ಸಂಪಾದಕೀಯ

ತೆರಿಗೆ

ನಾಳೆ ಮುಂಗಡಪತ್ರ. ಎಲ್ಲರೂ ಕುತೂಹಲದಿಂದ ನಿರೀಕ್ಷಿಸುವ ವಿಷಯ ಎಂದರೆ, ಯಾವ್ಯಾವ ತೆರಿಗೆ ಹೊರೆ ಬೀಳಲಿದೆ ಎಂಬುದು. ದೇಶವು ಆರ್ಥಿಕ ದುಃಸ್ಥಿತಿ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಮತ್ತೇನು ಸಂಕಟ ಕಾದಿದೆಯೋ ಎಂದು ಆತಂಕ ಸಹಜ. ಸಾಮಾನ್ಯವಾಗಿ ಬಜೆಟ್ ಎಂದರೆ ಇರುವ ವರಮಾನ ಮತ್ತು ವೆಚ್ಚ ತೂಗಿಸುವುದು. ಅದು ಸಾಧ್ಯ ಆಗದೇ ಇದ್ದಾಗ ಅಥವಾ ಯಾವುದಾದರೊಂದು ಹೊಸ ಉಪಕಾರಿ ಯೋಜನೆಗಾಗಿ ಖರ್ಚು ನಿಭಾಯಿಸಲು ಹೊಸ ತೆರಿಗೆಗಳನ್ನು ವಿಧಿಸುವುದು ಅಥವಾ ಇರುವ ತೆರಿಗೆ ಹೆಚ್ಚಿಸುವುದು ಕ್ರಮ. ದೇಶವೇ ಆರ್ಥಿಕ ಸಂಕಟದಲ್ಲಿ ತೊಳಲುತ್ತಿರುವಾಗ ಆದಾಯ ಮೂಲವನ್ನು ಹೆಚ್ಚಿಸುವ ಕ್ರಮ ಏನು ಎನ್ನುವುದು ಬಹಳ ದೊಡ್ಡ ಪ್ರಶ್ನೆ.

ಹಿಂದೆ ಡಾ. ಮನಮೋಹನ ಸಿಂಗ್ ಅರ್ಥ ಸಚಿವರಾಗಿದ್ದಾಗ ತೆರಿಗೆಗಳನ್ನು ಇಳಿಸುವ ಮೂಲಕ ಹೆಚ್ಚು ಆದಾಯ ಬರುವಂತೆ ನೋಡಿಕೊಂಡಿದ್ದರು. ಲಾಲೂ ಪ್ರಸಾದ ಯಾದವ ಅವರು ರೈಲ್ವೆ ಸಚಿವ ಆಗಿದ್ದಾಗ ಸರಕು ರವಾನೆ ವೆಚ್ಚ ಇಳಿಸಿ, ಇಡೀ ಇಲಾಖೆ ಲಾಭದತ್ತ ಮುಖ ಮಾಡುವಂತೆ ಮಾಡಿದ್ದರು. ಬಳಕೆದಾರರ ಸಂಖ್ಯೆ ಹೆಚ್ಚಿಸುವ ಮೂಲಕ ಇದು ಸಾಧ್ಯ. ಆದರೆ ಇಂಥ ಕ್ರಮಕ್ಕೆ ಇಂದಿನ ಸರ್ಕಾರ ಮುಂದಾಗುತ್ತದೆಯೇ ಎನ್ನುವ ಪ್ರಶ್ನೆ ಇದೆ.

ತೆರಿಗೆ ವಿಧಿಸುವ ಮೂಲಕ ಸರ್ಕಾರಗಳು ಆಯವ್ಯಯ ನಿರ್ವಹಿಸುತ್ತಾ ಬಂದಿವೆ. ಆದರೆ ಬಜೆಟ್ ಒಂದು ರಹಸ್ಯ ದಾಖಲೆ. ಅದು ಮುಂಗಡಪತ್ರ ಮಂಡನೆ ಬಳಿಕವೇ ಬಹಿರಂಗ ಆಗಬೇಕು ಎನ್ನುವುದು ನಿಯಮ. ಹಿಂದೊಮ್ಮೆ ಬ್ರಿಟನ್ನಿನ ಅರ್ಥ ಸಚಿವರು ಬಜೆಟ್ ಮಂಡನೆಯ ಹಿಂದಿನ ದಿನ ಪತ್ರಕರ್ತರೊಬ್ಬರ ಜೊತೆ ಕ್ಯಾಂಟಿನ್‍ನಲ್ಲಿ ಕಾಫಿ ಕುಡಿಯುತ್ತಾ ಕುಳಿತಾಗ ನಾಳೆಯಿಂದ ನಿಮ್ಮ ಕಾಫಿ ಬೆಲೆ ಹೆಚ್ಚಾಗಲಿದೆ ಎಂದಿದ್ದರು. ಸಕ್ಕರೆ ಮೇಲಿನ ತೆರಿಗೆ ಹೆಚ್ಚಳಕ್ಕೆ ಇದು ಸೂಚನೆ ಆಗಿತ್ತು. ಅದನ್ನು ವರದಿಗಾರ ಸುದ್ದಿ ಮಾಡಿದರು. ಬಜೆಟ್ ಮಂಡನೆಗೆ ಮುನ್ನ ರಹಸ್ಯ ಬಹಿರಂಗ ಮಾಡಿದರು ಎಂದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ತೆರಿಗೆ ವಿಧಿಸುವದರಿಂದ ಸರ್ಕಾರಗಳೇ ಉರುಳಿದ ಪ್ರಸಂಗಗಳೂ ನಡೆದಿವೆ. ತೆರಿಗೆಯಿಂದಾಗಿ ಬಹಳ ದೊಡ್ಡ ಪೆಟ್ಟು ತಿಂದಿದ್ದು ಬ್ರಿಟಿಷ್ ಆಡಳಿತ ಎಂದರೆ ಆಶ್ಚರ್ಯ ಆದೀತು. ಅವರು ಉಪ್ಪಿನ ಮೇಲೆ ತೆರಿಗೆ ವಿಧಿಸಿದ್ದನ್ನು ನೆಪವಾಗಿ ಇಟ್ಟುಕೊಂಡು ಗಾಂಧೀಜಿ ಅವರು ಸತ್ಯಾಗ್ರಹ ಆರಂಭಿಸಿದರು. ಸಮುದ್ರದ ದಂಡೆಗೆ ಹೋಗಿ ಉಪ್ಪು ತಯಾರಿಸುವುದು, ಆ ಮೂಲಕ ಬ್ರಿಟಿಷರ ತೆರಿಗೆ ನೀತಿ ವಿರೋಧಿಸುವುದು ಅವರು ಆರಿಸಿಕೊಂಡ ಮಾರ್ಗವಾಗಿತ್ತು. ಉಪ್ಪು ಎಲ್ಲರಿಗೂ ಬೇಕು. ಅದಕ್ಕೆ ಧರ್ಮ, ಜಾತಿ, ಪ್ರಾಂತ್ಯಗಳ ಭೇದ ಇಲ್ಲ. ಅದಕ್ಕಾಗಿಯೇ ಅವರು ಜನರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ದಾಂಡಿ ಯಾತ್ರೆ ನಡೆಸಿದರು. ಅವರು ಸಮುದ್ರ ದಂಡೆಗೆ ಹೋಗಿ ಒಂದು ಹಿಡಿ ಉಪ್ಪು ತಯಾರಿಸುವುದು ಅಷ್ಟೇನೂ ದೊಡ್ಡ ಸಂಗತಿ ಆಗಿರಲಿಲ್ಲ. ಆದರೆ ಅವರು ಸಾಬರಮತಿಯಿಂದ ದಾಂಡಿಗೆ ನಡೆದುಕೊಂಡು ಹೋಗುವ ಮೂಲಕ ಹಲವಾರು ಪಟ್ಟಣ, ಹಳ್ಳಿಗಳ ನಡುವೆ ಹಾದು ಹೋಗುತ್ತಾ, ಬಹಳಷ್ಟು ಜನರಿಗೆ ಉಪ್ಪಿನ ಮಹತ್ವ ಮತ್ತು ಅದಕ್ಕೆ ವಿಧಿಸಿದ್ದ ತೆರಿಗೆ ಬಹುದೊಡ್ಡ ಪೆಟ್ಟು ಎಂದು ಮನಗಾಣಿಸುವುದು ಮುಖ್ಯ ಆಗಿತ್ತು. ಅದನ್ನು ಅವರು ಬಹಳ ಸರಳವಾಗಿ ಸಾಧಿಸಿದರು.

ಗಾಂಧೀಜಿ ಆಯೋಜಿಸಿದ್ದ ಉಪ್ಪಿನ ಸತ್ಯಾಗ್ರಹದ ವಿಚಾರ ಕೇಳಿದ ಬ್ರಿಟಿಷರ ವರಿಷ್ಠ ಅಧಿಕಾರಿ ನಕ್ಕಿದ್ದನಂತೆ. ಇದರಿಂದ ಏನು ಸಾಧನೆ ಆದೀತು, ಗಾಂಧಿಗೆಲ್ಲೋ ಹುಚ್ಚು ಹಿಡಿದಿದೆ ಎಂದು ಆತ ಪ್ರತಿಕ್ರಿಯಿಸಿದ್ದ. ಆದರೆ ಬ್ರಿಟಿಷರ ಭಾರತ ಅಧಿಪತ್ಯದ ಬುಡ ಅಲ್ಲಾಡಲು ಶುರು ಆಗಿದ್ದೇ ಈ ತೆರಿಗೆ ವಿರೋಧದ ಕಾನೂನುಭಂಗ ಚಳವಳಿಯಿಂದ.

ಹಾಗಾಗಿಯೇ ಯಾವ ಪಕ್ಷ ಅಥವಾ ವ್ಯಕ್ತಿ ಅಧಿಕಾರಕ್ಕೆ ಬಂದಾಗಲೂ ತೆರಿಗೆ ವಿಧಿಸುವ ವಿಚಾರದಲ್ಲಿ ಬಹಳ ಎಚ್ಚರದಿಂದ ವರ್ತಿಸುವುದು ಅಗತ್ಯ ಎಂದು ಇತಿಹಾಸ ಹೇಳಿಕೊಟ್ಟಿದೆ. ಹಾಗಾಗಿಯೇ ಬಹಳಷ್ಟು ಸರ್ಕಾರಗಳು ಪರೋಕ್ಷ ತೆರಿಗೆ ಮೂಲಕವೇ ಹಣ ಮಾಡಿಕೊಳ್ಳುವ ಉಪಾಯ ಕಂಡುಕೊಂಡಿವೆ. ಸಾಮಾನ್ಯವಾಗಿ ತಂಬಾಕು ಉತ್ಪನ್ನಗಳು ಮತ್ತು ಮದ್ಯದ ಮೇಲಿನ ತೆರಿಗೆ ಹೆಚ್ಚಳದಿಂದಲೇ ತನ್ನ ಗುರಿ ಸಾಧಿಸಿಕೊಳ್ಳುವುದು ಸರ್ಕಾರಗಳು ಕಂಡುಕೊಂಡ ಉಪಾಯ.

ನೀವು ಇದುವರೆಗೆ ಸ್ವಚ್ಛ ಭಾರತ ಮಿಷನ್‍ಗೆ ಎಷ್ಟು ಹಣ ನೀಡಿದ್ದೀರಿ ಎಂದು ಯಾರನ್ನಾದರೂ ಪ್ರಶ್ನಿಸಿದರೆ ಕಕ್ಕಾಬಿಕ್ಕಿ ಆಗುವುದು ಸಹಜ. ನೀವೊಮ್ಮೆ ನಿಮ್ಮ ಟೆಲಿಫೋನ್ ಬಿಲ್, ಪೆಟ್ರೋಲ್ ಬಿಲ್ ಅಥವಾ ಕೇಂದ್ರ ಸರ್ಕಾರ ಒದಗಿಸುವ ಸೇವೆಗಳ ಬಿಲ್ ತೆಗೆದು ನೋಡಿದರೆ ತಿಳಿಯುತ್ತದೆ. ಒಂದು ರೂಪಾಯಿಗೆ ಹಲವು ಪೈಸೆ ತೆರಿಗೆ ರೂಪದಲ್ಲಿ ನಾವೆಲ್ಲ ತೆರುತ್ತಾ ಇದ್ದೇವೆ. ಹಾಗೇ ಬೆಂಗಳೂರಲ್ಲಿ ಪೆಟ್ರೋಲ್ ಖರೀದಿಸುವವರು ಮೆಟ್ರೋಗಾಗಿ, ಲೈಬ್ರರಿಗಾಗಿ ಸುಂಕ ತೆರುತ್ತಾ ಬಂದಿದ್ದಾರೆ. ಆದರೆ ಅದರಿಂದ ಪಡೆದ ಪ್ರಯೋಜನ ಎಷ್ಟು, ನಿಜಕ್ಕೂ ನಾವು ನೀಡಿದ ಸುಂಕ ಎಷ್ಟು, ಅದರಿಂದ ಎಷ್ಟು ಸಾರ್ಥಕತೆ ಪಡೆದಿದೆ ಎಂದು ನಾವು ಚಿಂತಿಸುವ ಗೋಜಿಗೂ ಹೋಗುವುದಿಲ್ಲ. ಏಕೆಂದರೆ, ಪ್ರತಿಯೊಂದು ವಸ್ತುಗಳ ಖರೀದಿಗೆ ಈ ಎಲ್ಲ ಸುಂಕ ಅಥವಾ ತೆರಿಗೆಗಳನ್ನು ಕೊಡುತ್ತಾ ಇದ್ದೇವೆ ಎಂಬ ಅರಿವು ಕೂಡ ನಮಗೆ ಇರುವುದಿಲ್ಲ.

ಈಗಿನ ಸರ್ಕಾರ ಪೆಟ್ರೋಲ್ ಮತ್ತು ಪೆಟ್ರೋಲ್ ಉತ್ಪನ್ನಗಳ ಬೆಲೆ ನಿರ್ಧಾರವನ್ನು ಬೇರೊಂದು ಸಂಸ್ಥೆಗೆ ಬಿಟ್ಟು ಕೊಡುವ ಮೂಲಕ ದೂಷಣೆಯಿಂದ ಪಾರಾಗಿದೆಯಾದರೂ ತೆರಿಗೆ ಸಂಗ್ರಹಕ್ಕೆ ತೊಂದರೆ ಉಂಟಾಗದಂತೆ ನೋಡಿಕೊಂಡಿದೆ. ಈಗಂತೂ ನಾನಾ ಮೂಲಗಳಿಂದ ಹಣ ಪಡೆಯುವ ಕೇಂದ್ರದ ಕ್ರಮಕ್ಕೆ ಪೂರ್ಣ ವಿರಾಮ ನೀಡಬೇಕಾಗಿ ಬಂದಿರುವುದರಿಂದ ನಾಳೆ ಮಂಡನೆ ಆಗಲಿರುವ ಆಯವ್ಯಯದಲ್ಲಿ ತೆರಿಗೆ ಹೆಚ್ಚಳ ಒಂದೇ ಉಪಾಯ ಎಂಬಂತೆ ತೋರುತ್ತಾ ಇರುವಾಗ ಆಶ್ಚರ್ಯಕರ ಕ್ರಮ ಏನಾದರೂ ಒಡಮೂಡಬಹುದೇ?

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: