ಸಂಪಾದಕೀಯ

ದನಿ ಇಲ್ಲದವರ ದನಿ

ಹಿಂದಿಯಲ್ಲಿ ಬಿತ್ತರವಾಗುವ ಎನ್‍ಡಿಟಿವಿಯ ‘ಪ್ರೈಮ್ ಟೈಮ್’ ಕಾರ್ಯಕ್ರಮ ಉತ್ತರ ಭಾರತದ ಮನೆ ಮನೆಗಳಲ್ಲಿ ಜನಪ್ರಿಯ. ಅದನ್ನು ನಡೆಸಿಕೊಡುತ್ತಾ ಬಂದವರು ರವೀಶ ಕುಮಾರ. ಅವರಿಗೀಗ ಏಶಿಯಾದ ಪ್ರತಿಷ್ಠಿತ ಮ್ಯಾಗ್ಸೆಸ್ಸೆ ಪ್ರಶಸ್ತಿ ಬಂದಿದೆ. ಕೆಲವೇ ದಿನಗಳ ಹಿಂದಿ ಇಂಗ್ಲೀಷ್‍ನಲ್ಲಿ ಸುದ್ದಿ ಬಿತ್ತರಿಸುವ ಎನ್‍ಡಿಟಿವಿಗೆ ಅತ್ಯಂತ ವಿಶ್ವಾಸಾರ್ಹ ವಾಹಿನಿ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿತ್ತು. ‘ದನಿ ಇಲ್ಲದವರ ದನಿ’ ಆಗಿರುವ ಕಾರಣಕ್ಕೆ ರವೀಶ ಕುಮಾರಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮ್ಯಾಗ್ಸೆಸ್ಸೆ ಪ್ರಶಸ್ತಿ ಪ್ರಕಟಿಸಿದ ಸಂಸ್ಥೆ ತಿಳಿಸಿದೆ. ಇದಲ್ಲದೇ ಪತ್ರಿಕೋದ್ಯಮದ ನೈತಿಕತೆ ಎತ್ತಿ ಹಿಡಿದಿರುವ ಅವರು, ಅತ್ಯಂತ ಕಠಿಣ ಮತ್ತು ವಿಷಮ ಪರಿಸ್ಥಿತಿಯಲ್ಲೂ ಕಂಗೆಡದೇ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದೂ ತಿಳಿಸಿದೆ.

ಮೂಲತಃ ಬಿಹಾರದ ಸಣ್ಣ ಊರಿನವರಾದ ರವೀಶ ಕುಮಾರ ಅವರು ದೆಹಲಿಯಲ್ಲಿ ಪದವಿ ಅಭ್ಯಾಸ ಮಾಡಿದವರಾದರೂ ಇಂಗ್ಲೀಷ ವ್ಯಾಮೋಹಕ್ಕೆ ಬೀಳಲಿಲ್ಲ. 1996ರಲ್ಲಿ ಎನ್‍ಡಿಟಿವಿ ಹಿಂದಿ ವಿಭಾಗದಲ್ಲಿ ವರದಿಗಾರರಾಗಿ ಸೇರಿಕೊಂಡ ಅವರು ಈಗಲೂ ಅದೇ ವಾಹಿನಿಯಲ್ಲಿ ಮುಂದುವರಿದಿದ್ದಾರೆ. ರಾತ್ರಿ ಒಂಭತ್ತು ಗಂಟೆಗೆ ಪ್ರಸಾರ ಆಗುವ ‘ಪ್ರೈಮ್ ಟೈಮ್’ ಅವರೇ ನಡೆಸಿ ಕೊಡುವ ಕಾರ್ಯಕ್ರಮ. ಅದರಲ್ಲಿ ಅವರು ಸದಾ ಅನ್ಯಾಯಕ್ಕೆ ಒಳಗಾದವರ, ದನಿ ಇಲ್ಲದವರ, ದಮನಿತರ ಪರವಾಗಿಯೇ ನಿಲ್ಲುತ್ತ ಬಂದಿದ್ದಾರೆ. ಸರಳವಾದ ಹಿಂದಿಯಲ್ಲಿ ಅನಕ್ಷರಸ್ಥ ಹಿಂದಿ ಮಾತಾಡುವ ಸಾಮಾನ್ಯ ಜನರಿಗೂ ಅರ್ಥ ಆಗುವ ರೀತಿಯಲ್ಲಿ ವಿವರ ನೀಡುವ ಕಾರಣಕ್ಕೇ ಅವರ ಕಾರ್ಯಕ್ರಮ ಹೆಚ್ಚು ಜನಪ್ರಿಯ.

ಎಂದೂ ಅಗ್ಗದ ತಂತ್ರಕ್ಕೆ ಮೊರೆ ಹೋಗದ, ಎಂಥ ಉದ್ವಿಗ್ನಗೊಳಿಸಬಹುದಾದ ವಿಷಯವನ್ನೂ ಅನುದ್ವಿಗ್ನವಾಗಿ ಹೇಳಬಲ್ಲ ಅವರು ವಾಸ್ತವಿಕ ನೆಲೆಗಟ್ಟಿನ ಮೇಲಷ್ಟೇ ಸತ್ಯಗಳನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಇದನ್ನು ಸಹಿಸದ ಅಧಿಕಾರಸ್ಥರು ಮತ್ತು ಅವರ ಚೇಲಾಗಳು ಹಾಗೂ ಸುಳ್ಳನ್ನು ಸತ್ಯವೆಂದು ಬಿಂಬಿಸಲು ಪಣ ತೊಟ್ಟ ಪಿಶಾಚಿಗಣ ಇವರಿಗೆ ಕೊಟ್ಟ ತೊಂದರೆ ಅಷ್ಟಿಷ್ಟಲ್ಲ. ಕೊಲೆ ಬೆದರಿಕೆ, ಕುಟುಂಬದ ಸ್ತ್ರೀ ಸದಸ್ಯರ ಮೇಲೂ ಹಲ್ಲೆ ಮಾಡುವ ಸೂಚನೆಗಳನ್ನು ಹಗಲಿರುಳು ನೀಡುತ್ತಾ ಇದ್ದುದಲ್ಲದೇ ಕುಟುಂಬ ಸಮೇತ ಸಮಾರಂಭಕ್ಕೆ ತೆರಳಿದ್ದ ಇವರನ್ನು ತಡೆದು ನೇರವಾಗಿಯೇ ಎಲ್ಲರ ಸಮ್ಮುಖದಲ್ಲಿಯೇ ಕೊಲ್ಲುವ ಬೆದರಿಕೆ ಹಾಕಿದ ಘಟನೆಗಳೂ ನಡೆದಿವೆ. ಅಂಥ ಸಂದರ್ಭಗಳಲ್ಲಿ ಕೂಡ ಅವರು ಧೃತಿಗೆಡದೇ, ಕಂಗಾಲಾಗದೇ, ಸ್ವಯಂ ಅನುಕಂಪ ಗಿಟ್ಟಿಸುವ ತಂತ್ರಕ್ಕೆ ಮುಂದಾಗದೇ, ತಮ್ಮ ಎಂದಿನ ಗಂಭೀರ ಶೈಲಿಯಲ್ಲಿಯೇ ಜನರ ಮುಂದೆ ಸತ್ಯ ತೆರೆದಿಡುವ ಕೆಲಸ ಮಾಡುತ್ತ ಬಂದಿದ್ದಾರೆ.

ಬಹಳ ಮೊನಚಾದ ಗಂಭೀರ ವ್ಯಂಗ್ಯ ಇವರ ಪ್ರಮುಖ ಅಸ್ತ್ರ. ಕಳೆದ ಸಂಸತ್ ಚುನಾವಣೆ ಸಮಯದಲ್ಲಿ ಹಿಂದಿ ನಟನೊಬ್ಬನಿಗೆ ಪ್ರಧಾನಿ ನೀಡಿದ ಸಂದರ್ಶನ ಮತ್ತು ಅದರಲ್ಲಿ ಪ್ರಸ್ಥಾಪಿಸಲಾದ ಕೆಲಸಕ್ಕೆ ಬಾರದ, ಆದರೆ ಪ್ರಧಾನಿಯನ್ನು ಅಟ್ಟಕ್ಕೇರಿಸುವ ಅಗ್ಗದ ಪ್ರಯತ್ನವನ್ನು ಅವರು ಜಾಲಾಡಿದ್ದರು. ಪ್ರಧಾನಿ ರಾಜಕೀಯವಲ್ಲದ ಸಂದರ್ಶನ ನೀಡುವುದಾದರೆ, ತಾವೇಕೆ ತಮ್ಮ ಕಾರ್ಯಕ್ರಮ ಗಂಭೀರಗೊಳಿಸಬೇಕು, ನಾವು ಮಾವಿನ ಹಣ್ಣಿನ ಬಗ್ಗೆ ಮಾತಾಡೋಣ ಎಂದು ಅಗ್ಗದ ಪ್ರಚಾರ ಗಿಟ್ಟಿಸಲು ಮುಂದಾಗಿದ್ದ ಪ್ರಧಾನಿಯನ್ನು ರವೀಶಕುಮಾರ ಗೇಲಿ ಮಾಡಿದ್ದರು.

ಇತ್ತೀಚೆಗೆ ಮಂಡನೆಯಾದ ಬಜೆಟ್ ಕುರಿತು ಅದರಲ್ಲಿ ದಿಕ್ಕುಗೆಡಿಸುವ ಅರ್ಧ ಸತ್ಯಗಳನ್ನು ಮಂಡಿಸಿದ ಬಗ್ಗೆ ಅಂಕಿ-ಅಂಶಗಳನ್ನು ಇಟ್ಟುಕೊಂಡೇ ಮಾತಾಡಿದ ಅವರು, ಕಳೆದ ಐದು ವರ್ಷದಲ್ಲಿ ಒಂದು ಟ್ರಿಲಿಯನ್‍ನಷ್ಟು ಹೆಚ್ಚು ವಹಿವಾಟು ನಡೆದಿದೆ ಎಂದು ಹೇಳಿಕೆ ನೀಡಿದ ಹಣಕಾಸು ಸಚಿವರ ಮಾತು ಎಷ್ಟು ಅರ್ಥಹೀನ ಎಂದು ಬಣ್ಣಿಸಿದರು. ಸ್ವಾತಂತ್ರ್ಯ ಬಂದಾಗ ಕೇವಲ ಕೆಲವೇ ಲಕ್ಷ ಕೋಟಿಗಳಲ್ಲಿದ್ದ ಇಡೀ ದೇಶದ ಆರ್ಥಿಕ ಗಾತ್ರವು ಕಾಲ ಕಳೆದಂತೆ ಆದ ಬದಲಾವಣೆಗೆ ಅನುಗುಣವಾಗಿ ಹಿಗ್ಗಿರುವುದು ಸಹಜ. ಅದನ್ನು ತಮ್ಮ ಸರ್ಕಾರದ ಸಾಧನೆ ಎಂದು ಕರೆದುಕೊಳ್ಳುವುದು ಎಷ್ಟು ಮೂರ್ಖ ವಿಚಾರ ಎಂದು ಸಾಧ್ಯಂತವಾಗಿ ವಿವರಿಸಿದರು. ಸೂಟ್‍ಕೇಸ್‍ನಲ್ಲಿ ಬಜೆಟ್ ಪ್ರತಿ ತರುವ ಬದಲು ಕೆಂಪು ಬಟ್ಟೆಯಲ್ಲಿ ಪ್ರತಿ ಸುತ್ತಿ ತಂದದ್ದೇ ಬಹುದೊಡ್ಡ ಹೆಮ್ಮೆ ಎಂದು ಬಿಜೆಪಿ ಡಂಗೂರ ಸಾರುತ್ತಿದ್ದಾಗ, ಬಜೆಟ್ ಪ್ರತಿಯನ್ನು ಯಾವುದರಲ್ಲಿ ತರುತ್ತೀರಿ ಎನ್ನುವುದು ಮುಖ್ಯವಲ್ಲ, ಬಜೆಟ್‍ನಲ್ಲಿ ಏನಿದೆ ಎನ್ನುವುದು ಮುಖ್ಯ ಎಂದು ಕುಟುಕಿದ್ದರು.

ಇಡೀ ದೃಶ್ಯ ಮಾಧ್ಯಮದಲ್ಲಿ ಅವಸರದ ಅಡುಗೆ ತಯಾರಿಸಿ ಅರೆಬೆಂದ ಸಂಗತಿಗಳನ್ನು ಉಣಬಡಿಸುವ ಪರಿಪಾಠ ಜೋರಾಗಿದೆ. ಅದರಲ್ಲೂ ಕೂಗುಮಾರಿಗಳು, ಬಾಲಬಡಕರು ಹಾಗೂ ಬಾಯಿಬಡಕರ ಜೋರು ಗದ್ದಲದಲ್ಲಿ ಯಾವ ವೀಕ್ಷಕನೂ ಏನನ್ನೂ ತಿಳಿಯಲಾಗದ, ಕಲಿಯಲಾಗದ ಸ್ಥಿತಿ ನಿರ್ಮಾಣ ಆಗಿದೆ. ಇಂಥ ಎಲ್ಲ ವಾಹಿನಿಗಳ ವೀಕ್ಷಕರ ಸಂಖ್ಯೆ ಗಣನೀಯವಾಗಿ ಇಳಿದಿದ್ದು, ರವೀಶಕುಮಾರ ಅವರು ಕೆಲಸ ಮಾಡುವ ವಾಹಿನಿಯ ವೀಕ್ಷಕರ ಸಂಖ್ಯೆ ಹೆಚ್ಚಿರುವುದು, ಜನರ ಒಲವು ಎತ್ತ ಕಡೆ ಇದೆ ಎಂಬುದನ್ನು ಸೂಚಿಸಿದೆ.

ಕಳೆದ ಕೆಲವು ವರ್ಷಗಳಿಂದ ವಾಹಿನಿಗಳೆಂದರೆ ಅಧಿಕಾರಸ್ಥರ ಹಿಂದೆ ಮುಂದೆ ಬಾಲ ಅಲ್ಲಾಡಿಸಿಕೊಂಡು ಸುತ್ತುವ ಸಾಕು ನಾಯಿಗಳಂತೆ ಎಂಬುದು ಈಗಾಗಲೇ ಬಹುಪಾಲು ವೀಕ್ಷಕರಿಗೆ ಗೊತ್ತಾಗಿದೆ. ವಾಹಿನಿಗಳ ಮಾಲೀಕರೆಲ್ಲ ಹೆಚ್ಚಾಗಿ ರಾಜಕಾರಣಿಗಳೋ, ಉದ್ಯಮಿಗಳೋ ಆಗಿರುವುದರಿಂದ ತನ್ನ ವಿರುದ್ಧ ಯಾರೂ ದನಿ ಎತ್ತದಂತೆ ಎಚ್ಚರ ವಹಿಸುತ್ತಿರುವ ಈಗಿನ ಸರ್ಕಾರದ ದುರಂತ ಸ್ಥಿತಿಯ ನಡುವೆ ಕೂಡ ರವೀಶ ಕುಮಾರ ಅಂಥವರು ಇನ್ನೂ ಉಳಿದುಕೊಂಡಿದ್ದಾರೆ ಎಂಬುದೇ ಈ ನಾಡಿನ ಪುಣ್ಯ.

ಸರ್ಕಾರದ ವಿರುದ್ಧ ಸತ್ಯ ಆಧರಿಸಿದ ಟೀಕೆ ಮಾಡಿದ ಎಷ್ಟೋ ಜನ ಕೆಲಸ ಕಳೆದುಕೊಂಡು ಮನೆ ಸೇರಿದ್ದಾರೆ. ಖುದ್ದು ಎನ್‍ಡಿಟಿವಿಯನ್ನೇ ಖಳ ಆಗಿಸಲು ಸರ್ಕಾರಿ ಪ್ರೇರಿತ ದಾಳಿಗಳು ನಡೆದು, ಅದರ ಮುಖ್ಯಸ್ಥ ಪ್ರಣೋಯ ರಾಯ್ ಅವರ ಬಾಯಿ ಮುಚ್ಚಿಸುವ ಯತ್ನ ಕೂಡ ನಡೆಯಿತು. ಅಂಥದ್ದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಮತ್ತು ಏಶಿಯಾದ ಪ್ರತಿಷ್ಠಿತ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಈ ವಾಹಿನಿಯ ಸಿಬ್ಬಂದಿ ಪಡೆದಿರುವುದು ಅವರೆಲ್ಲರ ಗಟ್ಟಿತನ ಸೂಚಿಸುತ್ತದೆ. ಈ ಹಿಂದೆ ಇದೇ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಪತ್ರಕರ್ತ ಎಂದರೆ ಪಿ. ಸಾಯಿನಾಥ. ಬರದ ನಡುವೆಯೂ ನಮ್ಮ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಜನರನ್ನು ಹೇಗೆ ಹುರಿದು ತಿನ್ನುತ್ತಾರೆ ಎಂದು ವಿಸ್ತøತ ಅಧ್ಯಯನ ನಡೆಸಿ ‘ಎವರಿಬಡಿ ಲೈಕ್ಸ ಎ ಗುಡ್ ಡ್ರೌಟ್’ ಎಂಬ ಪುಸ್ತಕ ಬರೆದಿದ್ದರು. ರವೀಶ ಕುಮಾರ ಈ ಪ್ರಶಸ್ತಿ ಪಡೆದ ಎರಡನೇ ಪತ್ರಕರ್ತ. ಅವರಿಗೆ ನಮ್ಮ ಅಭಿನಂದನೆಗಳು.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: