ಬೆಂಗಳೂರು, ಜ 17- ಕರ್ನಾಟಕಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ ಶಾ ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಭದ್ರಾವತಿಯಲ್ಲಿ ಶಂಕುಸ್ಥಾಪನೆ ಮಾಡಿದ ಶಿಲಾ ಫಲಕದಲ್ಲಿ ಕನ್ನಡವಿಲ್ಲದ್ದಕ್ಕೆ ಕನ್ನಡ ಗೆಳೆಯರ ಬಳಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವೇದಿಕೆಯ ಬ್ಯಾನರ್ ಹಿಂದಿಯಲ್ಲಿ ಮಾತ್ರ ಇರುವುದು ರಾಜ್ಯಕ್ಕೆ ಮತ್ತು ಕನ್ನಡಕ್ಕೆಸಗಿದ ಅಪಚಾರ. ರಾಜ್ಯ ಸರ್ಕಾರ ಕನ್ನಡ ಕಾಯಕ ವರ್ಷ ಆಚರಿಸುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲೇ ಕನ್ನಡ ಭಾಷೆಯ ಅವಗಣನೆ ಮಾಡಿ, ಹಿಂದಿಯನ್ನು ಮೆರೆಸಿರುವುದನ್ನು ಕನ್ನಡ ಗೆಳೆಯರ ಬಳಗವು ತೀವ್ರವಾಗಿ ಖಂಡಸುತ್ತದೆ ಎಂಬು ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ತ್ರಿಭಾಷ ಸೂತ್ರದಲ್ಲಿ ಪ್ರಾದೇಶಿಕ ಭಾಷೆಯು ಮೊದಲ ಸಾಲಿನಲ್ಲಿರಬೇಕು. ಕರ್ನಾಟಕ ಸರ್ಕಾರವೂ ರಾಜ್ಯದಲ್ಲಿ ನಡೆಯವ ಎಲ್ಲ ಸಾರ್ವಜನಿಕ ಸಮಾರಂಭಗಳ ಫಲಕ(ಬ್ಯಾನರ್) ಕಡ್ಡಾಯವಾಗಿ ಕನ್ನಡದಲ್ಲಿ ಪ್ರದಾನವಾಗಿರಬೇಕೆಂದು ಆದೇಶ ಮಾಡಿದೆ. ರಾಜ್ಯದಲ್ಲಿ ನಡೆಯುವ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ತ್ರಿಭಾಷಾ ಸೂತ್ರದನ್ವಯ ಕನ್ನಡವು ಮೊದಲ ಸಾಲಿನಲ್ಲ್ಲಿರಬೇಕೆಂಬ ಸ್ಪಷ್ಟ ಆದೇಶವಿದೆ. ರಾಜ್ಯ ಸರ್ಕಾರ ಕನ್ನಡ ಕಾಯಕ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲೇ ಈ ಆದೇಶಗಳನ್ನು ಪಾಲಿಸದೇ ಕನ್ನಡವನ್ನು ಕಡೆಗಣಿಸಿ ಹಿಂದಿಯನ್ನು ಮೆರೆಸಿರುವುದು ವಿಪರ್ಯಾಸ ಎಂದಿದ್ದಾರೆ.
ಕನ್ನಡವನ್ನು ಕಡೆಗಣಸಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮತ್ತು ಕನ್ನಡಕ್ಕೆ ಇಂತಹ ಅಪಚಾರವಾಗದಂತೆ ಎಚ್ಚರವಹಿಸಬೇಕೆಂದು ಅವರು ಹೇಳಿದ್ದಾರೆ.