ಸಂಪಾದಕೀಯ

ಕೇಳಿ ತಿಳಿದರೆ ದಾರಿಯುಂಟು

ನಮಗೆ ಎಲ್ಲವೂ ತಿಳಿದಿದೆ ಎಂದುಕೊಳ್ಳುವುದು ಅಪಾಯಕಾರಿ. ಗೊತ್ತೇ ಇರದ ದಾರಿಯಲ್ಲಿ ನಡೆಯುವಾಗ ದಾರಿ ಕೇಳಿದರೆ ಯಾರಾದರೂ ತಿಳಿಸಿ ಹೇಳುತ್ತಾರೆ. ಈಗ ದೇಶ ಅನುಭವಿಸುತ್ತಿರುವ ಆರ್ಥಿಕ ಸ್ಥಿತಿ ಮತ್ತು ತಲ್ಲಣಗಳಿಗೆ ತಾವು ಅನುಸರಿಸಿದ ದಾರಿ ಸರಿ ಇಲ್ಲ ಎನ್ನುವ ಅರಿವು ಮೂಡಿದರೆ ಬೇರೆ ದಾರಿಯತ್ತ ಹೊರಳುವುದು ಸಹಜ. ಆದರೆ, ಇಲ್ಲೇ ಎಲ್ಲೋ ಸರಿ ದಾರಿ ಇರಬಹುದು ಹುಡುಕಿ ನೋಡೋಣ ಎಂದು ಮತ್ತೆ ಪ್ರಯೋಗಕ್ಕೆ ತೊಡಗಿದರೆ ಇನ್ನೂ ದೊಡ್ಡ ಅಪಾಯಕ್ಕೆ ಸಿಲುಕಬಹುದು. ಕೇಳಿ ತಿಳಿಯುವ ಕೆಲಸವನ್ನು ಕೇಂದ್ರ ಸರ್ಕಾರ ಈಗ ಮಾಡಬೇಕಿದೆ.

ಬಹುಷಃ ಕೇಂದ್ರದಲ್ಲಿ ಅಧಿಕಾರ ನಡೆಸುತ್ತ ಇರುವವರಿಗೆ ತಾವು ಅಂದುಕೊಂಡ ರೀತಿಯಲ್ಲಿ ಎಲ್ಲ ಸಾಗುತ್ತದೆ ಎಂಬ ಕಲ್ಪನೆ ಇರಬಹುದು. ಅದು ಕೆಲವು ವಿಚಾರಗಳಲ್ಲಿ ನಿಜವೂ ಆಗಿರಬಹುದು. ಹಾಗೆಂದು ಎಲ್ಲ ವಿಚಾರಗಳಲ್ಲೂ ಅವರು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಅವರ ಬೆಂಬಲಿಗರು ನಂಬುವುದು ಮತ್ತು ಬೆಂಬಲಿಗರು ಒಪ್ಪಿರುವುದರಿಂದ ಎಲ್ಲವೂ ಸರಿ ಎಂದು ಆಡಳಿತ ನಡೆಸುತ್ತಾ ಇರುವವರು ಗ್ರಹಿಸುವುದು ತಪ್ಪಾಗುತ್ತದೆ. ಆರ್ಥಿಕ ವಿಚಾರದಲ್ಲಿ ಕೇಂದ್ರ ಸರ್ಕಾರ ತಳೆದಿರುವ ನಿಲುವು ಫಲಕಾರಿ ಅಲ್ಲ, ಬದಲಿಗೆ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ಈ ವಿಚಾರದಲ್ಲಿ ಹಿಂದೆಯೂ ಕೆಲವರು ಇದು ತಪ್ಪು ಎಂದು ಹೇಳಿದ್ದಾರೆ. ಆದರೆ ಅಂಥ ಮಾತು ಬಂದಿದ್ದು ವಿರೋಧ ಪಕ್ಷಗಳಿಂದ ಎಂಬ ಕಾರಣಕ್ಕೆ ಅದಕ್ಕೆ ದಕ್ಕಬೇಕಾದ ಮಹತ್ವ ದೊರೆತಿರಲಿಲ್ಲ.

ಈಗಲೂ ಸರ್ಕಾರ ತನ್ನ ತಪ್ಪನ್ನು ಅರಿತು ತಿದ್ದಿ ನಡೆದುಕೊಳ್ಳದೇ ಇದ್ದರೆ ಜನರಿಗೆ ಕಷ್ಟ. ಬೇಡ ಎಂದು ಹೇಳಿದ್ದನ್ನೇ ಮಾಡಿ ತಾನು ಗೆಲ್ಲುತ್ತೇನೆ ಮತ್ತು ಗೆದ್ದು ತೋರಿಸುತ್ತೇನೆ ಎಂಬ ಅಹಮಿನಿಂದ ದೂರ ಸರಿಯದೇ ಈಗ ದಾರಿ ಇಲ್ಲ. ಇದು ಅಹಮ್ಮಿನ ಪ್ರಶ್ನೆ ಅಲ್ಲ, ಕೋಟಿ ಕೋಟಿ ಜನರ ಬದುಕಿನ ಪ್ರಶ್ನೆ. ಅದಕ್ಕಾಗಿಯಾದರೂ ಸ್ವಲ್ಪ ನಿಲುವು ಬದಲಾವಣೆ ಮಾಡಿಕೊಳ್ಳುವುದು ಈಗಂತೂ ಅತ್ಯಗತ್ಯ.

ಕೇಳಿ ದಾರಿ ತಿಳಿದುಕೊಳ್ಳುವುದಿರಲಿ, ಹೋಗುವ ದಾರಿ ಗುರಿ ಮುಟ್ಟಿಸುವುದಿಲ್ಲ ಎಂದು ಎಚ್ಚರಿಸಿದಾಗಲೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಅದಕ್ಕೆ ಗಮನ ನೀಡಲೇ ಇಲ್ಲ. ನೋಟು ಅಮಾನ್ಯೀಕರಣ ವಿಚಾರವನ್ನೇ ನೋಡಿ. ಅದನ್ನು ಪ್ರಕಟಿಸುವ ಕೆಲವು ತಾಸಿಗೆ ಮುಂಚೆ ಇಂಥ ವಿಚಾರಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾದ ರಿಸರ್ವ ಬ್ಯಾಂಕಿನ ಆಡಳಿತ ಮಂಡಳಿಯು ಸಭೆ ನಡೆಸಿ ನೋಟು ಅಮಾನ್ಯತೆ ಬೇಡ ಎಂದು ಸಲಹೆ ನೀಡಿತ್ತು. ಆದರೂ ಅದು ನಡೆದೇ ಹೋಯಿತು. ಅದರ ಪರಿಣಾಮ ಎಂದರೆ ಜನರ ಕೈಯಲ್ಲಿ ಹಣ ಇಲ್ಲವಾಯಿತು. ದೇಶದಲ್ಲಿ ಅನೌಪಚಾರಿಕ ಆರ್ಥಿಕತೆ ಪರಿಮಾಣ ಶೇಕಡಾ 84ರಷ್ಟು. ಇಲ್ಲಿ ನಗದು ವ್ಯವಹಾರ ಹೆಚ್ಚು. ಆದರೆ ನೋಟು ಅಮಾನ್ಯೀಕರಣದಿಂದಾಗಿ ಜನರ ಬಳಿ ಹಣ ಇಲ್ಲದೇ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋದವು. ಅಲ್ಲಿ ದುಡಿಯುತ್ತಾ ಇದ್ದ ಜನ ಕೆಲಸ ಕಳೆದುಕೊಂಡರು. ಉದ್ಯೋಗ ಸೃಷ್ಟಿಯ ಬದಲು ನಿರುದ್ಯೋಗ ಸೃಷ್ಟಿ ಆಯಿತು.

ಇದರ ಮುಂದಿನ ಹಾದಿ ಎಂದು ಆತುರಾತುರವಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜಾರಿ ಮಾಡÀಲಾಯಿತು. ಈ ವ್ಯವಸ್ಥೆ ಕುರಿತು ಬಹಳ ವರ್ಷಗಳಿಂದ ಅಧ್ಯಯನ ನಡೆಸಿ, ಅದಕ್ಕೊಂದು ಸ್ವರೂಪ ಕೊಡುವ ಹಂತದಲ್ಲಿ ಇದ್ದವರು ಹಿಂದಿನ ಸರ್ಕಾರದ ಪ್ರಧಾನಿ ಡಾ. ಮನಮೋಹನ ಸಿಂಗ್. ಅವರನ್ನು ಹೊಸ ಸರ್ಕಾರವು ಚರ್ಚೆಗೆ ಆಹ್ವಾನಿಸಿತಾದರೂ ಮಾತುಕತೆ ನಡೆದಿದ್ದು ಕೇವಲ ಐದು ನಿಮಿಷ. ಇದು ಕೆಲವೇ ನಿಮಿಷಗಳಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರುವಂಥ ವಿಷಯ ಅಲ್ಲ, ಮುಂದೆ ಇನ್ನೊಮ್ಮೆ ಸುದೀರ್ಘ ಚರ್ಚೆ ನಡೆಸಬೇಕು ಎಂದು ಆ ಸಂದರ್ಭದಲ್ಲಿ ಮನಮೋಹನ ಸಿಂಗ್ ಹೇಳಿದ್ದರು. ಆದರೆ ಅವರ ಜೊತೆ ಚರ್ಚೆ ಮುಂದುವರಿಸಲೇ ಇಲ್ಲ. ನೋಟು ಅಮಾನ್ಯ ಮಾಡಿದ ಸಂದರ್ಭದಲ್ಲಿ ಇದೇ ಮಾಜಿ ಪ್ರಧಾನಿ ಅವರು ಈ ಕ್ರಮದಿಂದ ಜಿಡಿಪಿ ಶೇಕಡಾ ಎರಡರಷ್ಟು ಕುಸಿಯಲಿದೆ ಎಂದು ಹೇಳಿದ್ದ ಮಾತು ನಿಜವಾಯಿತಾದರೂ ಅವರ ಮಾತನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಿಗೆ ಹಿಂದಿನ ಪ್ರಧಾನಿಯನ್ನು ಗೇಲಿ ಮಾಡುವ ಮಟ್ಟಕ್ಕೂ ಕೆಲವರು ಹೋದರು.

ಈಗ ಸ್ಥಿತಿ ಮತ್ತೂ ಹದಗೆಟ್ಟಿದೆ. ಕೈಗಾರಿಕೆಗಳ ಉತ್ಪನ್ನ ಕುಸಿತ ಕಂಡಿದೆ, ಮಾರಾಟದಲ್ಲಿ ಇಳಿಕೆಯಾಗಿದೆ. ಅದಕ್ಕೆ ಮೂಲ ಕಾರಣ ಜನರ ಕೊಳ್ಳುವ ಶಕ್ತಿ ಕುಂದಿರುವುದು, ಬಂಡವಾಳ ಹೂಡಿಕೆ ಕಡಿಮೆ ಆಗಿರುವುದು ಹಾಗು ಸಾಲ ಕೊಡಲು ಬ್ಯಾಂಕುಗಳ ಬಳಿ ಹಣ ಇಲ್ಲದಿರುವುದು. ಈ ಪರಿಸ್ಥಿತಿಯಲ್ಲಿ ಜನ ಹೇಗೋ ನಿಭಾಯಿಸಿಕೊಂಡು ಹೋಗುತ್ತಾರಾದರೂ ಇನ್ನೂ ಸ್ಥಿತಿ ಹದಗೆಟ್ಟರೆ ಅವರ ಬದುಕು ಹಾಳಾಗುತ್ತದೆ. ಇದೇ ಸ್ಥಿತಿ ಮುಂದುವರಿದರೆ ದೇಶದ ಆರ್ಥಿಕ ಸ್ಥಿತಿ ಮರಳಿ ಚೇತರಿಸಿಕೊಳ್ಳಲಾಗದಂತೆ ಆಗುತ್ತದೆ. ಒಮ್ಮೆ ಆ ಸ್ಥಿತಿ ನಿರ್ಮಾಣವಾದರೆ ಬೀದಿ ಬೀದಿಯಲ್ಲಿ ಜನ ಹೊಡೆದಾಡುತ್ತಾರೆ, ಸಮಾಜ ವಿರೋಧಿ ಶಕ್ತಿಗಳು ಹೆಚ್ಚಾಗುತ್ತವೆ, ಅಪರಾಧ ಪ್ರಕರಣಗಳು ಬೆಳೆಯುತ್ತವೆ ಎಂದು ಹಿಂದೆ ಇದ್ದ ರಿಸರ್ವ ಬ್ಯಾಂಕಿನ ಡೆಪ್ಯುಟಿ ಗವರ್ನರ್ ವಿರಾಲ್ ಆಚಾರ್ಯ ಅವರು ಎಚ್ಚರಿಸಿದರೂ ಸರ್ಕಾರ ಅದಕ್ಕೆ ಕಿವಿಗೊಡಲಿಲ್ಲ. ಆಚಾರ್ಯ ಅವರು ಬೇಸತ್ತು ರಾಜೀನಾಮೆ ನೀಡಿ ಹೋದರು.

ತಾನು ಅನುಸರಿಸಿದ ಮಾರ್ಗ ಸರಿ ಅಲ್ಲ ಎಂದು ಅರಿತುಕೊಂಡು, ಆರ್ಥಿಕ ವಿಚಾರಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡವರ ಸಲಹೆ ಪಡೆದು ಅದರಂತೆ ನಡೆದುಕೊಳ್ಳುವುದೊಂದೇ ಈಗ ಸರ್ಕಾರಕ್ಕೆ ಇರುವ ದಾರಿ. ಅದರಿಂದ ಅವರಿಗೂ ಕ್ಷೇಮ, ನಾಡಿಗೂ ಕ್ಷೇಮ. ಇಲ್ಲವಾದಲ್ಲಿ ಇತಿಹಾಸದ ಘೋರ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆದಂತೆ ಆಗುತ್ತದೆ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: