ಸರ್ವನಾಶದತ್ತ……

A B Dharwadkar

ಅಭಿವೃದ್ಧಿ ಹೆಸರಲ್ಲಿ ಏನೆಲ್ಲ ಪರಿಸರ ನಾಶ ನಡೆಯುತ್ತಿದೆ ಎನ್ನುವುದಕ್ಕೆ ಜೋಶಿಮಠದ ದುರಂತವೇ ಸಾಕ್ಷಿ. ನಮಗೆ ಗೊತ್ತಿಲ್ಲದೇ ಸದ್ದಿಲ್ಲದಂತೆ ನಡೆಯುತ್ತಿರುವ, ಇತ್ತೀಚೆಗೆ ಬೆಳಕಿಗೆ ಬಂದ ಇನ್ನೆರಡು ಪ್ರಸಂಗಗಳನ್ನು ಗಮನಿಸಿದರೆ, ಸರ್ಕಾರ ಎನ್ನುವುದು ದೇಶದ ಪರಿಸರ ನಾಶಕ್ಕೆ ಕಂಕಣಕಟ್ಟಿ ನಿಂತಿದೆಯೇನೋ ಎಂದು ಅನಿಸದೇ ಇರದು. ಈ ವರೆಗೆ ಊರು, ಸ್ಥಳಗಳ ಹೆಸರು ಬದಲಿಸಿಕೊಂಡು ಮಜಾ ತೆಗೆದುಕೊಳ್ಳುತ್ತಿದ್ದ ಸರ್ಕಾರ, ಈಗ ಊರು ಊರುಗಳ ಸ್ವರೂಪವನ್ನೇ ಅಭಿವೃದ್ಧಿ ಹೆಸರಲ್ಲಿ ಬದಲಿಸುವ ದುಸ್ಸಾಹಸಕ್ಕೆ ಹೊರಟಿದೆ. ಈ ಬಗ್ಗೆ ಈಗಲೇ ಜನ ಎಚ್ಚೆತ್ತು ನಡೆದುಕೊಂಡರೆ ಮಾತ್ರ ದೇಶ ಮತ್ತು ಮುಂದಿನ ಪೀಳಿಗೆಗೆ ಉಳಿಗಾಲ.

ಅಂಥ ಒಂದು ಪ್ರದೇಶ ಲಡಾಕ್. ಹಿಮಾಲಯದ ತಪ್ಪಲಿನ ಈ ಪ್ರದೇಶ ಅತ್ಯಂತ ಸೂಕ್ಷ್ಮ್ಮ ಪರಿಸರ ವಲಯದಲ್ಲಿ ಇದೆ. ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಹೆಸರಿನ ಕಾಮಗಾರಿಗಳಿಂದ ಇಂದಲ್ಲ ನಾಳೆ ಭಾರಿ ವಿನಾಶ ಖಂಡಿತ ಎಂದು ಅದಕ್ಕೆ ವಿರೋಧ ಸೂಚಿಸಿದ್ದು ಸ್ಥಳೀಯ, ಬಹು ಮಹತ್ವದ ವ್ಯಕ್ತಿ ಸೋನಮ್ ವಾಂಗ್‍ಚುಕ್. ಆತ ಬಹಳ ತಿಳಿವಳಿಕೆಯುಳ್ಳ, ನಾನಾ ಆವಿಷ್ಕಾರಗಳನ್ನು ಮಾಡಿ, ಅದು ಜನರಿಗೆ ಸುಲಭವಾಗಿ ದಕ್ಕುವಂತೆ ಮಾಡಿರುವ ವ್ಯಕ್ತಿ. ಈತನ ಆವಿಷ್ಕಾರಗಳು ಅಲ್ಲಿನ ಜನರ ಬದುಕು ಹಸನು ಮಾಡುತ್ತಾ ಬಂದಿವೆ. ವಿದ್ಯುತ್, ನೀರು ಅಷ್ಟೇ ಏಕೆ ಬಿಸಿಲಿಗೂ ಕೊರತೆ ಇರುವ ಆ ನಾಡಿನಲ್ಲಿ, ಇವೆಲ್ಲ ಕೊರತೆಗಳನ್ನು ನೀಗಿಸುವಂತೆ ಆವಿಷ್ಕಾರ ಮಾಡುತ್ತಾ ಬಂದವನು ಈತ. ಇವನ ಬದುಕಿನಿಂದ ಪ್ರೇರಣೆ ಪಡೆದ ಕತೆ ಆಧರಿಸಿ ತಯಾರಾದ ‘ತ್ರೀ ಈಡಿಯಟ್ಸ’ ಹಿಂದಿ ಸಿನಿಮಾ ಕೆಲವರಿಗಾದರೂ ನೆನಪಿರಬಹುದು. ಅಲ್ಲಿ ಬರುವ ನಾಯಕ ಫುಂಗಸುಕ ವಾಂಗಡು ಪಾತ್ರ ರೂಪಗೊಂಡಿದ್ದು ಇದೇ ವ್ಯಕ್ತಿಯಿಂದ.

ಇತ್ತೀಚೆಗೆ ಲಡಾಕ್‍ನಲ್ಲಿ ನಾನಾ ರೀತಿಯ ಬದಲಾವಣೆಗಳು ಆಗುತ್ತಿವೆ. ಈಗ ಅಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಪರಿಸರಕ್ಕೆ ಬಹು ದೊಡ್ಡ ಪೆಟ್ಟು ಆಗಲಿದೆ ಎಂದು ವಾದ ಮಂಡಿಸಿದ ಮತ್ತು ಹೋರಾಟಕ್ಕೆ ಇಳಿದ ವಾಂಗ್‍ಚುಕ್‍ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಲಾಗಿದೆ. ಆತನಿಗೆ ಸಂಪರ್ಕ ಸಾಧನಗಳು ದೊರೆಯದಂತೆ ಮಾಡಲಾಗಿದೆ. ಇದೆಲ್ಲವನ್ನೂ ವಿರೋಧಿಸಿ ಆತ ಇತ್ತೀಚೆಗೆ ಐದು ದಿನಗಳ ಉಪವಾಸ ಮುಷ್ಕರ ನಡೆಸಿದ. ಕೊನೆಯ ದಿನ, ತನ್ನ ವಿಚಾರಗಳಿಗೆ ಸ್ಪಂದಿಸುವ ಸಮಾನ ಮನಸ್ಕರು ಅವರವರ ಊರುಗಳಲ್ಲಿ ಒಂದು ದಿನದ ಉಪವಾಸ ಮುಷ್ಕರ ನಡೆಸುವಂತೆ ಕರೆ ನೀಡಿದ್ದ. ಆದರೆ ಅದಕ್ಕೆ ವ್ಯಾಪಕ ಪ್ರಚಾರ ದೊರೆಯದಂತೆ ಮಾಡಲಾಯಿತು. ಆದರೂ ಕೆಲವು ಕಡೆಗಳಲ್ಲಿ ವಾಂಗ್‍ಚುಕ್ ವಿಚಾರಗಳಿಗೆ ಸಹಾನುಭೂತಿ ಹೊಂದಿದ ಜನ ಒಂದು ದಿನದ ಉಪವಾಸ ಮುಷ್ಕರ ನಡೆಸಿದ್ದಾರೆ. ಅಭಿವೃದ್ಧಿ ಹೆಸರಲ್ಲಿ ನಡೆಯುವ ದೌರ್ಜನ್ಯ ಒಂದೆಡೆಯಾದರೆ ಅದನ್ನು ವಿರೋಧಿಸುವವರ ಬಾಯಿ ಬಲವಂತವಾಗಿ ಮುಚ್ಚಿಸುವ ಕೆಲಸ ಇನ್ನೊಂದು ಕಡೆ ನಡೆದಿದೆ.

ಇತ್ತೀಚೆಗೆ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ಹೆಸರು ಬದಲಿಸುವ ವಿಚಾರ ಮುಂದಿಡಲಾಗಿದೆ. ಎಲ್ಲವನ್ನೂ ಅಮೃತಮಯ ಮಾಡುವ ಭ್ರಮೆ ತುಂಬುತ್ತಿರುವ ಸರ್ಕಾರ ಆ ದ್ವೀಪ ಸಮೂಹಕ್ಕೆ ಅಮೃತ ದ್ವೀಪ ಎಂದು ಹೆಸರಿಡಲು ಮುಂದಾಗಿದೆ. ಆದರೆ ಜನರಿಗೆ ತಿಳಿಯದ ಇನ್ನೊಂದು ಸಂಗತಿ ಎಂದರೆ, ಅಲ್ಲಿ ಸದ್ದಿಲ್ಲದೇ ನಡೆಯುತ್ತಿರುವ ಪರಿಸರ ನಾಶ ಮತ್ತು ಅಲ್ಲಿನ ಮೂಲ ನಿವಾಸಿಗಳ ಬದುಕುವ ಹಕ್ಕಿಗೇ ಧಕ್ಕೆ ತರುವ ಯೋಜನೆಗಳನ್ನು ಕೈಗೊಂಡಿರುವುದು!. ಹಲವಾರು ದ್ವೀಪಗಳಿಂದ ಕೂಡಿದ ಸಮೂಹ ಅಂಡಮಾನ್ ಮತ್ತು ನಿಕೋಬಾರ್. ಅವುಗಳಲ್ಲಿ ಕೆಲವೇ ಕೆಲವು ದ್ವೀಪಗಳಲ್ಲಿ ಜನ ವಾಸಿಸುತ್ತಾರೆ. ಹಾಗೆ ವಾಸಿಸುವ ಬಹುಪಾಲು ಜನರು ಅಲ್ಲಿನ ಮೂಲ ನಿವಾಸಿಗಳು. ಪ್ರಾಚೀನ ಮಾನವ ಸಮುದಾಯಕ್ಕೆ ಸೇರಿದ ಅವರು ತಮ್ಮದೇ ರೀತಿಯಲ್ಲಿ ಬದುಕುತ್ತಿದ್ದಾರೆ. ಕೆಲವರಿಗಂತೂ ಇತ್ತೀಚಿನ ನಾಗರಿಕ ಜೀವನದ ಗಂಧ ಗಾಳಿಯೂ ಸೋಂಕಿಲ್ಲ. ಅಂಥ ಒಂದು ದ್ವೀಪ ಗ್ರೇಟರ್ ನಿಕೋಬಾರ್. ಅದರ ದಕ್ಷಿಣದ ತುದಿಯನ್ನು ಇಂದಿರಾ ಪಾಯಿಂಟ್ ಎಂದು ಕರೆಯಲಾಗುತ್ತದೆ. ಅದೇ ವಾಸ್ತವದಲ್ಲಿ ಭಾರತದ ದಕ್ಷಿಣದ ತುತ್ತತುದಿ.

ಈ ದ್ವೀಪದಲ್ಲಿ ಕೆಲವೇ ಸಾವಿರ ಜನ ವಾಸಿಸುತ್ತಾರೆ. ಅದರ ವಿಸ್ತಾರ ಸುಮಾರು 900 ಚದರ ಕಿಲೋ ಮೀಟರ್. ಅದರಲ್ಲೂ ಜಗತ್ತಿನ ಅತ್ಯಂತ ಪ್ರಾಚೀನ ಮಾನವ ಸಮುದಾಯಕ್ಕೆ ಸೇರಿದ ಸುಮಾರು 150 ಜನ ಈಗಲೂ ಅಲ್ಲಿ ಉಳಿದಿದ್ದಾರೆ. ಅವರ ಬದುಕು ಹೇಗೆ, ರೀತಿ ನೀತಿ ಏನು ಎಂದು ಈಗಲೂ ಯಾರಿಗೂ ತಿಳಿದಿಲ್ಲ, ಇದಲ್ಲದೇ ಸುಮಾರು ಆರು ನೂರು ಜನ ಇತರ ಸಮುದಾಯದ ಅದಿವಾಸಿಗಳು ಇದ್ದಾರೆ. ಇವರು ಸ್ವಲ್ಪ ಸುಧಾರಣೆ ಕಂಡವರು. ಬಟ್ಟೆ ಧರಿಸುತ್ತಾರೆ, ನಾಗರಿಕ ಸವಲತ್ತುಗಳ ಅರಿವು ಅವರಿಗಿದೆ ಮತ್ತು ಅಲ್ಲಿನ ಉಳಿದ ನಿವಾಸಿಗಳ ಸಂಪರ್ಕದಲ್ಲಿಯೂ ಅವರು ಇರುತ್ತಾರೆ.

ಈಗ ಆ ದ್ವೀಪದ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಸನ್ನಾಹ ನಡೆದಿದೆ. ಇಲ್ಲಿನ ಕೆಲವೇ ಸಾವಿರ ಮಂದಿ ಬದಲು ಇನ್ನು ಕೆಲವೇ ವರ್ಷಗಳಲ್ಲಿ ಸುಮಾರು ಒಂಭತ್ತು ಲಕ್ಷ ಮಂದಿಯನ್ನು ಬೇರೆ ಕಡೆಗಳಿಂದ ಇಲ್ಲಿಗೆ ತಂದು ನೆಲೆಗೊಳಿಸಲಾಗುತ್ತದೆಯಂತೆ. ಇದಕ್ಕೆ ಕಾರಣ ಇಲ್ಲಿಗೆ ಬರುತ್ತಿರುವ ಯೋಜನೆಗಳು. ಇಲ್ಲೊಂದು ಅಂತರ್ರಾಷ್ಟ್ರೀಯ ಹಡಗುಕಟ್ಟೆ ಟರ್ಮಿನಲ್ ನಿರ್ಮಿಸುವ ಯೋಜನೆ ಇದೆ. ಅದರ ಜೊತೆಗೇ ಇಲ್ಲೊಂದು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ನಿರ್ಮಾಣ ಆಗಲಿದೆ. ಅದಕ್ಕಾಗಿ ಇಲ್ಲಿ ಇರುವ ಅಪರೂಪದ ಕಾಡಿನ ಏಳೂವರೆ ಲಕ್ಷ ಮರಗಳನ್ನು ಕಡಿಯುವ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕೆ ಕೇಂದ್ರ ಪರಿಸರ ಇಲಾಖೆಯ ಅನುಮೋದನೆ ಕೂಡ ದೊರೆತಿದೆ. ಒಂದೆಡೆ ಮರಗಳನ್ನು ಕತ್ತರಿಸಿದರೆ ಅವುಗಳ ಹಲವು ಪಟ್ಟು ಮರಗಳ ಸಸಿಗಳನ್ನು ಇನ್ನೊಂದು ಕಡೆ ನೆಡಬೇಕು ಎಂಬ ನಿಯಮ ಇದೆ. ನಿಕೋಬಾರ್ ದ್ವೀಪದಲ್ಲಿ ಕತ್ತರಿಸುವ ಲಕ್ಷ ಲಕ್ಷ ಮರಗಳ ಬದಲಿಗೆ ಈ ಭೂಪರು ಸಸಿಗಳನ್ನು ನೆಡುವುದು ಹರಿಯಾನಾ ರಾಜ್ಯದ ಅರಾವಳಿ ಬೆಟ್ಟ ಸಾಲಿನಲ್ಲಂತೆ. ಅದಕ್ಕೆ ವಿರೋಧ ಬಂದಾಗ, ಮಧ್ಯಪ್ರದೇಶದಲ್ಲಿ ಮರ ನೆಡುವ ಯೋಜನೆ ರೂಪಿಸಲಾಗಿದೆ.

ಇದು ಸದ್ದಿಲ್ಲದೇ ನಡೆಯುತ್ತಿರುವ ಪಾರಂಪರಿಕ ಪರಿಸರದ ಹಾನಿಯ ದೈತ್ಯ ನರ್ತನ ಎಂದರೆ ತಪ್ಪಲ್ಲ. ಇದು ನಡೆಯುತ್ತಿದೆ ಎಂದು ಕೂಡ ಬಹಳ ಜನರಿಗೆ ತಿಳಿಯದು. ಸ್ಥಳೀಯರಂತೂ ಇದನ್ನು ವಿರೋಧಿಸುವ ಗೋಜಿಗೂ ಹೋಗದ ಮುಗ್ಧರು. ದೇಶದ ಪರಿಸರ ನಾಶಕ್ಕೆ ಹಿಮಾಲಯದಲ್ಲಿ ಮಾತ್ರವಲ್ಲ, ಸಾಗರದ ದ್ವೀಪಗಳತ್ತಲೂ ಕೈಚಾಚಲಾಗಿದೆ. ಪರಿಸರ ನಾಶದಿಂದ ಇತ್ತೀಚಿನ ದಶಕದಲ್ಲಿ ಆಗುತ್ತಿರುವ ವಿನಾಶಗಳ ಮುನ್ಸೂಚನೆ ಗಮನಿಸಿಯೂ ಸಹ ನಾವು ಎಚ್ಚೆತ್ತುಕೊಳ್ಳದಿದ್ದರೆ ಸರ್ವನಾಶ ಖಂಡಿತ.

-ಎ.ಬಿ.ಧಾರವಾಡಕರ

Share this Article
Leave a comment

ABOUT US

Samadarshi News is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.

 

Recently Updated | Latest Version 21.2.2 |

© Samadarshi News. All Rights Reserved.

Website Designed By | KhushiHost | Need A Similar Website? Contact Us Today: +91 9060329333, | [email protected] | www.khushihost.com | Proudly Hosted By KhushiHost | Speed And Performance | 10 Cores CPU | 60 GB RAM | Powerful Cloud VPS Server | Recently Updated | Latest Version 21.2.2 |

Disclaimer: KhushiHost Is Not Responsible For Any News Or Content. We Are Only Developers For This Client Any Type Of Content Posted Here Belongs To Site’s Respective Owner Not To KhushiHost