ಬದುಕು ಬದಲಿಸುವ ಕ್ಷಣ

ಇತಿಹಾಸ ಕೆಲವು ಸತ್ಯ ಹೇಳುತ್ತದೆ. ಅದನ್ನು ಗಮನಿಸಬೇಕು. ಅದರಲ್ಲೆಲ್ಲ ತೀರಾ ಮಹತ್ವದ ಒಂದು ವಿಚಾರ ಇದೆ. ಎಷ್ಟೋ ಜನರ ಆ ಒಂದು ಕ್ಷಣದ ನಿರ್ಧಾರ ಇತಿಹಾಸದ ಚಕ್ರಕ್ಕೆ ಹೊಸ ಗತಿ ತಂದು ಕೊಟ್ಟಿದೆ. ಬುದ್ಧ ಆಗಿನ್ನೂ ಸಿದ್ಧಾರ್ಥ ಆಗಿದ್ದ. ಅವನು ರಾಜಕುಮಾರ. ಮುಂದೆ ಅರಸ ಆಗುವವನು. ಹೆಂಡತಿ ಇದ್ದಳು, ಒಂದು ಪುಟ್ಟ ಮಗು ಇತ್ತು. ಆದರೂ ಒಂದು ನಡುರಾತ್ರಿ ಎಲ್ಲವನ್ನೂ ಬಿಟ್ಟು ಇನ್ನೆಲ್ಲಿಗೋ ಹೋಗಲು ನಿರ್ಧರಿಸಿದ. ಆ ಕ್ಷಣ ಒಮ್ಮೆ ಹೊರಳಿ ನೋಡಿದ. ಸುಂದರ ಹೆಂಡತಿ, ಮುದ್ದಾದ ಮಗು. ಆದರೂ ಆತ ಎಲ್ಲ ಬಿಟ್ಟು ಹೊರಟು ನಿಂತ. ನಮ್ಮ ಇತಿಹಾಸದ ಚಕ್ರಕ್ಕೆ ಹೊಸ ಆಯಾಮ ದೊರಕಿದ್ದು ಅಂದು ಸಿದ್ಧಾರ್ಥ ಕೈಗೊಂಡ ಆ ಕ್ಷಣದ ಒಂದು ನಿರ್ಧಾರದಿಂದಲೇ.

ಇಡೀ ಮಾನವ ಕುಲ ತಲೆ ಎತ್ತಿ ನೋಡುವಂತೆ ಮಾಡಿದ, ನಮ್ಮ ಸಣ್ಣತನಗಳಲ್ಲಿಯೇ ನಾವು ಬದುಕು ನೀಗಿಕೊಳ್ಳುತ್ತ ಇದ್ದೇವೆ ಎಂದು ಮನವರಿಕೆ ಮಾಡಿಕೊಟ್ಟ. ಆತ ಎಂದೂ ದೇವರ ಕುರಿತು ಮಾತಾಡಲಿಲ್ಲ. ಮನುಷ್ಯನ ಅಂತರಾಳದಲ್ಲಿ ಹುದುಗಿರುವ ಆಸೆ, ಆಕಾಕ್ಷೆ; ಅವನ್ನು ಕಣ್ಣಿಟ್ಟು ನೋಡಿ ಬದುಕು ಹೇಗೆ ಕಟ್ಟಿಕೊಳ್ಳಬೇಕು ಎಂದಷ್ಟೇ ಹೇಳಿದ. ದೇವರು ಆತನ ವಿಚಾರದ ಕೇಂದ್ರ ಆಗಿರಲಿಲ್ಲ, ಮನುಷ್ಯ ಆತನ ದೃಷ್ಟಿಯ ಕೇಂದ್ರ ಆಗಿದ್ದ. ಮನುಷ್ಯ ಎಂದಿನಿಂದಲೂ ಬದುಕುತ್ತ ಬಂದಿದ್ದಾನೆ, ಮುಂದೆಯೂ ಬದುಕಿರುತ್ತಾನೆ. ಆತ ಮುಕ್ತಿ ಪಡೆಯಬೇಕಾದುದು ಒಳಗಿನ ಸಣ್ಣತನದ ಕಾಮನೆಗಳಿಂದ; ಏಕೆಂದರೆ ಅವೇ ತುಂಬಾ ಅಪಾಯಕಾರಿ. ಮನುಷ್ಯನ ಚೈತನ್ಯವನ್ನು ಕುಗ್ಗಿಸಿ, ಅವನು ನೋಯುವಂತೆ ಮಾಡುವ ಎಲ್ಲ ಸಾಧ್ಯತೆಗಳನ್ನು ಹೊಂದಿದ ಕಾಮನೆಗಳು ಅವು. ಅದಕ್ಕಾಗಿ ಕಾಡಿಗೆ ಹೋಗಿ ತಪಸ್ಸು ಮಾಡಬೇಕಿಲ್ಲ, ಯಜ್ಞ, ಯಾಗ ಮಾಡಬೇಕಿಲ್ಲ; ನಮ್ಮಲ್ಲಿ ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯಿಸುವ ರೀತಿ ತಿದ್ದಿಕೊಳ್ಳಬೇಕು ಎಂದಷ್ಟೇ ಆತ ಹೇಳಿದ್ದು. ಅದು ಅತಿಗಳ ಮಾರ್ಗ ಅಲ್ಲ, ಅದು ಸುವರ್ಣ ಮಾಧ್ಯಮ. ಇದೆಲ್ಲ ಸಾಧ್ಯ ಆಗಿದ್ದು ಆತ ಆ ನಡುರಾತ್ರಿಯ ಒಂದು ಕ್ಷಣ ಕೈಗೊಂಡ ನಿರ್ಧಾರದಿಂದ. ಇಡೀ ಜಗತ್ತು, ಜಗತ್ತಿನ ಇತಿಹಾಸ ಎಲ್ಲ ಬದಲಾಗಿ ಹೋಯಿತು.

ಮತ್ತೊಂದು ಅಂಥ ಕ್ಷÀಣ ನಾವು ಕಾಣುವುದು ಹತ್ತೊಂಭತ್ತನೇ ಶತಮಾನದ ಕೊನೆಯಲ್ಲಿ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮೋಹನದಾಸ ಕರಮಚಂದ ಗಾಂಧಿ ಎಂಬಾತನನ್ನು ಪ್ರಥಮ ದರ್ಜೆ ಟಿಕೆಟ್ ಹೊಂದಿದ್ದರೂ ರೈಲಿನಿಂದ ಆಚೆ ತಳ್ಳಿದ ಅಧಿಕಾರಿ ಇಡೀ ಜಗತ್ತಿಗೆ, ಅದರಲ್ಲೂ ಇಂಡಿಯಾಕ್ಕೆ ಎಷ್ಟೊಂದು ಮಹತ್ವದ ಉಪಕಾರ ಮಾಡಿದ ನೋಡಿ. ರೈಲ್ವೆ ಪ್ಲಾಟ್‍ಫಾರ್ಮ್ ಮೇಲೆ ತನ್ನ ಲಗೇಜು ಸಮೇತ ಬಿದ್ದ ಮೋಹನದಾಸ ಎಂಬಾತ ಮಹಾತ್ಮ ಆಗುವ ವಿಚಾರದ ಬೀಜಾಂಕುರ ಆದ ಕ್ಷಣ ಅದು. ಆತ ಸಿಟ್ಟು ಮಾಡಿಕೊಳ್ಳಲಿಲ್ಲ, ಸೇಡು ತೀರಿಸಿಕೊಳ್ಳುವ ವಿಚಾರ ಮಾಡಲಿಲ್ಲ. ಮನುಷ್ಯರನ್ನು ಮನುಷ್ಯರಾಗಿ ಕಾಣುವ ಜನರನ್ನು ನಿರ್ಮಿಸುವ ಮಹಾಯಜ್ಞಕ್ಕೆ ಆತ ಅಧ್ವೈರ್ಯು ಆದ.

