ಸಂಪಾದಕೀಯ

ಯುವಜನರಿಗೇನಾಗಿದೆ?

ದೇಶದ ಯುವ ಜನತೆಯನ್ನು ಗಾಂಧೀಜಿ ಅವರು ‘ಯು ಆರ್ ದಿ ಸಾಲ್ಟ್ ಆಫ್ ದ ನೇಷನ್’ ಎಂದು ಕರೆದಿದ್ದರು. ಹದವಾಗಿ ಉಪ್ಪು ಇದ್ದರೆ ಪಾಕ ಸವಿಯಾಗಿ ಇರುತ್ತದೆ. ಆದರೆ ಈ ಯುವ ಜನತೆಯೇ ಕೆಟ್ಟರೆ ಇಡೀ ದೇಶದ ಆರೋಗ್ಯವೇ ಹದಗೆಡುತ್ತದೆ. ಈಗೀಗಲಂತೂ ಯುವ ಜನರನ್ನು ಕುರಿತು ಆತಂಕಕಾರಿ ಸುದ್ದಿಗಳೇ ಹೆಚ್ಚು ಗಮನ ಸೆಳೆಯುತ್ತಾ ಇವೆ. ಇಂಥ ಕೃತ್ಯಗಳಿಂದ ಅವರೇನು ಸಾಧಿಸುತ್ತಾರೆ ಎಂದು ಪ್ರಶ್ನೆ ಹುಟ್ಟುವುದು ಸಹಜ.

ಈಚೆಗೆ ಬೆಳಗಾವಿ ನಗರದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ತರುಣಿಯೊಬ್ಬಳು ಪೂರ್ಣ ಬೆತ್ತಲಾಗಿ ದ್ವಿಚಕ್ರ ವಾಹನ ಓಡಿಸಿಕೊಂಡು ಹೋದ ಸುದ್ದಿ ಬಂದಿತ್ತು. ನಗರದ ಕ್ಲಬ್ ರೋಡ್‍ನಿಂದ ಹಿಡಿದು ಬಹುಮುಖ್ಯ ರಸ್ತೆಗಳಲ್ಲಿ ಆಕೆ ಬೆತ್ತಲಾಗಿ ಸಂಚರಿಸಿದ ವಿಡಿಯೋ ಬಹಳಷ್ಟು ಜನರನ್ನು ತಲುಪಿದೆ. ಇಂಥ ಕ್ರಿಯೆಯಲ್ಲಿ ತೊಡಗುವ ಮೂಲಕ ಯಾರೂ ಸಾಧಿಸಿದ್ದನ್ನು ತಾನು ಸಾಧಿಸಿದ್ದೇನೆ ಎಂಬ ತೃಪ್ತಿ ಈ ಕೃತ್ಯದ ಪಾಲುದಾರರಲ್ಲಿ ಇರಬಹುದು ಅಥವಾ ಕುಡಿದ ಅಮಲಿನಲ್ಲಿ ಗೆಳೆಯರೊಂದಿಗೆ ಬೆಟ್ ಕಟ್ಟಿ ಈ ರೀತಿ ಮಾಡಿರಬಹುದು. ಆದರೆ ಇಂಥ ಕೃತ್ಯ ಎಲ್ಲ ನೋಡುಗರಿಗೆ ಖುಷಿ ತರುವಂಥದ್ದು ಅಲ್ಲ. ಮುಜುಗರ ಹುಟ್ಟಿಸಲೂಬಹುದು. ಹಿಂದೊಮ್ಮೆ ಮುಂಬಯಿ ನೆಲೆಯ ಸಿನಿಮಾ ನಟಿಯೊಬ್ಬಳು ಬೆತ್ತಲಾಗಿ ಸಮುದ್ರ ದಂಡೆಯಲ್ಲಿ ಓಡಿ ಸುದ್ದಿ ಮಾಡಿದ್ದಳು. ಆಗಿನ ಕಾಲಕ್ಕೆ ಅವೆಲ್ಲ ಬಹಳ ಕ್ರಾಂತಿಕಾರಿ ಸಂಗತಿಗಳು. ಈಗಂತೂ ಹಾಡುಹಗಲೇ ಕ್ರೀಡಾಂಗಣಗಳಲ್ಲಿ ಬೆತ್ತಲಾಗಿ ಜನ ಓಡುವ ಪರಂಪರೆಯೇ ಹುಟ್ಟಿಕೊಂಡಿರುವಾಗ ಕತ್ತಲ ಹೊತ್ತಲ್ಲಿ ಬೆತ್ತಲಾಗಿ ದ್ವಿಚಕ್ರ ವಾಹನ ಏರಿ ಸುತ್ತಾಟ ಮಾಡುವುದು ಕೆಲವು ಕಾಲ ಸುದ್ದಿಯ ಗ್ರಾಸ ಆಗಬಹುದೇ ಹೊರತು ಹೆಚ್ಚಿನದ್ದೇನೂ ನಡೆಯಲಿಕ್ಕಿಲ್ಲ. ಬಹುಷಃ ಆ ವ್ಯಕ್ತಿಯ ಮತ್ತು ವಾಹನದ ಗುರುತು ಪತ್ತೆ ಹಚ್ಚಲು ಸಾಧ್ಯವಾದರೆ ಪೊಲೀಸರು ಆಕೆ ಮತ್ತು ಈ ಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಇತರರ ಮೇಲೆ ಒಂದು ಮೊಕದ್ದಮೆ ಹೂಡಬಹುದು.

ಅತ್ತ ಬೆಂಗಳೂರಲ್ಲಿ ಹದಿ ಹರೆಯದ ಹುಡುಗಿಯೊಬ್ಬಳು ತನ್ನ ಪ್ರೀತಿಗೆ ಮತ್ತು ಸುತ್ತಾಟಕ್ಕೆ ಅಡ್ಡಿ ಆದರೆಂದು ಪ್ರಿಯಕರನ ಜೊತೆ ಸೇರಿ ತಂದೆಯನ್ನೇ ಕೊಚ್ಚಿ ಕೊಂದು ಹಾಕಿರುವ ಪ್ರಕರಣ ನಡೆದಿದೆ. ಮತ್ತೊಬ್ಬಳು ತನ್ನ ಮಾದಕ ವಸ್ತು ಸೇವನೆ ಅಭ್ಯಾಸಕ್ಕೆ ತಂದೆ ನಿಂದಿಸಿದರು ಎಂದು ಅವರನ್ನೇ ಸುಟ್ಟು ಕೊಲ್ಲುವ ಯತ್ನ ನಡೆಸಿದ್ದೂ ಇದೇ ಬೆಂಗಳೂರಿನಿಂದ ವರದಿ ಆಗಿದೆ. ವಿಲಾಸ, ಮೋಜು, ಮಸ್ತಿಗಳನ್ನು ತಮ್ಮ ಹರೆಯದಲ್ಲಿ ಅನುಭವಿಸಿ ಬಿಡಬೇಕು ಎಂಬ ಧಾವಂತ ಎದ್ದು ಕಾಣುತ್ತಿದೆ. ಅದಕ್ಕೆ ತಕ್ಕ ಹಾಗೆ ಕಾಂಚಾಣದ ಕರುಣೆಯೂ ಇದೆ. ಮನೆಗಳಲ್ಲಿ ಕೇವಲ ಒಬ್ಬರೋ ಇಬ್ಬರೋ ಮಕ್ಕಳು ಇದ್ದರಂತೂ ಹೆಚ್ಚಿನ ತಂದೆ ತಾಯಿಗಳು ತಮ್ಮ ಮಕ್ಕಳು ಯಾವುದೇ ಕೊರತೆ ಇಲ್ಲದೇ ಬದುಕಲಿ ಎಂದು ಕಾಳಜಿ ವಹಿಸುತ್ತಾರೆ. ಹಿಂದಿನಂತಲ್ಲದೇ ಸಾಕಷ್ಟು ಸ್ವಾತಂತ್ರ್ಯವೂ ಈಗ ಲಭ್ಯವಿದೆ. ಈ ಎಲ್ಲ ಅನುಕೂಲಗಳನ್ನು ಬಳಸಿಕೊಂಡು ಸ್ವೇಚ್ಛೆಯಿಂದ ನಡೆಯಲು ಮುಂದಾಗುತ್ತಾ ಇರುವ ತರುಣ ಸಮೂಹದ ಸಂಖ್ಯೆ ಹೆಚ್ಚುತ್ತಿದೆ.

