This is the title of the web page

ವಿಷಪುರಿತ ಆಹಾರ ಸೇವಿಸಿ 8 ಮಹಿಳೆಯರ ಸಾವು, ಸಾವಿರಾರು ಮಹಿಳೆಯರು ಅಸ್ವಸ್ಥ

ಶ್ರೀಪೆರಂಬದೂರ, 18- ತಮಿಳುನಾಡಿನ ಶ್ರೀಪೆರಂಬದೂರ ವಿಶೇಷ ಕೈಗಾರಿಕಾ ಪ್ರದೇಶದ ಫಾಕ್ಸ್‌ಕಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಮಹಿಳೆಯರು ಕ್ಯಾಂಟೀನ್ ನಲ್ಲಿ ಆಹಾರ ಸೇವಿಸಿ ದುರ್ಮರಣ ಹೊಂದಿದ್ದಾರೆ. ಅಲ್ಲದೇ ಆಹಾರ ಸೇವಿಸಿರುವ ಸಾವಿರಾರು ಮಹಿಳಾ ಕಾರ್ಮಿಕರ ಆರೋಗ್ಯ ವಿಷಮಿಸಿದೆ.

ಕಂಪನಿ ಕಾರ್ಮಿಕರ ರಕ್ಷಣೆಯಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಅಲ್ಲಿನ ಸಾವಿರಾರು ಕಾರ್ಮಿಕರು ದಿಢೀರ್ ಪ್ರತಿಭಟನೆಗಿಳಿದು ಬೆಂಗಳೂರು ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿದ್ದಾರೆ.

ಶುಕ್ರವಾರ ರಾತ್ರಿ ಮಹಿಳೆಯರ ಈ ಸಾವು ಸಂಭವಿಸಿದ್ದು, ಇನ್ನು ಹಲವರ ಸ್ಥಿತಿ ಚಿಂತಾಜನಕ ಇದೆ ಎನ್ನಲಾಗಿದೆ.

ಶುಕ್ರವಾರ ಕಂಪನಿಯ ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸಿದ ನಂತರ 2000 ಮಹಿಳಾ ಕಾರ್ಮಿಕರ ಆರೋಗ್ಯ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಗಂಭೀರ ಘಟನೆ ಬಹಿರಂಗಗೊಳ್ಳದಂತೆ ಕಂಪನಿ ಯತ್ನಿಸುತ್ತಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಆರೋಪಿಸಿದ್ದಾರೆ.

ಈ ಮಹಿಳಾ ಕಾರ್ಮಿಕರ ಸಾವಿಗೆ ಆಹಾರ ವಿಷವೇ ಕಾರಣವಾಗಿದ್ದು, ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಕಂಪನಿಯು ಕೂಡಲೇ ಉಳಿದವರ ಆರೋಗ್ಯವನ್ನು ಕಾಪಾಡಬೇಕು, ನಿರ್ಲಕ್ಷ್ಯ ವಹಿಸಿದವರಿಗೆ ಶಿಕ್ಷೆಯಾಗಬೇಕು ಮತ್ತು ಸಾವಿಗೀಡಾವರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

ಮಧ್ಯರಾತ್ರಿ ಘಟನೆ ಬೆಳಕಿಗೆ ಬಂದ ನಂತರ ಕಂಪನಿಯ ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದಾರೆ. ಆದರೆ ಆಡಳಿತ ಮಂಡಳಿಯಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬೆಂಗಳೂರು ಹೆದ್ದಾರಿಯನ್ನು ತಡೆಹಿಡಿಯಲಾಯಿತು ಎಂದು “ಕಾರ್ಮಿಕರ ಹಕ್ಕುಗಳ ಪತ್ರಿಕೆ ವರ್ಕರ್ಸ್ ಯೂನಿಟಿ” ವರದಿ ಮಾಡಿದೆ.

“ಇಂತಹ ಘೋರ ದುರಂತವನ್ನು ಮಾಧ್ಯಮಗಳು ಏಕೆ ವರದಿ ಮಾಡುತ್ತಿಲ್ಲ? ಕಾರ್ಮಿಕರ ಜೀವಕ್ಕೆ ಬೆಲೆಯಿಲ್ಲವೇ? ಇಲ್ಲಿ ಮಹಿಳಾ ಕಾರ್ಮಿಕರು ಮರಣ ಹೊಂದಿದ್ದಾರೆ. ಅದರಲ್ಲಿ ಹಲವಾರು ಗರ್ಭಿಣಿಯರು ಸಹ ಇದ್ದರು. ಆದರೆ ಕಂಪನಿ ಅಮಾನಯವೀಯತೆಯಿಂದ ವರ್ತಿಸುತ್ತಿದೆ” ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.

You might also like
Leave a comment