ಬಾಯಿ ಕಳೆದುಕೊಂಡವರು

0
71

‘ದೌರ್ಜನ್ಯ ನಡೆಸುವವನಿಗಿಂತ ಅದನ್ನು ಸಹಿಸಿಕೊಂಡು ಸುಮ್ಮನಿರುವವರು ದೊಡ್ಡ ತಪ್ಪು ಮಾಡುತ್ತಾ ಇದ್ದಾರೆ’ ಎಂದು ಕವಿ ಗೋಪಾಲ ಕೃಷ್ಣ ಅಡಿಗರು ಆಗಾಗ್ಗೆ ಹೇಳುತ್ತಿದ್ದರು. ಪ್ರತಿಭಟನೆ ನಮ್ಮ ದೊಡ್ಡ ಅಸ್ತ್ರ. ಅದು ಹಿಂಸಾತ್ಮಕ ಆಗಿರಬೇಕು ಎಂದೇನೂ ಇಲ್ಲ. ಅದನ್ನು ಗಾಂಧೀಜಿ ತೋರಿಸಿ ಕೊಟ್ಟಿದ್ದಾರೆ. ಅಹಿಂಸೆ ಮೂಲಕ ಗೆಲುವು ಕೂಡ ಸಾಧ್ಯ ಎಂದೂ ಅವರು ಸಾಬೀತು ಮಾಡಿದ್ದಾರೆ. ಸ್ವಾತಂತ್ರ್ಯ ಸಿಕ್ಕಿದ ನಂತರವೂ ನಮ್ಮ ದೇಶ ಹಲವಾರು ಅತ್ಯಂತ ಯಶಸ್ವಿ ಪ್ರತಿಭಟನಾತ್ಮಕ ಹೋರಾಟಗಳನ್ನು ಕಂಡಿದೆ. ಜಯಪ್ರಕಾಶ ನಾರಾಯಣ ಹುಟ್ಟು ಹಾಕಿದ ಪ್ರತಿಭಟನೆ ಇಂಥದ್ದು. ಅದರಿಂದಾಗಿಯೇ ತುರ್ತು ಸ್ಥಿತಿಯಂಥ ಕರಾಳತೆ ವಿರುದ್ಧ ಸೆಣಸಿ ಗೆಲುವು ಸಾಧಿಸಲು ಸಾಧ್ಯ ಆಯಿತು.

ಸಾಮಾನ್ಯವಾಗಿ ಸರ್ಕಾರಗಳು ಪ್ರತಿಭಟನೆಗಳ ವಿರುದ್ಧ ಕೆಲವು ಪ್ರತಿಬಂಧಗಳನ್ನು ವಿಧಿಸುತ್ತವೆ. ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು, ದುಷ್ಟ ಶಕ್ತಿಗಳು ಪ್ರತಿಭಟನೆ ಸಂದರ್ಭದ ಲಾಭ ಪಡೆದು ಆಸ್ತಿಪಾಸ್ತಿಗೆ ಹಾನಿ ಮಾಡಬಾರದು ಎಂಬುದು ಇದರ ಉದ್ದೇಶ. ಇದಲ್ಲದೇ ಪ್ರತಿಭಟನೆ ನಡೆಸುವ ವ್ಯಕ್ತಿಗಳನ್ನೇ ಬಗ್ಗುಬಡಿಯುವ ಕೆಲಸವನ್ನೂ ಸದ್ದಿಲ್ಲದೇ ಸರ್ಕಾರಗಳು ಮಾಡುತ್ತವೆ. ಪ್ರತಿಭಟನೆ ನಿರತರನ್ನು ಬಂಧಿಸುವುದು, ಅವರು ವಿಚಾರಣೆಗೆ ಪದೇ ಪದೇ ಹಾಜರಾಗುವಂತೆ ಮಾಡಿ ಹೈರಾಣಾಗಿಸುವುದು ಇಂಥ ತಂತ್ರ. ಆದರೆ ಸರ್ಕಾರಗಳು ಇಡೀ ಆಂದೋಲನವೊಂದನ್ನು ಧಿಕ್ಕರಿಸಿ ತಾನು ಹಾಕಿಕೊಂಡ ಯೋಜನೆಯಂತೆ ಮೊದಲ ಬಾರಿ ನಡೆದಿದ್ದು ನರ್ಮದಾ ಕಣಿವೆ ಯೋಜನೆ ಜಾರಿ ವಿಚಾರದಲ್ಲಿ. ಆಣೆಕಟ್ಟು ನಿರ್ಮಾಣದಿಂದ ಹಾನಿಗೀಡಾದ ಜನ ಕುತ್ತಿಗೆ ಮಟ್ಟ ನೀರಲ್ಲಿ ನಿಂತು ದಿನಗಟ್ಟಲೇ ಪ್ರತಿಭಟಿಸಿದರೂ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಲಿಲ್ಲ.

