ಧಾರವಾಡ

ಪ್ರೌಢ ಶಾಲಾ ಸಹ ಶಿಕ್ಷಕರ ಕೌನ್ಸೆಲಿಂಗ್ ಸಂಪನ್ನ

ಧಾರವಾಡ,ಆ.24- ಇಲ್ಲಿಯ ಡಯಟ್‍ನ ಡೆಪ್ಯೂಟಿ ಚೆನ್ನಬಸಪ್ಪ ಸಭಾಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಛೇರಿಯು ಹಮ್ಮಿಕೊಂಡಿದ್ದ ಪ್ರೌಢ ಶಾಲಾ ಸಹ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಶನಿವಾರ ಸಂಪನ್ನಗೊಂಡಿತು.

ಬೆಳಗಾವಿ ವಿಭಾಗದ 9 ಜಿಲ್ಲೆಗಳಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕರ ವರ್ಗಾವಣೆಗೆ ಸರಕಾರದ ನಿಯಮಗಳ ಪ್ರಕಾರ ಒಟ್ಟು 323 ಸ್ಥಳಗಳಿಗೆ ಮಾತ್ರ ವರ್ಗಾವಣೆ ಪಡೆಯಲು ಅವಕಾಶವಿತ್ತು. ಅದರಂತೆ ಅರ್ಜಿ ಸಲ್ಲಿಸಿದ ಶಿಕ್ಷಕ-ಶಿಕ್ಷಕಿಯರಲ್ಲಿ ಆದ್ಯತಾ ಪಟ್ಟಿಯ ಕ್ರಮಾಂಕದಂತೆ ಒಟ್ಟು 623 ಜನರ ಕೌನ್ಸೆಲಿಂಗ್ ನಡೆದಿದ್ದು, ಈ ಪೈಕಿ 172 ಜನರು ಗೈರ ಉಳಿದಿದ್ದರೆ, 128 ಜನರು ಕೌನ್ಸೆಲಿಂಗ್‍ಗೆ ಹಾಜರಾಗಿಯೂ ಸ್ಥಳ ಆಯ್ಕೆ ಮಾಡಿಕೊಳ್ಳದೇ ತಿರಸ್ಕರಿಸಿದ್ದಾರೆ. ಇನ್ನುಳಿದಂತೆ ಲಭ್ಯವಿದ್ದ 323 ಜನ ಶಿಕ್ಷಕರಿಗೆ ಅವರವರ ಸ್ಥಳ ಆಯ್ಕೆಗೆ ಅನುಸಾರವಾಗಿ ಸ್ಥಳದಲ್ಲಿಯೇ ವರ್ಗಾವಣೆ ಆದೇಶಗಳನ್ನು ನೀಡಲಾಯಿತು.

ಆಗಷ್ಟ-5 ರಂದು ಆರಂಭಗೊಂಡಿದ್ದ ಈ ವರ್ಗಾವಣೆ ಕೌನ್ಸೆಲಿಂಗ್ ಮಳೆಯ ಕಾರಣದಿಂದ ಮುಂದೂಡಲಾಗಿತ್ತು. ಮತ್ತೆ ಶುಕ್ರವಾರ (ಆಗಷ್ಟ-23) ಹಾಗೂ ಶನಿವಾರ (ಆಗಷ್ಟ-24) 2 ದಿನಗಳ ಕಾಲ ಕೌನ್ಸೆಲಿಂಗ್ ಜರುಗಿಸಿ ವರ್ಗಾವಣೆ ಪ್ರಕ್ರಿಯೆ ಜರುಗಿಸಲಾಯಿತೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ವರ್ಗಾವಣೆ ಪ್ರಾಧಿಕಾರಿಯೂ ಆಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ್ ಈ ಸಂದರ್ಭದಲ್ಲಿ ತಿಳಿಸಿದರು.

ಶಿಕ್ಷಣ ಇಲಾಖೆ ಆಯುಕ್ತರ ಕಛೇರಿ ಉಪನಿರ್ದೇಶಕರಾದ ಮೃತ್ಯುಂಜಯ ಕುಂದಗೋಳ ಹಾಗೂ ಆರ್.ಎಸ್. ಮುಳ್ಳೂರ, ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ ಬಮ್ಮಕ್ಕನವರ, ಹಿರಿಯ ಸಹಾಯಕ ನಿರ್ದೇಶಕ ಅರ್ಜುನ ಕಂಬೋಗಿ, ಇ-ಆಡಳಿತ ವಿಭಾಗದ ಕಾರ್ಯಕ್ರಮ ಅಧಿಕಾರಿ ಶಾಂತಾ ಮೀಸಿ ಮುಂತಾದ ಸಿಬ್ಬಂದಿ ವರ್ಗದವರು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಮತ್ತೆ ಸೋಮವಾರ ಕೌನ್ಸೆಲಿಂಗ್ : ಆಗಷ್ಟ-26 ರಂದು (ಸೋಮವಾರ) ಸರಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಕರ ಆದ್ಯತಾ ಪಟ್ಟಿ ಕ್ರಮ ಸಂಖ್ಯೆ : 1 ರಿಂದ ಕೊನೆಯವರೆಗೆ. ಹಾಗೂ ಸರಕಾರಿ ಪ್ರೌಢ ಶಾಲಾ ವಿಶೇಷ ಶಿಕ್ಷಕರ ಆದ್ಯತಾ ಪಟ್ಟಿ ಕ್ರಮ ಸಂಖ್ಯೆ : 1 ರಿಂದ ಕೊನೆಯವರೆಗೆ ಕೌನ್ಸೆಲಿಂಗ್ ನಡೆಸಲಾಗುವುದು.

ಆಗಷ್ಟ-27 ರಂದು ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರ ಘಟಕದೊಳಗಿನ ಪರಸ್ಪರ ಒಪ್ಪಿತ (ಮ್ಯುಚ್ಯುವಲ್) ವರ್ಗಾವಣೆ, ಆಗಷ್ಟ-28 ರಂದು ವಿಶೇಷ ವರ್ಗೀಕರಣ ಹುದ್ದೆಗಳಲ್ಲಿನ ಶಿಕ್ಷಕರ ಪ್ರಕರಣಗಳಿಗೆ ಸಂಬಂಧಿಸಿದ ಕಡ್ಡಾಯ ವರ್ಗಾವಣೆ, ಆಗಷ್ಟ-29 ರಂದು ಕಡ್ಡಾಯ ವರ್ಗಾವಣೆ ನಿಯಮ ಸೆಕ್ಷನ್ 3-ಎ(1)/(2) ರಂತೆ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ವರ್ಗಾವಣೆ ಹಾಗೂ ಆಗಷ್ಟ-30 ರಂದು ಕಡ್ಡಾಯ ವರ್ಗಾವಣೆ ನಿಯಮ ಸೆಕ್ಷನ್ 3-ಎ(1)/(2) ರಂತೆ ಸರಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಕರ ಮತ್ತು ವಿಶೇಷ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಜರುಗಲಿದೆ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: