ಜಿಲ್ಲೆಯ ಒಟ್ಟು 460 ಮೀನುಗಾರರ ಯಾದಿ ಸರಕಾರಕ್ಕೆ

0
33

ಕಾರವಾರ,ಆ.5- ನೂತನ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮೀನುಗಾರರ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಾಡಿದ ಸಾಲ ಮನ್ನಾ ಮಾಡಲು ಮುಂದಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಲ ಮನ್ನಾ ಯೋಜನೆಯ ನಿರ್ಧಾರ ಈಗಾಗಲೇ ಆರಂಭಗೊಂಡಿದ್ದು ಒಟ್ಟೂ 460 ಹೆಚ್ಚು ಮೀನುಗಾರರ ಯಾದಿಯನ್ನು ಜಿಲ್ಲಾ ಮೀನುಗಾರಿಕೆ ಇಲಾಖೆ ಸರಕಾರಕ್ಕೆ ಸಲ್ಲಿಸಿದೆ ಎಂದು ತಿಳಿದು ಬಂದಿದೆ. ಉಳಿದ ಮೀನುಗಾರರ ಯಾದಿಗಳನ್ನು ಲೀಡ್ ಬ್ಯಾಂಕ್ ಪಡೆಯಲಿದೆ.

ಸದಾ ಒಂದಿಲ್ಲೊಂದು ಆರ್ಥಿಕ ನಷ್ಟದಲ್ಲಿರುವ ಮೀನುಗಾರರು ಬಡತನದಲ್ಲೇ ಜೀವನ ನಡೆಸುತ್ತಿದ್ದಾರೆ. ಮೀನುಗಾರರ ಸಮಸ್ಯೆಗಳನ್ನು ಕೊಂಚ ಬಗೆಹರಿಸುವ ನಿಟ್ಟಿನಲ್ಲಿ ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಮೀನುಗಾರರ ಸಾಲ ಮನ್ನಾ ಘೋಷಣೆ ಮಾಡಿದ್ದು ಜಿಲ್ಲೆಯ ಕರಾವಳಿ ಮೀನುಗಾರರ ಹರ್ಷದಲ್ಲಿದ್ದಾರೆ.

ಮೀನುಗಾರಿಕೆ ಇಲಾಖೆಯ ಯೋಜನೆಯಡಿ ಶೇ.2 ಮತ್ತು ಶೇ.3ರಷ್ಟು ಬಡ್ಡಿ ದರದಲ್ಲಿ ವಿವಿಧ ಬ್ಯಾಂಕ್‍ಗಳಿಂದ ಜಿಲ್ಲೆಯಲ್ಲಿ ಮೀನುಗಾರರಿಗೆ ಸಾಲ ಪಡೆದುಕೊಂಡಿದ್ದರು. ಈ ಯೋಜನೆ ಅಡಿಯಲ್ಲಿ ಕಾರವಾರ ತಾಲೂಕಿನ ಸದಾಶಿವಗಡದ ಸಿಂಡಿಕೇಟ್ ಬ್ಯಾಂಕ್‍ನಲ್ಲಿ 416 ಜನರಿಗೆ ಒಟ್ಟು 2.08 ಕೋಟಿ ರೂ. ಸಾಲ ನೀಡಲಾಗಿದ್ದು ಇದರಲ್ಲಿ ಒಟ್ಟು 2.07 ಕೋಟಿ ರೂ. ಮರು ಪಾವತಿ ಬಾಕಿ ಉಳಿದಿದೆ. ಅಮದಳ್ಳಿಯ ಕೆವಿಜಿ ಬ್ಯಾಂಕ್‍ನಲ್ಲಿ 25 ಜನರಿಗೆ ಒಟ್ಟು 26.91 ಲಕ್ಷ ರೂ. ಸಾಲ ನೀಡಲಾಗಿದ್ದು 16.32 ಲಕ್ಷ ರೂ. ಬಾಕಿ ಉಳಿದಿದ್ದರೆ, ಧಾರೇಶ್ವರದ ಕರ್ನಾಟಕ ಬ್ಯಾಂಕ್‍ನಲ್ಲಿ 3 ಜನರಿಗೆ ಒಟ್ಟು 2.5 ಲಕ್ಷ ರೂ. ಸಾಲ ನೀಡಲಾಗಿದೆ. ಅದರಂತೆ ಕೆವಿಜಿ ಬ್ಯಾಂಕ್ ಭಟ್ಕಳದಲ್ಲಿ 16 ಜನರಿಗೆ 8 ಲಕ್ಷ ರೂ. ಸಾಲ ನೀಡಲಾಗಿದ್ದು ಇದರಲ್ಲಿ ಒಟ್ಟು 5 ಲಕ್ಷ ರೂ. ಮರುಪಾವತಿ ಬಾಕಿ ಇದೆ. ಎಲ್ಲ ಬ್ಯಾಂಕ್‍ಗಳಿಂದ ಸಾಲ ಪಡೆದ ಒಟ್ಟು 460 ಮೀನುಗಾರರ ಒಟ್ಟೂ 2.28 ಕೋಟಿ ರೂ. ಸಾಲದ ಯಾದಿಯನ್ನು ಸಾಲ ಮನ್ನಾ ಸಲುವಾಗಿ ಇಲಾಖೆಯು ಸರಕಾರಕ್ಕೆ ಈಗಾಗಲೇ ಸಲ್ಲಿಸಿದೆ.

