ಎಲ್ಲಿಗೆ ಪಯಣ?

ಕನ್ನಡ ಸಿನೆಮಾ ‘ಸಿಪಾಯಿ ರಾಮು’. ಅದರಲ್ಲೊಂದು ಹೃದಯ ಸ್ಪರ್ಶಿ ಹಾಡಿದೆ. ‘ಎಲ್ಲಿಗೇ ಪಯಣ, ಯಾವುದೋ ದಾರಿ?’ ಇದರ ಮೊದಲ ಸಾಲು. ಈಗ ದೇಶಾದ್ಯಂತ ನಡೆಯುತ್ತ ಇರುವ ಪಯಣದ ದೃಷ್ಟಿಯಿಂದ ಈ ಹಾಡು ಪ್ರಸ್ತುತ ಎನಿಸುತ್ತದೆ. ಗೊತ್ತು ಗುರಿ ಇಲ್ಲದೇ ಸಾಗಬೇಕಾದ ನಾಯಕನ ಹೃದಯದಾಳದಿಂದ ಹೊಮ್ಮುವ ಪ್ರಶ್ನೆ ಇದು. ಬಹುಷಃ ಎಲ್ಲ ಬಿಟ್ಟು ಏಕಾಏಕಿ ಹೊರಡುವ ಎಲ್ಲರಿಗೂ ಇಂಥದೊಂದು ಪ್ರಶ್ನೆ ಕಾಡುತ್ತದೆ. ಕಾಲ್ನಡಿಗೆ ಪ್ರಯಾಣ ಅನಿವಾರ್ಯ ಆಗುತ್ತಿರುವ ಇಂಥ ದಿನಗಳನ್ನು ಯಾರೂ ನಿರೀಕ್ಷಿಸಿರಲಿಲ್ಲ. ಹಾಗೆ ನೋಡಿದರೆ ನಮ್ಮ ದೇಶ ಇಂಥ ಕಾಲ್ನಡಿಗೆ ಯಾತ್ರೆಗೆ ಬಹಳ ಪ್ರಸಿದ್ಧಿ. ಕಾಲ್ನಡಿಗೆಯಲ್ಲಿಯೇ ಸಾವಿರಾರು ಮೈಲಿ ಪುಣ್ಯ ಕ್ಷೇತ್ರಗಳ ಯಾತ್ರೆ ಮಾಡಿ ಬರುವವರು ಇದ್ದರು. ಶಿಕ್ಷಣ, ವ್ಯಾಪಾರ ಮತ್ತು ದೇವರ ದರ್ಶನಕ್ಕೆ ಆಗೆಲ್ಲ ಕಾಲು ನಡಿಗೆ ಅನಿವಾರ್ಯ ಆಗಿತ್ತು. ಪುಣ್ಯ ಕ್ಷೇತ್ರದ ಭೇಟಿಯನ್ನು ಯಾತ್ರೆ, ತೀರ್ಥಯಾತ್ರೆ ಎಂದು ಕರೆಯುತ್ತ ಇದ್ದರು. ಆ ಸಂಪ್ರದಾಯ ಇನ್ನೂ ಉಳಿದುಕೊಂಡಿರುವುದು ದಿಂಡೀ ಯಾತ್ರೆಯಲ್ಲಿ. ಪ್ರತಿ ವರ್ಷ ಪ್ರಥಮ ಏಕಾದಶಿ ಸಮಯಕ್ಕೆ ಪಂಢರಪುರದಲ್ಲಿ ನಡೆಯುವ ಪುಣ್ಯ ಸ್ನಾನದಲ್ಲಿ ಭಾಗಿಯಾಗಲು ಸಾವಿರಗಟ್ಟಲೇ ಜನ ಗುಂಪು ಗುಂಪುಗಳಾಗಿ ದೇವರ ನಾಮಗಳನ್ನು ಹಾಡುತ್ತ ತಮ್ಮ ತಮ್ಮ ಊರುಗಳಿಂದ ಪಂಢರಪುರದತ್ತ ನಡೆದು ಹೋಗುತ್ತಾರೆ.

ಯಂತ್ರಯುಗ ಆರಂಭವಾಗಿ ರೈಲು, ಬಸ್ಸು, ಕಾರು, ವಿಮಾನಗಳ ಯುಗಾರಂಭದಿಂದ ನಡೆದು ಹೋಗುವುದನ್ನು ಮನುಷ್ಯ ಕಡಿಮೆ ಮಾಡಿದ. ಈಗೆಲ್ಲ ನಡೆದು ಹೋಗುವ ಖಯಾಲಿಯನ್ನು ಚಾರಣ ಎನ್ನುವ ಹೆಸರಲ್ಲಿ ಹಣ ಇದ್ದವರು ಕೈಗೊಳ್ಳುತ್ತಾರೆ. ಆದರೆ ಕೊರೋನಾ ಪಿಡುಗಿನ ಈ ಸಮಯದಲ್ಲಿ ಎಲ್ಲ ವಾಹನಗಳೂ ಸೋಂಕು ಹರಡುವ ಸಾಧನಗಳಾದ ಕಾರಣ ಅವುಗಳ ಸಂಚಾರ ನಿರ್ಬಂಧಿಸಲಾಗಿದೆ. ಈ ನಡುವೆ ದಿಢೀರನೇ ಲಾಕ್‍ಡೌನ್ ಘೋಷಿಸಿದಾಗ ಅತ್ತಲೂ ಇಲ್ಲ ಇತ್ತಲೂ ಇಲ್ಲ ಎಂಬಂಥ ತ್ರಿಶಂಖು ಸ್ಥಿತಿಯಲ್ಲಿ ಸಿಕ್ಕಿಕೊಂಡವರು ವಲಸಿಗ ಕಾರ್ಮಿಕರು. ಪರಿಸ್ಥಿತಿ ಇಂದಲ್ಲ ನಾಳೆ ಸರಿ ಹೋಗಬಹುದು ಎಂದು ನಲವತ್ತಕ್ಕೂ ಹೆಚ್ಚು ದಿನ ಕಾದದ್ದೂ ಬಂತು. ಇದಕ್ಕೆ ಮುಕ್ತಿ ಇಲ್ಲ ಎಂದು ಅವರೆಲ್ಲರಿಗೆ ಮನವರಿಕೆ ಆಗಿದೆ. ಯಾವುದೋ ನಗರದ ಬೀದಿ, ಬಯಲಲ್ಲಿ ಠಿಕಾಣಿ ಹೂಡಿ, ಯಾರೋ ಕೊಡುವ ಹಿಡಿ ಅನ್ನಕ್ಕೆ ಕೈ ಚಾಚಿ ಬದುಕುವುದು ಅವರ್ಯಾರಿಗೂ ಬೇಡ ಆಗಿದೆ. ತಮ್ಮ ಊರುಗಳಿಗೆ ತೆರಳಲು ಅವರು ತುದಿಗಾಲಲ್ಲಿ ತಯಾರಾಗಿ ನಿಂತಾಗ, ಎಲ್ಲರನ್ನೂ ಉಚಿತವಾಗಿ ರೈಲುಗಳಲ್ಲಿ ಅವರವರ ಊರು ತಲುಪಿಸುವ ವಿಚಾರ ಸರ್ಕಾರಗಳ ಕಡೆಯಿಂದ ಕೇಳಿ ಬಂತು.

ಇದೊಂದು ಹಸಿ ಸುಳ್ಳು, ಕೇವಲ ಪ್ರಚಾರ ತಂತ್ರ, ರಾಜಕೀಯ ಮಂದಿಗೆ ಬಡವರ ಬಗ್ಗೆ ಎಂದಿಗೂ ಕಾಳಜಿ ಇರಲಿಲ್ಲ, ಈಗಲೂ ಇಲ್ಲ ಎಂದು ಅರಿವಾಗಿ ಅವರೆಲ್ಲ ಸಾವಿರ ಸಾವಿರ ಮೈಲಿ ದೂರದ ತಮ್ಮ ತಮ್ಮ ಊರುಗಳಿಗೆ ನಡೆದು ಹೋಗಲು ತಯಾರಾದರು. ಕಾಲ್ನಡಿಗೆಯಲ್ಲಿ ದೂರ ದೂರ ನಡೆಯಬೇಕು ಎಂದರೆ; ಎರಡು ಪ್ರಮುಖ ಸಂಗತಿಗಳನ್ನು ಗಮನಿಸಬೇಕು. ದೇಹದ ಶಕ್ತಿ ಮತ್ತು ಪಾದಗಳಿಗೆ ಸುರಕ್ಷೆ ಕೊಡುವ ಪಾದರಕ್ಷೆ. ಉಳ್ಳವರು ಚಾರಣದ ಹೆಸರಲ್ಲಿ ಮೋಜು ಮಸ್ತಿಗೆ ತೆರಳುವಾಗ ಬಳಸುವ ಪಾದರಕ್ಷೆಗಳ ಬೆಲೆಯೇ ಸಾವಿರಾರು ರೂಪಾಯಿ ಇರುತ್ತವೆ. ಇದರ ಜೊತೆಗೆ ಹಲವು ಹತ್ತು ಬಗೆಯ ತಾಂತ್ರಿಕ ಉಪಕರಣ, ರಾತ್ರಿ ವೇಳೆ ಬಿಡಾರ ಹೂಡಲು ಅಗತ್ಯ ಸಾಮಗ್ರಿ, ಆಹಾರ ಎಲ್ಲ ಕೊಂಡೊಯ್ಯುತ್ತಾರೆ. ಇದಲ್ಲದೇ ಪ್ರತಿ ವರ್ಷ ಕೆಲವು ಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲಿ ಹೋಗಿ ಬರುವ ಯಾತ್ರಿಗಳು ಕೂಡ ಸಾಕಷ್ಟು ಸಿದ್ಧತೆ ಮಾಡಿಕೊಂಡೇ ಯಾತ್ರೆ ಕೈಗೊಳ್ಳುತ್ತಾರೆ. ಆದರೆ, ಇಂಥ ಯಾವ ಸಿದ್ಧತೆಯೂ ಇಲ್ಲದೇ ದುಸ್ಥಿತಿಯಲ್ಲಿ ಊರಿಗೆ ತೆರಳುವ ಅನಿವಾರ್ಯತೆಯಿಂದ ಕಾಲ್ನಡಿಗೆ ಪಯಣ ಆರಂಭಿಸಿರುವವರು ವಲಸಿಗ ಕಾರ್ಮಿಕರು. ಮುಖ್ಯ ಹೆದ್ದಾರಿಗಳಲ್ಲಿ ನಡೆದರೆ ಪೊಲೀಸರ ಕಾಟ. ಅದಕ್ಕಾಗಿ ಅವರು ರೈಲು ಹಳಿಗಳ ಮೇಲೆಯೇ ನಡೆದು ಊರು ಸೇರುವ ಸಾಹಸ ಯಾತ್ರೆಯಲ್ಲಿ ತೊಡಗಿದ್ದಾರೆ.

ಯಾತ್ರೆ ಹೊರಟವರಲ್ಲಿ ಮಹಿಳೆಯರು, ಗರ್ಭಿಣಿಯರು, ಎಳೆಯ ಕಂದಮ್ಮಗಳು, ಸಣ್ಣ ಮಕ್ಕಳು ಕೂಡ ಇದ್ದಾರೆ. ಅವರ ಈ ಯಾತ್ರೆ ಹಲವಾರು ದಿನಗಳ ಹಿಂದೆಯೇ ಆರಂಭವಾಗಿದ್ದು ಸದ್ಯಕ್ಕೆ ಇದು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹೀಗೆ ಕಾಲ್ನಡಿಗೆಯಲ್ಲಿ ಹೊರಟ ಜನರಿಗೆ ಕಾಲಲ್ಲಿ ಅಗ್ಗದ ಚಪ್ಪಲಿ, ತಲೆ ಮೇಲೆ ಗಂಟು ಮೂಟೆ, ಹೆಗಲಲ್ಲಿ ಮಕ್ಕಳು ಇವೆ. ರೈಲು ಹಳಿಗಳಗುಂಟ ಸಾಗುವುದು ಒಂದು ರೀತಿ ಕಲ್ಲು ಮುಳ್ಳಿನ ಹಾದಿ ತುಳಿದಂತೆ. ಕೆಲವರಿಗೆ ಈಗಾಗಲೇ ಕಾಲು ಊದಿಕೊಂಡಿವೆ, ಕೆಲವರ ಚಪ್ಪಲಿಗಳೇ ಕಿತ್ತು ಹೋಗಿವೆ. ಹೀಗೇ ಇನ್ನೂ ಕೆಲವು ದಿನ ನಡೆಯುತ್ತಾ ಹೋದರೆ ಅವರ ಕಾಲುಗಳಲ್ಲಿ ಬಿರುಕು ಕಾಣಿಸಿಕೊಂಡು ರಕ್ತ ಸೋರಲು ಆರಂಭವಾಗುತ್ತದೆ.

ಕೆಲ ವಾಹಿನಿಗಳಲ್ಲಿ ಇಂಥÀ ಜನರ ಸಂಕಷ್ಟ ಕಂಡು ಅಲ್ಲಲ್ಲಿ ಕೈಲಾದಷ್ಟು ಊಟ, ನೀರು ಒದಗಿಸುವ ಕೆಲಸದಲ್ಲಿ ಸಾಮಾನ್ಯ ಜನ ತೊಡಗಿದ್ದಾರೆ. ಕೆಲವರು ಬಿಸ್ಕೀಟು, ಹಣ್ಣು ಹಂಚುವ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ಎಷ್ಟೇ ಕಷ್ಟವಾದರೂ ತಮ್ಮ ಊರುಗಳನ್ನು ಸೇರಲಿ ಎಂದು ಹಾರೈಸೋಣ. ಇಂಥ ಹಾರೈಕೆ ಏಕೆಂದರೆ, ಕಳೆದ ಬಾರಿ ಇಂಥ ನಡೆ ಆರಂಭವಾಗಿ ಬಿಹಾರ, ಉತ್ತರ ಪ್ರದೇಶಗಳತ್ತ ಉತ್ತರ ಭಾರತದಿಂದ ಹೊರಟ ಎಷ್ಟೋ ಜನ ದಾರಿಯಲ್ಲಿಯೇ ಮರಣ ಹೊಂದಿದರು. ಇತ್ತೀಚೆಗೆ ಮಹಾರಾಷ್ಟ್ರದ ಜಾಲ್ನಾದಿಂದ ಔರಂಗಾಬಾದ್‍ನತ್ತ ಹೊರಟಿದ್ದ ಬಡ ಕಾರ್ಮಿಕರ ತಂಡವೊಂದು ದಣಿದು ರೈಲು ಹಳಿಗಳ ಮೇಲೆಯೇ ಮಲಗಿದ್ದಾಗ ನಸುಕಿನಲ್ಲಿ ಅವರ ಮೇಲೊಂದು ಗೂಡ್ಸ ರೈಲು ಹರಿದು ಹದಿನಾರು ಮಂದಿ ಸತ್ತಿದ್ದಾರೆ. ಇದು ಹೆದ್ದಾರಿಯಲ್ಲಿ ನಡೆಯುವುದಕ್ಕಿಂತ ಕ್ಲಿಷ್ಟಕರ ಯಾತ್ರೆ. ಪ್ರಾಣದ ಹಂಗು ತೊರೆದು ದೀರ್ಘಯಾತ್ರೆ ಕೈಗೊಂಡಿರುವ ಈ ಜನರ ಕರುಳು ಮಿಡಿಯುವ ಘಟನೆಗಳಿಗೆ ಹೇಳಿಕೆ ನೀಡಿ ಸುಮ್ಮನಾಗುವುದು ಸುಲಭ. ಆದರೆ ‘ಎಲ್ಲಿಗೆ ಪಯಣ?’ ಎಂದು ವಿಚಾರಿಸಿ ಅನುಕೂಲ ಮಾಡಿಕೊಡುವುದು ಮಾನವೀಯತೆ. ಇಲ್ಲವಾದಲ್ಲಿ ಪಯಣ ಅನಗತ್ಯ ರೀತಿಯಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಇರುತ್ತದೆ.

LEAVE A REPLY

Please enter your comment!
Please enter your name here