This is the title of the web page

ಕೃಷಿ ಹೊಂಡದಲ್ಲಿ ಬಿದ್ದು 3 ಬಾಲಕಿಯರ ಸಾವು

 

ಗದಗ, ೧೭- ಕುರಿ ಮೇಯಿಸಲು ಹೋಗಿದ್ದ ಮೂವರು ಬಾಲಕಿಯರು ಕೃಷಿ ಹೊಂಡದಲ್ಲಿ ಮುಳುಗಿ ಸಾವಿಗೀಡಾದ ಘಟನೆ ಮುಂಡರಗಿ ತಾಲೂಕಿನ ಅತ್ತಿಕಟ್ಟೆ ಗ್ರಾಮದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

ಚಿಕ್ಕಪ್ಪನ ಮದುವೆಗೆ ತಂದೆ ತಾಯಿಗಳೊಂದಿಗೆ ಗೋವಾದಿಂದ ಬಂದಿದ್ದ ಲಮಾಣಿ ತಾಂಡಾದ ಇಬ್ಬರು ಸಹೋದರಿಯರು ಗ್ರಾಮದ ಲಮಾಣಿ ತಾಂಡಾದ ಮೂವರು ಸ್ನೇಹಿತೆಯರೊಂದಿಗೆ ಕುರಿ ಮೇಯಿಸಲು ಹೋಗಿದ್ದರು. ಆಗ ನೀರಡಿಕೆ ಆದಾಗ ಹತ್ತಿರದಲ್ಲೇ ಇದ್ದ ಬಸವರಾಜ ಲಮಾಣಿಯವರ ಕೃಷಿ ಹೊಂಡಕ್ಕೆ ನೀರು ಕುಡಿಯಲು ಹೋಗಿ ಜಾರಿ ನೀರೊಳಗೆ ಬಿದ್ದಿದ್ದಾರೆ.

ಬಾಲಕಿಯರು ಕೃಷಿ ಹೊಂಡದ ಬಳಿ ಇರುವದನ್ನು ನೋಡಿದ್ದ ಇಬ್ಬರು ಮೃತ ಬಾಲಕಿಯರ ಚಿಕ್ಕಪ್ಪ ಗೋವಿಂದ ಲಮಾಣಿ ಕೆಲ ನಿಮಿಷಗಳ ನಂತರ ನೋಡಿದಾಗ ಬಾಲಕಿಯರು ಹೊಂಡದಲ್ಲಿ ಬಿದ್ದಿದ್ದರು. ತಕ್ಷಣ ಧಾವಿಸಿ ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲೇ ಮೂವರು ಬಾಲಕಿಯರು ಅಸುನೀಗಿದ್ದರು.

ಮೃತ ಬಾಲಕಿಯರನ್ನು 13 ವರುಷದ ಅಂಕಿತಾ ಲಮಾಣಿ, ಅವರ ಸಹೋದರಿ 11 ವರುಷದ ಸುನೀತಾ ಲೋಕೇಶ ಲಮಾಣಿ ಹಾಗು ಸ್ನೇಹಿತೆ 10 ವರ್ಷದ ಸುನೀತಾ ಡೋಣಿ  ಎಂದು ಗುರುತಿಸಲಾಗಿದೆ. ಮೃತ ಸಹೋದರಿಯರ ತಂದೆ ತಾಯಿ ಗೋವಾದಲ್ಲಿ ಕೆಲಸಕ್ಕಿದ್ದು, ಇದೆ 22ರಂದು ನಿಗದಿಯಾಗಿರುವ ಮದುವೆಗೆ ಗ್ರಾಮಕ್ಕೆ ಬಂದಿದ್ದರು.

ನೀರಿನಲ್ಲಿ ಮುಳುಗಿದ್ದ ಮೃತದೇಹಗಳನ್ನು ಸ್ಥಳೀಯರ ಸಹಾಯದಿಂದ ಹೊರತೆಗೆಯಲಾಗಿದ್ದು, ಮುಂಡರಗಿ ತಹಶೀಲದಾರ ಪೂಜಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂಡರಗಿ ಪೊಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You might also like
Leave a comment