ಸಂಪಾದಕೀಯ

ಕರುಣೆ ಇಲ್ಲದವರು

ನಾಟಕ, ಸಿನಿಮಾಗಳಲ್ಲಿ ಆಸ್ಥಾನದ ದೃಶ್ಯ ಆರಂಭವಾಗುವುದೇ ‘ಪ್ರಜೆಗಳೆಲ್ಲರೂ ಕ್ಷೇಮವೇ?’ ಎಂದು ಕೇಳುವ ರಾಜನ ಸಂಭಾಷಣೆ ಮೂಲಕ. ಅದು ಕೇವಲ ಉಪಚಾರದ ಮಾತಲ್ಲ. ಬೇಹುಗಾರರು ನೀಡಿದ ಮಾಹಿತಿ ಮೇಲೆ ಸ್ಥಿತಿ ಗ್ರಹಿಸುವುದು. ಅದು ಸಾಲದೆಂಬಂತೆ ಆಳುವ ನಾಯಕನೇ ಖುದ್ದು ಮಾರುವೇಷದಲ್ಲಿ ತೆರಳಿ ಜನರ ಸಮೂಹದಲ್ಲಿ ಬೆರೆತು, ಅಲ್ಲಿ ನಡೆಯುವ ಮಾತುಕತೆ ಮೂಲಕ ರಾಜ್ಯ ಹೇಗಿದೆ ಎಂದು ಅರಿಯುತ್ತಿದ್ದ. ಅಂಥ ಕೆಲಸ ಮಾಡಲಾಗದವನು ಅರಸ ಎಂದು ಕರೆಸಿಕೊಳ್ಳಲು ವಿಫಲ ಆಗುತ್ತಿದ್ದ.

ಈಗ ಕಾಲ ಬದಲಾಗಿದೆ, ಸೌಕರ್ಯ ಹೆಚ್ಚಿದೆ. ಕುಳಿತಲ್ಲಿಂದಲೇ ದೇಶದಲ್ಲಿ ಎಲ್ಲಿ ಏನು ನಡೆಯುತ್ತಿದೆ ಎಂದು ತಕ್ಷಣದಲ್ಲಿಯೇ ತಿಳಿಯಬಹುದು. ಆದ್ದರಿಂದ ಆಳುವ ಕುರ್ಚಿಯಲ್ಲಿ ಕುಳಿತ ಜನರು ಕ್ಷಣಾರ್ಧದಲ್ಲಿ ಅಗತ್ಯ ನೆರವಿಗೆ ಕ್ರಮ ಕೈಗೊಳ್ಳಬಹುದು. ಹಿಂದೊಮ್ಮೆ ಸುನಾಮಿ ಅಪ್ಪಳಿಸಿದಾಗ, ಬದುಕು ಕೊಚ್ಚಿ ಹೋದ ಜನರಿಗೆ ತಕ್ಷಣವೇ ಅಂದಿನ ಪ್ರಧಾನಿ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಿದ್ದರು. ಅವರೇನೂ ವೈಮಾನಿಕ ಸಮೀಕ್ಷೆ ನಡೆಸಲಿಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದರು, ಅವರಿಂದ ಮಾಹಿತಿ ಪಡೆದರು, ಕಾರ್ಯಪ್ರವೃತ್ತರಾದರು.

ಈಗ ಎಲ್ಲವೂ ಉಲ್ಟಾ ಆಗಿದೆ. ನೆರೆಯಿಂದ ಬದುಕು ಕಳೆದುಕೊಂಡವರ ವಿಚಾರ ಕಣ್ಣಿಗೆ ರಾಚುವಂತಿದೆ. ಮುಖ್ಯಮಂತ್ರಿಗಳೇ ಅಂದಾಜು ನಲವತ್ತು ಸಾವಿರ ಕೋಟಿ ರೂಪಾಯಿ ನಷ್ಟ ಅಂದಿದ್ದಾರೆ. ಆದರೆ ಅವರು ಕೇಂದ್ರದ ಬಳಿ ಹೋದಾಗ, ಸ್ವಲ್ಪ ಹಣ ಕೊಡಿ ಎಂದರು. ಎರಡು ತಿಂಗಳೇ ಕಳೆಯುತ್ತಾ ಬಂದರೂ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಸರ್ಕಾರವು ಒಂದು ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಇದನ್ನು ಪ್ರಶ್ನಿಸಲು ಅವರ ಪಕ್ಷದ ಸಂಸದರು ತಯಾರಿಲ್ಲ. ಯಾವುದೋ ಸಣ್ಣ ವಿಚಾರ ಪ್ರಸ್ತಾಪಿಸಿ, ಪೊಲೀಸರನ್ನೇ ಷಂಡರು ಎಂದು ಕರೆಯುವ ಸಂಸದನಿಗೆ ಪ್ರಧಾನಿಯೇ ದೇವರಂತೆ, ಅವರ ವಿರುದ್ಧ ಯಾರೂ ಮಾತಾಡಬಾರದಂತೆ. ಬೆನ್ನೆಲುಬು ಇಲ್ಲದ ಇಂಥವರ ನಾಲಿಗೆ ಕೂಡ ಸತ್ವ ಕಳೆದುಕೊಂಡು, ಕೇವಲ ಹೊಗಳು ಭಟ್ಟರ ಕೆಲಸ ಮಾಡುವದಕ್ಕೆಂದೇ ಇವರನ್ನು ಆರಿಸಿ ಕಳಿಸಲಾಯಿತೇ?. ಮುಖ್ಯವಾಗಿ ಇವರ್ಯಾರಿಗೂ ಮನುಷ್ಯ ಕಾಳಜಿ, ಕರುಣೆ ಎಂಬುದು ಇಲ್ಲವೇ ಇಲ್ಲ. ಕೇಂದ್ರದಲ್ಲಿ ಇರುವವರಿಗೆ ಕರುಣೆ ಎಂದರೆ ಏನು ಎಂದು ತಿಳಿಯದು ಮತ್ತು ಮನುಷ್ಯತ್ವದ ಕುರಿತು ಮಾತಾಡಿದರೆ ಅವರು ಕಿಡಿಕಿಡಿ ಆಗುತ್ತಾರೆ.

ಏನು ಮಾಡಿದರೂ ನಡೆಯುತ್ತದೆ ಎನ್ನುವ ಅಹಂ ಕಾಣಿಸುತ್ತಿದೆ. ಅವರನ್ನು ಓಲೈಸುತ್ತಾ ಇರುವವರಿಗೆ ಸಹ ಇನ್ಯಾರದ್ದೋ ಮನೆಯ ಹರಿಕತೆ ನಮಗೇಕೆ, ನಾವು ಸುಖವಾಗಿ ಇದ್ದೇವಲ್ಲ ಬಿಡು ಅನ್ನಿಸಿರಬಹುದು. ಆದರೆ ಇವತ್ತು ಯಡಿಯೂರಪ್ಪ ಎಂಬ ಮುಖ್ಯಮಂತ್ರಿಯೇ ಚಡಪಡಿಸುತ್ತಾ ಇದ್ದಾರೆ ಎಂಬುದನ್ನು ಪಕ್ಷದ ಒಳಗೆ ಇರುವವರು ಅರ್ಥ ಮಾಡಿಕೊಳ್ಳಬೇಕು. ಅದ್ವಾನಿ ಅವರಂಥ ಹಿರಿಯ ನಾಯಕರನ್ನೇ ಹಾಲಿನಲ್ಲಿ ಬಿದ್ದ ನೊಣದಂತೆ ಎತ್ತಿ ಬಿಸಾಕಲಾಗಿದೆ. ಇದೇ ಗತಿ ನಿಮಗೂ ಬರುವುದಿಲ್ಲ ಎನ್ನುವ ಖಾತರಿ ಏನು?

ಬದುಕು ಕಳೆದುಕೊಂಡವರ ನೆರವಿಗೆ ಬಿಡಿಗಾಸೂ ಬಿಚ್ಚದ ಈ ಜನ ನಮ್ಮ ಉದ್ಧಾರ ಮಾಡುತ್ತಾರೆ ಎಂದು ಜನ ಅಂದುಕೊಂಡಿದ್ದರೆ ಅದಕ್ಕಿಂತ ದೊಡ್ಡ ಭ್ರಮೆ ಇನ್ನೊಂದಿಲ್ಲ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: