊಡಲಿಯಿಂದ ಕೊಚ್ಚಿ ಹಾಕುವುದಾಗಿ ಕೊಡಲಿ ಝಳಪಿಸಿ ಹೆದರಿಸುತ್ತಾರೆ. ವಿಸ್ಮಯ ಎಂಬಂತೆ ಆ ಮರ ಹೆದÀರಿಕೊಂಡೋ ಏನೋ, ಹಣ್ಣು ಬಿಡಲು ಆರಂಭಿಸುತ್ತದೆ. ಇಂಥ ವಿಶ್ವದ ನಾನಾ ವಿಸ್ಮಯಕಾರಿ ಸಂಗತಿಗಳು ಮನುಷ್ಯನಿಗೆ ಅರ್ಥ ಆಗಿಯೇ ಇಲ್ಲ. ಆದರೂ ತಾನು ಪರಮ ಜ್ಞಾನಿ ಎಂದುಕೊಂಡು ಮನುಷ್ಯ ಸೊಕ್ಕಿನಿಂದ ಮೆರೆಯುತ್ತಾನೆ. ತನ್ನ ಅನುಕೂಲಕ್ಕೆ ಮರ, ಗಿಡ, ಬಳ್ಳಿ, ಬೆಟ್ಟ, ಕಾಡು ಎಲ್ಲವನ್ನೂ ಧ್ವಂಸ ಮಾಡುತ್ತಾ ತಾನು ಮಹಾನ್ ಅಭಿವೃದ್ಧಿಯತ್ತ ಹೆಜ್ಜೆ ಇರಿಸುತ್ತಿದ್ದೇನೆ ಅಂದುಕೊಂಡಿದ್ದಾನೆ. ಹೀಗಾಗಿಯೇ ಈಗ ರಾಜ್ಯದಿಂದ ಗೋವಾಕ್ಕೆ ವಿದ್ಯುತ್ ಸರಬರಾಜಿಗೆ ಎಂದು ಬೆಳಗಾವಿ, ಧಾರವಾಡ ಹಾಗು ಉತ್ತರ ಕನ್ನಡ ಜಿಲ್ಲೆಯ ಹುಲಿ, ಆನೆಗಳಂಥ ಪ್ರಾಣಿಗಳ ವಾಸಸ್ಥಾನ ಇರುವ 177 ಹೆಕ್ಟೇರ್ ದಟ್ಟ ಅರಣ್ಯ ಕಡಿಯುವ ಹುನ್ನಾರ ನಡೆದಿದೆ. ಅದರಲ್ಲಿ 110 ಹೆಕ್ಟೇರ್ ವಿಶಾಲ ಕಾಡು ಬೆಳಗಾವಿ ಜಿಲ್ಲೆಗೆ ಸೇರಿದೆ.

ಖಾನಾಪುರ, ದಾಂಡೇಲಿ ಭಾಗಕ್ಕೆ ಸೇರಿದ ದಟ್ಟ ಕಾಡಿನಲ್ಲಿ ಹಲವು ಬಗೆಯ ಅಳಿವಿನಂಚಿನ ಪಕ್ಷಿ, ಪ್ರಾಣಿಗಳು ಇವೆ. ಈ ಕಾಡು ನಾಶವಾದರೆ ಆ ಪ್ರಾಣಿ, ಪಕ್ಷಿಗಳು ಅಳಿಯುತ್ತವೆ. ಅಂಥ ಒಂದು ಉದಾಹರಣೆ ನೋಡುವುದಾದರೆ ಈ ಕಾಡಿನ ಭಾಗದಲ್ಲಿ ವಾಸಿಸುವ ಮಂಗಟ್ಟೆ ಹಕ್ಕಿ (ಹಾರ್ನ್‍ಬಿಲ್)ಯ ಜೀವನ ಶೈಲಿಯನ್ನೇ ಗಮನಿಸಬಹುದು. ಸಂತಾನೋತ್ಪತ್ತಿ ಸಮಯದಲ್ಲಿ ಮರದ ಪೊಟರೆಯಲ್ಲಿ ಗೂಡು ಕಟ್ಟಿ ಹೆಣ್ಣು ಹಕ್ಕಿಯನ್ನು ಗಂಡು ಹಕ್ಕಿ ಇಡುತ್ತದೆ. ಹೆಣ್ಣು ಹಕ್ಕಿಗೆ ಆಹಾರ ತಂದು ಕೊಡಲೆಂದು ಸಣ್ಣದೊಂದು ಕಿಂಡಿ ಬಿಟ್ಟು ಗೂಡನ್ನು ಗಂಡು ಹಕ್ಕಿ ಸಂಪೂರ್ಣ ಮುಚ್ಚುತ್ತದೆ. ಅದು ಕಾಡೆಲ್ಲ ಅಲೆದು, ಆಹಾರ ಹುಡುಕಿ ತಂದು ಹೆಣ್ಣು ಹಕ್ಕಿಗೆ ನೀಡಿ ಪೋಷಿಸುತ್ತದೆ. ಮೊಟ್ಟೆ ಇಟ್ಟು ಮರಿ ಮಾಡುವ ಹೆಣ್ಣು ಹಕ್ಕಿ, ಮರಿಗಳು ದೊಡ್ಡವಾದ ಮೇಲೆ ಗಂಡು ಹಕ್ಕಿಯ ಸಹಾಯದಿಂದ ಗೂಡನ್ನು ಒಡೆದು ಹೊರಬರುತ್ತದೆ.

