ರಮೇಶ ಜಾರಕಿಹೊಳಿ, ಕುಮಟಳ್ಳಿ ಹಾಗೂ ಆರ್. ಶಂಕರ ಅನರ್ಹ

0
110

ಬೆಂಗಳೂರು, ಜು. 25- ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅಥಣಿ ಶಾಸಕ ಮಹೇಶ ಕುಮಠಳ್ಳಿ ಹಾಗೂ ರಾಣೆಬೆನ್ನೂರು ಶಾಸಕ ಆರ್. ಶಂಕರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ವಿಧಾನಸಭೆ ಸಭಾಪತಿ ರಮೇಶಕುಮಾರ ತೀರ್ಪು ನೀಡಿದ್ದಾರೆ.

ಗುರುವಾರ ಸಂಜೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಭಾಧ್ಯಕ್ಷ ರಮೇಶಕುಮಾರ ತಮ್ಮ ತೀರ್ಪು ಪ್ರಕಟಿಸಿದರು. 2023 ರ ಮೇ 23 ರವರೆಗೆ ಈ ಮೂವರು ಶಾಸಕರನ್ನು ಅನರ್ಹಗೊಳಿಸಲಾಗಿದೆ. ಅಂದರೆ ಈ ವಿಧಾನಸಭೆಯ ಸಂಪೂರ್ಣ ಅವಧಿಯವರೆಗೆ ಶಾಸಕರು ಅನರ್ಹಗೊಂಡಿದ್ದು, ಅಲ್ಲಿಯವರೆಗೆ ಅವರು ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮೈತ್ರಿ ಸರಕಾರದ ವಿರುದ್ಧ ಬಂಡೆದ್ದು ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಮುಂಬೈ ಸೇರಿಕೊಂಡಿದ್ದ ಶಾಸಕರನ್ನು ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಭಾಪತಿ ಅವರಿಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಸ್ಪೀಕರ್ ಕೊನೆಗೂ ಮೂವರು ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ. ಸರಕಾರ ಪತನಗೊಳಿಸಲು ಈ ಬಂಡಾಯ ಶಾಸಕರು ಯಶಸ್ವಿಯಾದರೂ ಈಗ ಅನರ್ಹತೆಯ ಶಿಕ್ಷೆ ಅನುಭವಿಸಬೇಕಾಗಿದೆ.

ಸುಪ್ರೀಮ ಕೋರ್ಟ ಮೊರೆಗೆ ನಿರ್ಧಾರ:

ಸಭಾಧ್ಯಕ್ಷ ರಮೇಶಕುಮಾರ ಅವರ ಆದೇಶದ ಬೆನ್ನಲ್ಲೇ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ ಹಾಗೂ ಆರ್. ಶಂಕರ್ ಅವರು ತೀರ್ಪಿನ ವಿರುದ್ಧ ಸುಪ್ರೀಮ ಕೋರ್ಟ್ ಮೊರೆ ಹೋಗಲು ತೀರ್ಮಾನ ಮಾಡಿದ್ದಾಗಿ ತಿಳಿದು ಬಂದಿದೆ. ಬಹುತೇಕ ಶುಕ್ರವಾರ ಬೆಳಗ್ಗೆಯೇ ಈ ಕುರಿತು ಸುಪ್ರೀಮ ಕೋರ್ಟಿನಲ್ಲಿ ಅರ್ಜಿ ಸಲ್ಲಿಕೆಯಾಗಬಹುದಾಗಿದೆ.

LEAVE A REPLY

Please enter your comment!
Please enter your name here