ವಿಜಯಪುರ, 19- ವಿಜಯಪುರದಲ್ಲಿ ಉದ್ಯಾನಕ್ಕಾಗಿ ಮೀಸಲಾದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸಾರ್ವಜನಿಕ ಜಾಗವನ್ನು ಬಿಜೆಪಿ ಶಾಸಕ ಬಸನಗೌಡಾ ಪಾಟೀಲ ಯತ್ನಾಳ ಪ್ರಭಾವ ಬಳಸಿ ಕಬಳಿದ್ದಾರೆಂದು ಆರೋಪಿಸಲಾಗಿದೆ.
ವಿಜಯಪುರ ನಗರದ ಸರ್ವೆ ನಂಬರ್ 688 ಬ ಪ್ಲಾಟ್ ಸಂಖ್ಯೆ 99 ನ್ನು ಉದ್ಯಾನವನಕ್ಕಾಗಿ ಮೀಸಲಿಡಲಾಗಿತ್ತು. ಇದನ್ನು ವಿಜಯಪುರ ನಗರ ಶಾಸಕ ಯತ್ನಾಳ ತಮ್ಮ ಪ್ರಭಾವ ಬಳಸಿ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡು ಉದ್ಯಾನವನ ಜಾಗೆಯಲ್ಲಿ ಅನಧಿಕೃತವಾಗಿ ತಮ್ಮ ಅಧೀನದಲ್ಲಿರುವ ಸಿದ್ದೇಶ್ವರ ಸಂಸ್ಥೆ ಅಡಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಸಿಬಿಎಸ್ ಸಿ ಶಾಲೆ ಕಟ್ಟಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಹಾಗೂ ಸಾಮಾಜಿಕ ಕಾರ್ಯಕರ್ತರ ಅಬ್ದುಲ್ ಹಮೀದ ಇನಾಮದಾರ ಹಾಗೂ ಸನ್ನಿ ಗವಿಮಠ ಆರೋಪಿಸಿದರು.
ವಿಜಯಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ಲಾಯರ್ಸ್ ಕಾಲೋನಿಯಲ್ಲಿರುವ 1 ಎಕರೆ 14 ಗುಂಟೆ ಜಾಗೆಯನ್ನು ಉದ್ಯಾನವನಕ್ಕೆ ಮೀಸಲಿರಿಸಲಾಗಿದೆ. ಒಂದು ಲೇಔಟ್ ನಿರ್ಮಿಸಿದ ಬಳಿಕ ಉದ್ಯಾನವನ ಜಾಗೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವದು ಕಡ್ಡಾಯವಾಗಿದೆ. ಜಾಗೆಯ ಉತಾರದಲ್ಲಿ ಖುಲ್ಲಾ ಜಾಗೆ ಎಂದು ನಮೂದು ಇದೆ. ಉದ್ಯಾನವನ ಜಾಗೆಗೆ ಮೀಸಲಾದ ಜಾಗೆಯಲ್ಲಿ ಯತ್ನಾಳ ಅನಧಿಕೃತವಾಗಿ ಶಾಲೆ ಕಟ್ಟುತ್ತಿದ್ದಾರೆ ಎಂದು ಅವರು ಹೇಳಿದರು.
ಶಾಲೆ ಕಟ್ಟಿದ್ದರೆ ಕಟ್ಟಲಿ ಆ ಶಾಲೆಯಲ್ಲಿ ಬಡವರ ಮಕ್ಕಳು ಕಲಿಯಲು ಆಗೋದಿಲ್ಲಾ, ಅಲ್ಲಿ ಈಗಾಗಲೇ ಸಮುದಾಯ ಭವನವಿದೆ. ಸಮುದಾಯ ಭವನ ಎಲ್ಲರಿಗೂ ಉಪಯೋಗವಾಗುತ್ತೆ. ಆದರೆ ಶಾಸಕರು ಕಟ್ಟುತ್ತಿರುವ ಶಾಲೆ ಸಿರಿವಂತರ ಮಕ್ಕಳಿಗೆ ಎಂದು ಅವರು ಹೇಳಿದರು.
ಶಾಸಕ ಯತ್ನಾಳ, ತಾವು ಶುದ್ದಹಸ್ತರು ಎಂದು ಹೇಳುತ್ತ ತಿರುಗುತ್ತಾರೆ, ಆದರೆ ಅವರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದಾಖಲೆಗಳನ್ನು ಬಿಡುಗಡೆಗೊಳಿಸಿ ಆರೋಪಿಸಿದರು.
ಜಿಲ್ಲಾಡಳಿತಕ್ಕೆ ಈ ಉದ್ಯಾನವನ ಜಾಗೆಗಳ ಅತಿಕ್ರಮಣ ತೆರವಿಗೆ ಮನವಿ ಮಾಡಿದ್ದೇವೆ. ಈಗ ಮತ್ತೊಮ್ಮೆ ಮನವಿ ಪತ್ರ ಸಲ್ಲಿಸುವದಾಗಿ ಅವರು ತಿಳಿಸಿದರು.
ನಗರದ ಸರಕಾರಿ ಪ್ರೌಢಶಾಲೆಯ ಸುತ್ತಲೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಅವರು ಯೋಜನೆ ಹಾಕಿಕೊಂಡಿದ್ದರು. ಅದರಲ್ಲಿ ಭ್ರಷ್ಟಾಚಾರ ನಡೆಸಿ ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಸಹ ಅವರು ನಡೆಸಿದ್ದರು. ಅದನ್ನು ಪ್ರಶ್ನಿಸಿ ಕೋರ್ಟ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಕ್ಕಾಗಿ ತಾವು ಹೊಟ್ಟೆಪಾಡಿಗಾಗಿ ನಡೆಸುತ್ತಿದ್ದ ವಾಟರ್ ಪ್ಯೂರಿಫೈಯರ್ ಮೇಲೆ ದಾಳಿ ನಡೆಸಿ ಗೂಂಡಾಗಿರಿ ಮಾಡಲಾಗಿದೆ ಎಂದು ಇನಾಮದಾರ ಆರೋಪಿಸಿದರು.