ಆ ಕೆಲಸವನ್ನು ಪ್ರೀತಿ, ಪ್ರೇಮ, ಕರುಣೆ, ಸಹನೆಯಿಂದ ಮಾಡುವ ಆತನ ರೀತಿಯೇ ಅನನ್ಯ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಪ್ರಯೋಗ ಸತ್ಯಾಗ್ರಹದ್ದು. ಅಂಥದೊಂದು ವೇಳೆ ಕುದುರೆ ಹತ್ತಿ ಬಂದ ಪೊಲೀಸ ಅಧಿಕಾರಿ ಹಂಟರ್ ಕಾಲಿನಿಂದ ಒದ್ದ ಕಾರಣ ನೆಲಕ್ಕೆ ಬಿದ್ದ ಗಾಂಧೀಜಿ ಅವರು ಜೈಲು ಸೇರಿದರೂ ತಮ್ಮ ಒಳಗಿನ ಆ ಜೀವಸೆಲೆ ಬತ್ತಿಸಿಕೊಳ್ಳಲಿಲ್ಲ. ಜೊತೆಯ ಕೈದಿಯೊಬ್ಬನಿಂದ ಚಪ್ಪಲಿ ತಯಾರಿಸುವ ಕಲೆ ಕಲಿತರು. ಸೆರೆಯಲ್ಲಿ ಕುಳಿತು ಎರಡು ಜೊತೆ ಚಪ್ಪÀಲಿ ತಯಾರಿಸಿದರು. ಬಿಡುಗಡೆಯಾದ ದಿನ ಕಂಕುಳಲ್ಲಿ ಒಂದು ಜೊತೆ ಚಪ್ಪಲಿ ಕಾಗದದಲ್ಲಿ ಸುತ್ತಿಟ್ಟುಕೊಂಡು ಸೀದಾ ಜೈಲು ಅಧಿಕಾರಿ ಆಗಿದ್ದ ಹಂಟರ್ ಬಳಿ ಹೋದರು. ‘ನೋಡಿಲ್ಲಿ, ನಿನಗಾಗಿ ಏನು ತಂದಿದ್ದೇನೆ?’ ಎಂದು ತಾವು ಚಪ್ಪಲಿ ತಯಾರಿಕೆ ಕಲಿತು, ಅವನಿಗಾಗಿ ಮತ್ತು ತಮಗಾಗಿ ತಯಾರಿಸಿಕೊಂಡ ಚಪ್ಪಲಿಯ ವಿಚಾರ ಹೇಳಿ ಬಂದರು. ಆವತ್ತು ಹಂಟರ್‍ಗೆ ನೀಡಿದ ಆ ಚಪ್ಪಲಿ ಇಂದೂ ಲಂಡನ್ ಮ್ಯೂಸಿಯಂನಲ್ಲಿ ಇವೆ. ಅದರ ಬಗ್ಗೆ ಮಾತಾಡಿದ ಹಂಟರ್ ಹೇಳಿದ್ದ ‘ನಾನು ಆ ಚಪ್ಪಲಿ ಒಂದೆರಡು ಸಲ ಮೆಟ್ಟಿರಬಹುದು ಅಷ್ಟೇ. ಅದನ್ನು ನಾನು ಪೂಜಿಸುವ ಏಸುವಿನ ಪ್ರತಿಮೆ ಬಳಿ ಇರಿಸಿದ್ದೆ’. ಎಂಥ ಮಾತು. ಅದನ್ನು ಸಾಧ್ಯ ಆಗಿಸಿದ್ದು ಗಾಂಧಿ ಅಂಥವರ ಸಹಜ, ಸರಳ ನುಡಿ ಮತ್ತು ನಡೆ.

ನಮಗೀಗ ಅಂಥ ಜನ ಬೇಕಿದ್ದಾರೆ. ರೋಗಿ, ವೃದ್ಧ, ಹೆಣ ಕಂಡು ಚಿಂತೆಗೆ ಬಿದ್ದು, ಇದಕ್ಕೆಲ್ಲ ಪರಿಹಾರ ಕಂಡು ಹಿಡಿಯಬೇಕು ಎಂದು ನಿರ್ಧರಿಸಿ ಮನೆ ಬಿಟ್ಟು ಹೋದ ಸಿದ್ಧಾರ್ಥ ‘ಬುದ್ಧ’ ಆಗಿ ಪರಿವರ್ತನೆಯಾದ ರೀತಿ, ಜೀವ ತೇಯ್ದು ತನ್ನ ಸುತ್ತಲ ಜಗತ್ತಿಗೆ ಸುಖ ನೀಡಲು ಯತ್ನಿಸಿದ ಬುದ್ಧ ನಮಗೆ ಈಗ ಜರೂರಾಗಿ ಬೇಕಾಗಿದ್ದಾನೆ.

ನಮಗೀಗ ಗಾಂಧಿ ಬೇಕಿದೆ. ಬೂಟುಗಾಲಲ್ಲಿ ಒದ್ದವನಿಗೆ ಕೈಯಾರೆ ಚಪ್ಪಲಿ ತಯಾರಿಸಿ ಉಡುಗೊರೆಯಾಗಿ ನೀಡಿದ ಮಹಾತ್ಮ ನಮಗೆ ಬೇಕಿದೆ. ಉಟ್ಟ ಸೀರೆ ಅರ್ಧ ತೋಯಿಸಿ, ಒಗೆದುಕೊಳ್ಳುತ್ತಿದ್ದ ಮಹಿಳೆ ಬಗ್ಗೆ ಕನಿಕರ ಮೂಡಿ ಮುಂಡಾಸು ತೆಗೆದು ಕೊಟ್ಟು ಅರೆ ನಗ್ನನಾಗಿ ತಿರುಗಾಡಿದ ಗಾಂಧಿ ಬೇಕಿದೆ. ಸೇಡು, ಅಹಮಿಕೆ ಇಲ್ಲದೇ ಎದುರಾಳಿಯನ್ನು ಅತ್ಯಂತ ಗೌರವದಿಂದ ಕಾಣುತ್ತ ಆತನನ್ನು ಮಾನವತ್ವದ ಹಾದಿಗೆ ಒಗ್ಗಿಸಿಕೊಳ್ಳುವ ಆದರ್ಶ ಪುರುಷ ನಮಗೀಗ ತುರ್ತು ಬೇಕಿದೆ. ಏಕೆಂದರೆ ನಾವೆಲ್ಲ ಕಂಗಾಲಾಗಿ ಕುಳಿತಿದ್ದೇವೆ. ಹೊಟ್ಟೆಗಿಲ್ಲದೇ ಹೆದ್ದಾರಿಗಳಲ್ಲಿ ಅಲೆಯುತ್ತ ಗಮ್ಯ ಹುಡುಕಿಕೊಂಡು ಹೊರಟಿದ್ದೇವೆ.

ಮುರಿದು ಬಿದ್ದ ಕನಸುಗಳ ನಡುವೆಯೂ ಪುಟ್ಟ ಮಗುವನ್ನು ಸೂಟ್‍ಕೇಸಿನ ಮೇಲೆ ಮಲಗಿಸಿಕೊಂಡು ಎಳೆದೊಯ್ಯುವ ಮಹಿಳೆ, ನೂರಾರು ಮೈಲಿ ನಡೆಯುತ್ತ ಸಾಗಿದ ಗರ್ಭಿಣಿ, ಎರಡು ಮಕ್ಕಳನ್ನು ಹೊತ್ತು ನಗುತ್ತಾ ಸಾಗಿದ ಹೆಂಗಸು, ಲಾರಿಯ ಮೇಲಕ್ಕೆ ತನ್ನ ಕಂದನನ್ನು ಎತ್ತಿ ಒಗೆಯುತ್ತಿರುವ ತಂದೆ, ಇವರೆಲ್ಲರಿಗೂ ಆಶೆಯ ಕಿರಣವಾಗಿ ಅವರು ಬರಬೇಕಿದೆ. ಏಕೆಂದರೆ ಅವರು ಮಾತ್ರವೇ ತಮ್ಮ ಒಂದು ಕ್ಷಣದ ನಿರ್ಧಾರದಿಂದ ಎಲ್ಲರ ಬದುಕು ಬದಲಿಸಬಲ್ಲರು.
-ಎ.ಬಿ.ಧಾರವಾಡಕರ

LEAVE A REPLY

Please enter your comment!
Please enter your name here