ಅಳ್ನಾವರ

ಪೌರತ್ವ ಕಾಯ್ದೆ ವಿರೋಧಿಸಿ ಅಳ್ನಾವರದಲ್ಲಿ ಬೃಹತ್ ಪ್ರತಿಭಟನೆ

ಅಳ್ನಾವರ, ಡಿ.30- ಪೌರತ್ವ ಕಾಯ್ದೆ ಹಾಗೂ ಎನ್‍ಆರ್‍ಸಿ ನಮ್ಮ ಸಂವಿಧಾನದ ಮೂಲ ತತ್ವಕ್ಕೆ ಧಕ್ಕೆ ತರುವಂತಾಗಿದೆ. ಇಂತಹ ಕಾನೂನು ಎಲ್ಲ ಜಾತಿ, ಧರ್ಮಗಳಿಗೆ ಹಾಗೂ ಸಮಾನತೆ ತತ್ವಕ್ಕೆ ವಿರುದ್ಧವಾಗಿದೆ. ಕೂಡಲೆ ಈ ಕಾನೂನು ಕೈಬಿಡಬೇಕು ಎಂದು ಆಗ್ರಹಿಸಿ ಅಳ್ನಾವರ ತಾಲ್ಲೂಕಿನ ಜನತೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಪಟ್ಟಣ ಪಂಚಾಯ್ತಿ ಸಮೀಪದ ಖುಲ್ಲಾ ಜಾಗೆಯಲ್ಲಿ ಜಮಾವಣೆಯಾದ ತಾಲ್ಲೂಕಿನ ಸಹಸ್ರಾರು ಸಂಖ್ಯೆಯ ಜನರು ತಕ್ಷಣ ಈ ಕಾಯ್ದೆ ಹಿಂಪಡೆಯಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು. ಶಾಂತಿ ಸುವ್ಯವಸ್ಥೆಗೆ ಹೆಸರುವಾಸಿಯಾದ ನಮ್ಮ ದೇಶದಲ್ಲಿ ಈ ರೀತಿ ಕಾನೂನು ಹೇರಿಕೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಎನ್‍ಆರ್‍ಸಿ ಪದ್ಧತಿ ಎಲ್ಲ ವರ್ಗದ ಜನರಿಗೆ ಅನಾನುಕೂಲ ಮಾಡಲಿದ್ದು ಅದರಲ್ಲೂ ಅಲ್ಪಸಂಖ್ಯಾತರಿಗೆ ಈ ಕಾನೂನು ಇನ್ನೂ ಮಾರಕವಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಮಾಜದ ಎಲ್ಲ ವರ್ಗದ ಜನರು ಸೇರಿ ಹೋರಾಟ ಮಾಡಿದ್ದರು. ದೇಶ ಇಷ್ಟೊಂದು ಬೆಳೆಯಲು ಸಮಾಜದ ಎಲ್ಲ ವರ್ಗದ ಜನರ ಕೊಡುಗೆ ವಿಶಿಷ್ಟವಾಗಿದೆ. ಇಂತಹ ಘಳಿಗೆಯಲ್ಲಿ ಕೇವಲ ಒಂದೇ ಸಮಾಜವನ್ನು ಗುರಿ ಮಾಡಿಕೊಂಡು ರಚನೆಯಾದ ಈ ಕಾಯ್ದೆ ಸಮಾಜದ ಏಕತೆಗೆ ಭಂಗ ಉಂಟು ಮಾಡುವಂತಾಗಿದೆ. ಈ ಕಾಯ್ದೆ ಹಿಂಪಡೆಯದೆ ಇದ್ದಲ್ಲಿ ಹಿಂದೆ ಗಾಂಧೀಜಿಯವರು ಕೈಗೊಂಡ ಸತ್ಯಾಗ್ರಹ ಮಾದರಿಯ ಇನ್ನೊಂದು ದೇಶವ್ಯಾಪಿ ಹೋರಾಟ ನಡೆಯುವ ಕಾಲ ದೂರವಿಲ್ಲ ಎಂದು ಅನೇಕ ಹಿರಿಯರು ಮಾತನಾಡಿದರು.

ಅಳ್ನಾವರ ತಾಲ್ಲೂಕಿನ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ದಲಿತ ಮುಖಂಡರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಈ ಕುರಿತು ನೀಡಿದ ಮನವಿಯನ್ನು ತಹಶೀಲ್ದಾರ ಅಮರೇಶ ಪಮ್ಮಾರ ಸ್ವೀಕರಿಸಿ ಮುಂದಿನ ಕ್ರಮಕ್ಕೆ ಕಳುಹಿಸುವ ಭರವಸೆ ನೀಡಿದರು.

ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ, ಹಿರಿಯರಾದ ಫಹೀಮ ಕಾಂಟ್ರ್ಯಾಕ್ಟರ್, ನದೀಮ ಕಾಂಟ್ರ್ಯಾಕ್ಟರ್, ಶಶಿಧರ ಇನಾಮದಾರ, ನಿಂಗಪ್ಪ ಬೇಕ್ವಾಡಕರ, ರಾಯಪ್ಪ ಹುಡೇದ, ಇನಾಸ್ ಡಿಸೋಜಾ, ಹನಮಂತ ಶಿಂಧೆ, ರಾಜು ಯಲಕಪಾಟಿ, ಯಲ್ಲಪ್ಪ ಹೂಲಿ, ಚಂದ್ರಶೇಖರ ಸದಮಲ್, ಜಾವೇದ ಕಿತ್ತೂರ, ಜೈಲಾನಿ ಸುದರ್ಜಿ, ತಮೀಮ ತೇರಗಾಂವ, ತಯಬ್ ತೊಲಗಿ, ಮೌಲಾನಾ ಇಕಬಾಲ್ ಹಾಗೂ ಅಳ್ನಾವರ ತಾಲ್ಲೂಕಿನ ಎಲ್ಲ ಮಸೀದಿಗಳ ಮುತವಲ್ಲಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: