‘ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ, ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ’ ಎನ್ನುತ್ತಾರೆ ಬಸವಣ್ಣ. ಇದು ಒಳಗೊಂದು, ಹೊರಗೊಂದು ಇರುವ ಜನರ ಕುರಿತು ಅವರ ದಿಟ್ಟ ಚಿಂತನೆ. ಯಾರಲ್ಲಿ ಮನಸ್ಸು, ಚಿಂತನೆ, ಮಾತು ಎಲ್ಲವೂ ಒಂದೇ ಆಗಿರುತ್ತದೆಯೋ ಅವರೇ ಉತ್ತಮರು ಎನ್ನುತ್ತಾರೆ ಬಸವಣ್ಣ. ನುಡಿದಂತೆ ನಡೆಯಬೇಕು ಎನ್ನುವುದು ಆದರ್ಶ. ಅದು ಆದರ್ಶ ಮಾತ್ರ ಆಗಿಯೇ ಉಳಿದಿದೆ ಎಂಬುದೇ ದುರಂತ. ಆದರೆ ಲೋಕವೇ ಹೀಗೆ ಎಂದು ಸುಮ್ಮನಿರಲು ಸಾಧ್ಯವೇ?
ನಮ್ಮ ಕಣ್ಣ ಮುಂದೆ ನಡೆಯುತ್ತ ಇರುವ ಕೆಲವು ಸಂಗತಿ ಗಮನಿಸಿದರೆ ಹೇಗೆಲ್ಲ ಜನ ವರ್ತಿಸುತ್ತಾರೆ ಮತ್ತು ನಾವು ಅಂಥವರ ಜೊತೆ, ಅವರ ಆಧೀನದಲ್ಲಿ ಕೂಡ ಜೀವಿಸಬೇಕಾಗುತ್ತದೆ ಎಂಬುದು ಅರಿವಾಗುತ್ತದೆ. ಅತ್ತೆ ಒಡೆದ ಮಡಕೆಗೆ ಬೆಲೆ ಇಲ್ಲ ಎನ್ನುವುದುಂಟು. ಹಾಗೇ ಈ ಮೇಲಿನವರು ಎಂದುಕೊಂಡ ಜನ, ತಾವು ಮಾಡಿದ ತಪ್ಪು ತಪ್ಪಲ್ಲ ಎಂದೇ ಸಾಧಿಸುತ್ತಾರೆಯೇ ಹೊರತು, ತಪ್ಪು ಒಪ್ಪಿಕೊಳ್ಳುವುದಿಲ್ಲ.
ಈಗ ಟ್ರಂಪ್ ಮಹಾಶಯನ ವರ್ತನೆಯನ್ನೇ ನೋಡಿ. ಅವರು ‘ತಮ್ಮನ್ನು ಸೋಲಿಸಲಾಯಿತು’ ಎನ್ನುತ್ತಾರೆ ಹೊರತು, ತಾನು ಸೋತೆ ಎಂದು ಕೂಡ ಒಪ್ಪುವುದಿಲ್ಲ. ಸೋತ ಈ ವ್ಯಕ್ತಿ ತಮ್ಮ ಸಣ್ಣತನಕ್ಕೆ ಅನುಗುಣವಾಗಿ ನಡೆದುಕೊಂಡ. ತಮ್ಮ ನಾಲ್ಕು ವರ್ಷದ ಆಡಳಿತ ಸಮರ್ಥಿಸಿಕೊಂಡರು. ತಾವು ಏನು ಮಾಡಲು ಬಯಸಿದ್ದೇವೋ, ಅದನ್ನು ಮಾಡಿದ್ದೇವೆ ಎಂಬ ತೃಪ್ತಿ ವ್ಯಕ್ತ ಮಾಡಿದರು. ಅಂದರೆ; ಅಮೇರಿಕಾದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಅನಾಹುತಗಳು ಉದ್ದೇಶಪೂರ್ವಕ ಎಂದಾಯಿತು. ಇಂಥ ಅಪಾಯಕಾರಿ ಮನುಷ್ಯನನ್ನು ಕೂಡ ಅಲ್ಲಿನ ಜನ ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಿದ್ದರು ಎಂಬುದೇ ಸೋಜಿಗ.
ತನ್ನ ಸಣ್ಣತನ ಎಷ್ಟೆಂಬುದು ಸಾಬೀತು ಮಾಡುವಂತೆ ಆತ, ನೂತನ ಅಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಹಾಜರಾಗದೇ ಮುಂಚೆಯೇ ಫ್ಲೋರಿಡಾದ ತನ್ನ ಮನೆಗೆ ಹೆಲಿಕಾಪ್ಟರ್ ನಲ್ಲಿ ಹಾರಿ ಹೋದ. ಕ್ರೀಡೆಯಲ್ಲಿಯೂ ಹೀನಾಯವಾಗಿ ಸೋತಾಗ ಕೂಡ ಸೋತ ವ್ಯಕ್ತಿ ಗೆದ್ದವನನ್ನು ಅಭಿನಂದಿಸುವ ಪರಿಪಾಠ ಇದೆ. ಅಂಥ ಸಣ್ಣ ಸೌಜನ್ಯವೂ ತನ್ನಲ್ಲಿ ಇಲ್ಲ ಎಂದು ಸಾಬೀತು ಮಾಡುವಂತೆ ಈ ಮನುಷ್ಯ ನಡೆದುಕೊಂಡ. ಕೆಲವೊಮ್ಮೆ ಸಾರ್ವಜನಿಕ ಜೀವನದಲ್ಲಿ ಅಸಹ್ಯಗಳು, ಅಪಸವ್ಯಗಳು ನಡೆದು ಬಿಡುತ್ತವೆ. ಅಮೇರಿಕದಂಥ ದೇಶದಲ್ಲಿ ಕೂಡ ಟ್ರಂಪ್ನಂಥ ವ್ಯಕ್ತಿ ಆಯ್ಕೆ ಆಗುತ್ತಾನೆ, ಬಿಳಿಯರ ಪ್ರಭುತ್ವ ಸಾಬೀತು ಮಾಡಲು ಇನ್ನಿಲ್ಲದ ಮಾರ್ಗ ಅನುಸರಿಸುತ್ತಾನೆ!.
ಕೆಲವು ಸಂದರ್ಭಗಳಲ್ಲಿ ಕಾಲ ಮುಂದಕ್ಕೆ ಚಲಿಸದೇ ಹಿಂದಕ್ಕೆ ಚಲಿಸುತ್ತದೆ ಎನ್ನುತ್ತದೆ ಇತಿಹಾಸ. ಅಂಥದೊಂದು ಕರಾಳ ಕಾಲದ ದುಷ್ಪ್ರಭಾವ ತೊಡೆದು ಮತ್ತೆ ಕಾಲ ಚಕ್ರವನ್ನು ಹಳಿಗೆ ಹಚ್ಚಲು ಅತೀವ ಶ್ರಮ ಮತ್ತು ಶುದ್ಧ ಪ್ರಾಮಾಣಿಕತೆ ಬೇಕಾಗುತ್ತದೆ. ಆದರೆ ಕಾಲಚಕ್ರದ ಉರುಳಲ್ಲಿ ಹಲವಾರು ಅಮಾಯಕರು ಬಲಿ ಆಗಿ ಬಿಟ್ಟಿರುತ್ತಾರೆ.
ಇದು ದೂರದ ಅಮೇರಿಕದ ಮಾತು, ನಮ್ಮಲ್ಲಿ ಹಾಗೆಲ್ಲ ಏನೂ ಇಲ್ಲ ಎಂದುಕೊಳ್ಳುವಂತಿಲ್ಲ. ಮೊನ್ನೆ ನಮ್ಮ ಕೃಷಿ ಸಚಿವರು ‘ರೈತರು ಹಟ ಹಿಡಿದಿದ್ದಾರೆ’ ಎಂದು ಹೇಳಿಕೆ ನೀಡಿದರು. ವಾಸ್ತವ ಎಂದರೆ ಸರ್ಕಾರ ಹಟ ಹಿಡಿದಿದೆ. ಆದರೆ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಇದು ಕೂಡ ಸೋತಿಲ್ಲ, ಸೋಲಿಸಲಾಯಿತು ಎಂಬಂಥ ಮಾತು. ಮೊದಲಿಗೆ ಇಂಥ ಕಾನೂನುಗಳನ್ನು ರೈತರು ಬೇಡಿರಲಿಲ್ಲ. ಅವರನ್ನು ಒಂದು ಮಾತು ಕೂಡ ಕೇಳದೇ ಸರ್ಕಾರ ಶಾಸನ ರಚಿಸಿತು. ರೈತರು ಅವರವರ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿದಾಗ, ಏನಪ್ಪ ನಿಮ್ಮ ಸಮಸ್ಯೆ ಅಂತ ಹೋಗಿ ಕೇಳಲಿಲ್ಲ. ದೆಹಲಿಯತ್ತ ಹೊರಟವರನ್ನು ತಡೆಯಲು ನಾನಾ ಕುಯುಕ್ತ್ತಿ ಹೂಡಲಾಯಿತು. ಅನ್ನದಾತರನ್ನು ಖಲಿಸ್ತಾನಿಗಳು, ಭಯೋತ್ಪಾದಕರು ಎಂದು ಕರೆಯಲಾಯಿತು. ಈಗ ‘ರೈತರು ಹಟ ಹಿಡಿದಿದ್ದಾರೆ’ ಎಂದು ಹೇಳಲಾಗುತ್ತಿದೆ.
ಸರ್ಕಾರ ನಡೆಸುವವರು ಬುದ್ಧಿವಂತರೇ ಇರಬಹುದು. ಆದರೆ ರೈತರಾಗಲಿ, ಪ್ರಜೆಗಳಾಗಲಿ ದಡ್ಡರಲ್ಲ ಎಂಬುದು ತಿಳಿಯಬೇಕು. ಆದರೆ ಅವರು ಅಧಿಕಾರದಲ್ಲಿ ಇರುವ ತನಕ ಅದು ಅರಿವಾಗುವುದಿಲ್ಲ. ಆನಂತರ ಅರಿವಿಗೆ ಬಂದರೂ ಪ್ರಯೋಜನ ಇಲ್ಲ, ಆಗಬಾರದ್ದು ಆಗಿ ಹೋಗಿರುತ್ತದೆ. ದೇಶಕ್ಕೆ, ಜನರಿಗೆ ಒಳಿತು ಮಾಡಬೇಕಾದವರ ಉದ್ದೇಶ ಅದಾಗಿರುವುದಿಲ್ಲ. ತನಗೆ ಇದರಿಂದ ಏನು ಪ್ರಯೋಜನ ಎಂಬುದಷ್ಟೇ ಅವರ ಕಾಳಜಿ. ಆದರೆ ಅದನ್ನು ತಮ್ಮ ಅತಿ ಬುದ್ಧಿವಂತ ನಿಲುವು, ಮಾತುಗಳಿಂದ ಸಾಧಿಸಿಕೊಳ್ಳುತ್ತಾರೆ. ಹೇಳುವುದು ಒಂದಾದರೆ ಮಾಡುವುದು ಮಾತ್ರ ಇನ್ನೊಂದು. ಅಂಥದೊಂದು ನೀಚ ಅವಸ್ಥೆಗೆ ರಾಜಕಾರಣ ಬಂದಾಗಿದೆ. ಈ ಹಂತದಲ್ಲಿ ಅವರನ್ನೆಲ್ಲ ತಿದ್ದಿ ತೀಡಿ, ನಿಜವಾದ ಕರ್ತವ್ಯಕ್ಕೆ ಹಚ್ಚಲು ಇರುವುದು ಒಂದೇ ದಾರಿ ಎಂದರೆ ‘ಸತ್ಯ ಹೇಳಿ, ಅದರಂತೆ ನಡೆದುಕೊಳ್ಳಿ’ ಎಂದು ಅವರ ಕಿವಿ ಹಿಂಡುವುದು ಮತ್ತು ಹಾಗೇ ಅವರು ನಡೆದುಕೊಳ್ಳುವಂತೆ ಮಾಡುವುದು.
ಒಂದಿಷ್ಟು ಕಾನೂನು ಮಾಡಿ, ಸುವ್ಯವಸ್ಥೆ ಕಾಪಾಡಲು ಆಯ್ಕೆಯಾದ ಜನ, ತಾವು ದೇವಲೋಕದಿಂದ ಇಳಿದು ಬಂದವರು, ತಮ್ಮನ್ನು ಆರಿಸಿದ ಎಲ್ಲರೂ ಹುಲು ಮಾನವರು ಎಂಬಂತೆ ನಡೆದುಕೊಳ್ಳುತ್ತಾರೆ. ಅಧಿಕಾರದ ಅಹಂ ತುಂಬಿಕೊಂಡು ನೆತ್ತಿ ಮೇಲೆ ನೋಡುತ್ತಾ ತಿರುಗುವವರಿಗೆ ನೆಲ ಇಲ್ಲಿದೆ ಎಂದು ಜನರು ತೋರಿಸಿ ಕೊಟ್ಟರೆ ಎಲ್ಲ ಸರಿ ಆಗುತ್ತದೆ. ಆಗ ಸಹಜವಾಗಿಯೇ ನಡೆ, ನುಡಿ ಎರಡೂ ಒಂದೇ ಆಗುತ್ತವೆ. ಟ್ರಂಪ್ನಂಥ ಮಹಾ ಮೂರ್ಖನನ್ನು ಜನ ಪಳಗಿಸುತ್ತಾರೆ, ಆತನ ನಿಜವಾದ ಸ್ಥಾನ ಏನು ಎಂದು ತೋರಿಸಿ ಕೊಡುತ್ತಾರೆ ಎನ್ನುವುದೇ ಪ್ರಜಾಪ್ರಭುತ್ವದ ಅಪೂರ್ವ ಸಾಧನೆ. ಅದು ಎಲ್ಲ ಪ್ರಜಾಪ್ರಭುತ್ವಗಳಲ್ಲಿಯೂ ಸಾಧ್ಯ.