This is the title of the web page

ನಾಲ್ಕು ದಿನ ಅಭಯಾರಣ್ಯದಲ್ಲಿ ಕಾಣೆಯಾಗಿ ಬದುಕಿ ಬಂದ ಪುಟ್ಟ ಬಾಲಕಿ!

ಖಾನಾಪುರ, ೧- “ಮಾರನೆವಾಲೆಸೆ ಬಚಾನೆವಾಲಾ ಬಡಾ ಹೋತಾ ಹೈ” ಎಂದು ಹೇಳುವಂತೆ ಭಗವಂತನ ಕೃಪೆ ಇದ್ದರೆ ಎಂಥೆಂಥ ಬಿರುಗಾಳಿಯಲ್ಲೂ ದೋಣಿ ದಡ ಸೇರುತ್ತದೆ ಎಂಬಂತೆ ಮೂರು ವರ್ಷದ ಪುಟ್ಟ ಬಾಲಕಿಯೊಬ್ಬಳು ನಾಲ್ಕು ದಿನ ಅಭಯಾರಣ್ಯದಲ್ಲಿ ಒಬ್ಬಂಟಿ ಇದ್ದರೂ ಸಹ ಬದುಕುಳಿದ ವಿಸ್ಮಯಕರ ಘಟನೆ ಜಾಂಬೋಟಿ ಬಳಿ ಘಟಿಸಿದೆ.

ಖಾನಾಪುರ ತಾಲೂಕಿನ ಜಾಂಬೋಟಿ ಬಳಿಯ ಚಿರೇಖಾನಿ ಗ್ರಾಮದ ತನ್ನ ಅಜ್ಜಿಯ ಮನೆಯ ಬಳಿ ಆಟವಾಡುವಾಗ ನಾಪತ್ತೆಯಾಗಿದ್ದ ಮೂರು ವರ್ಷದ ಹೆಣ್ಣು ಮಗು ನಾಲ್ಕು ದಿನಗಳ ಬಳಿಕ ಶನಿವಾರ ಸಂಜೆ ಎರಡೂವರೆ ಕಿ.ಮೀ. ದೂರದ ಅಭಯಾರಣ್ಯದಲ್ಲಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಎಪ್ರಿಲ್ 26ರಂದು ತಾಲೂಕಿನ ತಾವರಗಟ್ಟಿ ಗ್ರಾಮದ ಶಿವಾಜಿ ಇಟಗೇಕರ ಎಂಬವರು ತಮ್ಮ ಪತ್ನಿ ಹಾಗೂ ಮೂರು ವರ್ಷದ ಪುತ್ರಿ ಅದಿತಿ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು‌ ಚಿರೇಖಾನಿ ಗ್ರಾಮದ ತಮ್ಮ ಹೆಂಡತಿಯ ತವರು ಮನೆಗೆ ಬಂದಿದ್ದರು. ಮಂಗಳವಾರ ಮಧ್ಯಾಹ್ನ ಚಿರೇಖಾನಿಯ ತನ್ನ ಅಜ್ಜಿಯ ಮನೆಯ ಬಳಿ ಆಟವಾಟುತ್ತಿದ್ದ ಅದಿತಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಬಹುಶಃ ಆಕೆ ಆಟವಾಡುತ್ತ ಅರಣ್ಯದೊಳಗೆ ಹೋಗಿ ದಾರಿ ತಪ್ಪಿಸಿಕೊಂಡಿರಬಹುದು.

ಚಿರೇಖಾನಿ ಗ್ರಾಮಸ್ಥರು ಮತ್ತು ಶಿವಾಜಿ ಕುಟುಂಬದ ಸದಸ್ಯರು ಬಾಲಕಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದರಾದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಕೊನೆಗೆ ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಪತ್ತೆಗಾಗಿ ಅರಣ್ಯ ಇಲಾಖೆಯ ನೆರವನ್ನು ಕೋರಿದ್ದರು. ಶುಕ್ರವಾರ ಮತ್ತು ಶನಿವಾರ ಅರಣ್ಯ ಇಲಾಖೆಯವರು ಚಿರೇಖಾನಿ, ಕೊಡುಗೈ ಮತ್ತು ಚಾಪೋಲಿ ಗ್ರಾಮದ ಯುವಕರ ನೆರವಿನೊಂದಿಗೆ ಶೋಧ ಕಾರ್ಯ ನಡೆಸಿದ್ದರು.

ವಿಸ್ಮಯ ಎಂಬಂತೆ ಶನಿವಾರ ಸಂಜೆ ದಟ್ಟ ಅರಣ್ಯದಲ್ಲಿ ಮರವೊಂದರ ಕೆಳಗೆ ನಿತ್ರಾಣ ಸ್ಥಿತಿಯಲ್ಲಿ ಅದಿತಿ ಪತ್ತೆಯಾಗಿದ್ದಾಳೆ. ಆಕೆಯ ಕೈ-ಕಾಲುಗಳಿಗೆ ಇರುವೆ, ಚಿರಳೆಗಳು ಕಚ್ಚಿ ಗಾಯಗೊಳಿಸಿದ್ದರಿಂದ ಆಕೆ ನಡೆಯಲಾಗದ ಸ್ಥಿತಿಯಲ್ಲಿದ್ದಳು. ಆಕೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕಾಡುಪ್ರಾಣಿಗಳು ಮತ್ತು ವಿಷಜಂತುಗಳೇ ತುಂಬಿರುವ ಈ ಅರಣ್ಯದಲ್ಲಿದ್ದ ನೀರು, ಆಹಾರ ಇಲ್ಲದೇ ನಾಲ್ಕು ದಿನ ಇದ್ದು ಪುಟ್ಟ ಧೀರ ಬಾಲಕಿ ಬದುಕಿ ಬಂದಿರುವುದು ವಿಸ್ಮಯ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಅದಿತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಖಾನಾಪುರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

You might also like
Leave a comment