ಸಂಗಾತಿಯೊಡನೆ ಸಾರ್ವಜನಿಕವಾಗಿಯೂ ಅನುಚಿತವಾಗಿ ನಡೆದುಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಯಾರ ಹಂಗೂ ತಮಗಿಲ್ಲ, ತಾವು ಯಾವುದಕ್ಕೂ ಅಂಜಬೇಕಿಲ್ಲ, ಅಳುಕಬೇಕಿಲ್ಲ ಎನ್ನುವ ಮನ:ಸ್ಥಿತಿ ಇಂತಹ ಕೃತ್ಯಗಳಿಗೆ ಪ್ರೇರಣೆ. ಇಂಥ ವರ್ತನೆಗಳ ಮೇಲೆ ನಿಯಂತ್ರಣ ಇರಿಸಬೇಕಾದ ಪೋಷಕರಿಗೆ ತಾವು ಏನೇ ಹೇಳಿದರೂ ಅದರಿಂದ ತೀವ್ರತರ ಪರಿಣಾಮಗಳು ಉಂಟಾದರೆ ಎಂಬ ಭಯ ಇದೆ. ಚೆನ್ನಾಗಿ ಓದು ಎಂದು ಹೇಳಿದ್ದಕ್ಕೇ ಆತ್ಮಹತ್ಯೆ ಮಾಡಿಕೊಳ್ಳುವ ಶಾಲಾ ಮಕ್ಕಳ ಪ್ರಸಂಗಗಳು ಆಳುಕು ಹುಟ್ಟಿಸುತ್ತವೆ.

ತಂದೆಯನ್ನು ಕೊಂದು ಮುಗಿಸಿದ ಆ ಹೈಸ್ಕೂಲು ಬಾಲಕಿಯು ‘ಆತ ನನ್ನ ವೈರಿ. ಆತನನ್ನು ಕೊಂದು ಹಾಕಿದೆ. ನಿಮಗೇನು? ‘ ಎಂದು ಪೊಲೀಸರನ್ನೇ ಪ್ರಶ್ನಿಸಿದ ವಿಚಾರವನ್ನು ಗಮನಿಸಿದಾಗ ಮಕ್ಕಳ ದೈಹಿಕ ಆರೋಗ್ಯದ ಬಗ್ಗೆ ಗಮನ ನೀಡುವ ಹಾಗೇ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ನೀಡುವ ಅಗತ್ಯ ಕಾಣುತ್ತದೆ.

ಸಣ್ಣ ವಯಸ್ಸಿನ ಮಕ್ಕಳು ಕೂಡ ಶಾಲೆಯಲ್ಲಿ ಸರಿಯಾದ ಸಾಧನೆ ಮಾಡಲಾಗದೇ ಹಿಂಸೆ, ಅವಮಾನಗಳಿಗೆ ಗುರಿ ಆಗುವುದಕ್ಕಿಂತ ಸಾಯುವುದೇ ಲೇಸು ಎಂದು ತೀರ್ಮಾನಕ್ಕೆ ಬಂದು ಬಿಡುತ್ತಾ ಇದ್ದಾರೆ. ಯುವ ಮನಸ್ಸುಗಳಿಗೆ ಸಮಾಜದ ಎಲ್ಲ ಬಂಧನಗಳನ್ನೂ ಕಿತ್ತೊಗೆಯುವ ಮೂಲಕ ತಾವು ಮುಕ್ತರು ಎಂದು ತೋರಿಸುವ ಹಂಬಲ. ಜೊತೆಗೆ ಇನ್ನಿಲ್ಲದ ಸಾಹಸಗಳಿಗ ಕೈಹಾಕುವ ಮೂಲಕ ದಿಢೀರ್ ಪ್ರಸಿದ್ಧಿ ಗಳಿಸುವ ತವಕವೂ ಇದ್ದ ಹಾಗೆ ಕಾಣುತ್ತದೆ. ಮನೆಯಲ್ಲಿ ಪೋಷಕರು ಹಾಗು ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು ಕಾಳಜಿ ವಹಿಸಿಕೊಳ್ಳುವುದು ಕಡಿಮೆ. ಬೇಕು ಬೇಕೆಂದುದೆಲ್ಲ ಒದಗಿಸುತ್ತ ಇದ್ದೇವಲ್ಲ ಎನ್ನುವ ಪೋಷಕರು. ನಮಗೆ ಸಂಬಳ ನೀಡುವುದು ಪಾಠ ಮಾಡಲಿಕ್ಕೆ ಅಷ್ಟೇ ಎನ್ನುವ ಶಿಕ್ಷಕರು ತಮ್ಮ ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಕಾರ್ಪೋರೇಟ್ ಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆ ನಿರ್ವಹಣೆಯಲ್ಲಿ ತಮ್ಮ ಪಾಲು ಇಷ್ಟು ಎಂದು ಸ್ವಲ್ಪ ಹಣ ನೀಡಿ ಸುಮ್ಮನಾಗುತ್ತವೆ. ಈಗೀಗ ಮಕ್ಕಳು, ಯುವ ಜನರಲ್ಲಿ ಖಿನ್ನತೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ಕೊಡಿಸುವ ಕುರಿತು ಆಸಕ್ತಿ ಮೂಡುತ್ತಿದೆ. ಹಾಗೇ ಅತಿ ಚಟುವಟಿಕೆ ಕೂಡ ಒಂದು ಮಾನಸಿಕ ವಿಕೃತಿಯ ಅಭಿವ್ಯಕ್ತಿ ಎಂದು ಪರಿಗಣಿಸಿ ಚಿಕಿತ್ಸೆ ಕೊಡಿಸಬೇಕಾದ ಅಗತ್ಯವೂ ಕಾಣುತ್ತಿದೆ. ಅದಕ್ಕೆ ಸಮಾಜದಲ್ಲಿ ಸಾಕಷ್ಟು ಎಚ್ಚರ ಮೂಡುವುದೂ ಅಗತ್ಯ.

ಮೇಲೆ ಹೇಳಿದ ಪ್ರಸಂಗಗಳನ್ನು ಗಮನಿಸಿದರೆ ಎಲ್ಲ ಯುವಜನರೂ ಹೀಗೆಯೇ ಎಂದು ಭಾವಿಸುವ ಅಗತ್ಯ ಇಲ್ಲ. ಅಂಥವುಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಅದನ್ನು ತಡೆಯುವತ್ತ ಗಮನ ಹರಿಸಬೇಕಾದ ಅಗತ್ಯ ಇದೆ ಎಂದು ಹೇಳುವುದಷ್ಟೇ ನಮ್ಮ ಕಾಳಜಿ. ಇದರ ಜೊತೆಗೆ ನಮ್ಮ ಯುವ ಜನತೆ ತಳೆಯುವ ದಿಟ್ಟ ನಿರ್ಧಾರಗಳನ್ನು ಕೂಡ ನಾವು ಮೆಚ್ಚಬೇಕಿದೆ. ಈ ಬಾರಿ ನ್ಯಾಷನಲ್ ಲಾ ಯೂನಿವರ್ಸಿಟಿ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದ ಮಹಿಳೆಯು ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅವರಿಂದ ಚಿನ್ನದ ಪದಕ ಪಡೆಯಲು ನಿರಾಕರಿಸಿದಳು. ತಮ್ಮ ವಿರುದ್ಧ ಹೂಡಲಾಗಿದ್ದ ಲೈಂಗಿಕ ಕಿರುಕುಳ ಕುರಿತ ದೂರನ್ನು ಅವರು ನಿರ್ವಹಿಸಿದ ರೀತಿಯನ್ನು ಪ್ರತಿಭಟಿಸಿ ಆಕೆ ಚಿನ್ನದ ಪದಕವನ್ನು ಅವರಿಂದ ಪಡೆಯಲು ನಿರಾಕರಿಸಿದ್ದಾಳೆ. ಇಂಥ ದಿಟ್ಟ, ನೇರತನ ಮತ್ತು ನೈತಿಕತೆ ಪ್ರದರ್ಶಿಸಲು ಆಂತರಿಕ ಬಲ ಇರಬೇಕು. ಅಂಥದ್ದನ್ನು ಸಾಧಿಸುವ ಯುವತಿಯರೂ ನಮ್ಮಲ್ಲಿ ಇದ್ದಾರೆ ಎಂಬುದನ್ನು ನಾವು ಮರೆಯಬಾರದು.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: