ಸಾಲ ಕಂತು ಮರುಪಾವತಿ ಮುಂದೂಡಿಕೆಗೆ ಯೋಜನೆ ರೂಪಿಸುವಂತೆ ಕೋರ್ಟ್ ಸೂಚನೆ

ನವದೆಹಲಿ, ಸೆ 28- ಸಾಲ ಕಂತುಗಳ ಮರುಪಾವತಿ ಮುಂದೂಡಿಕೆ ಕುರಿತು ಶೀಘ್ರವೇ ಯೋಜನೆಯೊಂದನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರಕ್ಕೆ ಸೂಚಿಸಿದ್ದು, ಈ ಕುರಿತ ವಿಚಾರಣೆಯನ್ನು ಅ 4ಕ್ಕೆ ಮುಂದೂಡಿದೆ.

ಸಾಲ ಕಂತುಗಳ ಮರುಪಾವತಿ ಮುಂದೂಡಿಕೆ, ಈ ಅವಧಿಯಲ್ಲಿ ವಿಧಿಸುವ ಬಡ್ಡಿ ಮತ್ತಿತರ ವಿಷಯಗಳ ಕುರಿತಂತೆ ಪರಿಶೀಲಿಸಲು ಕೇಂದ್ರ ಸರ್ಕಾರ ಉನ್ನತಮಟ್ಟದ ಸಮಿತಿ ರಚಿಸಿದೆ ಎಂದು ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ.ಆರ್. ಷಾ ಅವರನ್ನೊಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿ, ಈ ಕುರಿತಂತೆ ಉತ್ತರಿಸಲು ಹೆಚ್ಚಿನ ಸಮಯಾವಕಾಶ ಕೋರಿದ್ದಾರೆ.

ಸಾಲ ಕಂತುಗಳ ಮರುಪಾವತಿ ಮುಂದೂಡಿಕೆ ವಿಷಯವಾಗಿ ಯೋಜನೆ ರೂಪಿಸುವಂತೆ ಈ ಹಿಂದಿನ ಸೆ 10ರ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿತ್ತು.

ಕೊವಿಡ್ ಹರಡುವಿಕೆ ತಡೆಗೆ ಲಾಕ್‌ಡೌನ್ ಘೋಷಿಸಿದ ನಂತರ. ಮಾರ್ಚ್ 1 ರಿಂದ ಮೇ 31 ರವರೆಗೆ ಮೂರು ತಿಂಗಳ ಅವಧಿಯಲ್ಲಿ ಸಾಲ ಕಂತುಗಳ ಮರುಪಾವತಿ ಮುಂದೂಡಲು ರಿಸರ್ವ್ ಬ್ಯಾಂಕ್ ಮಾರ್ಚ್ 27ರಂದು ಎಲ್ಲಾ ಬ್ಯಾಂಕ್‌ಗಳಿಗೆ ಅವಕಾಶ ನೀಡಿತ್ತು.

ನಂತರ, ಆಗಸ್ಟ್ 31 ರವರೆಗೆ ಮುಂದೂಡಿಕೆ ಅವಧಿ ವಿಸ್ತರಿಸಲು ಬ್ಯಾಂಕ್‍ ಗಳಿಗೆ ರಿಸರ್ವ್ ಬ್ಯಾಂಕ್‍ ಅವಕಾಶ ನೀಡಿತ್ತು. ಆದರೆ, ಬ್ಯಾಂಕಿಂಗ್ ವಲಯದ ಮೇಲೆ ಪರಿಣಾಮ ಬೀರುವ ಕುರಿತು ಎಚ್ಚರಿಕೆಯನ್ನೂ ನೀಡಿತ್ತು. ಆ ಬಳಿಕ, ಸಾಲ ಮರುಪಾವತಿ ಅವಧಿ ಮುಂದೂಡಿಕೆಯನ್ನು ಎರಡು ವರ್ಷಗಳವರಿಗೆ ವಿಸ್ತರಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈ ಕುರಿತಂತೆ ತನ್ನ ನಿಲುವು ಸ್ಪಷ್ಟಪಡಿಸುವಂತೆಯೂ ಕೇಂದ್ರಕ್ಕೆ ಸೂಚಿಸಿತ್ತು.

Leave A Reply

Your email address will not be published.

error: Content is protected !!