ಈ ಸಂತಾನ ಸಮಯದಲ್ಲಿ ಗಂಡು ಹಕ್ಕಿ ಅಕಸ್ಮಾತ್ ಏನಾದರೂ ತೀರಿಕೊಂಡರೆ, ಆಹಾರವಿಲ್ಲದೇ ಹೆಣ್ಣು ಹಕ್ಕಿಯು ಗೂಡಿನಲ್ಲಿ ತನ್ನ ಮೊಟ್ಟೆ, ಮರಿಗಳ ಜೊತೆ ಸಾಯುತ್ತದೆ. ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯ ಕಾಡುಗಳಲ್ಲಿ ಕಂಡು ಬರುವ ಮಂಗಟ್ಟೆ ಹಕ್ಕಿಗಳ ಸಾವಿಗೆ ಹೆಚ್ಚಾಗಿ ಕಾರಣ ವಿದ್ಯುತ್ ತಂತಿಗಳು ಮತ್ತು ಅಕ್ರಮ ಬೇಟೆಗಾರರು. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣವಾದ ಆಣೆಕಟ್ಟುಗಳಿಂದಾಗಿ ಆನೆ ಮತ್ತು ಹುಲಿಗಳ ಸಂಚಾರ ಮಾರ್ಗ ಬಂದ್ ಆಗಿದೆ. ಉತ್ತರ ಕನ್ನಡದ ದಾಂಡೇಲಿ ಅಭಯರಾಣ್ಯದಿಂದ ಬೇಸಿಗೆ ಸಮಯಕ್ಕೆ ಆಹಾರ ಅರಸಿ ಅರಣ್ಯ ಪ್ರದೇಶಗಳತ್ತ ಬರುತ್ತಿದ್ದ ವನ್ಯ ಮೃಗಗಳಿಗೆ ಈಗ ಸಂಚಾರಕ್ಕೆ ದಾರಿಯೇ ಇಲ್ಲದಂತಾಗಿದೆ. ಪರಿಸ್ಥಿತಿಯ ಸಣ್ಣ ಕಲ್ಪನೆಯೂ ಇಲ್ಲದೇ ಕಾಡು ನಾಶಕ್ಕೆ ಹೊರಟಿರುವ ಬುದ್ಧಿಗೇಡಿ ಮನುಷ್ಯನು ಒಂದು ಮಂಗಟ್ಟೆ ಹಕ್ಕಿ ಸತ್ತರೆ ಏನಾಯಿತು? ಎಂದು ಹುಂಬತನದ ಪ್ರಶ್ನೆ ಎತ್ತುತ್ತಾನೆ. ಒಂದೊಂದು ಮರದ ಸಂತಾನ ಅಭಿವೃದ್ಧಿಯಲ್ಲಿ ಒಂದೊಂದು ಹಕ್ಕಿ ಮಹತ್ವದ ಪಾತ್ರ ವಹಿಸುತ್ತದೆ. ಒಂದು ಬಗೆಯ ಪಕ್ಷಿ ಸಂತತಿಯೇ ಕಾಡಲ್ಲಿ ಇಲ್ಲವಾದಲ್ಲಿ ಅವು ಬೀಜ ಪ್ರಸಾರ ಮಾಡುತ್ತಿದ್ದ ಮರಗಳು ವೃದ್ಧಿಸುವುದಿಲ್ಲ, ಇದ್ದವು ಕಾಲಾನಂತರ ಸಾಯುತ್ತವೆ. ಕಾಡು ನಾಶ ಆಗುವುದು ಹೀಗೆಯೇ. ಮನುಷ್ಯನ ದುಷ್ಕ್ರತ್ಯದಿಂದ ಒಂದಲ್ಲ ಹಲವು ಬಗೆಯ ಹಕ್ಕಿಗಳ ಸಂತತಿ ಈಗ ಕಾಣೆಯಾಗಿದೆ. ಕಾಡಿನಂಚಿನ ಹಳ್ಳಿಗಳಲ್ಲಿ ಎರಡು ಮರಗಳ ನಡುವೆ ಸಂಜೆ ಹೊತ್ತಿಗೆ ದೊಡ್ಡ ಬಲೆ ಕಟ್ಟಿ ಕಾಯುತ್ತಾರೆ. ಮಸಕು ಬೆಳಕಲ್ಲಿ ಬಲೆ ಕಾಣದಾಗಿ ಹಕ್ಕಿಗಳು ಬಂದು ಬಲೆಗೆ ಬಡಿದು ಸಿಕ್ಕಿ ಬೀಳುತ್ತವೆ. ಒಂದಲ್ಲ ಒಂದು ರೀತಿಯಲ್ಲಿ ಅರಣ್ಯ ನಾಶಕ್ಕೆ ಪಣ ತೊಟ್ಟಂತೆ ವರ್ತಿಸುತ್ತಿರುವ ಮನುಷ್ಯನಿಗೆ ಈಗಾಗಲೇ ಕಾಡಿನ ಮರಗಳು ನೀಡಿರುವ ಸಂದೇಶ ಅರ್ಥ ಆದಂತಿಲ್ಲ.

ಕಳೆದ ಬಾರಿ ಕೊಡಗು ಜಿಲ್ಲೆಯಲ್ಲಿ ಸುರಿದ ಮಳೆಗೆ ಗುಡ್ಡಗಳು ಕುಸಿದು, ಮನೆಗಳೇ ಜರಿದು ಹೋದವು. ಸಾವಿರಾರು ಜನ ನಿರ್ವಸತಿಕರಾದರು. ಕೊಡಗು ಜಿಲ್ಲೆಯಲ್ಲಿ ಇರುವುದು ಕಲ್ಲಿನ ಗುಡ್ಡಗಳಲ್ಲ, ಮಣ್ಣಿನ ಗುಡ್ಡಗಳು. ಅಲ್ಲಿ ಬೆಳೆಯುತ್ತಿದ್ದ ಬೃಹತ್ ಮರಗಳ ಬೇರುಗಳು ಮಣ್ಣು ಸರಿಯದಂತೆ ಬಿಗಿಯಾಗಿ ಹಿಡಿದಿರುತ್ತಿದ್ದವು. ಯಾವಾಗ ಮನುಷ್ಯ ದುರಾಸೆಯಿಂದ ಅಲ್ಲಿನ ಮರಗಳನ್ನೇ ಒಂದೊಂದಾಗಿ ಕತ್ತರಿಸಿ ಹಣ ಮಾಡಿಕೊಳ್ಳತೊಡಗಿದನೋ, ಪ್ರತೀಕಾರಕ್ಕೆ ಎಂಬಂತೆ ಕಾಯುತ್ತಿದ್ದ ಪ್ರಕೃತಿ ತನ್ನ ಆಟ ತೋರಿಸಿದೆ. ಈ ಬಾರಿ ಅಲ್ಲಿ ಮಳೆ ಕಡಿಮೆ ಆಗಿದೆ. ಹಿಂದೆಂದೂ ಕಾಣದ ಸುಡು ಬೇಸಿಗೆ ಈ ವರ್ಷ ಕಾಡಿದೆ. ಕಾಡು ನಾಶವಾದ ಪರಿಣಾಮವಾಗಿ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗದೇ ಕಾವೇರಿ ಕೃಶವಾಗಿಯೇ ಹರಿಯುತ್ತಿದ್ದಾಳೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಜೀವದಾಯಿನಿ ಎನಿಸಿಕೊಂಡ ಕಾವೇರಿಯೇ ಬತ್ತುತ್ತಾ ಇದ್ದರೂ ನಮ್ಮವರು ಇನ್ನೂ ಎಚ್ಚೆತ್ತುಕೊಂಡಿಲ್ಲ.
ಕೋಲಾರ ಮತ್ತಿತರ ಭಾಗದ ಕುಡಿಯುವ ನೀರಿನ ಎತ್ತಿನ ಹೊಳೆ ಯೋಜನೆಗಾಗಿ ಈಗಾಗಲೇ ಹದಿನೈದು ಲಕ್ಷ ಮರಗಳನ್ನು ಕಡಿಯಲಾಗಿದೆ. ಗಾಯದ ಮೇಲೆ ಬರೆ ಎಳೆಯುವಂತೆ ಈಗ 177 ಹೆಕ್ಟೇರ್‍ನಷ್ಟು ವಿಶಾಲ ಅರಣ್ಯ ಭೂಮಿ ಕಡಿದು ಹಾಕಲು ದುಷ್ಟ ಸಂಚು ರೂಪಿಸಲಾಗುತ್ತಿದೆ. ಬೆಂಗಳೂರಿಗೆ ಶರಾವತಿ ನೀರು ತರುವ ಇನ್ನೊಂದು ಸಂಚಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಹೀಗೆ ಹತ್ತು ಹಲವು ಜಲ ವಿದ್ಯುತ್ ಯೋಜನೆಗಳು ಮತ್ತು ಆಣೆಕಟ್ಟುಗಳಿಂದಾಗಿ ಮಲೆನಾಡು ಬರಡಾಗಿದೆ. ಅಲ್ಲಿ ಮಳೆ ಕಡಿಮೆ ಆಗುತ್ತಲೇ ಇದೆ ಎಂಬ ವಾಸ್ತವದ ಅರಿವಿನ ನಡುವೆಯೂ, ಮತ್ತೆ ಅಲ್ಲಿ ಮರಗಳಿಗೆ ಕೊಡಲಿ ಹಾಕುವ ದುರಾಸೆ ನಿರಂತರ ನಡೆದಿದೆ.

ಬೆಂಗಳೂರು ಆಗಲಿ ಅಥವಾ ಮತ್ತೊಂದು ಊರು ಆಗಲಿ ನೀರು ಮತ್ತು ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬಿ ಆಗುವಂತೆ ಮಾಡುವುದನ್ನು ಬಿಟ್ಟು ಕಾಡು ಕಡಿಯುವ ಹಿಂದಿನ ಹುನ್ನಾರಕ್ಕೆ ಬೇರೆಯದೇ ಕಾರಣಗಳಿವೆ. ಮರಗಳು ಮಾತಾಡುವುದಿಲ್ಲ ನಿಜ. ಆದರೆ ಈಗಾಗಲೆ ಅವು ತಮ್ಮ ಸಂದೇಶ ರವಾನಿಸಿವೆ. ಮಾನವನ ಅವಸಾನಕ್ಕೆ ಮುನ್ನುಡಿ ಬರೆಯಲಾಗಿದೆ ಎಂದು ಕಾಡು ಕೂಗಿ ಹೇಳುತ್ತಿದ್ದರೂ ಕೊಡಲಿ ಹಿಡಿದ ಮನುಷ್ಯ ಅದನ್ನು ಅರ್ಥ ಮಾಡಿಕೊಳ್ಳುವ ಗೋಜಿಗೇ ಹೋಗುತ್ತಿಲ್ಲ. ಕೃಷ್ಣಾ ನದಿ ಬಯಲಿನ ಅಥಣಿ ತಾಲ್ಲೂಕಿನ ಗ್ರಾಮಗಳಲ್ಲಿ ಈ ಮಳೆಗಾಲದಲ್ಲೂ ಟ್ಯಾಂಕರುಗಳಿಂದ ನೀರು ಸರಬರಾಜು ಆಗುತ್ತಿದೆ ಎನ್ನುವುದನ್ನು ಕೂಡ ನಮಗೆ ಅವಮಾನದ ಸಂಗತಿ ಆಗಿ ತೋರುತ್ತಿಲ್ಲ. ಮೂಕ ಮರಗಳ ಮರ್ಮರದಲ್ಲಿ ಇರುವ ನಿಟ್ಟುಸಿರು ನಮಗೆ ಕೇಳಿಸುವ ತನಕ ನಾವು ಉದ್ಧಾರ ಆಗುವುದಿಲ್ಲ ಎಂಬುದು ನೆನಪಿರಲಿ. ಇದಕ್ಕಾಗಿ ಬೆಳಗಾವಿ, ಧಾರವಾಡ ಉತ್ತರ ಕನ್ನಡ ಜಿಲ್ಲೆಯ ಜನರು ಕಾಡಿನ ರಕ್ಷಣೆಗೆ ಹೋರಾಟ ಹಮ್ಮಿಕೊಳ್ಳಬೇಕು. ಮುಂದಿನ ಪೀಳಿಗೆಯ ಹಿತದ ದೃಷ್ಟಿಯಿಂದ ಇದು ಅನಿವಾರ್ಯ.  -ಎ.ಬಿ.ಧಾರವಾಡಕರ

LEAVE A REPLY

Please enter your comment!
Please enter your name here