ಉಲಾನ್ ಬಾಟರ್, ಜ 21- ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದ ಕೊರೋನಾ ವೈರಸ್ ಸೋಂಕು ತಗುಲಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಲ್ಲವೆಂದು ಸಾರ್ವಜನಿಕರಿಂದ ಭುಗಿಲೆದ್ದ ಆಕ್ರೋಶದ ಹಿನ್ನೆಲೆಯಲ್ಲಿ ಮಂಗೋಲಿಯಾ ಪ್ರಧಾನಿ ಉಖ್ನಾ ಖುರೆಲ್ ಸುಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೊರೆಯುವ ಚಳಿಯಲ್ಲಿ ಯಾವುದೇ ರಕ್ಷಣೆ ಒದಗಿಸದೇ ಕೋವಿಡ್ ರೋಗಿಯನ್ನು ಶಿಶುವಿನೊಂದಿಗೆ ಹೆರಿಗೆ ಆಸ್ಪತ್ರೆಯಿಂದ ಸಾಗಿಸುತ್ತಿದ್ದ ಟಿವಿ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಹರಿದಾಡಿದ ನಂತರ ರಾಜಧಾನಿ ಉಲಾನ್ ಬಾಟರ್ ನಲ್ಲಿ ಸಾರ್ವಜನಿಕ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದವು.
ಸಾಮಾಜಿಕ ಒತ್ತಡ ಮತ್ತು ಸಾರ್ವಜನಿಕ ಪ್ರತಿಭಟನೆಯ ನಡುವೆ ಉಪ ಪ್ರಧಾನಿ ಯಂಗು ಸೊಡ್ ಬತಾರ್ ಮತ್ತು ಆರೋಗ್ಯ ಸಚಿವ ಟೊಗ್ಟ್ ಮೊಲ್ ಮುಂಖ್ ಸೈಖಾನ್ ಬುಧವಾರ ರಾಜೀನಾಮೆ ನೀಡಿದ ನಂತರ ಗುರುವಾರ ಖುರೆಲ್ ಸುಖ್ ತಮ್ಮ ಇಡೀ ಸರ್ಕಾರ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.