ಬೆಳಗಾವಿಯಲ್ಲಿಯೂ ಹೈ ಅಲರ್ಟ

0
726

ಬೆಳಗಾವಿ, 17- ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಯೂ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

ಶುಕ್ರವಾರ ಸಂಜೆಯಿಂದಲೇ ನಗರದಲ್ಲಿ ಹೈ ಅಲರ್ಟ್ ಜಾರಿಯಾಗಿದ್ದು, ಬಹುತೇಕ ಪ್ರಮುಖ ಸ್ಥಳಗಳಲ್ಲಿ ಭಾರಿ ಪ್ರಮಾಣದಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿರುವುದು ಕಂಡು ಬರುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಮಹಾನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ ಅವರು, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನೂ ಹಲವಾರು ನಗರಗಳ ಜೊತೆ ಬೆಳಗಾವಿ ನಗರದಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ನಗರದ ಸ್ಟಾರ್ ಹೋಟೆಲುಗಳು, ಮಾಲ್, ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಸಿನಿಮಾ ಮಂದಿರ ಸೇರಿದಂತೆ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಎಲ್ಲಿಯಾದರೂ ಸಂಶಯಾಸ್ಪದ ವ್ಯಕ್ತಿಗಳು ಅಥವಾ ವಸ್ತುಗಳು ಕಂಡು ಬಂದಲ್ಲಿ ಸಾರ್ವಜನಿಕರು ಭೀತಿಗೆ ಒಳಗಾಗದೇ ಅದರ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಬೇಕು. ಪೊಲೀಸ್ ಇಲಾಖೆ ಕೂಡಲೇ ಅಂಥ ವಿಷಯಗಳ ಬಗ್ಗೆ ತನಿಖೆ ನಡೆಸಲಿದೆ ಎಂದು ಪೊಲೀಸ್ ಆಯುಕ್ತ ಲೋಕೇಶ ಕುಮಾರ ಮನವಿ ಮಾಡಿದ್ದಾರೆ.

ಇನ್ನು ಖಾಸಗಿ ಹೋಟೆಲುಗಳು, ಮಾಲ್, ಲಾಡ್ಜ್, ಕಚೇರಿ ಇನ್ನಿತರ ಸ್ಥಳಗಳಲ್ಲಿ ಅಪರಿಚಿತ ವ್ಯಕ್ತಿಗಳನ್ನು ಒಳಗೆ ಬಿಡುವಾಗ ಅಲ್ಲಿನ ಭದ್ರತಾ ಸಿಬ್ಬಂದಿ ಸಂಪೂರ್ಣವಾಗಿ ಪರಿಶೀಲನೆ ನಡೆಸಬೇಕೆಂದು ಆಯುಕ್ತರು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here