This is the title of the web page

“777 ಚಾರ್ಲಿ” ಸಿನೆಮಾ ವೀಕ್ಷಿಸಿ ಅತ್ತ ಮುಖ್ಯಮಂತ್ರಿ

 

ಬೆಂಗಳೂರು, ೧೪- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಕ್ಷಿತ ಶೆಟ್ಟಿಯವರ ಹೊಸ ಚಲನಚಿತ್ರ ‘777 ಚಾರ್ಲಿ’ ಯನ್ನು ವೀಕ್ಷಿಸಿ ಅಗಲಿದ ತಮ್ಮ ನಾಯಿಯನ್ನು ನೆನೆದು ಗದ್ಗರಿತರಾಗಿ ಅತ್ತರು.

ಬೆಂಗಳೂರಿನ ಒರಾಯನ್ ಮಾಲ್​ನ ಪಿವಿಆರ್​​ನಲ್ಲಿ ‘777 ಚಾರ್ಲಿ’ ಚಿತ್ರ ವೀಕ್ಷಿಸಿ ಹೊರಬಂದ ಅವರು,
ಚಿತ್ರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ಕಳೆದ ವರ್ಷ ಕಳೆದುಕೊಂಡಿರುವ ತಮ್ಮ ಪ್ರೀತಿಯ ನಾಯಿಯನ್ನು ನೆನಪಿಸಿಕೊಂಡು ಅತ್ತರು. ಅವರ ಜೊತೆಯಿರುವ ಸಚಿವ ಆರ್ ಅಶೋಕ ಸೇರಿದಂತೆ ಕೆಲವರು ಭಾವುಕರಾದಂತೆ ಕಂಡು ಬಂದರು.

‘777 ಚಾರ್ಲಿ’ ತುಂಬಾ ಚೆನ್ನಾಗಿದೆ. ಮನುಷ್ಯ ಮತ್ತು ನಾಯಿಯ ನಡುವಿನ ಬಾಂಧವ್ಯ ಎಂಥದ್ದು ಎಂದು ತೋರಿಸಿ ಕೊಡುತ್ತದೆ. ನಾಯಿಯದು ಮಾಲೀಕನೊಂದಿಗಿನ ನಿಷ್ಠೆ, ಪ್ರೀತಿ ಆನ್ ಕಂಡೀಷನಲ್, ಚಿತ್ರ ಚನ್ನಾಗಿದೆ ಎಲ್ಲರೂ ನೋಡಿರಿ ‘ ಎಂದು ಹೇಳಿದರು.

“ನಾಯಿಗಳ ಬಗ್ಗೆ ಚಲನಚಿತ್ರಗಳಿವೆ. ಆದರೆ ಈ ಚಲನಚಿತ್ರವು ಭಾವನೆಗಳು ಮತ್ತು ಪ್ರಾಣಿಗಳೊಂದಿಗೆ ಸಿಂಕ್ರೊನೈಸೇಶನ್ ಹೊಂದಿದೆ. ನಾಯಿ ತನ್ನ ಭಾವನೆಗಳನ್ನು ಕಣ್ಣುಗಳ ಮೂಲಕ ವ್ಯಕ್ತಪಡಿಸುತ್ತದೆ. ಸಿನಿಮಾ ಚೆನ್ನಾಗಿದ್ದು ಎಲ್ಲರೂ ನೋಡಲೇಬೇಕು. ನಾನು ಬೇಷರತ್ತಾದ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದೇನೆ. ಶ್ವಾನದ ಪ್ರೀತಿ ನಿರ್ಮಲವಾದ ಪ್ರೇಮವಾಗಿದೆ” ಎಂದು ಮುಖ್ಯಮಂತ್ರಿ ಹೇಳಿದರು.

ಬೊಮ್ಮಾಯಿ ನಾಯಿ ಪ್ರೇಮಿ. ಕಳೆದ ವರ್ಷ ತಮ್ಮ ಸಾಕುನಾಯಿ ತೀರಿಕೊಂಡ ನಂತರ ಅವರು ಬಹಳ ದುಃಖಿಸಿದ್ದರು.  ವಯೋಸಹಹವಾಗಿ  ನಾಯಿ ‘ಸ್ನೋಬಿ’ ಮೃತಪಟ್ಟಿತ್ತು. ಕುಟುಂಬದ ಸದಸ್ಯನಂತಿದ್ದ ಮುದ್ದಿನ ನಾಯಿ ಮೃತಪಟ್ಟಿದ್ದಕ್ಕೆ ಬಸವರಾಜ ಬೊಮ್ಮಾಯಿ ಅವರು ಕಣ್ಣೀರಿಟ್ಟಿದ್ದರು. ಬಸವರಾಜ ಬೊಮ್ಮಾಯಿ ಕುಟುಂಬದ ಸದಸ್ಯರು ಸಂಪ್ರದಾಯಬದ್ಧವಾಗಿ ನಾಯಿ ಸ್ನೋಬಿ ಅಂತಿಮ ವಿದಾಯ ಹೇಳಿದ್ದರು.

ಕೆ ಕಿರಣರಾಜ ನಿರ್ದೇಶನದ 777 ಚಾರ್ಲಿ ಒಂದು ಸಾಹಸ ಹಾಸ್ಯ ಸಿನೆಮಾ ಆಗಿದೆ. ಚಿತ್ರದಲ್ಲಿ ರಕ್ಷಿತ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ ಬಿ ಶೆಟ್ಟಿ, ಡ್ಯಾನಿಶ್ ಸೇಟ್ ಮತ್ತು ಬಾಬಿ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪರಂವಾ ಸ್ಟುಡಿಯೋಸ್ ಅಡಿಯಲ್ಲಿ ರಕ್ಷಿತ ಶೆಟ್ಟಿ ಮತ್ತು ಜಿಎಸ್ ಗುಪ್ತಾ ಇದನ್ನು ನಿರ್ಮಿಸಿದ್ದಾರೆ. ಇದು ಎಲ್ಲಾ ಪ್ರಾಣಿಗಳಿಗೆ, ವಿಶೇಷವಾಗಿ ನಾಯಿ ಪ್ರಿಯರಿಗೆ ಇಷ್ಟವಾದ ಚಿತ್ರವಾಗಿದ್ದು ಮನುಷ್ಯ ಮತ್ತು ಸಾಕು ನಾಯಿಯ ನಡುವಿನ ಬಾಂಧವ್ಯವನ್ನು ಚಿತ್ರ ಸುಂದರವಾಗಿ ಬಿಂಬಿಸಿದೆ.

You might also like
Leave a comment