ಸಂಪಾದಕೀಯ

ಜನತೆ ಮತ್ತು ಸರ್ಕಾರ

ಎಲ್ಲ ಕಾಲದಲ್ಲಿ ಮತ್ತು ದೇಶಗಳಲ್ಲಿ ಜನತೆ ಹಾಗು ಸರ್ಕಾರದ ನಡುವೆ ಆರೋಗ್ಯಕರ ಸಂವಾದ ಇರಬೇಕು. ಹಿಂದೆ ರಾಜಪ್ರಭುತ್ವ ಇದ್ದಾಗಲೂ ಕೂಡ ಜನರ ಅಹವಾಲು ನೇರವಾಗಿ ರಾಜನಿಗೆ ತಲುಪಿಸುವ ವ್ಯವಸ್ಥೆ ಇತ್ತು. ಅದನ್ನು ನ್ಯಾಯದ ಗಂಟೆ ಎನ್ನುತ್ತಿದ್ದರು. ಕುದುರೆಯೊಂದು ಇಂಥ ನ್ಯಾಯದ ಗಂಟೆಗೆ ಕಟ್ಟಿದ ಬಳ್ಳಿಯನ್ನು ತಿನ್ನಲು ಬಂದು, ಗಂಟೆ ಸದ್ದು ಮಾಡಿತು. ಹೀಗೆ ಕುದುರೆ ಮಾಡಲು ಕಾರಣ ವಯಸ್ಸಾದ ಕುದುರೆಯನ್ನು ಮನೆಯಿಂದ ಹೊರದಬ್ಬಿದ್ದು ಎಂದು ತಿಳಿದ ರಾಜನು ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದ ಎಂಬ ಕತೆ ನೀವು ಓದಿರಬಹುದು. ಜನ ತಮ್ಮ ಕಷ್ಟ, ತೊಂದರೆ ಹೇಳಿಕೊಳ್ಳಲು ಒಂದು ವ್ಯವಸ್ಥೆ ಇರುವ ಹಾಗೆ, ಜನರ ದೂರು-ದುಮ್ಮಾನ ಆಲಿಸಿ, ಸೂಕ್ತ ನಿರ್ಣಯ ಕೈಗೊಳ್ಳುವ ಆಳುವ ದೊರೆ ಕೂಡ ಇರಬೇಕಾಗುತ್ತದೆ. ಇದರಲ್ಲಿ ಎಲ್ಲಿಯೇ ವ್ಯತ್ಯಯ ಉಂಟಾದರೂ ಅಲ್ಲಿ ಪ್ರಜೆಗಳು ಸಂಕಷ್ಟಕ್ಕೆ ಗುರಿ ಆಗಬೇಕಾಗುತ್ತದೆ ಎನ್ನುವುದು ಮಾತ್ರ ಸತ್ಯ.

ನಮ್ಮಲ್ಲಿ ಈಗ ಕಂಡು ಬರುತ್ತಿರುವ ವ್ಯವಸ್ಥೆ ಸ್ವಲ್ಪ ಎಲ್ಲಿಯೋ ತಪ್ಪಿದ ಹಾಗೆ ಕಾಣುತ್ತದೆ. ಪ್ರಜಾತಂತ್ರದಲ್ಲಿ ಪ್ರಜೆಗಳು ಸರ್ಕಾರವನ್ನು ಪ್ರಶ್ನಿಸುತ್ತಾ ಇರಬೇಕು. ಆದರೆ ಅದಕ್ಕೆ ಬದಲಾಗಿ ಸರ್ಕಾರ ಜನರನ್ನೇ ಪ್ರಶ್ನಿಸುತ್ತಿದೆ. ಯಾವುದೇ ಸಾರ್ವಜನಿಕ ಸಮಾರಂಭ ಗಮನಿಸಿ, ದೊಡ್ಡ ದೊಡ್ಡ ನಾಯಕರು ಕೆಲವು ಪ್ರಶ್ನೆಗಳನ್ನು ಎತ್ತುತ್ತಾರೆ. ಅದಕ್ಕೆ ಹೌದು ಅಥವಾ ಇಲ್ಲ ಎಂದಷ್ಟೇ ಉತ್ತರ ನೀಡಲು ಸಾಧ್ಯ. ಬಹುಪಾಲು ಸಂದರ್ಭಗಳಲ್ಲಿ ನಾಯಕರು ಕೇಳುವ ಪ್ರಶ್ನೆಗಳಿಗೆ ಜನ ‘ಹೌದು’ ಎಂದೇ ಒಕ್ಕೊರಲಿಂದ ಉತ್ತರಿಸುತ್ತಾರೆ. ಜನರೇ ಬಯಸಿದ್ದಾರೆ ಎಂದು ಹೇಳಿ ಸರ್ಕಾರ ಕೆಲವು ಬದಲಾವಣೆಗಳನ್ನು ತರುತ್ತದೆ. ಅದರ ಪರಿಣಾಮ, ದೇಶದಲ್ಲಿ ಒಳಿತಿಗಿಂತ ಕೆಡುಕು ಹೆಚ್ಚಿರುವುದು ಗಮನಿಸಬೇಕು.

ಈ ಹಿನ್ನೆಲೆಯಲ್ಲಿ ಕೆಲವು ಹಿರಿಯ ಹುದ್ದೆಗಳಲ್ಲಿ ಇದ್ದ ಜನ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. ಇನ್ನು ಕೆಲವರು ರಾಜೀನಾಮೆ ನೀಡಿ, ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಾ ಇದ್ದಾರೆ. ಅಂಥ ಒಬ್ಬ ಜಿಲ್ಲಾಧಿಕಾರಿ ಹುದ್ದೆಯಲ್ಲಿ ಇದ್ದವರೊಬ್ಬರು ರಾಜೀನಾಮೆ ನೀಡಿ, ಜನರ ಬಳಿ ಬಂದಾಗ, ಅವರೂ ರಾಜಕೀಯ ನಾಯಕರಂತೆ ಪ್ರಶ್ನೆ ಕೇಳಿದರು. ಅವರು ಕೇಳಿದ ಪ್ರಶ್ನೆಗಳು ಹೀಗಿದ್ದವು ‘ಕಪ್ಪು ಹಣ ತೊಲಗಿಸಬೇಕು ಅಲ್ಲವೆ?’, ‘ಭಾರತ ಅಖಂಡ ಇರಬೇಕಲ್ಲವೇ?’, ‘ನಮ್ಮಲ್ಲಿನ ಅಕ್ರಮ ವಲಸಿಗರನ್ನು ಹೊರಹಾಕಬೇಕು ಅಲ್ಲವೇ?’. ಈ ಎಲ್ಲ ಪ್ರಶ್ನೆಗಳಿಗೂ ಜನ ಒಕ್ಕೊರಲಿಂದ ಹೌದು ಎಂದೇ ಉತ್ತರಿಸಿದರು. ಆಗ ಅವರು ವಿವರಣೆಗೆ ಮುಂದಾದರು. ಕಪ್ಪು ಹಣ ತೊಲಗಿಸಬೇಕು ಎಂದು ನೀವೇ ಹೇಳಿದಿರಿ, ಅವರು ನೋಟು ಅಮಾನ್ಯೀಕರಣ ಮಾಡಿದರು. ಆದರೆ, ಭಯೋತ್ಪಾದಕರ ಉಪಟಳ ತಗ್ಗಲಿಲ್ಲ, ಶ್ರೀಮಂತರು ಯಾರೂ ಸಿಕ್ಕಿಬೀಳಲಿಲ್ಲ. ಸಾಮಾನ್ಯ ಜನ ಮಾತ್ರ ತಿಂಗಳುಗಟ್ಟಲೇ ಹಣ ಇಲ್ಲದೇ ಒದ್ದಾಡಿದಿರಿ. ಕೊನೆಗೆ ನೀವು ನಿಮ್ಮದೇ ಹಣ ಪಡೆಯಲು ಸಾಧ್ಯ ಆದಾಗ, ನೆಮ್ಮದಿಯ ನಿಟ್ಟುಸಿರು ಬಿಟ್ಟಿರಿ ಅಲ್ಲವೇ?
ಕಪ್ಪು ಹಣ ಎಂದು ರಾಜಕೀಯ ನಾಯಕರು ಹೇಳಿದಾಗ, ಯಾವ ರೀತಿಯ ಕಪ್ಪು ಹಣ ಎಂದು ನೀವ್ಯಾರೂ ಪ್ರಶ್ನಿಸಲಿಲ್ಲ. ಸರ್ಕಾರದ ದೃಷ್ಟಿಯಲ್ಲಿ ದಾಖಲೆ ಇಲ್ಲದೇ ಪಡೆಯುವ ಅಥವಾ ನೀಡುವ ಎಲ್ಲ ಹಣವೂ ಕಪ್ಪು ಹಣ. ದÉೀಶದ ಅನೌಪಚಾರಿಕ ಅರ್ಥ ವ್ಯವಸ್ಥೆಯ ಹಣ ಸಿಕ್ಕಿಕೊಂಡಿತು, ನೀವು ನರಳಿದಿರಿ. ಭಾರತ ಅಖಂಡವಾಗಬೇಕು ಎಂದಾಗ, ನೀವೆಲ್ಲ ಹೌದು ಎಂದಿರಿ, ಯಾರೂ ಎದ್ದು ನಿಂತು ಈಗೇನು ಭಾರತ ಅಖಂಡವಾಗಿಲ್ಲವೇ ಎಂದು ಕೇಳಲಿಲ್ಲ. ಜನರು ಹೇಳುತ್ತಿದ್ದಾರೆ ಎಂದು ಕಾಶ್ಮೀರದ ವಿಶೇಷ ಸ್ಥಾನಮಾನ ಕಿತ್ತು ಹಾಕಿದರು. ಅಕ್ರಮ ವಲಸೆಗಾರರನ್ನು ಹೊರ ಹಾಕಿ ಎಂದು ನೀವೇ ಹೇಳಿದಿರಿ ಎಂದು ಈಗ ಹೊಸ ನಿಯಮ ಜಾರಿಗೊಳಿಸುವ ಯತ್ನ ನಡೆದಿದೆ. ಇಲ್ಲಿ ಗಮನಿಸಿ; ಈ ನಿಯಮದ ಪ್ರಕಾರ ಬಡವರು, ಉದ್ಯೋಗ ಅರಸುತ್ತಾ ಅಲೆಮಾರಿಗಳಾದವರು, ನಿರಕ್ಷರರು, ಬೆಂಕಿಯಿಂದ ಮನೆ ಸುಟ್ಟು ಹÉೂೀದವರು, ಪ್ರವಾಹದಲ್ಲಿ ಮನೆ ಕೊಚ್ಚಿ ಹೋದವರೆಲ್ಲರೂ ಅಕ್ರಮ ವಲಸಿಗರಾಗಿ ಬಿಡುತ್ತಾರೆ. ಏಕೆಂದರೆ ಅವರ ಬಳಿ ರುಜುವಾತಿಗೆ ಬೇಕಾದ ದಾಖಲೆಗಳು ಇರುವುದಿಲ್ಲ.

ನೋಟ್ ಬಂದ್‍ನಿಂದ ಮೂರು ತಿಂಗಳಲ್ಲಿ ಪಾರಾಗಿ ನಿಟ್ಟುಸಿರು ಬಿಟ್ಟಿರಿ. ಕಾಶ್ಮೀರ ನಮಗೆ ಸಂಬಂಧವೇ ಇಲ್ಲ ಎನ್ನುವಂತೆ ಆರಾಮಾಗಿ ಇದ್ದಿರಿ. ಈಗ ಇಲ್ಲಿನ ಅಸಂಖ್ಯಾತ ಜನರನ್ನು ಈ ದೇಶದ ನಿವಾಸಿ ಅಲ್ಲ ಎಂದು ಸರ್ಕಾರ ಘೋಷಿಸಿದಾಗ, ನಿಮಗೆ ನಿಲ್ಲಲು ನೆಲೆ ಇರದು, ಪ್ರಶ್ನಿಸಲು ಅಧಿಕಾರ ಇರದು. ಸ್ವಲ್ಪ ಕಾಲದ ನಂತರ ಎಲ್ಲವೂ ಸರಿಹೋಗುತ್ತದೆ ಎಂದು ತಾಳಿಕೊಳ್ಳುವ ಅವಕಾಶವೂ ಇರುವುದಿಲ್ಲ.

ಕಳೆದ ಆರು ವರ್ಷಗಳಿಂದ ಈ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆ ಅಷ್ಟು ಸಮಂಜಸ ಇಲ್ಲ ಎಂದು ಇಡೀ ವಿಶ್ವವೇ ತೀರ್ಪು ನೀಡಿದೆ. ಜನತಂತ್ರ ಸೂಚಿಯಲ್ಲಿ ಭಾರತ ಹತ್ತು ಸ್ಥಾನ ಕೆಳಗಿಳಿದಿದೆ. ಸಂಶಯಾಸ್ಪದ ರೀತಿಯಲ್ಲಿ ಚುನಾವಣೆ ನಡೆಸುವುದು, ಜನರಲ್ಲಿ ಧರ್ಮದ ಆಧಾರದಲ್ಲಿ ಒಡಕು ಮೂಡಿಸುವುದು, ಗೋರಕ್ಷಣೆ ಹೆಸರಲ್ಲಿ ಜನರನ್ನು ಬಡಿದು ಕೊಲ್ಲುವುದು, ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿಂತವರ ಮೇಲೆ ಪೋಲೀಸರು ನಿರ್ದಯವಾಗಿ ಗುಂಡು ಹಾರಿಸಿ ಕೊಲ್ಲುವಂತೆ ಮಾಡುವುದು, ನಾಗರಿಕ ಹಕ್ಕುಗಳಿಗೆ ಧಕ್ಕೆ ತರುವುದು ಆದಿ ಇಲ್ಲಿನ ಜನತಂತ್ರ ಮೌಲ್ಯಗಳು ಕುಸಿಯಲು ಕಾರಣ. ಕಳೆದ ಆರು ವರ್ಷಗಳಿಂದಲೂ ಈ ಸೂಚ್ಯಂಕದಲ್ಲಿ ಭಾರತ ಕುಸಿಯುತ್ತಲೇ ಇದೆ. ಆದರೆ ಈ ಬಾರಿ ಅತಿ ಹೆಚ್ಚು ಪ್ರಮಾಣದಲ್ಲಿ ಅಂದರೆ ಹತ್ತು ಸ್ಥಾನ ಕೆಳಗಿಳಿದಿದೆ.

ಇದಕ್ಕೆ ಕಾರಣ ಇಂಥವರೇ ಎಂದು ಬೆರಳು ಮಾಡಿ ತೋರಿಸುವುದು ಸುಲಭ. ಆದರೆ ಜನತಂತ್ರ ವ್ಯವಸ್ಥೆಯಲ್ಲಿ ನಮ್ಮನ್ನು ಆಳುವವರು ಯಾರಿರಬೇಕು ಎಂದು ನಿರ್ಧರಿಸುವವರು ನಾವೇ. ನಮ್ಮ ವೋಟುಗಳ ಮೂಲಕ ಅವರನ್ನು ಆರಿಸುತ್ತೇವೆ. ಅವರ ನಿರ್ಧಾರಗಳನ್ನು ಬೆಂಬಲಿಸುತ್ತೇವೆ. ಹೀಗಾಗಿ ಇಲ್ಲಿ ಮೌಲ್ಯ ಕುಸಿತದಲ್ಲಿ ಜನರ ಪಾಲೂ ಇದೆ. ಅದನ್ನು ಅರಿತುಕೊಂಡು, ಇನ್ನು ಮುಂದಾದರೂ ನಾಯಕರ ಮಾತುಗಳಿಗೆ, ಅದರಲ್ಲೂ ಅವರ ತಂತ್ರಗಾರಿಕೆಯ ನುಡಿಗಳಿಗೆ ಮರುಳಾಗದೇ ಮತ ಚಲಾಯಿಸುವುದನ್ನು ಕಲಿಯುವುದು ಅಗತ್ಯ. ಇದೆಲ್ಲಕ್ಕಿಂತ ಹೆಚ್ಚಾಗಿ, ಪ್ರಶ್ನಿಸದೇ ನಾಯಕರು ಮತ್ತು ಸರ್ಕಾರಗಳನ್ನು ಬಿಟ್ಟು ಬಿಡುವುದು ಘೋರ ದುರಂತಕ್ಕೆ ನಾಂದಿ ಆಗುತ್ತದೆ ಎನ್ನುವುದನ್ನು ಈಗಾದರೂ ಅರಿತು ನಡೆದುಕೊಳ್ಳುವುದು ಮುಖ್ಯ. ಹುಸಿ ಭ್ರಮೆಗಳಿಂದ ಜನರನ್ನು ಮರುಳುಗೊಳಿಸುವ ಕಾಲ ಹೋಯಿತು. ಇನ್ನು ಏನಿದ್ದರೂ ವಾಸ್ತವಗಳ ನೆಲೆಗಟ್ಟಿನಲ್ಲಿಯೇ ಜನರು ತಮ್ಮ ಕ್ರಿಯೆಗಳ ಮೂಲಕ ಉತ್ತರ ಕಂಡುಕೊಳ್ಳಬೇಕಿದೆ. ಆಗ ಮಾತ್ರ ಜನತೆ ಮತ್ತು ಸರ್ಕಾರದ ನಡುವೆ ಆರೋಗ್ಯಪೂರ್ಣ ಸಂವಾದ ಮತ್ತು ಕ್ರಿಯೆ ಸಾಧ್ಯ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: