ಪ್ರೌ.ಶಾ.ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಆರಂಭ

0
47

ಧಾರವಾಡ,ಆ.5- ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಛೇರಿಯ ವತಿಯಿಂದ ಬೆಳಗಾವಿ ವಿಭಾಗದ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕ ವೃಂದದ ಗಣಕೀಕೃತ ವರ್ಗಾವಣೆ ಕೌನ್ಸೆಲಿಂಗ್ ಇಲ್ಲಿಯ ಡಯಟ್ ಡೆಪ್ಯೂಟಿ ಚೆನ್ನಬಸಪ್ಪ ಸಮಾವೇಶ ಭವನದಲ್ಲಿ ಸೋಮವಾರ ಆರಂಭಗೊಂಡಿತು.

ಬೆಳಗಾವಿ ವಿಭಾಗದ ವಿಜಯಪೂರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಗದಗ, ಹಾವೇರಿ, ಶಿರಸಿ ಹಾಗೂ ಚಿಕ್ಕೋಡಿ ಜಿಲ್ಲೆಗಳಲ್ಲಿ ಒಟ್ಟು 4546 ಶಿಕ್ಷಕರು ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಬೆಳಗಾವಿ ವಿಭಾಗದ ವ್ಯಾಪ್ತಿಯ ವೃಂದವಾರು ಪ್ರೌಢ ಶಾಲಾ ಶಿಕ್ಷಕರ ಒಟ್ಟು 8068 ಕಾರ್ಯನಿರತ ಹುದ್ದೆಗಳ ಪೈಕಿ ಶೇಕಡಾ 4 ರಷ್ಟು ಸಂಖ್ಯೆಯ ಹುದ್ದೆಗಳಿಗೆ ಅಂದರೆ ಕೇವಲ 323 ಶಿಕ್ಷಕರಿಗೆ ಮಾತ್ರ ವರ್ಗಾವಣೆಗೆ ಅವಕಾಶವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಛೇರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇಶಕ ಹಾಗೂ ವಿಭಾಗೀಯ ವರ್ಗಾವಣಾ ಪ್ರಾಧಿಕಾರಿ ಡಾ. ಬಿ.ಕೆ.ಎಸ್. ವರ್ಧನ್ ಈ ಸಂದರ್ಭದಲ್ಲಿ ತಿಳಿಸಿದರು.

ಉದ್ಘಾಟನೆ : ಆದ್ಯತಾ ಪಟ್ಟಿಯಂತೆ ಕೌನ್ಸೆಲಿಂಗ್‍ದಲ್ಲಿ ಮೊದಲಿಗರಾಗಿದ್ದ ವಿಜಯಪೂರ ಜಿಲ್ಲೆ ಸಿಂದಗಿ ತಾಲೂಕಿನ ಗಬಸವಳಗಿ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಕೆ.ಪಿ. ರಾಠೋಡ ಅವರಿಗೆ ಪ್ರಥಮ ವರ್ಗಾವಣೆ ಆದೇಶವನ್ನು ವಿತರಿಸುವ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಕೌನ್ಸೆಲಿಂಗ್ ಉದ್ಘಾಟಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಛೇರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್, ಉಪನಿರ್ದೇಶಕರುಗಳಾದ ಆರ್.ಎಸ್. ಮುಳ್ಳೂರ ಹಾಗೂ ಮೃತ್ಯುಂಜಯ ಕುಂದಗೋಳ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಉಮೇಶ ಬಮ್ಮಕ್ಕನವರ, ಹಿರಿಯ ಸಹಾಯಕ ನಿರ್ದೇಶಕರಾದ ಅರ್ಜುನ ಕಂಬೋಗಿ, ಇ-ಆಡಳಿತ ವಿಭಾಗದ ಕಾರ್ಯಕ್ರಮ ಅಧಿಕಾರಿಗಳಾದ ಶಾಂತಾ ಮೀಸಿ, ಆಯುಕ್ತರ ಕಛೇರಿಯ ವಿವಿಧ ಸಿಬ್ಬಂದಿ ವರ್ಗ, ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳ ಡಿಡಿಪಿಐ ಕಛೇರಿಗಳ ಸಿಬ್ಬಂದಿ ವರ್ಗ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಹಾಜರಿದ್ದರು.

ಈಗಾಗಲೇ ಪ್ರಕಟಗೊಂಡಂತೆ ವರ್ಗಾವಣೆ ಬಯಸಿರುವ ಶಿಕ್ಷಕರ ಆದ್ಯತಾ ಕ್ರಮ ಸಂಖ್ಯೆಗೆ ಅನುಗುಣವಾಗಿ ಆಗಷ್ಟ 6 ರಂದು 501 ರಿಂದ 1700, ಆಗಷ್ಟ 7 ರಂದು 1701 ರಿಂದ 2900, ಆಗಷ್ಟ 8 ರಂದು 2901 ರಿಂದ ಅಂತ್ಯದವರೆಗೆ ಕೌನ್ಸೆಲಿಂಗ್ ಜರುಗಲಿದೆ. ಜೊತೆಗೆ ಎಲ್ಲ ವಿಶೇಷ ಶಿಕ್ಷಕರ ಮತ್ತು ದೈಹಿಕ ಶಿಕ್ಷಕರ ಕೌನ್ಸೆಲಿಂಗ್ ಸಹ ಆಗಷ್ಟ 8 ರಂದೇ ನಡೆಯಲಿದೆ.

 

LEAVE A REPLY

Please enter your comment!
Please enter your name here