ಬೆಂಗಳೂರು,ಜ 21- ರಾಜಕಾರಣದಲ್ಲಿ ಎಲ್ಲರನ್ನು ತೃಪ್ತಿಪಡಿಸಲು ದೇವರಿಂದಲೂ ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅವರು ಎಲ್ಲ ರೀತಿಯಿಂದ ಯೋಚಿಸಿ ಖಾತೆ ಹಂಚಿಕೆ ಮಾಡಿದ್ದಾರೆ. ಗೋಪಾಲಯ್ಯ ಅವರ ಜತೆ ಮಾತನಾಡಿದ್ದೇನೆ. ಎಂಟಿಬಿ ಅವರ ಜತೆಯೂ ಚರ್ಚಿಸಿದ್ದೇನೆ. ಮುಖ್ಯಮಂತ್ರಿ ಮೇಲೆ ಎಲ್ಲರಿಗೂ ಭರವಸೆ ಇದೆ. ಸಮಸ್ಯೆಯನ್ನು ಬೇಗ ಉಪಶಮನ ಮಾಡಲಾಗುತ್ತದೆ. ಮಾಧುಸ್ವಾಮಿಯವರೂ ರಾಜೀನಾಮೆ ನೀಡಿಲ್ಲ. ಅವರಿಗೂ ಉತ್ತಮ ಖಾತೆ ಸಿಕ್ಕಿದೆ. ಇದು ಸಾಮೂಹಿಕ ನಿರ್ಧಾರ ಆಗಿದೆ. ಇದಕ್ಕೆ ಎಲ್ಲರ ಸಹಮತ ಇದೆ ಎಂದರು.
ಖಾತೆ ಬದಲಾವಣೆ ಮುಖ್ಯಮಂತ್ರಿ ಅವರ ಪರಮಾಧಿಕಾರ. ಅದನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ನಾನು ಯಾವುದೇ ಖಾತೆ ಕ್ಯಾತೆ ತೆಗಿದಿಲ್ಲ. ನಾನು ಗೃಹ ಇಲಾಖೆಯನ್ನೂ ಕೇಳಿಲ್ಲ. ನಾನು ಖಾತೆ ಬದಲಾವಣೆಗೆ ಕೇಳೇ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಯಾದವರು. ಇದೇ ಮೊದಲ ಬಾರಿ ಸಿಎಂ ಆಗಿಲ್ಲ. ಅಳೆದು ತೂಗಿ ಖಾತೆ ಹಂಚಿಕೆ ಮಾಡಿದ್ದಾರೆ. ಯಾರಿಗೆ ಏನು ಕೊಡಬೇಕು ಅನಿಸಿದೆ ಅದು ಕೊಟ್ಟಿದ್ದಾರೆ. ಸಿಎಂ ಅಧಿಕಾರ ಪ್ರಶ್ನೆ ಮಾಡುವುದು ಸರಿಯಲ್ಲ. ಅವರಿಗೆ ಎಲ್ಲಾ ಕಲೆಗಳು ಗೊತ್ತಿದೆ. ಅದಕ್ಕನುಗುಣವಾಗಿ ಅವರು ಖಾತೆ ಬದಲಾವಣೆ ಮಾಡಿದ್ದಾರೆ.ನಾವೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಮರ್ಥವಾದ ವಿರೋಧ ಪಕ್ಷವೇ ಇಲ್ಲ ಎಂದು ಆರ್.ಅಶೋಕ ಕಿಡಿ ಕಾರಿದರು.
ವಿರೇಂದ್ರ ಪಾಟೀಲ ಅವರನ್ನು ರಾತ್ರೋರಾತ್ರಿ ಮನೆಗೆ ಕಳುಹಿಸಿದವರು ಕಾಂಗ್ರೆಸ್ ನವರು. ಕಾಂಗ್ರೆಸ್ ಅಧಿಕಾರ ನಡೆಸಿದ ಸಂದರ್ಭದಲ್ಲಿ ವೀರಪ್ಪ ಮೊಯ್ಲಿಯವರ ಬಟ್ಟೆ ಹರಿದು ಹಾಕಿ ಓಡಿಸಿದ್ದರು. ಕಾಂಗ್ರೆಸ್ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅಂತ ಬಿಜೆಪಿ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಹೇಳಲು ಯತ್ನಿಸುತ್ತಿದ್ದಾರೆ. ಇಷ್ಟು ದಿನ ಕಾಂಗ್ರೆಸ್ ನಾಯಕರು ಮಲಗಿದ್ದರು. ಆದರೆ ಈಗ ಎದ್ದು ಬಂದಿದ್ದಾರೆ ಎಂದು ಟೀಕಿಸಿದರು.