ನವದೆಹಲಿ, ಜ19 – ಕೃಷಿ ತಿದ್ದುಪಡಿ ಕಾನೂನುಗಳ ಕುರಿತು ಸುಪ್ರೀಂ ಕೋರ್ಟ ನೇಮಕ ಮಾಡಿದ ಸಮಿತಿಯ ಮೊದಲ ಸಭೆ ಮಂಗಳವಾರ ದೆಹಲಿಯಲ್ಲಿ ನಡೆಯಿತು.
ಮೂಲಗಳ ಪ್ರಕಾರ, ಜ 21ರಂದು ಸಮಿತಿ ರೈತರು ಮತ್ತು ಇತರರೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆಸಲಿದೆ
ಸುಪ್ರೀಂಕೋರ್ಟ್ ರಚಿಸಿರುವ ಸಮಿತಿಯ ಮೊದಲ ಸಭೆಯಲ್ಲಿ ರೈತ ಸಂಘಗಳು ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದರು.
ಮೂರು ಸದಸ್ಯರ ಸಮಿತಿಯಲ್ಲಿ ಕೃಷಿ ಅರ್ಥಶಾಸ್ತ್ರಜ್ಞ ಅಶೋಕ ಗುಲಾಟಿ, ಕೃಷಿ ವಿಜ್ಞಾನಿ ಡಾ.ಪ್ರಮೋದ ಕುಮಾರ ಜೋಶಿ ಮತ್ತು ಶೆಟ್ಕರಿ ಸಂಗಾಥನ ಅಧ್ಯಕ್ಷ ಅನಿಲ ಘನ್ವಾತ್ ಇದ್ದಾರೆ. ಭಾರತೀಯ ಕಿಸಾನ್ ಒಕ್ಕೂಟ(ಬಿಕೆಯು) ಅಧ್ಯಕ್ಷ ಭುಪಿಂದರ ಸಿಂಗ್ ಮನ್ ಕಳೆದ ವಾರ ಸಮಿತಿಯಿಂದ ಹಿಂದೆ ಸರಿದಿದ್ದರು.
ಪ್ರತಿಭಟನಾ ನಿರತ ರೈತರ ಮಧ್ಯಸ್ಥಿಕೆ ವಹಿಸಲು ನಾಲ್ಕು ಸದಸ್ಯರ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿತ್ತು.
ರೈತರ ಆಂದೋಲನವನ್ನು ನಿಭಾಯಿಸುವ ಬಗ್ಗೆ ಸುಪ್ರೀಂ ಕೋರ್ಟ್ ಜ 11 ರಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತ್ತು ಮತ್ತು ಮೂರು ಕೃಷಿ ಕಾನೂನುಗಳನ್ನು ಸ್ಥಗಿತಗೊಳಿಸಬಹುದೇ ಅಥವಾ ನ್ಯಾಯಾಲಯ ಮಧ್ಯಪ್ರವೇಶಿಸಬೇಕೆ ಸರ್ಕಾರವನ್ನು ಪ್ರಶ್ನಿಸಿತ್ತು.
ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣ್ಯಂ ಅವರನ್ನೊಳಗೊಂಡ ನ್ಯಾಯಪೀಠ, ಮೂರು ಕೃಷಿ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ವೇಳೆ, ಕೇಂದ್ರವು ಪ್ರತಿಭಟನೆಗಳನ್ನು ನಿಭಾಯಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿತು ಮತ್ತು ಸಮಿತಿಯನ್ನು ರಚಿಸುವ ಪ್ರಸ್ತಾಪ ಇರಿಸಿತ್ತು.
ಮಂಗಳವಾರ ಪ್ರತಿಭಟನಾ ನಿರತ ರೈತರು ಮತ್ತು ಸರ್ಕಾರದ ನಡುವೆ ಸಂವಾದ ನಡೆಯಬೇಕಿತ್ತಾದರೂ, ಅದನ್ನು ಬುಧವಾರಕ್ಕೆ ಮುಂದೂಡಲಾಗಿದೆ.
ಈ ನಡುವೆ, ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಮಂಗಳವಾರ 55 ನೇ ದಿನ ಪ್ರವೇಶಿಸಿತು. ಸರ್ಕಾರ ರೈತರ ಪ್ರತಿಭಟನೆಗೆ ಓಗೊಡುತ್ತಿಲ್ಲ.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ಸಿಸಿ) ಮೂರು ಕಾಯಿದೆಗಳನ್ನು ರದ್ದುಪಡಿಸುವುದು ಮತ್ತು ವಿದ್ಯುತ್ (ತಿದ್ದುಪಡಿ) ಮಸೂದೆ 2020 (ಇಬಿ 2020) ಅನ್ನು ಅರ್ಥಪೂರ್ಣ ಸಂವಾದವನ್ನು ಪ್ರಾರಂಭಿಸುವ ಏಕೈಕ ಕಾರ್ಯಸೂಚಿಯೆಂದು ಪ್ರತಿಪಾದಿಸಿದೆ.