ಗಾಂಧೀಜಿ ಏಕೆ ಬೇಕು?

ಗಾಂಧೀಜಿ ಈ ನೆಲದಲ್ಲಿ ಹುಟ್ಟಿ 150 ವರ್ಷ ಕಳೆದಿವೆ. ಅವರ ವಿಚಾರ ಸರ್ವ ಕಾಲಕ್ಕೂ ಪ್ರಸ್ತುತ ಎಂದು ಇಡೀ ವಿಶ್ವ ಒಪ್ಪಿಕೊಂಡಿದೆ. ಸತ್ಯ, ಅಹಿಂಸೆ ಆಧರಿಸಿದ ಅವರ ನಿಲುವು ಮತ್ತು ಎಲ್ಲವನ್ನೂ ಮಾನವೀಯವಾಗಿ ನೋಡುವ ಕಣ್ಣು ಅವರನ್ನು ವಿಶ್ವವ್ಯಾಪಿ ಮಾರ್ಗದರ್ಶಕ ಆಗಿ ಮಾಡಿತು. ಅಮೇರಿಕಾದಲ್ಲಿ ಜಾರ್ಜ ಫ್ಲಾಯ್ಡ ಹತ್ಯೆ, ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದ ದಲಿತ ತರುಣಿಯ ಮೇಲಿನ ದೌರ್ಜನ್ಯ ಗಮನಿಸಿದಾಗ ಗಾಂಧೀಜಿ ಬಿತ್ತಿ ಹೋದ ನೈತಿಕ ನೆಲೆಗಳನ್ನು ಕಳೆದುಕೊಂಡಿದ್ದೇ ಇಂಥ ಸ್ಥಿತಿಗೆ ಕಾರಣ ಎಂಬುದಂತೂ ಸತ್ಯ.

ಅವರು ಏಳೆಂಟು ದಶಕಗಳ ಹಿಂದೆ ಗಮನಿಸಿದ, ಪ್ರಕಟಿಸಿದ ವಿಚಾರಗಳನ್ನು ಮರೆತ ಕಾರಣ ನಾವಿಂದು ಅತಂತ್ರ ಸ್ಥಿತಿಯಲ್ಲಿ ಇದ್ದೇವೆ. ಇಡೀ ಭಾರತ ಗ್ರಾಮ ಕೇಂದ್ರಿತ ಆಗಬೇಕು, ಎರಡು ಕಿಲೋ ಮೀಟರ್ ಆಚೆಗಿಂದ ಯಾವುದೇ ವಸ್ತು ತಂದು ಬಳಸಬಾರದು, ಗ್ರಾಮೀಣರ ಕೌಶಲ್ಯ ಮುಂದುವರಿಯಲು ತಕ್ಕ ವಾತಾವರಣ ನಿರ್ಮಿಸಬೇಕು, ಅಲ್ಲಿ ಹೋಗಿ ಅರ್ಥಹೀನ ಪಾಶ್ಚಿಮಾತ್ಯ ಶಿಕ್ಷಣದ ಹೆಸರಿನಲ್ಲಿ ಅವರ ಕಸುಬು, ಕಲೆಗಳಿಗೆ ಭಂಗ ತಂದು ಹಳ್ಳಿಗರನ್ನು ಅತಂತ್ರಗೊಳಿಸದೇ ಅವರ ಜ್ಞಾನ ಮತ್ತು ಕೌಶಲ್ಯಗಳನ್ನು ಅರಿಯುವ ಯತ್ನ ನಡೆಯಬೇಕು ಎಂದು ಗಾಂಧೀಜಿ ಹೇಳಿದ್ದರು. ಮುಖ್ಯವಾಗಿ ಎಲ್ಲಿಯವರೆಗೆ ಸಣ್ಣ ಹಿಡುವಳಿದಾರ ಹಳ್ಳಿಗಳಲ್ಲಿ ಭದ್ರ ನೆಲೆ ಕಂಡುಕೊಂಡಿರುತ್ತಾನೋ ಅಲ್ಲಿಯವರೆಗೆ ದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಅವರ ಚಿಂತನೆಯಾಗಿತ್ತು.

ಆದರೆ ನಾವು ನಗರ ಕೇಂದ್ರಿತ ವ್ಯವಸ್ಥೆ ಬೆಳೆಸಿದೆವು. ರೈತರನ್ನು ಭಿಕ್ಷುಕರನ್ನಾಗಿ, ಸಾಲಗಾರರನ್ನ್ನಾಗಿ ಮಾಡಿದೆವು. ಅದೆಲ್ಲಕ್ಕಿಂತ ಹೆಚ್ಚಾಗಿ ಹಳ್ಳಿ ಜೀವನ ಉಪಯೋಗ ಇಲ್ಲ ಎಂಬ ಭ್ರಮೆ ಸೃಷ್ಟಿಸಿದೆವು. ಆವತ್ತು ಅವರು ಉಳಿಸಿ ಬೆಳೆಸಲು ಉದ್ದೇಶಿಸಿದ್ದ ಸ್ವದೇಶಿ ಆಂದೋಲನ ಮಣ್ಣು ಮುಕ್ಕಿಸಿ, ಈಗ ‘ಆತ್ಮ ನಿರ್ಭರ’ ಎಂಬ ಹೆಸರಿಂದ ಮುಕ್ಕಳಿಸುತ್ತಿದ್ದೇವೆ. ಆವತ್ತು ಸ್ವದೇಶಿ ಚಿಂತನೆ ಭದ್ರವಾಗಿ ನೆಲೆಯೂರಲು ಅವಕಾಶ ಮಾಡಿ ಕೊಟ್ಟಿದ್ದರೆ ಈವತ್ತು ಇಂಥ ಸ್ಥಿತಿ ಬರುತ್ತಲೇ ಇರಲಿಲ್ಲ. ಏಕೆಂದರೆ ನಮ್ಮಲ್ಲಿ ಎಲ್ಲವೂ ಇತ್ತು, ಅದನ್ನು ಕಾಪಾಡಿಕೊಳ್ಳುವುದನ್ನು ಮಾಡಿದ್ದರೆ ಸಾಕಾಗುತ್ತಿತ್ತು. ಈವತ್ತು ಸ್ವದೇಶಿ ಆಂದೋಲನ ಎನ್ನುವುದೇ ನಗೆಪಾಟಲಿನ ಸಂಗತಿ. ನಾವೆಷ್ಟು ಪರಾವಲಂಬಿಗಳು ಎಂದರೆ, ನಮ್ಮ ‘ಆತ್ಮ ನಿರ್ಭರ’ ಕಾರ್ಯಕ್ರಮ ಹಮ್ಮಿಕೊಳ್ಳಲು ಹೊರ ದೇಶಗಳಿಂದ ನೆರವು ಬೇಕಾಗುತ್ತದೆ.

ಗಾಂಧೀಜಿ ಬಹುಷಃ ಎಲ್ಲ ಕಾಲಕ್ಕೆ ಸಲ್ಲುವ ಮಾತೊಂದು ಆಡಿದ್ದರು. ನಮ್ಮ ಗುರಿಯ ಹಾಗೆ ಅದಕ್ಕಾಗಿ ತುಳಿಯುವ ಮಾರ್ಗವೂ ಮುಖ್ಯ ಎಂದಿದ್ದರು. ಆದರೀಗ ಎಂಥ ಸ್ಥಿತಿ ಇದೆ ಎಂದರೆ ಗುರಿ ಮುಟ್ಟುವುದು ಮುಖ್ಯ, ಹಿಡಿದ ದಾರಿ ಯಾವುದಾದರೇನು? ಎಂಬ ಉಡಾಫೆಯ ಪರಿಣಾಮವಾಗಿ ಕೊಳಕು ರಾಜಕೀಯ, ಮಲಿನ ಮನಸ್ಸುಗಳ ಜನ, ಇನ್ನೊಬ್ಬರನ್ನು ಕೊಂದಾದರೂ ಲೂಟಿ ಮಾಡಿ ಶ್ರೀಮಂತರಾಗುವ ಹಪಹಪಿ ಕಾಣುತ್ತಿದೆ.

ಇಂಥ ಎಲ್ಲ ರೋಗಗಳಿಗೂ ಮದ್ದು ಎಂದರೆ ಸಾತ್ವಿಕ, ಅಹಿಂಸೆ ಆಧಾರಿತ ‘ಸತ್ಯಾಗ್ರಹ’ ಎಂದೇ ಅವರ ನಂಬಿಕೆ ಆಗಿತ್ತು. ಆದರೆ ಈವತ್ತು ಎಂಥ ಪರಿಸ್ಥಿತಿ ಇದೆ ಎಂದರೆ, ವಿರೋಧ ವ್ಯಕ್ತಪಡಿಸಲು ಧರಣಿ ನಡೆಸಿದರೆ ಕ್ಯಾರೇ ಎನ್ನುವವರಿಲ್ಲ. ಸ್ವಲ್ಪ ದನಿ ಎತ್ತಿದರೆ ಜೈಲು. ಗಾಂಧಿ ಕಾಲಕ್ಕೆ ಇದ್ದ ಬ್ರಿಟಿಷರು ವಾಸಿ. ಅವರು ಚರ್ಚೆ, ವಾದ ವಿವಾದಕ್ಕೆ ಸದಾ ಸಿದ್ಧ ಇರುತ್ತಿದ್ದರು. ತಮ್ಮ ಹೆಜ್ಜೆ ತಪ್ಪು ಎಂದು ಅರ್ಥ ಮಾಡಿಕೊಂಡ ವೇಳೆ ಹಿಂದೆ ಸರಿಯಲು ಕೂಡ ಅವರು ಬೇಸರಿಸುತ್ತ ಇರಲಿಲ್ಲ ಅಥವಾ ಎದುರು ನಿಂತವನ ವಿರುದ್ಧ ಹಗೆತನ ಸಾಧಿಸಲು ಹೋಗುತ್ತಿರಲಿಲ್ಲ. ಆದರೆ ಇಂದು ಏನಾಗಿದೆ ಎಂದು ನೋಡಿದರೆ ಭಯವಾಗುತ್ತದೆ. ನಮ್ಮ ನಮ್ಮ ನಡುವೆಯೇ ಗೋಡೆಗಳನ್ನು, ಕಂದಕಗಳನ್ನು ಸೃಷ್ಟಿಸಿ, ಪರಸ್ಪರ ಹೊಡೆದಾಟಕ್ಕೆ ಹಚ್ಚಿ ಬೇಳೆ ಬೇಯಿಸಿಕೊಳ್ಳುವ ಜನ ಕಾಣುತ್ತಿದ್ದಾರೆ.

ಆದರೂ ಗಾಂಧೀ ವಿಚಾರವೇ ನಮ್ಮನ್ನು ಗುರಿಯತ್ತ ಕೊಂಡೊಯ್ಯಬಲ್ಲದು ಎಂದು ನಂಬಿದವರಿಗೆ ಗುರಿ ಮುಟ್ಟುವುದು ಖಂಡಿತ ಸಾಧ್ಯ ಇದೆ. ಅಸಹಕಾರ ಚಳವಳಿ ಆರಂಭಿಸಿದ ಗಾಂಧೀಜಿ ಅವರು ಚೌರಿಚೌರಾದಲ್ಲಿ ನಡೆದ ಹಿಂಸಾಚಾರದಿಂದ ನೊಂದು ಚಳವಳಿ ಹಿಂದಕ್ಕೆ ಪಡೆದರು. ಕಾಲ ಇನ್ನೂ ಪಕ್ವವಾಗಿಲ್ಲ ಎನ್ನುವುದು ಅವರ ಅಂದಿನ ನಿಲುವಾಗಿತ್ತು. ಹಾಗೇ ಇಂದು ಪ್ರಬಲ ಶಕ್ತಿಗಳು ನಮ್ಮನ್ನು ಮತ್ತು ಚಿರಂತನ ಮಾನವೀಯ ಮೌಲ್ಯಗಳನ್ನು ಬಗ್ಗು ಬಡಿಯಲು ಸಜ್ಜಾಗಿ ಕುಳಿತಿವೆ ಎಂದು ಪರಿಗಣಿಸಿ ಹತಾಶರಾಗುವಂತಿಲ್ಲ. ಇನ್ನು ಮುಂದಾದರೂ ಗಾಂಧೀಜಿ ತೋರಿಸಿದ ದಾರಿಯಲ್ಲಿ ನಡೆಯಲು ತಯಾರಿ ಮಾಡಬೇಕು. ಅಂಥದೊಂದು ತಯಾರಿಯಲ್ಲಿ ತೊಡಗುವುದು ಈಗ ಅಗತ್ಯ. ಅದು ಶೀಘ್ರ ಫಲ ನೀಡುವುದಿಲ್ಲ ಎಂದು ತಿಳಿದೂ ಜನರನ್ನು ಅದರಲ್ಲಿ ಒಳಗೊಳ್ಳುವಂತೆ ಮಾಡುವ ಚೈತನ್ಯ ಉಳ್ಳವರು ಮಾತ್ರ ಇದೆಲ್ಲ ಸಾಧಿಸಬಲ್ಲರು. ಆವತ್ತು ‘ಅರೆ ನಗ್ನ ಫಕೀರ’ ಎನಿಸಿಕೊಂಡು ಉಡಾಫೆಗೆ ಒಳಗಾಗಿದ್ದ ಗಾಂಧೀಜಿ ಹೇಗೆ ಬೆಳೆಯುತ್ತಾ ಹೋದರು ಮತ್ತು ಎಲ್ಲಿಯೂ ಸೌಜನ್ಯ, ಮಾನವೀಯತೆಗೆ ಧಕ್ಕೆ ಬಾರದ ಹಾಗೆ ನಡೆದುಕೊಂಡರು ಎಂಬುದನ್ನು ಗಮನಿಸಿದರೆ ಸಾಕು.

ನಮ್ಮ ಎದುರೀಗ ಬಹಳ ದೊಡ್ಡ ಸವಾಲು ಇದೆ, ಇಲ್ಲಿ ನಾವು ಸ್ಥಾಪಿಸಲು ಉದ್ದೇಶಿಸಿರುವ ಬಹು ಮಹತ್ವದ ಮಾನವೀಯ ಮೌಲ್ಯಗಳೆಲ್ಲ ಈಗ ಉದುರಿ ಬಿದ್ದಿವೆ. ಅವನ್ನೆಲ್ಲ ಎತ್ತಿ ನಿಲ್ಲಿಸಲು ಮತ್ತು ಜೀವ ತುಂಬಲು ಅಪಾರ ಶಕ್ತಿ, ಮಾನಸಿಕ ಸ್ಥೈರ್ಯ ಅತ್ಯಗತ್ಯ. ಅಷ್ಟೇ ಅಲ್ಲ, ನಿರೀಕ್ಷಿಸಿದ ಯಾವೊಂದೂ ಕೈಗೂಡದೇ ಇರಬಹುದು. ಆದರೆ ಮೌಲ್ಯಗಳ ಬಾವುಟ ಎತ್ತಿ ಹಿಡಿಯಲು ಒಬ್ಬರಲ್ಲ ಒಬ್ಬರು ಸಜ್ಜಾಗಿಯೇ ಇರುತ್ತಾರೆ ಎನ್ನುವ ಪರಂಪರೆ ಈ ದೇಶದ್ದು. ಎಂತೆಂಥ ದುಷ್ಟರನ್ನು, ಧೂರ್ತರನ್ನು, ಅಹಂಕಾರದಿಂದ ಮೆರೆದವರನ್ನು ಈ ದೇಶ ಕಂಡಿದೆ. ಅಂಥವರ ಗತಿ ಏನಾಯಿತು ಎಂಬುದು ಮತ್ತು ಅಂಥವರನ್ನು ಮಣಿಸಲು ಸಾಮಾನ್ಯ ಜನರ ಕೊಡುಗೆ ಏನು ಎಂಬುದನ್ನು ನಾವು ಚರಿತ್ರೆಯ ಉದ್ದಕ್ಕೂ ನೋಡಿದ್ದೇವೆ. ಈಗ ಮತ್ತೊಮ್ಮೆ ಹೊಸ ಚರಿತ್ರೆ ರಚಿಸುವ ಕೆಲಸದಲ್ಲಿ ತೊಡಗಬೇಕಿದೆ. ಅದಕ್ಕೆ ಗಾಂಧಿ ಹುಟ್ಟಿ 150 ವರ್ಷ ಆದ ಸಂದರ್ಭವೇ ಹೆಚ್ಚು ಸೂಕ್ತ. ಅದೆಲ್ಲಕ್ಕೂ ಅವರ ಚಿಂತನೆಗಳು ಹೋರಾಟಕ್ಕೆ ಬೆಳಕಾಗಿ ನಿಲ್ಲಲಿ ಎಂದು ಆಶಿಸೋಣ.

-ಎ.ಬಿ.ಧಾರವಾಡಕರ

Leave A Reply

Your email address will not be published.

error: Content is protected !!