ಹೊಸದಿಲ್ಲಿ, ಜ 16- ದೇಶಾದ್ಯಂತ ಮೊದಲ ದಿನ ವ್ಯಾಕ್ಸಿನೇಷನ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಶನಿವಾರ ಒಟ್ಟು 1,65,714 ಮಂದಿಗೆ ಕೊರೊನಾ ನಿರೋಧಕ ಲಸಿಕೆ ನೀಡಲಾಗಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆ ಮೊದಲ ದಿನ 3351 ಸೆಷನ್ ಗಳಲ್ಲಿ ಈ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ.
ಲಸಿಕೆ ಹಾಕಿಸಿಕೊಂಡ ಲಕ್ಷಕ್ಕೂ ಹೆಚ್ಚಿನ ಜನರಲ್ಲಿ ಯಾರೊಬ್ಬರಿಗೂ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಗೆ ಗುರಿಯಾಗಲಿಲ್ಲ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಸೀರಮ್ ಸಂಸ್ಥೆಯ ‘ಕೋವ್ಶೀಲ್ಡ್’ ಲಸಿಕೆಯನ್ನು ದೇಶದಾದ್ಯಂತ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗಿದ್ದು, ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವಾಕ್ಸಿನ್ ಅನ್ನು 12 ರಾಜ್ಯಗಳಿಗೆ ವಿತರಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.
ವಿಶ್ವದ ಅತಿದೊಡ್ಡ ಕೊರೊನಾ ಲಸಿಕೆ ನೀಡಿಕೆ ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಲಸಿಕೆಗಾಗಿ ಹೆಚ್ಚಿನ ಸಂಖ್ಯೆಯ ಜನರು ಕಾಯುತ್ತಿದ್ದಾರೆ. ಲಸಿಕೆ ಅಭಿವೃದ್ಧಿಗೆ ಶ್ರಮಿಸಿದ ವಿಜ್ಞಾನಿಗಳು ಹಾಗೂ ಸಂಸ್ಥೆಗಳಿಗೆ ಪ್ರಧಾನಿ ಅಭಿನಂದನೆ ತಿಳಿಸಿದರು.
ದಾದಿಯರು, ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲಿರುವ ಮೊದಲ ಹಕ್ಕುದಾರರು ಎಂದು ಪ್ರಧಾನಿ ಒತ್ತಿ ಹೇಳಿದರು. ಇನ್ನೂ ಲಸಿಕೆ ಪಡೆದುಕೊಂಡನಂತರ ಯಾವುದೇ ಅಜಾಗರೂಕತೆಗೆ ಅವಕಾಶ ನೀಡಬಾರದು, ಮಾಸ್ಕ್ ಧರಿಸುವುದು, ದೈಹಿಕ ಅಂತರ ಶಿಷ್ಟಾಚಾರ ಮುಂದುವರಿಯಬೇಕು ಎಂದು ಪ್ರಧಾನಿ ಸ್ಪಷ್ಟಪಡಿಸಿದರು.
ಈ ಮಧ್ಯೆ, ರಷ್ಯಾದ ಲಸಿಕೆ ‘ಸ್ಪುಟ್ನಿಕ್ ವಿ’ ಗಾಗಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳು ಭಾರತದಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಡಾ. ರೆಡ್ಡೀಸ ಲ್ಯಾಬ್ ತಿಳಿಸಿದೆ. ಈ ಕ್ರಮವನ್ನು ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದೆ ಎಂದು ಶನಿವಾರ ತಿಳಿದು ಬಂದಿದೆ.