ಜಿಲ್ಲಾ ಲೀಡ್ ಬ್ಯಾಂಕ್ ಪ್ರಕಾರ ಮೀನುಗಾರರು ಸಹಕಾರಿ ಸಂಘಗಳಲ್ಲಿ ಮತ್ತು ವಿವಿಧ ಬ್ಯಾಂಕ್‍ಗಳಲ್ಲಿ ಬೋಟ್ ಖರೀದಿ, ಬಲೆ ಮತ್ತಿತರ ಸಲಕರಣೆಗಳ ಖರೀದಿ, ನಿರ್ವಹಣೆ ಸೇರಿದಂತೆ ಮೀನುಗಾರಿಕೆಯ ವಿವಿಧ ಚಟುವಟಿಕೆಗಾಗಿ ಒಟ್ಟು 50.13 ಕೋಟಿ ರೂ. ಸಾಲ ಇದೆ. 50 ಸಾವಿರ ರೂ.ವರೆಗೆ ಸಾಲ ಮನ್ನಾ ಘೋಷಣೆ ಮಾಡಲಾಗಿದ್ದು ಯೋಜನೆ ಸಹಕಾರಿ ಬ್ಯಾಂಕ್‍ಗಳಲ್ಲಿ ಮಾಡಿದ ಸಾಲಕ್ಕೂ ಅನ್ವಯಿಸಲಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲ ಮೀನುಗಾರರ ಯಾದಿ ಸಿದ್ಧಪಡಿಸುವಲ್ಲಿ ಲೀಡ್ ಬ್ಯಾಂಕ್ ಮುಂದಾಗಿದೆ. ಕೆಲವು ದಿನಗಳಲ್ಲಿ ಸಾಲಗಾರರ ಪಟ್ಟಿ ಸಿದ್ಧಗೊಳ್ಳಲಿದ್ದು ಅದನ್ನು ಲೀಡ್ ಬ್ಯಾಂಕ್ ಮೂಲಕ ಪಡೆದು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಸರಕಾರ ರೈತರ ಸಾಲಮನ್ನಾ ಮಾಡಿದ ರೀತಿಯಲ್ಲೇ ಮೀನುಗಾರರಿಗೂ ಅನ್ವಯವಾಗಬೇಕು. ಸರಕಾರದ ಆದೇಶ ಗೊಂದಲದಲ್ಲಿದೆ. ಮೀನುಗಾರು ಯಾವುದೇ ಬ್ಯಾಂಕ್ ಅಥವಾ ಸಹಕಾರಿ ಸಂಘಗಳಲ್ಲಿ ಪಡೆದ ಸಾಲ ಮನ್ನಾ ಮಾಡಬೇಕು. ಮೀನುಗಾರರು ಸಾಲದಲ್ಲಿ ಕೇವಲ 50 ಸಾವಿರ ರೂ. ಮಾತ್ರ ಮನ್ನಾ ಮಾಡುವುದರಿಂದ ನೈಜ ಮೀನುಗಾರರಿಗೆ ಅನ್ಯಾಯವಾಗಲಿದೆ. ರೈತರ ಸಾಲ ಮನ್ನಾದಲ್ಲಿ ಒಳಗೊಂಡಿರುವ ಎಲ್ಲ ಅಂಶಗಳು ಮೀನುಗಾರರ ಸಾಲ ಮನ್ನಾಕ್ಕೆ ಅನ್ವಯವಾಗಬೇಕು. ಸಾಲದಲ್ಲಿ ಕೇವಲ 50 ಸಾವಿರ ರೂ. ಮನ್ನಾ ಮಾಡಿದ್ದಲ್ಲಿ ಸರಕಾರ ಘೋಷಣೆ ಮಾಡಿದ 63 ಕೋಟಿ ರೂ. ಗಳಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಬರಿ 5 ಕೋಟಿ ರು. ಮಾತ್ರ ಸಿಗಲಿದೆ. ಉಳಿದ 5 ಕೋಟಿ ರೂ. ಮಂಗಳೂರು, ಉಡುಪಿ ಜಿಲ್ಲೆ ಪಾಲಾಗುವುದು. ಸರಕಾರದ ಗಮನಕ್ಕೆ ತರಲು ನಿಯೋಗ ಮುಖ್ಯಮಂತ್ರಿ ಅವರ ಬಳಿ ಒಯ್ಯಲಿದ್ದೇವೆ. -ಗಣಪತಿ ಮಾಂಗ್ರೆ ಜಿಲ್ಲಾ ಮೀನುಗಾರರ ಫೆಡರೇಶನ್ ಅಧ್ಯಕ್ಷ

ಮೀನುಗಾರಿಕಾ ಇಲಾಖೆ ಅಡಿಯಲ್ಲಿ ಸಾಲ ಪಡೆದ ಜಿಲ್ಲೆ 460 ಮೀನುಗಾರರ ಯಾದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಉಳಿದ ಮೀನುಗಾರರ ಪಟ್ಟಿಯನ್ನು ಲೀಡ್ ಬ್ಯಾಂಕಿಗೆ ಶೀಘ್ರವೇ ಸಲ್ಲಿಸಲಾಗುವುದು. – ಪಿ. ನಾಗರಾಜ, ಜಿಲ್ಲಾ ಮೀನುಗಾರಿಕೆ ಉಪ ನಿರ್ದೇಶಕ, ಕಾರವಾರ.

LEAVE A REPLY

Please enter your comment!
Please enter your name here