ರಾಯಬಾಗ

ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉನ್ನತ ಸಾಧನೆ ಮಾಡಿ

ರಾಮದುರ್ಗ,ಆ.5- ಹಿಂದುಳಿದ ವರ್ಗಗಳ ಸಮುದಾಯದ ಜನತೆಯ ಅಭಿವೃದ್ಧಿಗಾಗಿ ಅವರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರಕಾರ ವಸತಿ ನಿಲಯಗಳ ಸೌಲಭ್ಯ ಒದಗಿಸಿದ್ದು, ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉನ್ನತ ಸಾಧನೆ ಮಾಡಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಕರೆ ನೀಡಿದರು.

ಪಟ್ಟಣದ ಸಮೀಪ ಸೋಮವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಡಿ. ದೇವರಾಜ ಅರಸು ಮೆಟ್ರಕ್ ನಂತರದ ಬಾಲಕರ ವಸತಿ ನಿಲಯದ ನೂತನ ಕಟ್ಟಡ ಹಾಗೂ ದೇವರಾಜ ಅರಸು ಭವನ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನ ವಿವಿಧ ವಸತಿ ನಿಲಯಗಳಲ್ಲಿ ಸುಮಾರು 15 ರಿಂದ 16 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ವಸತಿ ನಿಲಯ ಪಾಲಕರು ಜವಾಬ್ಧಾರಿಯುತವಾಗಿ ಕೆಲಸ ನಿರ್ವಹಿಸಿ ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ವ್ಯಾಸಂಗ ಮಾಡುವಂತೆ ಮಾರ್ಗದರ್ಶನ ನೀಡಬೇಕು. ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಸರಕಾರಿಂದ ಅನುದಾನ ದೊರೆಯುವಂತೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.

ಜಿ.ಪಂ ಸದಸ್ಯರಾದ ರೇಣಪ್ಪ ಸೋಮಗೊಂಡ, ಜಹೂರ ಹಾಜಿ ಮಾತನಾಡಿ, ಉನ್ನತ ವ್ಯಾಸಂಗ ಕಗ್ಗಂಟಾಗಿ ಪರಿಣಮಿಸಿದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ವಸತಿ ನಿಲಯಗಳು ಅನುಕೂಲವಾಗಿವೆ. ವಿದ್ಯಾರ್ಥಿಗಳು ನಿರಂತರ ಪರಿಶ್ರಮವಹಿಸಿ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದು, ಅನೈತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತಾಗಲು ನಿಲಯ ಪಾಲಕರು ಹಾಗೂ ಇಲಾಖೆಯ ಅಧಿಕಾರಿಗಳು ಮೇಲಿಂದ ಮೇಲೆ ವಸತಿ ನಿಲಯಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಬೇಕೆಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾ ವಿಸ್ತೀರ್ಣಾಧಿಕಾರಿ ರತ್ನಾ ಕದಂ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಕೃಷ್ಣಾ ಲಮಾಣಿ, ಯುವ ಧುರೀಣ ಮಲ್ಲಣ್ಣ ಯಾದವಾಡ, ತಾ.ಪಂ ಸ್ಥಾಯಿ ಸಮಿತಿಯ ಚೇರ್‍ಮನ್ ಮೌನೇಶ ಬಡಿಗೇರ, ತಾ.ಪಂ ಸದಸ್ಯ ಹಣಮಂತ ವಗ್ಗನ್ನವರ, ತಹಶೀಲ್ದಾರ ಬಸನಗೌಡ ಕೋಟೂರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಮಿಲಾನಟ್ಟಿ, ಕಟ್ಟಡ ನಿರ್ಮಾಣದ ಭೂಸೇನಾ ನಿಗಮದ ಸಹಾಯಕ ಅಭಿಯಂತರ ಸದಾಶಿವ, ಸಿಡಿಪಿಓ ಖಾದರಬಿ ಲಕ್ಷ್ಮೇಶ್ವರ, ಪುರಸಭೆ, ತಾ.ಪಂ ಸದಸ್ಯರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಇತರರಿದ್ದರು.

ನಿಲಯ ಪಾಲಕ ಸಿ.ಎಸ್. ಬಿರಾದಾರ ಸ್ವಾಗತಿಸಿದರು. ವಿಜಯ ನಾಯಕ ಕಾರ್ಯಕ್ರಮ ನಿರೂಪಿಸಿದರು. ಓ ಎನ್. ಲಮಾಣಿ ವಂದಿಸಿದರು.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: