ಸಮತೋಲನ ಆಹಾರ ಸದೃಢ ಆರೋಗ್ಯಕ್ಕೆ ದಾರಿ

0
54

ಬೆಳಗಾವಿ,ಆ.5- ನಮ್ಮ ಉತ್ತಮವಾದ ಜೀವನಕ್ಕೆ ಆರೋಗ್ಯವೇ ದಾರಿದೀಪ. ಸದೃಢವಾದ ಆರೋಗ್ಯ ಮಾತ್ರ ನಮ್ಮ ಬದುಕಿನ ದಿಕ್ಕನ್ನು ಬದಲಿಸಲು ಸಾಧ್ಯವೆಂಬುದು ಹನ್ನೆರಡನೆಯ ಶತಮಾನದ ಶರಣರ ವಚನಗಳಿಂದ ತಿಳಿದು ಬರುತ್ತದೆ ಎಂದು ಜೆಎನ್‍ಎಂಸಿಯ ವೈದ್ಯ ಶಿಕ್ಷಕರಾದ ಡಾ.ಅವಿನಾಶ ಕವಿ ನುಡಿದರು. ಅವರು ಬೆಳಗಾವಿ ಲಿಂಗಾಯತ ಭವನದಲ್ಲಿ ಜರುಗಿದ ಶ್ರಾವಣ ಅಮವಾಸೆ ಕಾರ್ಯಕ್ರಮದ ನಿಮಿತ್ತವಾಗಿ ಜರುಗಿದ ಉಪನ್ಯಾಸದಲ್ಲಿ ‘ಶರಣರ ವಚನಗಳಲ್ಲಿ ಆರೋಗ್ಯ ಪರಿಕಲ್ಪನೆ’ ವಿಷಯ ಕುರಿತು ಮಾತನಾಡಿದರು.

ಶರಣರು ತಮ್ಮ ವಚನಗಳಲ್ಲಿ ಜೀವನ ಶೋಧನೆ ಮಾಡಿದವರು. ಆತ್ಮ ನಿವೇದನೆ ಅವರ ವಚನಗಳ ಮುಖ್ಯ ತಿರುಳಾಗಿತ್ತು. ಆರೋಗ್ಯ ವಿಜ್ಞಾನವನ್ನು ಕುರಿತು ಹಲವಾರು ವಚನಕಾರರು ವಿಶೇಷವಾದ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಅಕ್ಕಮಹಾದೇವಿಯು ‘ಆಹಾರ ಕಿರಿದು ಮಾಡಿರಯ್ಯ, ಆಹಾರ ಕಿರಿದು ಮಾಡಿರಯ್ಯ’ ಎನ್ನುವ ಮೂಲಕ ಉತ್ತಮವಾದ ಸಮತೋಲನ ಆಹಾರ ಮಾತ್ರ ವ್ಯಕ್ತಿಯನ್ನು ಸದೃಢರನ್ನಾಗಿ ಮಾಡಲು ಸಾಧ್ಯವೆಂದು ಹೇಳಿದ್ದಾಳೆ. ವೈದ್ಯ ಸಂಗಣ್ಣನೆಂಬ ಶರಣ ಮನುಷ್ಯ ದೇಹದ ಸಾವಿರಾರು ನಾಡಿಗಳ ಕುರಿತು, ಹಲವಾರು ರೋಗರುಜಿನಗಳ ಕುರಿತು ಹೇಳುವದರೊಂದಿಗೆ ಉತ್ತಮ ಆರೋಗ್ಯದ ಸೂತ್ರಗಳನ್ನು ನೀಡುತ್ತಾನೆ.

ಇಂದಿನ ಒತ್ತಡ ಬದುಕಿನಲ್ಲಿ ನಾವು ನೂರಾರು ವಿಷಯುಕ್ತ ಆಹಾರಗಳನ್ನು ಸೇವೆಸುವ ಮೂಲಕ ದೇಹದ ಸಮತೋಲವನ್ನು ಕಳೆದುಕೊಂಡಿದ್ದೇವೆ. ನಮಗೆ ನಾಲಿಗೆಯ ರುಚಿ ಗೊತ್ತಿದ್ದೆಯೇ ಹೊರತು ಆಹಾರದ ಅಭಿರುಚಿ ಗೊತ್ತಿಲ್ಲ. ನಮ್ಮ ದೇಹ ಮನಸ್ಸುಗಳ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ನಾವು ಸೇವಿಸುವ ಆಹಾರದ ಮೇಲೆ ನಮ್ಮ ಮನಸ್ಸಿನ ಭಾವನೆಗಳು ಬದಲಾಗುತ್ತವೆ. ಆಹಾರ ಮತ್ತು ಮನಸ್ಸಿಗೂ ಒಂದು ನಿಕಟವಾದ ಸಂಬಂಧವಿದೆ. ಸಾತ್ವಿಕ ಆಹಾರ ಮತ್ತು ನಡೆನುಡಿಗಳು ಮಾತ್ರ ಮನುಷ್ಯನನ್ನು ಆರೋಗ್ಯಯುಕ್ತ ಜೀವನವನ್ನು ನಡೆಸಲು ಅನುಕೂಲ ಮಾಡಿಕೊಡುತ್ತದೆ. ಶರಣರು ತಮ್ಮ ವಚನಗಳ ಮೂಲಕ ಅನುಭವ ಹಾಗೂ ಅನುಭಾವಗಳ ದಾರ್ಶನಿಕತೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಬದಲಾಗುತ್ತಿರುವ ಇಂದಿನ ಪರಿಸರದಲ್ಲಿ ಶರಣರ ವಚನಗಳನ್ನು ಓದುವುದು ಅಗತ್ಯವೆನಿಸಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ಮಾತನಾಡುತ್ತ ಅಖಿಲ ಭಾರತ ವೀರಶೈವ ಮಹಾಸಭೆಯು ಕಾಲಕಾಲಕ್ಕೆ ಹಲವಾರು ಉಪಯುಕ್ತವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಧರ್ಮ ಸಂಘಟನೆಯೇ ಮಹಾಸಭೆಯು ಮುಖ್ಯ ಧ್ಯೇಯವಾಗಿದ್ದು, ಬಸವಾದಿ ಶರಣರು ಹೇಳಿರುವ ತತ್ತ್ವಾದರ್ಶಗಳನ್ನು ಮನನ ಮಾಡಿಕೊಳ್ಳಬೇಕಾಗಿದೆ. ಜೀವನದ ಪ್ರತಿಯೊಂದು ನೆಲೆಗಳಲ್ಲಿಯೂ ಇಂದು ಒತ್ತಡಗಳು ಹೆಚ್ಚುತ್ತಿರುವಾಗ ಅವುಗಳ ಶಮನಕ್ಕೆ ವಚನಕಾರರ ಹೇಳಿರುವ ವಿಚಾರಗಳು ಸಂಜೀವಿನಿ ಎನಿಸಿವೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಎಲ್ಲ ವಯೋಮಾನದರಿಗೆ ಸ್ವರಚಿತ ವಚನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಹಾಗೂ ಕೇಂದ್ರ ಮಹಾಸಭೆಯ ಪ್ರಧಾನ ಕಾರ್ಯದರ್ಶಿಗಳಾದ ಕಲ್ಯಾಣರಾವ್ ಮುಚಳಂಬಿಯವರು ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ವೇದಿಕೆಯ ಮೇಲೆ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಸೋಮಲಿಂಗ ಮಾವಿನಕಟ್ಟಿ, ಡಾ.ಎಫ್.ವ್ಹಿ. ಮಾನ್ವಿ, ಡಾ.ಗುರುದೇವಿ ಹುಲೆಪ್ಪನವರಮಠ, ಶ್ರೀ ಬಸವರಾಜ ತರಗಾರ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಗೀತಾ ಹುಬ್ಬಳ್ಳಿಯವರು ನುಡಿಸಿದರು. ಶೈಲಜಾ ಸಂಸುದ್ದಿ ವಚನ ಪಠಣ ಮಾಡಿದರು. ಆರ್.ಕೆ.ನೀರ್ಲಿ ನಿರೂಪಿಸಿದರು. ಶ್ರೀಮತಿ ಜ್ಯೋತಿ ಭಾವಿಕಟ್ಟಿ ಸ್ವಾಗತಿಸಿದರು. ನ್ಯಾಯವಾದಿ ವಿ.ಕೆ.ಪಾಟೀಲ ವಂದಿಸಿದರು.

LEAVE A REPLY

Please enter your comment!
Please enter your name here