ಮತದಾರರ ಪಟ್ಟಿ ದೋಷವಿದ್ದರೆ ಮಾಹಿತಿ ನೀಡಲು ಅತೀಕ ಮನವಿ

A B Dharwadkar

ಬೆಳಗಾವಿ, ಡಿ.3 : ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಸಿದ್ದಿಪಡಿಸಲಾಗಿದ್ದು, ಅದರಲ್ಲಿ ಏನಾದರೂ ಲೋಪದೋಷಗಳು ಕಂಡುಬಂದರೆ ದೂರು ಅಥವಾ ಮಾಹಿತಿಯನ್ನು ನೀಡುವ ಮೂಲಕ ಮತದಾರರ ಪಟ್ಟಿಯ ಸಮರ್ಪಕ ಪರಿಷ್ಕರಣೆಗೆ ಸಹಕರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕರಾಗಿರುವ ಎಲ್.ಕೆ.ಅತೀಕ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು.

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ(ಡಿ.3) ನಡೆದ ಮಾನ್ಯತೆ ಪಡೆದ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಮಾಡಲಾಗುತ್ತಿದೆ. ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಡಿಸೆಂಬರ್ 8ರಂದು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಜನವರಿ 1, 2023 ರಂದು ಪ್ರಸಿದ್ಧಿಪಡಿಸಲಾಗುವುದು ಎಂದು ಅತೀಕ ತಿಳಿಸಿದರು.

ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿಯೂ ಮತದಾರರ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಸೂಚನೆ ನೀಡಿದರು.

ಇದಲ್ಲದೇ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು ತಮ್ಮ ಕಾಲೇಜುಗಳಲ್ಲಿ ಮತದಾರರ ಪಟ್ಟಿಯಲ್ಲಿ ಅರ್ಹ ಯುವಕರು-ಯುವತಿಯರ ಹೆಸರು ಸೇರ್ಪಡೆಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೂ ಮತದಾರರ ಪಟ್ಟಿ ವೀಕ್ಷಕರಾದ ಎಲ್.ಕೆ.ಅತೀಕ್ ಅವರು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ 37.88 ಲಕ್ಷ ಮತದಾರರು:

ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಲ್ಲಿ ಒಟ್ಟು 4434 ಮತಗಟ್ಟೆಗಳಿವೆ. ನಗರ ಪ್ರದೇಶದಲ್ಲಿ 3255 ಹಾಗೂ ಗ್ರಾಮೀಣ ಪ್ರದೇಶದಲ್ಲಿ 1179 ಮತಗಟ್ಟೆಗಳಿವೆ. ಮತದಾರರ ಕರಡು ಪಟ್ಟಿಯನ್ನು ನವೆಂಬರ್ 9 ರಂದು ಪ್ರಸಿದ್ಧಿಪಡಿಸಲಾಗಿದೆ. ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಹಕ್ಕು ಮತ್ತು ಆಕ್ಷೇಪಣೆಗಳನ್ನು ನ.9ರಿಂದ ಡಿಸೆಂಬರ 8 ರವರೆಗೆ ಸ್ವೀಕರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

ಕರಡು ಮತದಾರರ ಪಟ್ಟಿಯಲ್ಲಿ 19,16,797 ಪುರುಷರು ಹಾಗೂ 18,71,348 ಮಹಿಳೆಯರು ಮತ್ತು 121 ಇತರರು ಸೇರಿದಂತೆ ಒಟ್ಟಾರೆ 37,88,266 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಬೂತ್ ಮಟ್ಟದ ಏಜೆಂಟರು ನೇಮಿಸಲು ಮನವಿ:

18 ವರ್ಷ ತುಂಬಿದವರನ್ನು ಜನವರಿ 1, ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ಹೀಗೆ ವಿವಿಧ ಅರ್ಹತಾ ದಿನಾಂಕಗಳಂದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿರುತ್ತದೆ.

ರಾಜಕೀಯ ಪಕ್ಷಗಳು ಕೂಡ ಬೂತ್ ಮಟ್ಟದ ಏಜೆಂಟರನ್ನು ನೇಮಿಸುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಪಾಟೀಲ ಮನವಿ ಮಾಡಿಕೊಂಡರು.
ಬೂತ್ ಮಟ್ಟದ ಏಜೆಂಟರರನ್ನು ನೇಮಿಸಿ ವಿವರಗಳನ್ನು ಸಂಬಂಧಿಸಿದ ಮತದಾರರ ನೋಂದಣಾಧಿಕಾರಿಗಳಿಗೆ ನೀಡಬೇಕು ಎಂದರು.

ಮತಪಟ್ಟಿ ಪರಿಷ್ಕರಣೆ; ಅಭಿಯಾನ ನಡೆಸಲು ಸಲಹೆ:

ಬೂತ್ ಮಟ್ಟದ ಏಜೆಂಟರುಗಳ ನೇಮಕಕ್ಕೆ ಎಲ್ಲ ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರುಗಳಿಗೆ ಅಗತ್ಯ ಮಾಹಿತಿಯನ್ನು ನೀಡುವಂತೆ ಶಾಸಕ ಪಿ.ರಾಜೀವ ತಿಳಿಸಿದರು.

ಒಬ್ಬ ವ್ಯಕ್ತಿ ಒಂದೇ ಮತಕ್ಷೇತ್ರದ ಬೇರೆ ಬೇರೆ ಪಾರ್ಟ್ ಗಳ ಮತಪಟ್ಟಿಯಲ್ಲಿ ಹೆಸರು ಹೊಂದಿರುವ ಮತದಾರರ ಹೆಸರನ್ನು ಒಂದು ಕಡೆ ತೆಗೆದುಹಾಕಲು ಯಾವ ರೀತಿ ಕ್ರಮಕೈಗೊಳ್ಳಲಾಗಿದೆ ಎಂದು ಪಿ.ರಾಜೀವ ಕೇಳಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಒಂದೇ ಮತಕ್ಷೇತ್ರದ ಎರಡು ಪಾರ್ಟ್ ಗಳಲ್ಲಿ ಹೆಸರು ಹೊಂದಿರುವ ವ್ಯಕ್ತಿಗಳ ಹೆಸರು ತೆಗೆದುಹಾಕುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಕುಡಚಿ ಮತಕ್ಷೇತ್ರದಲ್ಲಿ ಕೆಲವು ಪಾರ್ಟ್ ಗಳಲ್ಲಿ ಒಬ್ಬನೇ ವ್ಯಕ್ತಿಯ ಭಾವಚಿತ್ರ ಬೇರೆ ಪಾರ್ಟ್ ಗಳ ಮತಪಟ್ಟಿಯಲ್ಲಿಯೂ ಇರುತ್ತದೆ. ಇಂತವುಗಳನ್ನು ಗುರುತಿಸಿ ಒಂದೇ ಕಡೆಯ ಮತಪಟ್ಟಿಯಲ್ಲಿ ಹೆಸರು ಉಳಿಸಲು ವಿಶೇಷ ಅಭಿಯಾನ ನಡೆಸಬೇಕು ಎಂದು ಶಾಸಕ ರಾಜೀವ ಮನವಿ ಮಾಡಿಕೊಂಡರು.
ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು.

ಮತದಾರರ ಪಟ್ಟಿ ಸಮರ್ಪಕ ಪರಿಷ್ಕರಣೆಗೆ ಸೂಚನೆ:

ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಬಳಿಕ ಮತದಾರರ ಪಟ್ಟಿಯ ಪರಿಷ್ಕರಣೆ ನಿಟ್ಟಿನಲ್ಲಿ ಎಲ್ಲ ಬೂತ್ ಮಟ್ಟದ ಅಧಿಕಾರಿಗಳು(ಬಿ.ಎಲ್.ಓ.) ಮನೆ ಮನೆ ಸಮೀಕ್ಷೆಯನ್ನು ಕೈಗೊಂಡು ಸಮರ್ಪಕವಾಗಿ ಕೆಲಸ ಮಾಡಬೇಕು. ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷವಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಮತದಾರರ ಪಟ್ಟಿ ವೀಕ್ಷಕರಾದ ಎಲ್.ಕೆ.ಅತೀಕ ಸೂಚನೆ ನೀಡಿದರು.

ನಗರದಲ್ಲಿ ಮನೆ ಮನೆ ಸಮೀಕ್ಷೆ ನಡೆಸಲು ಹಿರಿಯ ಅಧಿಕಾರಿಗಳು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದರು.
ವಿಕಲಚೇತನ ಮತದಾರರ ಹೆಸರು ಸೇರ್ಪಡೆಗೆ ಆದ್ಯತೆ ನೀಡಬೇಕು ಎಂದರು.

ಯುವ ಮತದಾರರ ಸೇರ್ಪಡೆಗೆ ಸೂಚನೆ:

18 ರಿಂದ 19 ವರ್ಷದೊಳಗಿನವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕೆಲಸ ಮಾಡಬೇಕಿದೆ. ಇದನ್ನು ಚುರುಕುಗೊಳಿಸಲು ವಿಶೇಷ ಅಭಿಯಾನ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಯುವ ಮತದಾರರ ಸೇರ್ಪಡೆಗೆ ಎಲ್ಲ ಹಂತದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಚುನಾವಣಾ ಆಯೋಗ ಸಿದ್ಧಪಡಿಸಿರುವ ವೋಟರ್ ಹೆಲ್ಪ ಲೈನ್ ಆ್ಯಪ್ ಮೂಲಕ ಹೆಸರು ನೋಂದಾಯಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.
ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Share this Article
Leave a comment

ABOUT US

Samadarshi News is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.

 

Recently Updated | Latest Version 21.2.2 |

© Samadarshi News. All Rights Reserved.

Website Designed By | KhushiHost | Need A Similar Website? Contact Us Today: +91 9060329333, | [email protected] | www.khushihost.com | Proudly Hosted By KhushiHost | Speed And Performance | 10 Cores CPU | 60 GB RAM | Powerful Cloud VPS Server | Recently Updated | Latest Version 21.2.2 |

Disclaimer: KhushiHost Is Not Responsible For Any News Or Content. We Are Only Developers For This Client Any Type Of Content Posted Here Belongs To Site’s Respective Owner Not To KhushiHost