ಸ್ವಚ್ಛ ಭಾರತ ರಸಪ್ರಶ್ನೆ : ಶಿರಸಿಯ ಲಯನ್ಸ್ ಪ್ರೌಢಶಾಲೆ ಪ್ರಥಮ

0
40

ಕಾರವಾರ,ಆ.24- ನಗರದ ಜಿಲ್ಲಾ ರಂಗಮಂದಿರದಲ್ಲಿ ಸ್ವಚ್ಛ ಭಾರತ ಮಿಷನ್(ಗ್ರಾ) ಯೋಜನೆಯಡಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಶಿರಸಿಯ ಲಯನ್ಸ್ ಪ್ರೌಢಶಾಲೆ ಪ್ರಥಮ ಬಹುಮಾನ ಪಡೆದಿದೆ.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಒಳಗೊಂಡು ಒಟ್ಟೂ 102 ತಂಡಗಳು ಲಿಖಿತ ಪರೀಕ್ಷೆಗೆ ಹಾಜರಾಗಿದ್ದವು. ಅವುಗಳಲ್ಲಿ 6 ತಂಡಗಳನ್ನು ಫೈನಲ್‍ಗೆ ಆಯ್ಕೆ ಮಾಡಲಾಯಿತು.

ಅದರಲ್ಲಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಿರಸಿ ಪ್ರಥಮ ಸ್ಥಾನ, ಸರಕಾರಿ ಪದವಿಪೂರ್ವ ಕಾಲೇಜು ಕಾರವಾರ ದ್ವಿತೀಯ, ಶ್ರೀ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೃತೀಯ ಹಾಗೂ ಸಮಾಧಾನಕರ ಬಹುಮಾನವನ್ನು ವಿದ್ಯಾಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶ್ರೀ ಮಾರಿಕಾಂಬಾ ಪದವಿಪೂರ್ವ ಕಾಲೇಜು ಶಿರಸಿ ಹಾಗೂ ವೈಟಿಎಸ್‍ಎಸ್ ಪದವಿಪೂರ್ವ ಕಾಲೇಜು ಯಲ್ಲಾಪುರ ಬಹುಮಾನ ಪಡೆದುಕೊಂಡವು.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಾ ಕೋಠಾರಕರ್ ಅವರು ಮಾತನಾಡಿ, ಸಾಮಾನ್ಯ ಜ್ಞಾನವು ವಿದ್ಯಾರ್ಥಿಗಳಿಗೆ ಬಹಳ ಮಹತ್ವದ್ದಾಗಿದೆ. ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳುವಲ್ಲಿ ಸಾಮಾನ್ಯ ಜ್ಞಾನದ ಅವಶ್ಯಕತೆ ಬಹಳಷ್ಟಿದೆ. ಮಕ್ಕಳನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ಬೆಳೆಸುವ ಜವಾಬ್ದಾರಿ ತಂದೆ-ತಾಯಿ ಹಾಗೂ ಶಿಕ್ಷಕರ ಮೇಲಿದೆ ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಿರತ ಪ್ರಯತ್ನ ಮುಖ್ಯ. ಶೈಕ್ಷಣಿಕ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು ಎಂದರು.

ರಸ ಪ್ರಶ್ನೆ ಕಾರ್ಯಕ್ರಮದ ಸಂಯೋಜಕಿ ಬೆಂಗಳೂರಿನ ವಾಲ್‍ನಟ್ ನಾಲೆಜ್ ಪ್ರೈವೆಟ್ ಲಿಮಿಟೆಡ್‍ನ ಅನಘಾ ಶ್ರೀಧರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೆಶಕ ಕೆ.ಮಂಜುನಾಥ್, ಜಿಲ್ಲಾ ಪಂಚಾಯ್ತಿ ಸ್ವಚ್ಛಭಾರತ ಅಭಿಯಾನದ ಸಂಯೋಜಕ ಸೂರ್ಯನಾರಾಯಣ ಭಟ್ ಇದ್ದರು.

LEAVE A REPLY

Please enter your comment!
Please enter your name here