ಅದಾದ ನಂತರ ಬಹುದೊಡ್ಡ ಆಂದೋಲನ ನಡೆದಿದ್ದು ನಿರ್ಭಯಾ ಪ್ರಕರಣದಲ್ಲಿ. ಇಡೀ ದೇಶವೇ ಒಕ್ಕೊರಲಿನಿಂದ ಈ ದುರ್ಘಟನೆಯನ್ನು ಪ್ರತಿಭಟಿಸಿದ ಪರಿಣಾಮ ಸರ್ಕಾರಗಳು ಎಚ್ಚೆತ್ತು ಕ್ರಮ ಕೈಗೊಳ್ಳಲು ಸಾಧ್ಯ ಆಯಿತು. ಸಣ್ಣ ಸಣ್ಣ ಪಟ್ಟಣಗಳೂ ಸೇರಿದಂತೆ ದೇಶಾದ್ಯಂತ ತರುಣ, ತರುಣಿಯರು ಬೀದಿಗಿಳಿದು ಒತ್ತಾಯ ಹೇರಿದ ಪರಿಣಾಮ ‘ನಿರ್ಭಯಾ’ ನಿಧಿ ಸ್ಥಾಪನೆಯಾಯಿತು. ಆದರೆ ಆ ನಿಧಿಯಿಂದ ಇದು ವರೆಗೂ ಅತ್ಯಾಚಾರಕ್ಕೆ ಒಳಗಾದ ಯಾರಿಗೂ ಸಹಾಯವೇ ದೊರೆತಿಲ್ಲ ಎನ್ನುವುದು ಬೇರೆ ಸಂಗತಿ. ಇಷ್ಟೆಲ್ಲ ನಡೆದ ಈ ನೆಲದಲ್ಲಿ ಮತ್ತೆ ಯಾವುದೇ ಸರ್ವವ್ಯಾಪಿ ಆಂದೋಲನ ನಡೆದಿಲ್ಲ ಎಂಬುದಷ್ಟೇ ಇಲ್ಲಿ ಮುಖ್ಯ.

ನಿರ್ಭಯಾ ಪ್ರಕರಣಕ್ಕಿಂತ ಭೀಕರ ದುಷ್ಕ್ರತ್ಯವೊಂದು ಉತ್ತರ ಪ್ರದೇಶದ ಉನ್ನಾವ್‍ನಲ್ಲಿ ನಡೆದಿದೆ. ಅತ್ಯಾಚಾರ ಎಸಗಿದವನು ಸ್ಥಳೀಯ ಶಾಸಕ. ದೂರು ನೀಡಲು ಹೋದ ಸಂತ್ರಸ್ತೆಯ ತಂದೆಯನ್ನೇ ಪೊಲೀಸರು ಸುಳ್ಳು ಮೊಕದ್ದಮೆಯಲ್ಲಿ ಬಂಧಿಸಿ, ಠಾಣೆಯಲ್ಲೇ ಬಡಿದು ಕೊಂದರು. ಸಂತ್ರಸ್ಥೆಯ ಪರ ಹೋರಾಟಕ್ಕೆ ಇಳಿದ ಆಕೆಯ ಚಿಕ್ಕಪ್ಪನನ್ನು ಖೋಟಾ ಕೇಸಿನಲ್ಲಿ ಬಂಧಿಸಿ ಇಡಲಾಗಿದೆ. ಇದಲ್ಲದೇ ಸಂತ್ರಸ್ತೆಯ ಬದುಕನ್ನು ನಿತ್ಯ ನರಕ ಆಗಿಸುವ ನಿರಂತರ ಯತ್ನ ಶಾಸಕನ ಕಡೆಯಿಂದ ನಡೆಯುತ್ತಿದೆ. ದೂರು ವಾಪಸು ಪಡೆಯದೇ ಇದ್ದಲ್ಲಿ ಕೊಲ್ಲುವ ಬೆದರಿಕೆ ಹಾಕಲಾಗಿದೆ. ಸಿಬಿಐ ಈ ಪ್ರಕರಣದ ಕೇಸು ದಾಖಲಿಸಿಕೊಂಡು ಆರೋಪ ಪಟ್ಟಿ ಸಲ್ಲಿಸಿದೆ. ಆದರೆ ಸಿಬಿಐ ಕೋರ್ಟಿನಲ್ಲಿ ಕಳೆದ ಕೆಲವು ತಿಂಗಳಿಂದ ನ್ಯಾಯಾಧೀಶರೇ ಇಲ್ಲ. ಈ ವಿಚಾರದಲ್ಲಿ ಹೈಕೋರ್ಟ ಪ್ರಶ್ನಿಸಿದಾಗ, ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ ಹೊರತು, ಅಲ್ಲಿ ನ್ಯಾಯಾಧೀಶರೇ ಇಲ್ಲ ಎನ್ನುವ ಸಂಗತಿ ಹೈಕೋರ್ಟ ಗಮನಕ್ಕೇ ತಂದಿಲ್ಲ. ಸರ್ಕಾರಕ್ಕೆ ಸಂತ್ರಸ್ತೆ ಎಷ್ಟೋ ಪತ್ರ ಬರೆದರೂ ಪರಿಣಾಮ ಶೂನ್ಯ. ಕೊನೆಗೆ ಸುಪ್ರೀಮ ಕೋರ್ಟಿಗೆ ಸಂತ್ರಸ್ತೆ ಕಾಗದ ಬರೆದರೆ, ಅದನ್ನು ಹಲವಾರು ದಿನಗಳಾದರೂ ಭಾರತದ ಮುಖ್ಯ ನ್ಯಾಯಾಧೀಶರ ಗಮನಕ್ಕೆ ತಂದಿಲ್ಲ. ಇಷ್ಟಕ್ಕೂ ಅತ್ಯಾಚಾರಕ್ಕೆ ಒಳಗಾದವಳು ಅಪ್ರಾಪ್ತ ವಯಸ್ಸಿನ ಬಾಲಕಿ. ಅತ್ಯಾಚಾರ ಎಸಗಿದವನು ಆಳುವ ಪಕ್ಷದ ಶಾಸಕ. ಕಳೆದ ವಾರ ಸಂತ್ರಸ್ತೆ ತನ್ನ ಕುಟುಂಬದವರೊಡನೆ ಕಾರಿನಲ್ಲಿ ತೆರಳುತ್ತಾ ಇದ್ದಾಗ, ಕಾರಿಗೆ ಲಾರಿ ಡಿಕ್ಕಿ ಹೊಡೆಸಿ ಕೊಲ್ಲುವ ಯತ್ನ ಮಾಡಲಾಗಿದೆ. ಕಾರಿನಲ್ಲಿ ಇದ್ದ ವಕೀಲ, ಇತರ ಇಬ್ಬರು ಸತ್ತಿದ್ದು ಸಂತ್ರಸ್ತೆ ತೀವ್ರ ಗಾಯಗೊಂಡಿದ್ದಾಳೆ.

ರಾಜಕೀಯ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ ತನ್ನ ಕಡೆಯವರ ಕುಕೃತ್ಯಗಳನ್ನು ಮುಚ್ಚಿಟ್ಟು, ರಕ್ಷಿಸುವುದು ಅಪರೂಪ ಏನಲ್ಲ. ಆದರೆ ಇಂಥ ಎಲ್ಲ ಸಂದರ್ಭಗಳಲ್ಲೂ ಜನ ಸಿಡಿದು ನಿಂತು ಅಂಥ ರಾಜಕೀಯ ಪಕ್ಷಗಳಿಗೆ ಬುದ್ಧಿ ಕಲಿಸಿದ್ದಾರೆ. ನಿರ್ಭಯಾ ಪ್ರಕರಣದಲ್ಲಿ ಜನ ಹೇಗೆ ಪ್ರತಿಕ್ರಿಯಿಸಿದರು ಎಂಬುದು ನಮ್ಮ ಕಣ್ಣ ಮುಂದಿದೆ. ಇದೇ ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಶಾಲೆಯೊಂದಕ್ಕೆ ಪೋಲೀಸ ಅಧಿಕಾರಿಗಳು ‘ಬಾಲಕಿಯರ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮ’ ಕುರಿತು ಭಾಷಣ ಬಿಗಿಯಲು ಹೋದಾಗ, ಹನ್ನೊಂದನೆ ತರಗತಿಯ ಬಾಲಕಿಯೊಬ್ಬಳು ಎದ್ದು ನಿಂತು, ಅತ್ಯಾಚಾರಕ್ಕೆ ಒಳಗಾಗಿರುವ ಉನ್ನಾವ್ ಬಾಲಕಿಗೆ ಏನು ರಕ್ಷಣೆ ನೀಡಿದಿರಿ, ಇದೇ ರೀತಿಯ ಅತ್ಯಾಚಾರ ನನ್ನೊಂದಿಗೆ ನಡೆದರೆ ಮತ್ತು ನನ್ನ ಕುಟುಂಬದವರ ಮೇಲೆ ದುಷ್ಕ್ರತ್ಯ ನಡೆದರೆ ಯಾರು ರಕ್ಷಣೆ ನೀಡುವರು ಎಂದು ಪ್ರಶ್ನಿಸಿದ್ದಾಳೆ.

ನಮ್ಮನ್ನು ಆಳುತ್ತಿರುವ ಜನರ ಕುರಿತು ಒಂದೇ ಒಂದು ಸಣ್ಣ ಆಕ್ಷೇಪ ವ್ಯಕ್ತವಾದರೂ ಹಿಂಡುಗಟ್ಟಿಕೊಂಡು ಆಕ್ಷೇಪಿಸಿದವರ ಮೇಲೆ ಮುಗಿಬೀಳುವ ಪಿಶಾಚಿಗಳ ಗುಂಪುಗಳನ್ನು ಹುಟ್ಟು ಹಾಕಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಜೃಂಭಿಸುವ ಇಂಥವರಿಗೆ, ಹೆಣ್ಣು ಮಗಳೊಬ್ಬಳ ಮೇಲೆ ಶಾಸಕ ನಡೆಸಿದ ಅತ್ಯಾಚಾರ ಮತ್ತು ಆತನ ನೆರವಿಗೆ ನಿಂತ ಇಡೀ ರಾಜ್ಯ ಸರ್ಕಾರ ಮತ್ತು ಪೋಲೀಸರ ಬಗ್ಗೆ ಏನೂ ಅನಿಸುವುದಿಲ್ಲ. ಏಕೆಂದರೆ ಅವರೆಲ್ಲ ಕಿರುಚಿದ್ದೇ ಕಿರುಚುವ ಗ್ರಾಮಾಫೋನ್ ರೆಕಾರ್ಡುಗಳಾಗಿದ್ದಾರೆ, ‘ಹೀಸ್ ಮಾಸ್ಟರ್ಸ ವಾಯ್ಸ್’ ಮಾತ್ರವೇ ಇವರಿಗೆ ವೇದ ವಾಕ್ಯ.

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಶಾಲಾ ಬಾಲಕಿ ಪೋಲೀಸರನ್ನೇ ಪ್ರಶ್ನಿಸಿ ಅವರ ಲೋಪ ಅವರಿಗೆ ಮನವರಿಕೆ ಮಾಡಿಕೊಡುವ ಯತ್ನ ನಡೆಸಿರುವುದು ಶ್ಲಾಘನೀಯ. ಆದರೆ ನಿರ್ಭಯಾ ಪ್ರಕರಣದಲ್ಲಿ ಗಂಟಲು ಹರಿದುಕೊಂಡವರೆಲ್ಲ ಎಲ್ಲಿ ಹೋದರು? ಕೇವಲ ಅಂದಿನ ಸರ್ಕಾರದ ಮುಖಕ್ಕೆ ಮಸಿ ಬಳಿದು, ಅಧಿಕಾರ ಕಿತ್ತುಕೊಳ್ಳುವುದಕ್ಕೆ ಮಾತ್ರ ಅವರ ಕೂಗು ಸೀಮಿತವಾಗಿತ್ತೇ? ಉಳಿದ ಜನ ಕೂಡ ಏಕೆ ದನಿ ಎತ್ತುತ್ತಿಲ್ಲ? ಏಕೆ ಎಲ್ಲರೂ ಬಾಯಿ ಕಳೆದುಕೊಂಡಿದ್ದಾರೆ?. ಬಹುಷಃ ಅವರೆಲ್ಲರಿಗೂ ಗೊತ್ತು ತಾವು ಎಂಥ ಸರ್ಕಾರ ಆರಿಸಿದ್ದೇವೆ ಎಂದು? ಅದಕ್ಕೇ ಈ ಮೌನ ಇರಬಹುದು. ಅದಕ್ಕಾಗಿ ನಾವೀಗ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿ ಬಂದಿರುವುದೇ ವರ್ತಮಾನದ ಬಹುದೊಡ್ಡ ದುರಂತ.

LEAVE A REPLY

Please enter your comment!
Please enter your name here