ಕೊರೋನಾ ತೆರೆದಿಟ್ಟ ಸತ್ಯ

ಪ್ರಾಕೃತಿಕ ದುರಂತಗಳು ಸಾಕಷ್ಟು ನಡೆದಿವೆ, ಅವೆಲ್ಲ ಪ್ರಾದೇಶಿಕ ಘಟನೆಗಳು. ಆದರೆ ಜಗತ್ತಿನಾದ್ಯಂತ ಹರಡಿ ತಲ್ಲಣ ಸೃಷ್ಟಿಸಿದ ಕೊರೋನಾ ವೈರಾಣು ತೆರೆದಿಟ್ಟ ಸತ್ಯ ಅಗಾಧ. ಮಿತಿಯಲ್ಲಿ ಬದುಕುವುದು ಸಾಧ್ಯ ಮತ್ತು ಮನುಷ್ಯ ಹಸ್ತಕ್ಷೇಪ ಇಲ್ಲದೇ ಇದ್ದಲ್ಲಿ ಪ್ರಕೃತಿ ಸ್ವಚ್ಛವಾಗಿ ಇರುತ್ತದೆ ಎನ್ನುವುದು ಎರಡು ಮುಖ್ಯ ಸತ್ಯ. ಇದಕ್ಕಿಂತ ಹೆಚ್ಚಾಗಿ ವಿಶ್ವ ಕುಟುಂಬ, ಜಗತ್ತೇ ಸಣ್ಣ ಹಳ್ಳಿ ಎಂದೆಲ್ಲ ಜಂಭ ಕೊಚ್ಚಿಕೊಂಡು ಯಾರ ಜೊತೆಯೂ ನೈಜ ಸಂಪರ್ಕ, ಸಂಬಂಧ ಇರಿಸಿಕೊಳ್ಳದ ಮನುಷ್ಯನಿಗೆ ಮನುಷ್ಯ-ಮನುಷ್ಯ ಸಂಬಂಧ ಎಂದರೇನು ಎಂದು ಪಾಠ ಹೇಳಿದೆ. ಈ ಪಿಡುಗು. ಮನೆ ಎಂದರೆ ಬೋರ್ ಎನ್ನುತ್ತ ಇದ್ದವರು, ಸಿಗರೇಟು, ಮದ್ಯ ಇಲ್ಲದೇ ಬದುಕೇ ರುಚಿಸುವದಿಲ್ಲ ಎನ್ನುತ್ತ ಇದ್ದವರು ಕೂಡ ಈ ವೈರಾಣು ದಾಳಿ ತಡೆಯ ಮೊದಲ ಯತ್ನದ ಆರಂಭಿಕ ದಿನಗಳಲ್ಲಿ ಕಾಫಿ, ಚಹಾಗೂ ಪರದಾಡಬೇಕಾಯಿತು. ಹಿಂದೆಂದೂ ಕಂಡರಿಯದ ಜೈಲು ವಾಸದ ರುಚಿ ಸಿಕ್ಕಿತು.

ಇದ್ದುದರಲ್ಲಿ ಸಾವರಿಸಿಕೊಂಡು ಬದುಕುವುದು ಎಂದಿನಿಂದಲೂ ಮನುಷ್ಯನಿಗೆ ಅವಗತ. ಆದರೆ ಎಲ್ಲ ಇದ್ದೂ ಇಲ್ಲದಂತಾದ ಅವಸ್ಥೆಯಲ್ಲಿ ಮನುಷ್ಯನ ಮಿತಿ ಏನೆಂಬುದು ಗೊತ್ತಾಗಲು ಈ ಪಿಡುಗು ದಾಳಿ ಮಾಡಬೇಕಾಯಿತು. ಉತ್ತರ ಕರ್ನಾಟಕದ ಜನಪ್ರಿಯ ಪೇಯ ಚಹಾ ತಯಾರಿಸಲು ಬೇಕಾದ ಚಹಾ ಪುಡಿಗೆ ಬಹು ಬೇಡಿಕೆ. ಹಿಂದೆ ಎಂದೋ ತರಿಸಿ, ಖರ್ಚಾಗದೇ ಇಟ್ಟಿದ್ದ ಚಹಾಪುಡಿಯ ಸಣ್ಣ ಸಣ್ಣ ಪುಡಿಕೆಗಳನ್ನು ವ್ಯಾಪಾರಿಗಳು ಇದೇ ಸುಸಂದರ್ಭ ಎಂದು ಮಾರುತ್ತಿದ್ದಾರೆ. ಅನ್ಯ ಮಾರ್ಗ ಇಲ್ಲದ ಜನ ಕೊಳ್ಳುತ್ತ ಇದ್ದಾರೆ. ಪುಡಿ ಹಳತು, ಒಳ್ಳೆಯ ಸ್ವಾದ ಇಲ್ಲ ಎಂದು ತಕರಾರು ತೆಗೆಯುವ ಹಾಗಿಲ್ಲ.

ಸಣ್ಣ ಜ್ವರ, ನೆಗಡಿ, ತಲೆ ನೋವು ಬಂದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆÉ ದೌಡಾಯಿಸುತ್ತಿದ್ದ ರೋಗಿಷ್ಟರಿಗೆ ಈ ಅವಧಿಯಲ್ಲಿ ಏನೂ ಆಗಲಿಲ್ಲ. ಖಾಸಗಿ ವೈದ್ಯರೇ ಇಲ್ಲದ ಈ ಅವಧಿಯಲ್ಲಿ ಯಾರಿಗೂ ಹೆಚ್ಚು ಕಡಿಮೆ ಏನೂ ಆಗಲೇ ಇಲ್ಲ ಎನ್ನುವುದು ಆಶ್ಚರ್ಯದ ಸಂಗತಿ ಎನಿಸಬೇಕಿಲ್ಲ. ಏಕೆಂದರೆ ತಲೆ ನೋವಿಗೂ ಸಹ ಹೆದರಿಸಿ ಹಲವು ಟೆಸ್ಟ ಬರೆದು ಹಣ ಸಂಪಾದಿಸುತ್ತಾ ಇದ್ದ ಜನ ಮನೆಯಲ್ಲಿ ಸೂರು ನೋಡುತ್ತ ಮಲಗಿರಬೇಕಾದ ಸ್ಥಿತಿ ಉದ್ಭವಿಸಿದೆ.

ಜಗತ್ತಿನ ನದಿಗಳೆಲ್ಲ ಸ್ವಚ್ಛವಾದವು. ದೇವಪ್ರಯಾಗದಲ್ಲಿ ಭಾಗೀರತಿ ಮತ್ತು ಅಲಕನಂದಾ ನದಿಗಳ ಸಂಗಮದ ದೃಶ್ಯ ಎಷ್ಟು ಮೋಹಕ. ಎರಡೂ ನದಿಗಳ ವಿಶೇಷ ಬಣ್ಣ, ತಿಳಿಯಾಗಿ ಹೊಳೆಯುವ ರೀತಿ ಕಣ್ಣು ತುಂಬಿಕೊಳ್ಳುತ್ತವೆ. ಇದು ಹೀಗಿದೆ ಎಂದು ತೋರಿಸಲು ನಮಗೆ ಈ ಪಿಡುಗು ಬಂದು ಭಯ ಬಿತ್ತಿ ಮನೆಯೊಳಗೆ ಎಲ್ಲರನ್ನೂ ನೂಕಿ ಇರಿಸಬೇಕಾಯಿತು. ಕಾಡು ಪ್ರಾಣಿಗಳು ತಾವು ಕಳೆದುಕೊಂಡಿದ್ದ ಸಾಮ್ರಾಜ್ಯ ಮರಳಿ ಪಡೆದು ನಿರ್ಭೀತಿಯಿಂದ ಸಂಚರಿಸುವ ಸದವಕಾಶ ದೊರೆಯಿತು.

ಮನೆಯಿಂದ ಹೊರಬೀಳಲು ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಮಾಸ್ಕ್‍ನ ಮೇಲು ಭಾಗದ ಬಿಗಿತ ತಾಳಲಾರದೇ ಆಗಾಗ್ಗೆ ಕೆಳಕ್ಕೆ ಸರಿಸಿಕೊಂಡು ಉಸಿರಾಡಬೇಕಾಯಿತು. ಯಾವ ಹಂಗೂ ಇಲ್ಲದೇ ಕಾಡು ಪ್ರಾಣಿಗಳು ನಾಡಲ್ಲಿ ಸಂಚರಿಸುವಾಗ ಮನುಷ್ಯ ಎಂಬ ನರಜಂತು ಮನೆಗಳಲ್ಲಿಯೇ ಜೈಲು ವಾಸದ ಸವಿ ಕಾಣಬೇಕಾಯಿತು. ಮೃಗಾಲಯದ ಪ್ರಾಣಿಗಳಿಗಾದರೂ ಒಂದಿಷ್ಟು ಆರಾಮಾಗಿ ಅಡ್ಡಾಡಲು ಜಾಗ ಇರುತ್ತದೆ, ನಗರದ ಇಲಿ ಬೋನುಗಳಂಥÀ ಮನೆಗಳಲ್ಲಿ ತುರುಕಿಕೊಂಡ ಮನುಷ್ಯ ಕಂಗೆಡುವಂತಾಯಿತು.

ಅಂಗಾರಕನವರೆಗೆ ಯಾತ್ರೆ ನಡೆಸಲು ಎಲ್ಲ ಸಜ್ಜುಗೊಂಡಿರುವ ಮನುಷ್ಯನು ಬೈಕು, ಕಾರು, ವಿಮಾನ, ರೈಲು ಎಲ್ಲ ಇದ್ದರೂ ಬರಿಗಾಲಲ್ಲಿ ನಡೆದು ತನ್ನ ಮನೆ ತಲುಪುವ ಸ್ಥಿತಿ ಬಂತು. ಹೆಂಗಸು ಗಟ್ಟಿ ಎಂದು ಮತ್ತೆ ಸಾಬೀತು ಆಯಿತು. ರಸ್ತೆ ಬದಿಯಲ್ಲಿ ಮಗುವನ್ನು ಹೆತ್ತು, ನವಜಾತ ಮಗು ಕಟ್ಟಿಕೊಂಡು 150 ಕಿಲೋ ಮೀಟರ್ ನಡೆದ ಮಹಿಳೆ ‘ಸ್ಟ್ರಾಂಗ್’ ಅಲ್ಲವೇ?. ಇಂಥ ಮಹಿಳೆಗೂ ಸ್ಪಂದಿಸದ, ಅಧಿಕಾರದ ಹಮ್ಮಿನಲ್ಲಿ ಬೀಗುತ್ತಿರುವ ಮಹಿಳೆ ಕೂಡ ಇದೇ ಮನುಕುಲದ ದುರಂತ ಮುಖ ಎನ್ನುವುದು ಸ್ಪಷ್ಟ ಆಯಿತು.

ಸತ್ತವರ ದೇಹದ ಅಂತ್ಯಕ್ರಿಯೆ ನಡೆಸಲು ಕೂಡ ಜನ ಬರದಂತಾದ ಸ್ಥಿತಿ ನೋಡಿದಾಗ ಯಾರಿಗಾರೂ ಇಲ್ಲವಯ್ಯ ಎಂದು ಅನಿಸದೇ ಇರುತ್ತದೆಯೇ?. ಅಗತ್ಯ ಪರಿಕರಗಳು ಇಲ್ಲದೇ ರೋಗಿಗಳ ಆರೈಕೆ ಮಾಡಿ ತಾವೇ ರೋಗಕ್ಕೆ ಬಲಿಯಾದ ಅದೆಷ್ಟೋ ವೈದ್ಯರು, ದಾದಿಯರಿಗಾಗಿ ಕಂಬನಿ ಮಿಡಿಯೋಣವೇ ಅಥವಾ ದೇಶದ ಈ ಸ್ಥಿತಿ ಕುರಿತಂತೆ ಮರುಕ ತೋರಬೇಕೇ ಎಂದು ತಿಳಿಯಲಾರದ ಜನ, ಸತ್ಯದ ಇನ್ನೊಂದು ಮುಖ ಅರ್ಥ ಮಾಡಿಕೊಳ್ಳಲು ಇನ್ನೂ ಕಾಲ ಮಾಗಬೇಕಿದೆ.

ಚುನಾವಣೆಗೆ ಮುನ್ನ ಹಣ, ಹೆಂಡ, ಉಡುಗೊರೆಗಳ ಹೊರೆಯನ್ನೇ ಹಿಡಿದು ಮನೆ ಮನೆಗಳಿಗೆ ಎಡತಾಕುತ್ತಿದ್ದ ಮಹಾನುಭಾವರೆಲ್ಲ ಅದೆಲ್ಲಿಯೋ ಕಾಣದಂತೆ ಮಾಯವಾದರು. ಇವರ ಆಟ ಬಯಲು ಮಾಡಿದ್ದು ಕೂಡ ಇದೇ ಪಿಡುಗು. ಕಾಲುಗಳಿಗೆ ಬೊಬ್ಬೆ ಬಂದು ಇನ್ನು ನಡೆಯಲಾಗದೇ ರಸ್ತೆ ಮಗ್ಗುಲಲ್ಲಿ ಕುಳಿತವ, ಕಾಲು ಸುರಕ್ಷಿತ ಇರಲಿ ಎಂದು ಕುಡಿಯುವ ನೀರಿನ ಬಾಟಲಿಯನ್ನು ಅಪ್ಪಚ್ಚಿ ಮಾಡಿ ಬಟ್ಟೆಯಿಂದ ಕಾಲಿಗೆ ಕಟ್ಟಿಕೊಂಡು ನಡೆಯುವ ಅಮಾಯಕ, ದೇಶ ತನ್ನ ಮೂಗಿನ ನೇರಕ್ಕೇ ನಡೆಯುತ್ತದೆ ಎಂದು ಬೀಗುವ ಯಜಮಾನ ಎಲ್ಲ ಇದೇ ನೆಲದಲ್ಲಿ ಇದ್ದಾರೆ ಎಂದು ಸ್ಪಷ್ಟವಾಗಿ ತೋರಿಸಿದ ಕೊರೋನಾಕ್ಕೆ ಧನ್ಯವಾದ ಹೇಳಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ತಾನು ಅಜೇಯ ಅಂದುಕೊಂಡಿದ್ದ ಮನುಷ್ಯನಿಗೆ ಕಣ್ಣಿಗೂ ಕಾಣದ ಒಂದು ವೈರಾಣು ಜೀವಭಯ ಬಿತ್ತಿದೆ ಎಂದರೆ ಅದಕ್ಕಿಂತ ಸೋಜಿಗ ಇನ್ನೇನಿದೆ?

LEAVE A REPLY

Please enter your comment!
Please enter your name here