ಧಾರವಾಡ

ಮಣ್ಣಿನ ಗಣೇಶ ಮೂರ್ತಿ ಸ್ಥಾಪಿಸಿ: ತಹಶೀಲ್ದಾರ ಪ್ರಕಾಶ ಕುದರಿ

ಧಾರವಾಡ,ಆ.24- ಜಿಲ್ಲೆಯಲ್ಲಿ ಪಿಓಪಿ ಗಣಪತಿ ಮೂರ್ತಿಗಳನ್ನು ನಿಷೇಧಿಸಲಾಗಿದ್ದು, ಯಾವುದೇ ರೀತಿಯ ಪಿಓಪಿ ಮೂರ್ತಿಗಳ ಮಾರಾಟ ಮಾಡುವವರನ್ನು ಮತ್ತು ಖರೀದಿಸುವವರ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಕಾಯ್ದೆಯಪ್ರಕಾರ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಹಾಗೂ ಸಾರ್ವಜನಿಕ ಗಣೇಶ ಉತ್ಸವ ಸಮಿತಿ ಸದಸ್ಯರು ಪಿಓಪಿ ಗಣೇಶ ಮೂರ್ತಿಗಳನ್ನು ಸ್ಥಾಪಿಸದಿರುವಂತೆ ತಹಸಿಲ್ದಾರ ಪ್ರಕಾಶ ಕುದರಿ ತಿಳಿಸಿದರು.

ಅವರು ನಿನ್ನೆ (ಆಗಸ್ಟ್ 23)ಸಂಜೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ 2019 ನೇ ಸಾಲಿನ ಗಣೇಶ ಹಬ್ಬದ ಹಾಗೂ ಮೊಹರಂ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಜಿಲ್ಲೆಯಲ್ಲಿ ಅತಿಯಾದ ಮಳೆ ಹಾಗೂ ನೆರೆಯಿಂದ ಧಾರವಾಡ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೆರೆಹಾವಳಿಯಾಗಿದ್ದು ಯಾವದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಸಾರ್ವಜನಿಕರು ಮತ್ತು ಪೊಲೀಸ್ ಅಧಿಕಾರಿಗಳು, ಜಾಗೃತಿ ವಹಿಸಲು ಸೂಚನೆ ನೀಡಿದರು.

ಮುಂಬರುವ ಗಣೇಶ ಹಬ್ಬ ಹಾಗೂ ಮೊಹರಂ ಹಬ್ಬವನ್ನು ಎಲ್ಲರೂ ಶಾಂತ ರೀತಿಯಿಂದ ಆಚರಿಸಬೇಕು ಯಾವುದೇ ರೀತಿಯ ಕೋಮು ಗಲಭೆಗಳು ಜರುಗದಂತೆ ಎಲ್ಲರೂ ಒಂದೇ ಮನೋಭಾವದಿಂದ ಇದ್ದು ಶಾಂತ ರೀತಿಯಿಂದ ಕಾನೂನು ಸುವ್ಯವೆಸ್ಥೆಯನ್ನು ಕಾಪಾಡಿಕೊಂಡು ಯಾವುದೇ ಅಹಿತಕರ ಘಟನೆಗಳು ಹಾಗೂ ಕೋಮಿನ ಜನರಿಗೆ ಧಕ್ಕೆಯಾಗದಂತೆ ಹಬ್ಬವನ್ನು ಆಚರಿಸಬೇಕು. ಗಣೇಶ ಸ್ಥಾಪನೆ ಕುರಿತು ಕಡ್ಡಾಯವಾಗಿ ಗ್ರಾಮ ಪಂಚಾಯತ ಹಾಗೂ ಕೆ ಇ ಬಿ ಯವರ ಪರವಾನಿಗೆಯನ್ನು ಪಡೆದುಕೊಳ್ಳಬೇಕು ಎಂದು ತಹಸಿಲ್ದಾರ ತಿಳಿಸಿದರು.

ಧಾರವಾಡ ಗ್ರಾಮೀಣ ವೃತ್ತದ ಸಿಪಿಐ ಶಿವಕುಮಾರ ಎಸ್ ಕಮತಗಿ ಅವರು ಮಾತನಾಡಿ, ಗಣೇಶ ಹಬ್ಬ ಹಾಗೂ ಮೊಹರಂ ಆಚರಣೆಗೆ ನೀಡಿರುವ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಸಮಾಜ ಬಾಂಧವರು ಪಾಲಿಸತಕ್ಕದ್ದು ಹಾಗೂ ಯಾವದೇ ರೀತಿ ಅತೀಹೆಚ್ಚು ಡೆಸಿಬಲ್ ಇರುವಂತಹ ಧ್ವನಿವರ್ದಕಗಳನ್ನು ಉಪಯೋಗಿಸಬಾರದು. ವಿದ್ಯುತ್ ನಿಲುಗಡೆಯಾದ ಸಂದರ್ಭದಲ್ಲಿ ಜನರೇಟರ್, ಗ್ಯಾಸ್ ಬತ್ತಿ (ಪೆಟ್ರೋ ಮ್ಯಾಕ್ಸ ) ಅಥವಾ ಬ್ಯಾಟರಿಗಳ ಮೇಲೆ ನಡೆಯುವಂತ ಟ್ಯೂಬ್ ಲೈಟಗಳ ವ್ಯವಸ್ಥೆಯನ್ನು ಮಾಡಬೇಕು ಎಂದು ತಿಳಿಸಿದರು.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಆನಂದ ವಿ.ಠಕ್ಕಣ್ಣವರ ಮಾತನಾಡಿ, ಪೊಲೀಸ್ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಹಾಗೂ ಯಾವದೇ ರೀತಿಯ ಅಶ್ಲೀಲ ಹಾಡುಗಳನ್ನು ಹಬ್ಬ ಆಚರಣೆಯ ಸಂದರ್ಭದಲ್ಲಿ ಹಾಡತಕ್ಕದಲ್ಲಾ ಎಂದು ಮತ್ತು ಗಣೇಶ ಮೂರ್ತಿ ಸ್ಥಾಪಿಸಿದ ಮಂಟಪದಲ್ಲಿ ದರ್ಶನಕ್ಕೆಂದು ಆಗಮಿಸುವ ಸಾರ್ವಜನಿಕರಿಗೆ ಹೋಗಿ ಬರಲು ಸಾಕಷ್ಟು ಸ್ಥಳಾವಕಾಶ ಮಾಡಬೇಕು. ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಜನರನ್ನು ನಿಯಂತ್ರಿಸಲು ಮಹಿಳೆಯರಿಗೆ ಮತ್ತು ಪುರುಷರಿಗಾಗಿ ಪ್ರತ್ಯೇಕವಾದ ಪ್ರವೇಶ ನಿರ್ಮಿಸಿ, ಬೀದಿರಿನ ಬ್ಯಾರಿಕೇಡ ಅಳವಡಿಸಬೇಕು ಎಂದು ತಿಳಿಸಿದರು.

ಮಂಟಪದಲ್ಲಿ ಡೆಟಾಲ, ಬರ್ನಾಲ್, ಎಂಟಿಸಪ್ಟಿಕ್ ಕ್ರೀಮ್, ಹತ್ತಿ ಮುಂತಾದ ವಸ್ತುಗಳಿಂದ ಕೂಡಿದ ಪ್ರಥಮೋಪಚಾರ ಪೆಟ್ಟಿಗೆಯನ್ನು ಇಟ್ಟಿರಬೇಕು. ಗಣೇಶ ವಿಸರ್ಜನೆಯ ದಿನ ಸೇರಿದಂತೆ ದಿನದ 24 ಗಂಟೆಗಳ ಕಾಲ ಕನಿಷ್ಟ ಇಬ್ಬರು ಸ್ವಯಂ ಸೇವಕರು ಮಂಟಪದಲ್ಲಿ ಕರ್ತವ್ಯ ನಿರತರಾಗಿರಬೇಕು. ಮತ್ತು ಅಂತಹ ಸ್ವಯಂ ಸೇವಕರ ಹೆಸರುಗಳನ್ನು ಸಂಬಂದಪಟ್ಟ ಪೊಲೀಸ್ ಠಾಣೆಗೆ ಮುಂಚಿತವಾಗಿ ತಿಳಿಸಬೇಕು ಹಾಗೂ ಸ್ವಯಂ ಸೇವಕರು ಗುರ್ತಿನ ಪಟ್ಟಿಯನ್ನು ಹೊಂದಿರಬೇಕು. ಗಣೇಶ ಮಂಟಪದಲ್ಲಿ ಸಾರ್ವಜನಿಕರಿಗೆ ಎದ್ದುಕಾಣುವಂತೆ ತಮ್ಮ ಸಮೀಪದ ಪೊಲೀಸ್ ಠಾಣೆ, ಸಮೀಪದ ಆಸ್ಪತ್ರೆ, ಅಗ್ನಿ ಶಾಮಕ ಠಾಣೆ ಹಾಗೂ ಸಂಘಟನಾಕಾರರ ಹೆಸರುಗಳನ್ನು ಹೊಂದಿರುವ ಫಲಕವನ್ನು ತೂಗು ಹಾಕಬೇಕು ಮತ್ತು ಅದರ ಒಂದು ಪ್ರತಿಯನ್ನು ಸಂಬಂದಪಟ್ಟ ಪೊಲಿಸ್ ಠಾಣೆಗಳಿಗೆ ಒದಗಿಸಿರಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಹೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ ಟಿಂಗರೆಕರ, ಮುಗದ ಗ್ರಾಮದ ಪ್ರಮುಖ ಪೀರಜಾದೇ ಚಾಚಾ, ಜಿಲ್ಲಾ ಪಂಚಾಯತ ಸದಸ್ಯರಾದ ಕರೇಪ್ಪ ಮಾದರ, ಚನ್ನಬಸಪ್ಪ ಮಟ್ಟಿ ಸೇರಿದಂತೆ        ವಿವಿಧ ಪ್ರಮುಖರು ಹಾಗೂ ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: