ಬಾಗಲಕೋಟೆ

ಕುಡಚಿ-ಬಾಗಲಕೋಟ ರೈಲು ಮಾರ್ಗಕ್ಕೆ ಭೂಮಿ ಒದಗಿಸಲು ಒತ್ತಾಯ

ಬಾಗಲಕೋಟ, ಜ.29- ಇಂದು ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಬಾಗಲಕೋಟ ಜಿಲ್ಲಾಧಿಕಾರಿಗಳಾದ ಡಾ|| ಕ್ಯಾಪ್ಟನ್. ರಾಜೇಂದ್ರ ಇವರಿಗೆ ಕುಡಚಿ-ಬಾಗಲಕೋಟ ರೈಲು ಮಾರ್ಗಕ್ಕೆ ಖಜ್ಜಿಡೋಣಿಯಿಂದ ಕುಡಚಿವರೆಗೆ ಅಗತ್ಯವಿರುವ ಪೂರ್ಣ ಪ್ರಮಾಣದ ಭೂಮಿಯನ್ನು ಒದಗಿಸಲು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಕುತುಬುದ್ಧೀನ ಖಾಜಿ ಮಾತನಾಡಿ ರೇಲ್ವೆ ಅಧಿಕಾರಿಗಳು ವೈಜ್ಞಾನಿಕವಾಗಿ ಖಜ್ಜಿಡೋಣಿಯಿಂದ ಅಗತ್ಯ ಭೂಮಿಯನ್ನು ಒದಗಿಸಿದರೆ ಕಾಮಗಾರಿಗೆ ಅನುಕೂಲ ಆಗುತ್ತದೆ ಎಂದು ಹೇಳುತ್ತಿದ್ದು ಜಿಲ್ಲಾಡಳಿತ ಜಮಖಂಡಿ, ಮುಧೋಳ, ರಬಕವಿ-ಬನಹಟ್ಟಿ, ತೇರದಾಳ ಮತ್ತು ಕುಡಚಿ ಭಾಗದಲ್ಲಿ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳುತ್ತಿದ್ದು, ಇದು ಗೊಂದಲಕ್ಕೆ ಎಡೆ ಮಾಡಿಕೊಡುತ್ತಿದ್ದು, ರೇಲ್ವೆ ಅಧಿಕಾರಿಗಳು ಹೇಳಿದಂತೆ ಈಗಾಗಲೇ ನಿರ್ಮಾಣಗೊಂಡಿರುವ ಖಜ್ಜಿಡೋಣಿಯಿಂದ ಮುಂದಿನ ರೈಲು ಮಾರ್ಗ ಕಾಮಗಾರಿಗಾಗಿ ಭೂಮಿ ಒದಗಿಸಿದಲ್ಲಿ ಕಾಮಗಾರಿ ಪ್ರಾರಂಭಿಸುತ್ತೇವೆ ಅಂತಾ ಹೇಳುತ್ತಿದ್ದಾರೆ. ಅವರು ಹೇಳಿದಂತೆ ಖಜ್ಜಿಡೋಣಿಯಿಂದ ಜಿಲ್ಲಾಡಳಿತವು ಈ ಕೂಡಲೆ ಭೂಮಿಯನ್ನು ಒದಗಿಸಿ ರೇಲ್ವೆ ಕಾಮಗಾರಿ ಪ್ರಾರಂಭಕ್ಕೆ ಅನುವು ಮಾಡಬೇಕು, ಅದರಂತೆ ಈಗಾಗಲೇ 5 ರೈಲು ನಿಲ್ದಾಣಗಳ ನಿರ್ಮಾಣಗೊಂಡು, 33 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು ಅಂದಾಜು 580 ಕೋಟಿ ರೂ.ಗಳಷ್ಟು ವೆಚ್ಚವಾಗಿದ್ದು, ಕಾಮಗಾರಿ ವಿಳಂಬದಿಂದ ಆದ ವೆಚ್ಚ ಹಾಳಾಗುತ್ತಿದ್ದು, ಸಾರ್ವಜನಿಕರ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಆಗುತ್ತಿದೆ. ಈಗಾಗಲೇ ನಿರ್ಮಾಣಗೊಂಡಿರುವ ನಿಲ್ದಾಣಗಳ ಕಟ್ಟಡಗಳು ಅನೈತಿಕ ಚಟುವಟಿಕೆಗಳಿಗೆ ಕಾರಣವಾಗುತ್ತಿದ್ದು, ರಾಜ್ಯ ಮತ್ತು ಕೇಂದ್ರ ರೇಲ್ವೆ ಇಲಾಖೆಯ ಸಮನ್ವಯ ಕೊರತೆಯಿಂದ ಈ ಯೋಜನೆಯು ವಿಳಂಬ ಆಗುತ್ತಿದ್ದು, ಅದಕ್ಕೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕ ಹಿತದೃಷ್ಟಿಯಿಂದ ಇನ್ನು ಹೆಚ್ಚಿಗೆ ವಿಳಂಬ ಮಾಡದೆ ಕುಡಚಿ-ಬಾಗಲಕೋಟ ರೈಲು ಮಾರ್ಗವನ್ನು ಶೀಘ್ರವೇ ಪೂರ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಖಾಜಿಯವರು ಆಗ್ರಹಿಸಿದರು.

ಈಗಾಗಲೇ ಖಜ್ಜಿಡೋಣಿಯವರೆಗೆ ಸಂಚರಿಸುತ್ತಿರುವ ರೈಲು ಬಸ್ಸನ್ನು ಸ್ಥಗಿತಗೊಳಿಸಲಾಗಿದ್ದು, ಇದನ್ನು ಪುನರಾರಂಭಿಸಲು ಹೋರಾಟ ಸಮಿತಿ ಈ ಕುರಿತು ರೈಲು ಮಂತ್ರಿ ಶ್ರೀ. ಸುರೇಶ ಅಂಗಡಿಯವರಿಗೂ ಹಾಗೂ ರೈಲು ಇಲಾಖೆ ಮಹಾ ವ್ಯವಸ್ಥಾಪಕರಾದ ಶ್ರೀ. ಅಜಯಕುಮಾರ ಸಿಂಗ್ ಇವರಿಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಈ ರೈಲನ್ನು ಅತೀ ಶೀಘ್ರದಲ್ಲಿಯೇ ಪುನರಾರಂಭಿಸಲು ಒಪ್ಪಿಕೊಂಡಿರುತ್ತಾರೆ ಎಂದು ಕುತುಬುದ್ದೀನ ಖಾಜಿಯವರು ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಹೋರಾಟ ಸಮಿತಿಯವರು ಸಲ್ಲಿಸಿದ ಮನವಿಯನ್ನು ಶಾಂತಚಿತ್ತರಾಗಿ ಆಲಿಸಿದ ಜಿಲ್ಲಾಧಿಕಾರಿಗಳು ಇದಕ್ಕೆ ಶೀಘ್ರವೇ ಸಂಬಂಧಪಟ್ಟ ರೈಲು ಅಧಿಕಾರಿಗಳಿಗೂ ಹಾಗೂ ತಮ್ಮ ಅಧೀನಾಧಿಕಾರಿಗಳಿಗೂ ಈ ಕುರಿತು ಶೀಘ್ರವೇ ಕಾರ್ಯಪ್ರವೃತ್ತರಾಗಲು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪ್ರಭಾರಿ ಆಯ್.ಎ.ಎಸ್. ಅಧಿಕಾರಿ ಗರಿಮಾ ಪವಾರ ಇವರು ಉಪಸ್ಥಿತರಿದ್ದರು. ನಿಯೋಗದಲ್ಲಿ ಹೋರಾಟ ಸಮಿತಿಯ ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಸಭಾಪತಿ ಎ.ಎ. ದಂಡಿಯಾ, ಎನ್.ಬಿ. ಗಸ್ತಿ ವಕೀಲರು ಜಮಖಂಡಿ, ನಜೀರ್ ಕಂಗನಳ್ಳಿ ಜಮಖಂಡಿ, ಮೈನುದ್ದೀನ ಖಾಜಿ, ಅಬ್ದುಲ ಹಾದಿಮನಿ ಮತ್ತು ಇತರರು ಹಾಜರಿದ್ದರು.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: